- Home
- Business
- ರಿಲಯನ್ಸ್ ಉತ್ತರಾಧಿಕಾರಿ ಪ್ರಕ್ರಿಯೆ ಬಹುತೇಕ ಪೂರ್ಣ, ಮಕ್ಕಳಿಗೆ ನಾಯಕತ್ವ ಪಟ್ಟ ಕಟ್ಟಿದ ಮುಕೇಶ್ ಅಂಬಾನಿ
ರಿಲಯನ್ಸ್ ಉತ್ತರಾಧಿಕಾರಿ ಪ್ರಕ್ರಿಯೆ ಬಹುತೇಕ ಪೂರ್ಣ, ಮಕ್ಕಳಿಗೆ ನಾಯಕತ್ವ ಪಟ್ಟ ಕಟ್ಟಿದ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ ಮಕ್ಕಳಾದ ಇಶಾ, ಆಕಾಶ್ ಹಾಗೂ ಅನಂತ್ ಅಂಬಾನಿ ಇನ್ನು ರಿಲಯನ್ಸ್ ಇಂಡಸ್ಟ್ರಿ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ನಿರ್ವಹಣೆಗಳ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.

ಮಕ್ಕಳ ಕೈಗೆ ರಿಲಯನ್ಸ್ ಇಂಡಸ್ಟ್ರಿ
ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಮುಂದಿನ ನಾಯಕತ್ವದ ಸ್ವರೂಪ ಸ್ಪಷ್ಟ ರೂಪ ಪಡೆದುಕೊಳ್ಳುತ್ತಿದೆ. ಸಮೂಹದ ನಿರ್ವಹಣೆಗಳ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆಯು ಬಹುತೇಕ ಪೂರ್ಣವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ (AGM) ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರು ಘೋಷಿಸಿದ್ದಾರೆ. ಜಿಯೋ ಐಪಿಒ (Jio IPO), ರಿಲಯನ್ಸ್ ಇಂಟೆಲಿಜೆನ್ಸ್, ನ್ಯೂ ಎನರ್ಜಿ, ಎಫ್‌ಎಂಸಿಜಿ (FMCG) ಮತ್ತು ಜಾಗತಿಕ ರಫ್ತಿನಂತಹ ಹಲವು ದೊಡ್ಡ ಬೆಳವಣಿಗೆಯ ಗುರಿಗಳೊಂದಿಗೆ ಕಂಪನಿಯು ಕೆಲಸ ಮಾಡುತ್ತಿರುವ ಸಮಯದಲ್ಲಿಯೇ ರಿಲಯನ್ಸ್‌ನ ಈ ನಾಯಕತ್ವದ ಮುನ್ಸೂಚನೆ ಹೊರಬಿದ್ದಿದೆ.
