ರುಬ್ಬಿದ ಇಡ್ಲಿ-ದೋಸೆ ಹಿಟ್ಟನ್ನು ಎಷ್ಟು ದಿನ ಬಳಸ್ಬೋದು?, ಬೇಗ ಹುಳಿಯಾಗಬಾರದು ಅಂದ್ರೆ ಹೀಗೆ ಮಾಡಿ..
Food safety tips for dosa batter: ಸಾಮಾನ್ಯವಾಗಿ ದೋಸೆ ಹಿಟ್ಟನ್ನು ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ರುಬ್ಬಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತೇವೆ. ಆದರೆ ಮನೆಲೀ ತಯಾರಿಸುವ ದೋಸೆ ಹಿಟ್ಟನ್ನು ಸಂಗ್ರಹಿಸಿಡುವ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಜಾಗ್ರತೆಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಈ ಅಭ್ಯಾಸ ಒಳ್ಳೇದಾ?
ದಕ್ಷಿಣ ಭಾರತೀಯರಿಗೆ ಬೆಳಗಿನ ತಿಂಡಿ ಎಂದರೆ ಇಡ್ಲಿ, ದೋಸೆ ಇರಲೇಬೇಕು. ಏಕೆಂದರೆ ಇವು ತಿನ್ನಲು ರುಚಿಯಾಗಿರುತ್ತವೆ. ಆರೋಗ್ಯಕ್ಕೂ ಒಳ್ಳೇದು. ಇದರಲ್ಲಿ ದೋಸೆಗೆ ವಿಶೇಷ ಸ್ಥಾನವಿದೆ. ಆದರೆ ಈ ದೋಸೆ, ಇಡ್ಲಿ ಹಿಟ್ಟು ತಯಾರಿಸುವುದೇ ಒಂದು ದೊಡ್ಡ ಕೆಲಸ. ಅದಕ್ಕಾಗಿಯೇ, ಸಮಯ ಉಳಿಸಲು ಬಹಳಷ್ಟು ಜನರು ವಾರಕ್ಕೆ ಆಗುವಷ್ಟು ಹಿಟ್ಟನ್ನು ಒಂದೇ ಬಾರಿಗೆ ರುಬ್ಬಿ ಸಂಗ್ರಹಿಸಿಡುತ್ತಾರೆ. ಆದರೆ, ಈ ಅಭ್ಯಾಸ ನಿಮ್ಮ ಆರೋಗ್ಯವನ್ನು ಕೆಡಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ದೋಸೆ ಹಿಟ್ಟನ್ನು 3 ದಿನಗಳಿಗಿಂತ ಹೆಚ್ಚು ದಿನ ಇಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಸೂಚಿಸುತ್ತಿದ್ದಾರೆ. ಆ ವಿವರಗಳೇನು ಎಂಬುದನ್ನು ಇಲ್ಲಿ ನೋಡೋಣ..
3 ದಿನಗಳ ನಂತರ
ದೋಸೆ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನಬೇಳೆಯಿಂದ ತಯಾರಿಸಲಾಗುತ್ತದೆ. ಇದನ್ನು ಹುದುಗಿಸುವುದರಿಂದ (Fermentation) ಪ್ರೋಬಯಾಟಿಕ್‌ಗಳು (ಒಳ್ಳೆಯ ಬ್ಯಾಕ್ಟೀರಿಯಾ) ಹೆಚ್ಚಾಗುತ್ತವೆ. ಆದರೆ, ಫ್ರಿಡ್ಜ್‌ನಲ್ಲಿ ಇಟ್ಟರೂ ಸಹ ಈ ಹುದುಗುವ ಪ್ರಕ್ರಿಯೆ ನಿಲ್ಲುವುದಿಲ್ಲ, ಕೇವಲ ನಿಧಾನವಾಗುತ್ತದೆ. 3 ದಿನಗಳ ನಂತರ ಹಿಟ್ಟಿನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ವಿಭಜನೆಯಾಗಿ, ಆಲ್ಕೋಹಾಲ್‌ನಂತಹ ಪದಾರ್ಥಗಳು ಮತ್ತು ಹಾನಿಕಾರಕ ಈಸ್ಟ್‌ಗಳು ಬೆಳೆಯುತ್ತವೆ.
