- Home
- Automobile
- Deals on Wheels
- ಪೆಟ್ರೋಲ್ ಬೇಡ, ಚಾರ್ಜ್ ಮಾಡಬೇಕಿಲ್ಲ, ವಾಹನಕ್ಕಿನ್ನು 60 ರೂನಲ್ಲಿ ಸಿಗೋ ಇ100 ಎಥೆನಾಲ್; ಗಡ್ಕರಿ
ಪೆಟ್ರೋಲ್ ಬೇಡ, ಚಾರ್ಜ್ ಮಾಡಬೇಕಿಲ್ಲ, ವಾಹನಕ್ಕಿನ್ನು 60 ರೂನಲ್ಲಿ ಸಿಗೋ ಇ100 ಎಥೆನಾಲ್; ಗಡ್ಕರಿ
ಇಂಧನ ಕ್ಷೇತ್ರದಲ್ಲಿ ಭಾರತ ಕ್ರಾಂತಿ ಮಾಡುತ್ತಿದೆ. ಇದುವರೆಗೆ ವಾಹನಗಳಿಗೆ ಇ20, ಇ30 ಎಥೆನಾಲ್ ಬಳಸಲಾಗುತ್ತಿತ್ತು. ಆದರೆ ಇದೀಗ ಇ100 ಎಥೆನಾಲ್ ಬಳಕೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ. ಇನ್ನು ಕೇವಲ 60 ರೂನಲ್ಲ ಎಥೆನಾಲ್ ಲಭ್ಯವಿದೆ.

ಶೇಕಡಾ 100ರಷ್ಟು ಎಥೆನಾಲ್ ಇಂಧನ
ಭಾರತದ ಆಟೋಮೊಬೈಲ್ ಹಾಗೂ ಇಂಧನ ವಲಯದಲ್ಲಿ ಮಹತ್ವದ ಕ್ರಾಂತಿಯಾಗಿದೆ. ವಾಹನಕ್ಕೆ ಇದುವರೆಗೆ ಇ20 ಅಥವಾ ಇ30ರಷ್ಟು ಮಾತ್ರ ಎಥೆನಾಲ್ ಬಳಕೆ ಮಾಡಲಾಗುತ್ತಿತ್ತು. ಇದೀಗ ಶೇಕಜಾ 100ರಷ್ಟು ಎಥೆನಾಲ್ ಇಂಧನ ಬಳಕೆಗೆ ಕೇಂದ್ರ ಸಚಿನ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ. ಇದರೊಂದಿಗೆ ದೇಶದಲ್ಲಿ ಇನ್ನು ಮುಂದೆ ಸಂಪೂರ್ಣವಾಗಿ ಪರಿಸರಸ್ನೇಹಿ ಜೈವಿಕ ಇಂಧನದಲ್ಲೇ (Biofuel) ವಾಹನಗಳು ಓಡುವ ಇಂಧನ ಕ್ರಾಂತಿಯ ಯುಗಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.
ಕಡತಕ್ಕೆ ಸಹಿ ಹಾಕಿದ ನಿತಿನ್ ಗಡ್ಕರಿ
ನಾಗ್ಪುರದಲ್ಲಿ ನಡೆದ ಸಕ್ಕರೆ ಮತ್ತು ಜೈವಿಕ ಇಂಧನ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಜೂನ್ 12 ರ ರಾತ್ರಿ 8 ಗಂಟೆಗೆ ನಾನು ಶೇಕಡಾ 100 ರಷ್ಟು ಎಥನಾಲ್ ಇಂಧನ ಬಳಕೆಯನ್ನು ಕಾನೂನುಬದ್ಧಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ ಎಂದಿದ್ದಾರೆ. ಇದರೊಂದಿಗೆ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.
22 ಲಕ್ಷ ಕೋಟಿ ರೂ ಉಳಿತಾಯ
ಭಾರತವು ಪ್ರಸ್ತುತ ತನ್ನ ಒಟ್ಟು ಕಚ್ಚಾ ತೈಲದ ಅವಶ್ಯಕತೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚಿನ ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ದೇಶದ ಬೊಕ್ಕಸದಿಂದ ವಾರ್ಷಿಕವಾಗಿ ಬರೋಬ್ಬರಿ 22 ಲಕ್ಷ ಕೋಟಿ ರೂಪಾಯಿ ಹೊರದೇಶಗಳಿಗೆ ಹರಿದುಹೋಗುತ್ತಿದೆ. ಈಗ ದೇಶೀಯವಾಗಿಯೇ ತಯಾರಾಗುವ ಇ-100 (E100) ಇಂಧನ ಬಳಕೆಗೆ ಕಾನೂನು ಮಾನ್ಯತೆ ಸಿಕ್ಕಿರುವುದರಿಂದ, ಮುಂಬರುವ ದಿನಗಳಲ್ಲಿ ವಿದೇಶಿ ಕಚ್ಚಾ ತೈಲದ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದ್ದು, ಭಾರತದ ಲಕ್ಷಾಂತರ ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗಲಿದೆ.
