- Home
- Entertainment
- Cine World
- 'ಆ ನಟನಿಗೆ ನನ್ನ ಹೃದಯದಲ್ಲಿ ಸ್ಪೆಷಲ್ ಸ್ಥಾನ ಇದೆ'.. ಸ್ವತಃ ತಾವೇ ಗುಟ್ಟು ಬಿಟ್ಟುಕೊಟ್ಟ ನಟಿ ಅನುಷ್ಕಾ ಶೆಟ್ಟಿ!
'ಆ ನಟನಿಗೆ ನನ್ನ ಹೃದಯದಲ್ಲಿ ಸ್ಪೆಷಲ್ ಸ್ಥಾನ ಇದೆ'.. ಸ್ವತಃ ತಾವೇ ಗುಟ್ಟು ಬಿಟ್ಟುಕೊಟ್ಟ ನಟಿ ಅನುಷ್ಕಾ ಶೆಟ್ಟಿ!
ಸಾಮಾನ್ಯವಾಗಿ ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ಬಣ್ಣ ಬಣ್ಣದ ಪೋರ್ಟ್‌ಫೋಲಿಯೋ, ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ನಿರ್ದೇಶಕರ ಮುಂದೆ ನಿಲ್ಲುತ್ತಾರೆ. ಆದರೆ ಅನುಷ್ಕಾ ಕಥೆಯೇ ಬೇರೆ! ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈನಲ್ಲಿ ಇದ್ದರು. ಮುಂದೇನಾಯ್ತು ನೋಡಿ..

ಅನುಷ್ಕಾ ಶೆಟ್ಟಿ ಸಿನಿ ಜರ್ನಿಯ ರೋಚಕ ಕಥೆ: ಆಡಿಷನ್‌ನಲ್ಲಿ ನಟಿ ಕೊಟ್ಟಿದ್ದು ಬರೀ ಪಾಸ್‌ಪೋರ್ಟ್ ಫೋಟೋ! ನಾಗಾರ್ಜುನ ಬಗ್ಗೆ 'ಸ್ವೀಟಿ' ಹೇಳಿದ್ದೇನು?
ಬೆಂಗಳೂರು: ದಕ್ಷಿಣ ಭಾರತದ 'ಲೇಡಿ ಸೂಪರ್ ಸ್ಟಾರ್' ಅಥವಾ ಅಭಿಮಾನಿಗಳ ಪ್ರೀತಿಯ 'ಸ್ವೀಟಿ' ಅನುಷ್ಕಾ ಶೆಟ್ಟಿ ಅಂದ ಕೂಡಲೇ ನೆನಪಾಗುವುದು 'ಅರುಂಧತಿ'ಯ ಗಾಂಭೀರ್ಯ ಮತ್ತು 'ಬಾಹುಬಲಿ'ಯ ದೇವಸೇನೆಯ ಅಬ್ಬರ. ಇಂದಿಗೂ ಸೌತ್ ಸಿನಿ ದುನಿಯಾದಲ್ಲಿ ಮೋಸ್ಟ್ ಡಿಮ್ಯಾಂಡಿಂಗ್ ನಟಿಯಾಗಿದ್ದಾರೆ ಅನುಷ್ಕಾ.
ನಟಿ ಅನುಷ್ಕಾ ಅವರ ವೈಯಕ್ತಿಕ ಜೀವನ ಮತ್ತು ಮದುವೆ ಬಗ್ಗೆ ಸದಾ ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಅನುಷ್ಕಾ ತಮ್ಮ ಚಿತ್ರರಂಗದ ಎಂಟ್ರಿ ಬಗ್ಗೆ ಬಿಚ್ಚಿಟ್ಟಿರುವ ಸತ್ಯಗಳು ಈಗ ಸಿನಿ ಪ್ರೇಮಿಗಳ ನಡುವೆ ಭಾರಿ ಚರ್ಚೆಗೆ ಕಾರಣವಾಗಿವೆ.