ಯಾರಿಗೆ ಯಾವ ಜವಾಬ್ದಾರಿ
ಇಶಾ, ಆಕಾಶ್ ಮತ್ತು ಅನಂತ್ ಅವರು ರಿಲಯನ್ಸ್ ಆಡಳಿತ ಮಂಡಳಿಯಲ್ಲಿ (Board) ಮೂರು ವರ್ಷಗಳನ್ನು ಪೂರೈಸಿದ್ದಾರೆ. ಇಶಾ ಗ್ರಾಹಕ ವ್ಯವಹಾರಗಳ (Consumer Business) ನೇತೃತ್ವ ವಹಿಸಿದ್ದರೆ, ಆಕಾಶ್ ತಂತ್ರಜ್ಞಾನ ವ್ಯವಹಾರವನ್ನು (Technology Business) ಮುನ್ನಡೆಸುತ್ತಿದ್ದಾರೆ ಮತ್ತು ಅನಂತ್ ಇಂಧನ ವ್ಯವಹಾರದ (Energy Business) ಜವಾಬ್ದಾರಿಯನ್ನು ವಹಿಸಿದ್ದಾರೆ. ಇಶಾ, ಆಕಾಶ್ ಮತ್ತು ಅನಂತ್ ವಿಭಿನ್ನ ವ್ಯವಹಾರ ವಿಭಾಗಗಳನ್ನು ಮುನ್ನಡೆಸುತ್ತಿರಬಹುದು, ಆದರೆ ಅವರು ರಿಲಯನ್ಸ್ ಸಮೂಹದ ಒಟ್ಟಾರೆ ಬೆಳವಣಿಗೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ರಿಲಯನ್ಸ್ ನಾಯಕತ್ವ
ಹೂಡಿಕೆದಾರರು, ಮಾರುಕಟ್ಟೆ ಮತ್ತು ಉದ್ಯಮ ರಂಗವು ದೀರ್ಘಕಾಲದಿಂದ ರಿಲಯನ್ಸ್‌ನ ಉತ್ತರಾಧಿಕಾರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ಎಜಿಎಂನಲ್ಲಿ ಮುಖೇಶ್ ಅಂಬಾನಿ ಇದನ್ನು ಕೇವಲ ಒಂದು ಕುಟುಂಬದ ನಾಯಕತ್ವ ಬದಲಾವಣೆ ಎಂದು ಬಿಂಬಿಸದೆ, ರಿಲಯನ್ಸ್ ದೀರ್ಘಕಾಲದವರೆಗೆ ಬಲಿಷ್ಠ ಸಂಸ್ಥೆಯಾಗಿ ಉಳಿಸುವ ಪ್ರಕ್ರಿಯೆಯಾಗಿ ಮಾರ್ಪಡಿಸಿದ್ದಾರೆ.
ಮಕ್ಕಳಿಗೆ ಜವಾಬ್ದಾರಿ ನೀಡಿದರೂ ಮುಕೇಶ್ ಅಂಬಾನಿ ಸಕ್ರಿಯ
ಮಕ್ಕಳಿಗೆ ಜವಾಬ್ದಾರಿ ನೀಡಿದರೂ ತಾವು ರಿಲಯನ್ಸ್‌ಗೆ ಸಕ್ರಿಯ ನಾಯಕತ್ವವನ್ನು ನೀಡುವುದನ್ನು ಮುಂದುವರಿಸುವುದಾಗಿ ಮುಖೇಶ್ ಅಂಬಾನಿ ಸ್ಪಷ್ಟಪಡಿಸಿದರು. ಇದರೊಂದಿಗೆ, ಕಂಪನಿಯ ಭವಿಷ್ಯವು ಕೇವಲ ಸುರಕ್ಷಿತ ಕೈಗಳಲ್ಲಿಲ್ಲ, ಬದಲಿಗೆ ರಿಲಯನ್ಸ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೈಗಳಲ್ಲಿದೆ ಎಂದು ಷೇರುದಾರರಿಗೆ ಭರವಸೆ ನೀಡಿದರು.
