ತಲೆ ಕೂದಲು ರಾಕೆಟ್ ವೇಗದಲ್ಲಿ ಬೆಳೆಯಬೇಕೆಂದರೆ ಎಷ್ಟು ದಿನಕ್ಕೊಮ್ಮೆ ಹೇರ್ ಕಟ್ ಮಾಡಬೇಕು?
Hair growth tips Kannada: ಕೂದಲು ಉದ್ದವಾಗಿ ಬೆಳೆಯಲು ಪದೇ ಪದೇ ಕತ್ತರಿಸಬೇಕಾ? ಟ್ರಿಮ್ಮಿಂಗ್ ಮಾಡುವುದರಿಂದ ನಿಜವಾಗಿಯೂ ಕೂದಲು ವೇಗವಾಗಿ ಬೆಳೆಯುತ್ತದೆಯೇ? ನಿಮ್ಮೆಲ್ಲಾ ಗೊಂದಲಗಳಿಗೆ ವಿಜ್ಞಾನ ಏನು ಹೇಳುತ್ತದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಯಾವುದು ಸರಿ?
ಉದ್ದವಾದ ಮತ್ತು ದಟ್ಟವಾದ ಕೂದಲನ್ನು ಪಡೆಯುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ಕೂದಲಿನ ಆರೈಕೆಗೆ ಸಂಬಂಧಿಸಿದಂತೆ ಒಂದು ಪ್ರಶ್ನೆ ಯಾವಾಗಲೂ ಚರ್ಚೆಯಲ್ಲಿರುತ್ತದೆ. ನಿಯಮಿತವಾಗಿ ಕೂದಲನ್ನು ಟ್ರಿಮ್ (Trim) ಮಾಡುವುದರಿಂದ ಅವುಗಳ ಬೆಳವಣಿಗೆ ವೇಗವಾಗುತ್ತದೆಯೇ? ಕೆಲವರು ಪದೇ ಪದೇ ಕತ್ತರಿಸುವುದರಿಂದ ಕೂದಲು ಬೇಗ ಬೆಳೆಯುತ್ತದೆ ಎಂದು ನಂಬಿದರೆ, ಇನ್ನು ಕೆಲವರು ಇದು ತಪ್ಪು ಎಂದು ಹೇಳುತ್ತಾರೆ. ಆದರೆ ಈ ಎರಡರ ನಡುವಿನ ನಿಜವಾದ ಸತ್ಯವೇನು ಎಂದು ತಿಳಿಯೋಣ ಬನ್ನಿ.
ಕೂದಲು ಬೆಳೆಯುವುದು ಹೇಗೆ?
ಅಂದಹಾಗೆ ಕೂದಲಿನ ಬೆಳವಣಿಗೆಯು ತಲೆಯ ಚರ್ಮದ (Scalp) ಒಳಗಿರುವ ಸಣ್ಣ ಹೇರ್ ಫೋಲಿಕಲ್ಸ್‌ಗಳಿಂದ (Hair Follicles) ಆಗುತ್ತದೆ. ಪ್ರತಿಯೊಂದು ಕೂದಲು ಈ ಫೋಲಿಕಲ್ಸ್‌ಗಳಿಂದ ಹೊರಬರುತ್ತದೆ ಮತ್ತು ಇದರ ಬೆಳವಣಿಗೆಯು ಹಾರ್ಮೋನ್, ಜೆನೆಟಿಕ್ಸ್, ವಯಸ್ಸು ಮತ್ತು ಪೋಷಣೆಯ ಮೇಲೆ ಅವಲಂಬಿತವಾಗಿರುತ್ತದೆ.
