ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಶುರುವಾಯ್ತು ಮತ್ತೊಂದು ಟೆನ್ಶನ್!
ಬೆಂಗಳೂರು: ಬಹುನಿರೀಕ್ಷಿತ 2025ರ ಏಷ್ಯಾಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಭಾರತ ತಂಡಕ್ಕೆ ಹೊಸದೊಂದು ತಲೆನೋವು ಶುರುವಾಗಿದೆ. ಇದು ಹಾಲಿ ಚಾಂಪಿಯನ್ ಭಾರತದ ಪಾಲಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಬಹುನಿರೀಕ್ಷಿತ 2025ರ ಏಷ್ಯಾಕಪ್ ಟೂರ್ನಿಯು ಇದೇ ಸೆಪ್ಟೆಂಬರ್ 09ರಿಂದ ಆರಂಭವಾಗಲಿದ್ದು, ಈಗಾಗಲೇ ಎಲ್ಲಾ ತಂಡಗಳು ಬಹುಪಕ್ಷೀಯ ಟಿ20 ಸರಣಿಗೆ ಭರ್ಜರಿ ತಯಾರಿ ಆರಂಭಿಸಿವೆ.
ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿ ಜಂಟಿಯಾಗಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಯೋಜಿಸಲು ಎಸಿಸಿ ತೀರ್ಮಾನಿಸಿದೆ.
ಹೀಗಿರುವಾಗಲೇ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಇದೀಗ ಬಿಗ್ ಟೆನ್ಶನ್ ಶುರುವಾಗಿದೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸದ್ಯ ಟೂರ್ನಿಗೆ 100% ಫಿಟ್ ಆಗುವುದು ಅನುಮಾನ ಎನಿಸಿದ್ದು, ಇದು ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸೂರ್ಯಕುಮಾರ್ ಯಾದವ್ ಸ್ಪೋರ್ಟ್ಸ್ ಹರ್ನಿಯಾ ಸರ್ಜರಿ ಮಾಡಿಸಿಕೊಂಡಿದ್ರು. ಈ ಕಾರಣಕ್ಕಾಗಿಯೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಸಂಪೂರ್ಣ ಫಿಟ್ ಆಗಿರುವುದು ತಂಡಕ್ಕೆ ಸಾಕಷ್ಟು ಮಹತ್ವದ್ದೆನಿಸಿದೆ.
ಸೂರ್ಯಕುಮಾರ್ ಯಾದವ್ ಭಾರತ ಪರ ನಾಯಕನಾಗಿ 22 ಬಾರಿ ತಂಡವನ್ನು ಮುನ್ನಡೆಸಿದ್ದು, ಈ ಪೈಕಿ 17 ಬಾರಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್‌ನಲ್ಲಿದ್ದರು. ಮುಂಬೈ ಇಂಡಿಯನ್ಸ್ ಪರ ಸೂರ್ಯ 717 ರನ್ ಸಿಡಿಸುವ ಮೂಲಕ ಟೂರ್ನಿಯ ಮೋಸ್ಟ್ ವ್ಯಾಲ್ಯೂಯೇಬಲ್ ಆಟಗಾರನಾಗಿ ಹೊರಹೊಮ್ಮಿದ್ದರು.