ಯತ್ನಾಳ ಕುಟುಂಬದ ಸಿದ್ಧಸಿರಿ ಎಥೆನಾಲ್ ಘಟಕ ಮುಚ್ಚಲು ಮುಂದಾದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ತರಾಟೆ!
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಿದ್ಧಸಿರಿ ಎಥೆನಾಲ್ ಘಟಕ ಮುಚ್ಚಲು ಆದೇಶ ಹೊರಡಿಸಿದ ಬಗ್ಗೆ ಸ್ಪಷ್ಟ ಕಾರಣ ನೀಡಬೇಕು ಎಂದು ರಾಜ್ಯ ಮಾಲಿನ್ಯ ಮಂಡಳಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.
ಬೆಂಗಳೂರು (ಏ.15): ಶಾಸಕ ಬಸವನಗೌಡ ಪಾಟೀಲ್ ಯತ್ನಾಳದ ಸಿದ್ಧಸಿರಿ ಎಥೆನಾಲ್ ಘಟಕವನ್ನು ಏಕಾಏಕಿ ಮುಚ್ಚುವಂತೆ ಆದೇಶ ಹೊರಡಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸಂವಿಧಾನಿಕ ಸಂಸ್ಥೆಯಾಗಿದೆ. ಮೊದಲು ಎಥೆನಾಲ್ ಘಟಕ ಆರಂಭ ಮಾಡುವುದಕ್ಕೆ ಅನುಮತಿ ನೀಡಲಾಗಿದ್ದು, ಈಗ ಏಕಾಏಕಿ ಮುಚ್ಚಲು ಆದೇಶ ನೀಡಿದ ಬಗ್ಗೆ ಕಾರಣ ಕೊಡಬೇಕು. ನಮ್ಮಲ್ಲಿರುವುದು ಜನಕಲ್ಯಾಣ ಆಡಳಿತ, ಮೊಗಲ್ ಸರ್ಕಾರವಲ್ಲ. ನಿಮ್ಮ ತೀರ್ಮಾನದ ಹಿಂದಿನ ಕಾರಣ ಜನರಿಗೆ ತಿಳಿಯಬೇಕು ಎಂದು ಹೈಕೋರ್ಟ್ ತಾರಟೆ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದ ಮಾಜಿ ಸಚಿವರೂ ಆಗಿರುವ ಹಾಗೂ ಹಾಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಒಡೆತನದ ಸಿದ್ಧಸಿರಿ ಎಥೆನಾಲ್ ಘಟಕವನ್ನು ಮುಚ್ಚಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board-KSPCB) ಆದೇಶ ಹೊರಡಿಸಿತ್ತು. ಸರ್ಕಾರದ ಸಂಸ್ಥೆಯಿಂದ ಘಟಕ ಮುಚ್ಚುವಂತೆ ಆದೇಶ ಬಂದ ಬೆನ್ನಲ್ಲಿಯೇ ಇದನ್ನು ಪ್ರಶ್ನಿಸಿ ಯತ್ನಾಳ್ ಅವರು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು.
ಯತ್ನಾಳ್ ಅವರ ಸಿದ್ಧಸಿರಿ ಎಥೆನಾಲ್ ಘಟಕ ಮುಚ್ಚಲು ಕೆಎಸ್‌ಪಿಸಿಬಿ ಆದೇಶ ವಿಚಾರದ ರಿಟ್ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ ಹಾಗೂ ಕೃಷ್ಣ.ಎಸ್. ದೀಕ್ಷಿತ್ ಅವರಿದ್ದ ಪೀಠವು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡಿತು. ಈ ವೇಳೆ ಘಟಕ ಮುಚ್ಚುವುದಕ್ಕೆ ಕಾರಣವೇನೆಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೇಳಲಾಗಿದೆ. ಆಗ ಕೆಎಸ್‌ಪಿಸಿಬಿ ಅಧಿಕಾರಿಗಳು ಸಿದ್ಧಸಿರಿ ಎಥೆನಾಲ್ ಘಟಕಕ್ಕೆ ಪರಿಸರ ಅನುಮೋದನೆ ಹಿಂಪಡೆದಿರುವುದರಿಂದ, ಮುಚ್ಚುವಂತೆ ಆದೇಶ ನೀಡಲಾಗಿದೆ. ಈ ಘಟಕವನ್ನು ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿಲ್ಲ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ಈ ಬಗ್ಗೆ ತರಾಟೆ ತೆಗೆದುಕೊಂಡ ನ್ಯಾಯ ಮೂರ್ತಿಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಿದ್ಧಸಿರಿ ಘಟಕವನ್ನು ಮುಚ್ಚಿಸಲು ತೆಗೆದುಕೊಂಡ ತೀರ್ಮಾನಕ್ಕೆ ಕಾರಣ ಒದಗಿಸಬೇಕು. ತನ್ನ ಮನವಿ ತಿರಸ್ಕಾರಕ್ಕೆ ಕಾರಣವೇನೆಂದು ಅರ್ಜಿದಾರರಿಗೆ ತಿಳಿಸಬೇಕು. ಸಂವಿಧಾನಿಕ ಸಂಸ್ಥೆ ಅನುಮತಿ ನೀಡದಿರುವುದಕ್ಕೆ ಕಾರಣ ನೀಡಬೇಕು. ನಮ್ಮಲ್ಲಿರುವುದು ಜನಕಲ್ಯಾಣ ಆಡಳಿತ, ಮೊಗಲ್ ಸರ್ಕಾರವಲ್ಲ. ತೀರ್ಮಾನದ ಹಿಂದಿನ ಕಾರಣ ಜನರಿಗೆ ತಿಳಿಯಬೇಕು ಎಂದು ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯಾ ಹಾಗೂ ಕೃಷ್ಣ ಎಸ್ ದೀಕ್ಷಿತ್ ರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ, ಈ ಪ್ರಕರಣದ ಅರ್ಜಿಯನ್ನು ಜೂ.4 ಕ್ಕೆ ನಿಗದಿಪಡಿಸಿ ಮುಂದೂಡಿಕೆಮ ಮಾಡಲಾಗಿದೆ.
ಚುನಾವಣೆ ನಂತ್ರ ಬಿಜೆಪಿ ಸರ್ಕಾರ, ಉತ್ತರ ಕರ್ನಾಟಕದವರು ಸಿಎಂ: ಯತ್ನಾಳ್ ಹೊಸ ಬಾಂಬ್..!
ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಕ್ಕೆ ತಡೆ ಕೊಟ್ಟಿದ್ದ ಕೋರ್ಟ್: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹೊರ ವಲಯದಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬದ ಒಡೆತನ ಇರುವ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಪ್ಲಾಂಟ್ ಮುಚ್ಚುವಂತೆ ಕಲಬುರ್ಗಿ ವಲಯದ ಹಿರಿಯ ಪರಿಸರ ಅಧಿಕಾರಿ ಜ.18ರಂದು ನೋಟಿಸ್ ಜಾರಿ ಮಾಡಿದ್ದರು. ಆನಂತರ ಕೆಎಸ್‌ಪಿಸಿಬಿ ಅಧ್ಯಕ್ಷರು ಜ.25ರಂದು ಆದೇಶ ಮಾಡಿದ್ದರು. ಈ ಎರಡೂ ಆದೇಶವನ್ನು ವಜಾ ಮಾಡಬೇಕು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕುಟುಂಬ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಜೊತೆಗೆ, ಮಧ್ಯಂತರ ಪರಿಹಾರದ ಭಾಗವಾಗಿ ಕೆಎಸ್‌ಪಿಸಿಬಿ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಜ.31ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೀಡಿದ್ದ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.