ಸುಮಾರು ಅರ್ಧ ಇಂಚು ಬೆಳೆಯುತ್ತೆ
ಸಾಮಾನ್ಯವಾಗಿ ಹೇಳುವುದಾದರೆ ಕೂದಲು ಪ್ರತಿ ತಿಂಗಳು ಸುಮಾರು ಅರ್ಧ ಇಂಚು ಬೆಳೆಯುತ್ತದೆ. ಅಂದರೆ ಒಂದು ವರ್ಷದಲ್ಲಿ ಸುಮಾರು 6 ಇಂಚುಗಳವರೆಗೆ ಬೆಳೆಯಬಹುದು. ಕೂದಲಿನ ಬೆಳವಣಿಗೆಯು ತಲೆಯ ಒಳಗಿನ ಜೈವಿಕ ಪ್ರಕ್ರಿಯೆಗೆ ಸಂಬಂಧಿಸಿದ್ದೇ ಹೊರತು ಕೂದಲಿನ ತುದಿಗಳಿಗಲ್ಲ. ಆದ್ದರಿಂದ ಕೂದಲನ್ನು ಟ್ರಿಮ್ ಮಾಡುವುದರಿಂದ ಅವುಗಳ ಬೆಳವಣಿಗೆಯ ವೇಗದ ಮೇಲೆ ನೇರ ಪರಿಣಾಮ ಬೀರುವುದಿಲ್ಲ.
ಟ್ರಿಮ್ಮಿಂಗ್‌ನಿಂದ ಕೂದಲು ಬೆಳೆಯದಿದ್ದರೆ ಮತ್ತೆ ಅದರ ಅಗತ್ಯವೇಕೆ?
ಇದಕ್ಕೆ ಉತ್ತರ 'ಡ್ಯಾಮೇಜ್ ಕಂಟ್ರೋಲ್'. ಕೂದಲಿನ ತುದಿಗಳು ಅತ್ಯಂತ ಹಳೆಯ ಮತ್ತು ದುರ್ಬಲ ಭಾಗಗಳಾಗಿರುತ್ತವೆ. ಬಿಸಿಲು, ಕೆಮಿಕಲ್ ಮತ್ತು ಹೀಟ್ ಸ್ಟೈಲಿಂಗ್‌ನಿಂದ ಇವು ಬೇಗನೆ ಹಾಳಾಗುತ್ತವೆ. ಕೂದಲಿನಲ್ಲಿ ಸೀಳು ತುದಿಗಳು (Split Ends) ಉಂಟಾದಾಗ, ಅವು ನಿಧಾನವಾಗಿ ಮೇಲ್ಭಾಗಕ್ಕೆ ಏರುತ್ತಾ ಹೋಗುತ್ತವೆ ಮತ್ತು ಕೂದಲು ದುರ್ಬಲಗೊಂಡು ತುಂಡಾಗಲು ಆರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ಟ್ರಿಮ್ಮಿಂಗ್ ಮಾಡುವುದು ಈ ಹಾಳಾದ ತುದಿಗಳನ್ನು ತೆಗೆದುಹಾಕಿ ಕೂದಲು ತುಂಡಾಗದಂತೆ ರಕ್ಷಿಸುತ್ತದೆ.
ಎಷ್ಟು ಬಾರಿ ಟ್ರಿಮ್ಮಿಂಗ್ ಮಾಡಬೇಕು?
ಕೂದಲನ್ನು ಟ್ರಿಮ್ ಮಾಡುವ ಸರಿಯಾದ ಸಮಯವು ಪ್ರತಿಯೊಬ್ಬ ವ್ಯಕ್ತಿಯ ಕೂದಲಿನ ಪ್ರಕಾರ ಮತ್ತು ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ.
ನೀವು ಕೂದಲನ್ನು ಉದ್ದವಾಗಿಸಲು ಬಯಸಿದರೆ, 10 ರಿಂದ 12 ವಾರಗಳಿಗೊಮ್ಮೆ ಟ್ರಿಮ್ ಮಾಡುವುದು ಸರಿಯಾದ ಕ್ರಮ.
ಕೂದಲಿಗೆ ಕೆಮಿಕಲ್ ಟ್ರೀಟ್ಮೆಂಟ್ ಅಥವಾ ಹೆಚ್ಚಿನ ಹೀಟ್ ಬಳಸುತ್ತಿದ್ದರೆ, 6 ರಿಂದ 8 ವಾರಗಳಲ್ಲಿ ಟ್ರಿಮ್ ಮಾಡುವುದು ಉತ್ತಮ.
ಸಣ್ಣ ಕೂದಲು ಇರುವವರು ತಮ್ಮ ಹೇರ್ ಸ್ಟೈಲ್ ಕಾಪಾಡಿಕೊಳ್ಳಲು 4 ರಿಂದ 6 ವಾರಗಳಿಗೊಮ್ಮೆ ಟ್ರಿಮ್ಮಿಂಗ್ ಮಾಡುವುದು ಅಗತ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

