400 ಕೋಟಿ ಆಸ್ತಿ ಇದ್ರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಟ; ಯಾಕಿಂಗೆ?
Bollywood Actor Anupam Kher: 400 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಹಿರಿಯ ನಟ ಅನುಪಮ್ ಖೇರ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕಾರಣವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

500ಕ್ಕೂ ಅಧಿಕ ಸಿನಿಮಾಗಳಲ್ಲಿ ಹಿರಿಯ ನಟ ಅನುಪಮ್ ಖೇರ್, ಇಂದಿಗೂ ಬ್ಯುಸಿಯಾಗಿರುವ ಕಲಾವಿದ. 400 ಕೋಟಿ ರೂ. ಅಧಿಕ ಆಸ್ತಿಯನ್ನು ಹೊಂದಿರುವ ನಟ ಅನುಪಮ್ ಖೇರ್ ಇವತ್ತು ಸಹ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರೋದೇಕೆ ಎಂಬ ವಿಷಯವನ್ನು ಅನುಪಮ್ ಖೇರ್ ಹಂಚಿಕೊಂಡಿದ್ದಾರೆ.
ಸದ್ಯ ಅನುಪಮ್ ಖೇರ್, ಮುಂಬೈನ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಾರೆ. ಬಾಡಿಗೆ ಮನೆಯಲ್ಲಿರೋದು ಯಾಕೆ ಒಳ್ಳೆಯದ್ದು ಎಂದು ಹೇಳಿದ್ದಾರೆ. The Powerful Humans ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಅನುಪಮ್ ಖೇರ್, ವ್ಯಕ್ತಿ ಸತ್ತ ನಂತರ ಏನಾಗುತ್ತೆ ಎಂದು ನೋಡಿದ್ದೇನೆ. ಹಾಗಾಗಿ ಈವರೆಗೆ ಸ್ವಂತ ಮನೆಯನ್ನು ಮಾಡಿಕೊಂಡಿಲ್ಲ. ವಾಸಿಸಲು ಒಂದು ಸುಂದರ ಮನೆ ಇರಬೇಕು ಅನ್ನೋದು ಎಲ್ಲರ ಕನಸು. ಅದು ಸ್ವಂತದ್ದೇ ಆಗಿರಬೇಕೆಂದು ಏನಿಲ್ಲ. ಬಾಡಿಗೆ ಮನೆಯಾಗಿದ್ದರೂ ನಡೆಯುತ್ತೆ ಎಂದು ಹೇಳಿದ್ದಾರೆ.
ವಯಸ್ಸಾದ ಪೋಷಕರನ್ನು ಮಕ್ಕಳು ಮನೆಯಿಂದ ಹೊರಗೆ ಹಾಕಿರೋದನ್ನ ನೋಡಿದ್ದೇನೆ. ಅಂತಹವರ ಕಥೆಗಳನ್ನು ಕೇಳಿ ನನಗೆ ಶಾಕ್ ಆಗಿದೆ. ಪೋಷಕರು ಮಾಡಿದ ಆಸ್ತಿಯ ಮೇಲೆ ಮಕ್ಕಳು ಹಕ್ಕು ಚಲಾಯಿಸಲು ಮುಂದಾಗುತ್ತಾರೆ. ಆದ್ರೆ ಇಂತಹ ವಾತಾವರಣ ನಮ್ಮ ಮನೆಯಲ್ಲಿಲ್ಲ ಎಂದು ಹೇಳಿದರು. ಹಾಗಾದ್ರೆ ನಿಮ್ಮ ಪ್ರಕಾರ ಜೀವನಕ್ಕೆ ಅವಶ್ಯಕ ಮನೆ ಅಲ್ಲವಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅನುಪಮ್ ಖೇರ್, ಮನೆ ಬೇಕು. ಆದರೆ ಅದು ಬಾಡಿಗೆಯದ್ದಾಗಿದ್ರೂ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಇಂದು ಜೀವನ ನಡೆಸಲು ಒಂದು ವಾಹನವೂ ಬೇಕಾಗುತ್ತದೆ. ಅದು ಸಹ ಅತ್ಯವಶ್ಯಕಗಳಲ್ಲಿ ಒಂದಾಗಿದೆ. ನಿಮ್ಮೊಂದಿಗೆ ಜೀವನ ನಡೆಸಲು ಒಂದಿಬ್ಬರು ಸಹ ಬೇಕು. ಒಂಟಿಯಾಗಿ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಅನುಪಮ್ ಖೇರ್ ಅಭಿಪ್ರಾಯ ವ್ಯಕ್ತಪಡಿಸಿದರು. ಹಣವಿದೆ ಎಂದು ಬೆಳ್ಳಿಯ ರೊಟ್ಟಿ, ಚಿನ್ನದ ಪಲ್ಯವನ್ನ ಮಾಡಿಕೊಂಡು ತಿನ್ನಲು ಆಗಲ್ಲ ಎಂದು ಹೇಳಿದರು.
ನನ್ನ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಬೇಕೆಂದು ನಾನು ಬಯಸುತ್ತೇನೆ. ನಿರ್ಮಾಪಕರಿಗೆ ಹಾಕಿದ ಬಂಡವಾಳ ಲಾಭದೊಂದಿಗೆ ಹಿಂದಿರುಬೇಕು. ಈ ರೀತಿಯಾದ್ರೆ ನಮ್ಮಂಥ ಕಲಾವಿದರಿಗೆ ಕೆಲಸ ಸಿಗುತ್ತದೆ. ಗೆಲುವು ಸಿಕ್ಕಾಗ ಮಾತ್ರ ನಿರ್ಮಾಪಕರು ಹೊಸ ಹೊಸ ಸಿನಿಮಾಗಳನ್ನು ಮಾಡಲು ಮುಂದಾಗುತ್ತಾರೆ ಎಂದು ಅನುಪಮ್ ಖೇರ್ ಹೇಳುತ್ತಾರೆ.