ರೈತರಿಗೆ ಭರ್ಜರಿ ಆದಾಯ
ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ನೀತಿಯಿಂದ ದೇಶದ ಕೃಷಿ ವಲಯಕ್ಕೆ, ವಿಶೇಷವಾಗಿ ಕಬ್ಬು ಬೆಳೆಗಾರರು ಮತ್ತು ಧಾನ್ಯ ಉತ್ಪಾದಕ ರೈತರಿಗೆ ಭಾರಿ ಆರ್ಥಿಕ ಭದ್ರತೆ ಸಿಗಲಿದೆ. ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ ಉಳಿಯುವ ಕಬ್ಬು, ಮೆಕ್ಕೆಜೋಳ ಮತ್ತು ಗೋದಾಮುಗಳಲ್ಲಿ ಕೊಳೆತು ಹಾಳಾಗುವ ಅನ್ನದ ಧಾನ್ಯಗಳನ್ನು ನೇರವಾಗಿ ಬಯೋ-ರಿಫೈನರಿಗಳಿಗೆ (ಜೈವಿಕ ಇಂಧನ ಸಂಸ್ಕರಣಾಗಾರಗಳು) ರವಾನಿಸಿ ಅದರಿಂದ ದ್ವಿತೀಯ ಹಂತದ ಶುದ್ಧ ಎಥನಾಲ್ ಉತ್ಪಾದಿಸಲಾಗುತ್ತದೆ. ಇದು ರೈತರಿಗೆ ಪರ್ಯಾಯ ಮತ್ತು ಸ್ಥಿರ ಆದಾಯದ ಮೂಲವಾಗಿ ಮಾರ್ಪಡಲಿದೆ.
ವ್ಯಾಗನ್ಆರ್ ಸೇರಿ ಹಲವು ವಾಹನ ಮಾರುಕಟ್ಟೆಗೆ
ಜೂನ್ ತಿಂಗಳಲ್ಲೇ ತನ್ನ ಜನಪ್ರಿಯ 'ವ್ಯಾಗನ್ಆರ್' (WagonR) ಕಾರಿನ 100% ಎಥನಾಲ್ ಚಾಲಿತ ಮಾದರಿಯನ್ನು ಪರಿಚಯಿಸಲು ಸಜ್ಜಾಗಿದೆ. ಟೊಯೋಟಾ, ಹ್ಯುಂಡೈ, ಎಂಜಿ ಮೋಟಾರ್ಸ್ ಮತ್ತು ಹೀರೋ ಮೋಟೋಕಾರ್ಪ್ ಕಂಪನಿಗಳು ಸಹ ಮುಂಬರುವ ಒಂದೂವರೆ ತಿಂಗಳೊಳಗೆ ತಮ್ಮ ಇ-100 ಹೊಂದಾಣಿಕೆಯ ಕಾರು ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ.
ಫ್ಲೆಕ್ಸ್ ಫ್ಯೂಯೆಲ್ ವಾಹನ
ಈಗಾಗಲೇ ಮಾರುಕಟ್ಟೆಯಲ್ಲಿ ಶೇಕಡಾ 20 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಲಭ್ಯವಿದ್ದು, ಯಶಸ್ವಿಯಾಗಿದೆ. ಆದರೆ ಈಗ ಇ-100 ನಿಯಮಾವಳಿಗಳಿಗೆ ಒಪ್ಪಿಗೆ ಸಿಕ್ಕಿರುವುದರಿಂದ ಆಟೋಮೊಬೈಲ್ ಕಂಪನಿಗಳು ಸಂಪೂರ್ಣ ಎಥನಾಲ್‌ನಲ್ಲೇ ಚಲಿಸುವ 'ಫ್ಲೆಕ್ಸ್-ಫ್ಯುಯೆಲ್ ವಾಹನಗಳನ್ನು' (FFVs) ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲು ಹೂಡಿಕೆ ಆರಂಭಿಸಲಿವೆ.