ಪಾಸ್‌ಪೋರ್ಟ್ ಫೋಟೋ ನೀಡಿದ್ದ ಮುಗ್ಧ ಸುಂದರಿ:
ಸಾಮಾನ್ಯವಾಗಿ ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ಬಣ್ಣ ಬಣ್ಣದ ಪೋರ್ಟ್‌ಫೋಲಿಯೋ, ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ನಿರ್ದೇಶಕರ ಮುಂದೆ ನಿಲ್ಲುತ್ತಾರೆ. ಆದರೆ ಅನುಷ್ಕಾ ಕಥೆಯೇ ಬೇರೆ! ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈನಲ್ಲಿ ಯೋಗ ತರಬೇತುದಾರರಾಗಿದ್ದರು.
ಸಿನಿಮಾಗಳ ಬಗ್ಗೆ ಅಷ್ಟಾಗಿ ಅರಿವಿಲ್ಲದ ಅನುಷ್ಕಾ ಅವರಿಗೆ ನಿರ್ದೇಶಕ ಪುರಿ ಜಗನ್ನಾಥ್ ಅವರನ್ನು ಭೇಟಿಯಾಗುವಂತೆ ಆಪ್ತರು ಸಲಹೆ ನೀಡಿದರು. ಮೊದಮೊದಲು ನಾಚಿಕೆಯಿಂದ ನಿರಾಕರಿಸಿದರೂ, ನಂತರ ಎಲ್ಲರ ಒತ್ತಾಯಕ್ಕೆ ಮಣಿದು ಪುರಿ ಅವರನ್ನು ಭೇಟಿಯಾದರು. ಆಗ ಪುರಿ ಜಗನ್ನಾಥ್ ಅವರು "ನಿಮ್ಮ ಫೋಟೋಗಳಿವೆಯೇ?" ಎಂದು ಕೇಳಿದಾಗ, ಅನುಷ್ಕಾ ತಮ್ಮ ಪರ್ಸ್‌ನಲ್ಲಿದ್ದ ಪುಟ್ಟ 'ಪಾಸ್‌ಪೋರ್ಟ್ ಸೈಜ್' ಫೋಟೋವನ್ನು ಕೈಗಿಟ್ಟಿದ್ದರಂತೆ! ಈ ಮುಗ್ಧತೆಯನ್ನು ಕಂಡು ದಂಗಾದ ಪುರಿ, ಮರುದಿನವೇ ಹೈದರಾಬಾದ್‌ಗೆ ಬರುವಂತೆ ಆಹ್ವಾನ ನೀಡಿದರು.
ಯೋಗ ತರಗತಿಗಾಗಿ ಆಡಿಷನ್ ಮುಂದೂಡಿಕೆ!
ಯಾವುದೇ ಹೊಸಬರಿಗೆ ಸ್ಟಾರ್ ನಿರ್ದೇಶಕರು ಕರೆದರೆ ಎಲ್ಲವನ್ನೂ ಬಿಟ್ಟು ಓಡುತ್ತಾರೆ. ಆದರೆ ಅನುಷ್ಕಾ ಮಾತ್ರ, "ನನಗೆ ಯೋಗ ತರಗತಿಗಳಿವೆ, ಶುಕ್ರವಾರದವರೆಗೆ ಬರಲು ಸಾಧ್ಯವಿಲ್ಲ" ಎಂದು ಖಡಕ್ ಆಗಿ ಹೇಳಿದ್ದರಂತೆ. ನಂತರ ಹೈದರಾಬಾದ್‌ಗೆ ಹೋದಾಗ ಅಲ್ಲಿ 'ಕಿಂಗ್' ನಾಗಾರ್ಜುನ ಅವರ 'ಮಾಸ್' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು.