ಸಣ್ಣ ಮಕ್ಕಳಿಗೆ ಮತ್ತು ವೃದ್ಧರಿಗೆ ನೀಡದಿರುವುದು ಉತ್ತಮ
ಹಿಟ್ಟು ಹೆಚ್ಚು ಕಾಲ ಸಂಗ್ರಹವಾಗಿದ್ದರೆ ಅದರಲ್ಲಿ ಆಮ್ಲೀಯತೆ (Acidity) ಹೆಚ್ಚಾಗುತ್ತದೆ. ಇದರಿಂದ ದೋಸೆ ತಿಂದ ನಂತರ ಹೊಟ್ಟೆಯಲ್ಲಿ ಉರಿ ಅಥವಾ ಎದೆಯುರಿ ಕಾಣಿಸಿಕೊಳ್ಳಬಹುದು. ಹಳೆಯ ಹಿಟ್ಟಿನಲ್ಲಿ ಸಾಲ್ಮೊನೆಲ್ಲಾ (Salmonella) ಅಂತಹ ಬ್ಯಾಕ್ಟೀರಿಯಾಗಳು ಸೇರುವ ಸಾಧ್ಯತೆಯಿದೆ. ಇದರಿಂದ ವಾಂತಿ, ಭೇದಿ ಮತ್ತು ತೀವ್ರವಾದ ಹೊಟ್ಟೆನೋವಿನಂತಹ ಫುಡ್ ಪಾಯಿಸನಿಂಗ್ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಸಣ್ಣ ಮಕ್ಕಳಿಗೆ ಮತ್ತು ವೃದ್ಧರಿಗೆ ಇಂತಹ ಹಳೆಯ ಹಿಟ್ಟಿನಿಂದ ಮಾಡಿದ ದೋಸೆಗಳನ್ನು ನೀಡದಿರುವುದು ಉತ್ತಮ.
ಅವಶ್ಯಕತೆ ಇದ್ದಾಗ ಮಾತ್ರ ಉಪ್ಪನ್ನು ಬೆರೆಸಿ
ಅದಕ್ಕಾಗಿಯೇ ಹಿಟ್ಟನ್ನು ಮಿತವಾಗಿ ರುಬ್ಬಿಕೊಳ್ಳಬೇಕು. ಕೇವಲ 2 ಅಥವಾ 3 ದಿನಗಳಿಗೆ ಆಗುವಷ್ಟು ಹಿಟ್ಟನ್ನು ಮಾತ್ರ ರುಬ್ಬುವುದು ಉತ್ತಮ. ಹಿಟ್ಟನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಡಬ್ಬಿಗಳಿಗಿಂತ ಸ್ಟೀಲ್ ಅಥವಾ ಗಾಜಿನ ಪಾತ್ರೆಗಳನ್ನು ಬಳಸುವುದು ಸುರಕ್ಷಿತ. ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡುವ ಮೊದಲು ಉಪ್ಪು ಬೆರೆಸದಿದ್ದರೆ ಅದು ಬೇಗನೆ ಹುಳಿಯಾಗುವುದಿಲ್ಲ. ಅವಶ್ಯಕತೆ ಇದ್ದಾಗ ಮಾತ್ರ ಉಪ್ಪನ್ನು ಬೆರೆಸಿಕೊಳ್ಳಬೇಕು.
ರುಚಿಗಿಂತ ಆರೋಗ್ಯವೇ ಮುಖ್ಯ
ಮುಖ್ಯವಾಗಿ ಹಿಟ್ಟಿನಿಂದ ಅತಿಯಾದ ಹುಳಿ ವಾಸನೆ ಬರುತ್ತಿದ್ದರೆ ಅಥವಾ ಬಣ್ಣ ಬದಲಾಗಿದ್ದರೆ, ಅದನ್ನು ತಕ್ಷಣವೇ ಎಸೆಯುವುದು ಉತ್ತಮ. ತಾಜಾವಾಗಿ ರುಬ್ಬಿದ ಹಿಟ್ಟಿನಿಂದ ಮಾಡಿದ ಆಹಾರ ಸೇವಿಸುವುದರಿಂದ ಪೂರ್ಣ ಪ್ರಮಾಣದ ಪೋಷಕಾಂಶಗಳು ಲಭ್ಯವಾಗುತ್ತವೆ. ರುಚಿಗಿಂತ ಆರೋಗ್ಯವೇ ಮುಖ್ಯ. ಆದ್ದರಿಂದ ಸಾಧ್ಯವಾದಷ್ಟು ತಾಜಾವಾಗಿ ತಯಾರಿಸಿದ ಹಿಟ್ಟನ್ನೇ ಬಳಸಲು ಪ್ರಯತ್ನಿಸಿ. ಹಿಟ್ಟಿನಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ರಿಸ್ಕ್ ತೆಗೆದುಕೊಳ್ಳದೆ ಅದನ್ನು ಬಳಸದಿರುವುದೇ ಶ್ರೇಯಸ್ಸು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