25 ವರ್ಷದ ಹಿಂದಿನ ಹಾದಿ
ತಾವು 25 ವರ್ಷಗಳ ಹಿಂದೆ ಮಾಡಿದ್ದನ್ನೇ ಇಶಾ, ಆಕಾಶ್ ಮತ್ತು ಅನಂತ್ ಈಗ ಮಾಡುತ್ತಿದ್ದಾರೆ, ಆದರೆ ಅವರು ಅದಕ್ಕಿಂತ ಹೆಚ್ಚಿನ ಮಹತ್ವಾಕಾಂಕ್ಷೆ ಮತ್ತು ಬೃಹತ್ ಹಣಕಾಸು ಹಾಗೂ ವೃತ್ತಿಪರ ಅಡಿಪಾಯದೊಂದಿಗೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ ಈ ಪ್ರತಿಯೊಂದು ಉದ್ಯಮವೂ ಇಂದಿನ ರಿಲಯನ್ಸ್‌ನಷ್ಟೇ ದೊಡ್ಡದಾಗಿ ಬೆಳೆಯಬಲ್ಲದು ಎಂಬುದನ್ನು ತಾವು ಕಾಣುತ್ತಿರುವುದಾಗಿ ಮುಖೇಶ್ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಐದು ವರ್ಷಗಳಲ್ಲಿ ಕಂಪನಿಯ ಒಟ್ಟು ಎಬಿಟಾ (EBITDA) ಅನ್ನು ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಮಾಡುವ ವಿಶ್ವಾಸವನ್ನು ಮುಖೇಶ್ ಅಂಬಾನಿ ಎಜಿಎಂನಲ್ಲಿ ವ್ಯಕ್ತಪಡಿಸಿದ್ದಾರೆ. “ಕಳೆದ ಐದು ವರ್ಷಗಳಲ್ಲಿ ನಾವು ನಮ್ಮ ಎಬಿಟಾವನ್ನು ದುಪ್ಪಟ್ಟುಗೊಳಿಸಿದ್ದೇವೆ.
ಭವಿಷ್ಯದ ಅತೀ ದೊಡ್ಡ ಕಂಪನಿ
ಭವಿಷ್ಯದ ಕಡೆಗೆ ನೋಡುತ್ತಾ, ಮುಂದಿನ ಐದು ವರ್ಷಗಳಲ್ಲಿ ನಮ್ಮ ಒಟ್ಟುಗೂಡಿಸಿದ ಎಬಿಟಾವನ್ನು (Consolidated EBITDA) ದುಪ್ಪಟ್ಟು, ಅಥವಾ ಅದಕ್ಕಿಂತಲೂ ಹೆಚ್ಚು ಮಾಡುವ ಸಾಮರ್ಥ್ಯ ನಮಗಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ,” ಎಂದರು. ರಿಲಯನ್ಸ್ ಸಂಸ್ಥೆಯು ಮೌಲ್ಯ ವರ್ಧನೆಗಾಗಿ ಐದು ಮಾರ್ಗಗಳನ್ನು ಮುಂದಿಟ್ಟಿದೆ. ಅವುಗಳೆಂದರೆ: ಓಟುಸಿ (O2C) ವ್ಯವಹಾರವನ್ನು ಆಯಿಲ್-ಟು-ಕೆಮಿಕಲ್ಸ್-ಅಂಡ್-ನ್ಯೂ ಮೆಟೀರಿಯಲ್ಸ್ ಆಗಿ ಪರಿವರ್ತಿಸುವುದು. ನ್ಯೂ ಎನರ್ಜಿ (ಹಸಿರು ಇಂಧನ) ಯೋಜನೆಗಳನ್ನು ಶೀಘ್ರವಾಗಿ ಮತ್ತು ವೇಗವಾಗಿ ಕಾರ್ಯಗತಗೊಳಿಸುವುದು. 'ರಿಲಯನ್ಸ್ ಇಂಟೆಲಿಜೆನ್ಸ್' ಅನ್ನು ಪ್ರತಿಯೊಬ್ಬ ಭಾರತೀಯನಿಗಾಗಿ ಎಐ (AI) ಆಗಿ ಅಭಿವೃದ್ಧಿಪಡಿಸುವುದು. ಎಫ್‌ಎಂಸಿಜಿ (FMCG) ವ್ಯವಹಾರವನ್ನು ಭಾರತದ ಅತಿ ದೊಡ್ಡ ಎಫ್‌ಎಂಸಿಜಿ ಕಂಪನಿಗಳಲ್ಲಿ ಒಂದನ್ನಾಗಿ ಬೆಳೆಸುವುದು. 2032ರ ವೇಳೆಗೆ 125 ರಿಂದ 150 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಗುರಿ ತಲುಪಲಿದೆ ಎಂದು ಮುಕೇಶ್ ಅೆಂಬಾನಿ ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