ನಾಗಾರ್ಜುನ ಅವರ ಎದುರೇ ಅನುಷ್ಕಾ ಅವರ ಮೇಕಪ್ ಟೆಸ್ಟ್ ನಡೆಯಿತು. ಪಕ್ಕದಲ್ಲೇ ಇದ್ದ ಮಿಸ್ ಇಂಡಿಯಾ ಸ್ಪರ್ಧಿ ಫೋಟೋಶೂಟ್‌ಗೆ ಸ್ಟೈಲಿಶ್ ಆಗಿ ಪೋಸ್ ನೀಡುತ್ತಿದ್ದರೆ, ಅನುಷ್ಕಾ ಮಾತ್ರ ಅಲ್ಲಿನ ಮ್ಯೂಸಿಕ್ ಮತ್ತು ತಂಗಾಳಿ ಸೃಷ್ಟಿಸುವ ಫ್ಯಾನ್ ನೋಡಿ "ಎಲ್ಲಿ ನನ್ನನ್ನು ಡ್ಯಾನ್ಸ್ ಮಾಡಲು ಹೇಳುತ್ತಾರೋ" ಎಂದು ಬೆವತು ಹೋಗಿದ್ದರಂತೆ!
ನಾಗಾರ್ಜುನ: ಅನುಷ್ಕಾ ಪಾಲಿನ 'ಗಾಡ್‌ಫಾದರ್'
ಬಾಲ್ಯದಿಂದಲೂ ಫೋಟೋಗೆ ಪೋಸ್ ನೀಡಲು ಹಿಂಜರಿಯುತ್ತಿದ್ದ ತಮಗೆ ನಾಗಾರ್ಜುನ ಅವರು ನೀಡಿದ ಪ್ರೋತ್ಸಾಹವನ್ನು ಅನುಷ್ಕಾ ಭಾವುಕರಾಗಿ ಸ್ಮರಿಸಿದ್ದಾರೆ. "ನನ್ನಲ್ಲಿ ಏನೋ ಇದೆ ಎಂದು ನಂಬಿ ಅಂದು ನಾಗಾರ್ಜುನ ಸರ್ ನನಗೆ ಅವಕಾಶ ನೀಡಿದರು. ಅವರ ನಂಬಿಕೆಯಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾಗಾರ್ಜುನ ಸರ್ ನನ್ನ ಜೀವನದ ಗಾಡ್‌ಫಾದರ್ ಮತ್ತು ನನ್ನ ಹೃದಯದಲ್ಲಿ ಅವರಿಗೆ ಸದಾ ವಿಶೇಷ ಸ್ಥಾನವಿರುತ್ತದೆ" ಎಂದು ಅನುಷ್ಕಾ ಹೇಳಿದ್ದಾರೆ.
ಒಟ್ಟಿನಲ್ಲಿ, ಒಂದು ಪಾಸ್‌ಪೋರ್ಟ್ ಫೋಟೋದಿಂದ ಆರಂಭವಾದ ಅನುಷ್ಕಾ ಅವರ ಈ ಪ್ರಯಾಣ ಇಂದು ಅವರನ್ನು ಭಾರತದಾದ್ಯಂತ ಮನೆಮಾತಾಗಿಸಿದೆ. 'ಸೂಪರ್' ಚಿತ್ರದ ಮೂಲಕ ಆರಂಭವಾದ ಈ ಯಶೋಗಾಥೆ ಇಂದಿಗೂ ಕೋಟ್ಯಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಇಂದಿಗೂ ಸ್ಟಿಲ್ ಕ್ಯಾಮೆರಾಗಳ ಮುಂದೆ ನಿಲ್ಲಲು ತಮಗೆ ಭಯವಾಗುತ್ತದೆ ಎಂದು ಹೇಳುವ ಈ ನಟಿಯ ಸರಳತೆ ಮತ್ತು ಮುಗ್ಧತೆಯೇ ಅವರ ಯಶಸ್ಸಿನ ಗುಟ್ಟು ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

