ಜಿಯೋ ಐಪಿಒ ಘೋಷಿಸಿದ ಮುಕೇಶ್ ಅಂಬಾನಿ, 10 ರೂ ಫೇಸ್ ವ್ಯಾಲ್ಯೂ 27 ಕೋಟಿ ಷೇರು ಬಿಡುಗಡಗೆ ಸಿದ್ದತೆ
ಹೂಡಿಕೆದಾರರಿಗೆ ಬಂಪರ್ ಘೋಷಣೆಯನ್ನು ಮುಕೇಶ್ ಅಂಬಾನಿ ಮಾಡಿದ್ದಾರೆ. ಅಂಬಾನಿ ಬಹುನಿರೀಕ್ಷಿತ ಜಿಯೋ ಐಪಿಒ ಘೋಷಿಸಿದ್ದಾರೆ. 27 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರತಿ ಷೇರಿನ ಬೆಲೆ 10 ರೂಪಾಯಿ.

ಜಿಯೋ ಒಪಿಒ ಘೋಷಣೆ
ದೇಶದ ಸ್ಟಾಕ್ ಮಾರ್ಕೆಟ್ ಇತಿಹಾಸದಲ್ಲೇ ಅತ್ಯಂತ ಬಹುನಿರೀಕ್ಷಿತ ಐಪಿಒಗಳಲ್ಲಿ ಒಂದೆಂದು ಪರಿಗಣಿಸಲಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಪ್ರಕ್ರಿಯೆಯು ಅಧಿಕೃತವಾಗಿ ಆರಂಭಗೊಂಡಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಆಡಳಿತ ಮಂಡಳಿಯು, 27 ಕೋಟಿ ಈಕ್ವಿಟಿ ಷೇರುಗಳ ಫ್ರೆಶ್ ಇಶ್ಯೂಗೆ (ಹೊಸ ಷೇರುಗಳ ವಿತರಣೆ) ಅನುಮೋದನೆ ನೀಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್, ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಮಾಹಿತಿ ನೀಡಿದೆ.
10 ರೂಪಾಯಿ ಫೇಸ್ ವ್ಯಾಲ್ಯೂ
ಈ ಷೇರುಗಳ ಮುಖಬೆಲೆ (ಫೇಸ್ ವ್ಯಾಲ್ಯೂ) ಪ್ರತಿ ಷೇರಿಗೆ 10 ರೂಪಾಯಿ ಆಗಿರಲಿದ್ದು, ಇಶ್ಯೂ ದರವನ್ನು ಬುಕ್ ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ನಿರ್ಧರಿಸಲಾಗುತ್ತದೆ. ಇದು ರಿಲಯನ್ಸ್ ಕುಟುಂಬ ಮತ್ತು ಅದರ ಲಕ್ಷಾಂತರ ಷೇರುದಾರರಿಗೆ ಒಂದು ಭಾವುಕ ಕ್ಷಣ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ಐಪಿಒ ಭಾರತವು ಜಾಗತಿಕ ಮಟ್ಟದ, ಜಾಗತಿಕ ಸಾಮರ್ಥ್ಯದ ಮತ್ತು ಜಾಗತಿಕ ಮೌಲ್ಯದ ತಂತ್ರಜ್ಞಾನ ಕಂಪನಿಗಳನ್ನು ನಿರ್ಮಿಸಬಲ್ಲದು ಎಂಬುದನ್ನು ಜಗತ್ತಿಗೆ ತೋರಿಸಿಕೊಡಲಿದೆ ಎಂದಿದ್ದಾರೆ.
ಅತೀ ದೊಡ್ಡ ಮೌಲ್ಯದ ಅನ್‌ಲಾಕ್
ಜಿಯೋದ ಭವಿಷ್ಯವು ಇನ್ನಷ್ಟು ಉಜ್ವಲವಾಗಿದೆ ಎಂದು ನಾನು ನಿಮಗೆ ಮತ್ತು ಎಲ್ಲಾ ಹೊಸ ಹೂಡಿಕೆದಾರರಿಗೆ ಭರವಸೆ ನೀಡುತ್ತೇನೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಈ ವರ್ಷದ ಮೌಲ್ಯ ವೃದ್ಧಿಯ (Value Creation) ಅತ್ಯಂತ ಪ್ರಮುಖ ಮೈಲಿಗಲ್ಲು ಎಂದರೆ ಅದು ಉದ್ದೇಶಿತ ಜಿಯೋ ಐಪಿಒ ಆಗಿದೆ. ಇದು ರಿಲಯನ್ಸ್ ಷೇರುದಾರರಿಗೆ ದೊಡ್ಡ ಮಟ್ಟದ ಮೌಲ್ಯವನ್ನು ಅನ್‌ಲಾಕ್ ಮಾಡುವುದಲ್ಲದೆ, ಹೊಸ ಹೂಡಿಕೆದಾರರಿಗೆ ಆಕರ್ಷಕ ಹೂಡಿಕೆಯ ಅವಕಾಶವನ್ನು ನೀಡಲಿದೆ ಎಂದಿದ್ದಾರೆ.
ಜಿಯೋ ಗ್ರಾಹಕರ ಸೆಂಖ್ಯೆ 52.4 ಕೋಟಿ
ಇಂದು ಜಿಯೋದ ಗ್ರಾಹಕರ ಸಂಖ್ಯೆ 52.4 ಕೋಟಿಯನ್ನು ಮೀರಿದೆ. ಕಂಪನಿಯ 5ಜಿ ಚಂದಾದಾರರ ಸಂಖ್ಯೆ 26.8 ಕೋಟಿಗಿಂತ ಹೆಚ್ಚಿದ್ದು, ಇದು ಚೀನಾದ ಹೊರಗೆ ಯಾವುದೇ ಒಂದು ದೇಶದ ಆಪರೇಟರ್ ಹೊಂದಿರುವ ಅತಿ ದೊಡ್ಡ ಗ್ರಾಹಕ ಬಳಗವಾಗಿದೆ. ಜಿಯೋ ಏರ್‌ಫೈಬರ್ (JioAirFiber) ಕೂಡ 1.3 ಕೋಟಿ ಮನೆಗಳನ್ನು ತಲುಪಿದ್ದು, ಜಿಯೋ ವಿಶ್ವದ ಅತಿ ದೊಡ್ಡ ಫಿಕ್ಸ್ಡ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಆಪರೇಟರ್ ಆಗಿ ಹೊರಹೊಮ್ಮಿದೆ.
ಜಿಯೋ ಟಾರ್ಗೆಟ್
ಜಿಯೋ ಟ್ರೂ 5ಜಿ (Jio True 5G) ಯನ್ನು ಭಾರತದ ಮುಂದಿನ ಡಿಜಿಟಲ್ ಜಿಗಿತದ ಮುನ್ನುಡಿಯನ್ನಾಗಿಸುವುದು. ಜಿಯೋ ಏರ್‌ಫೈಬರ್ ಮೂಲಕ ದೇಶದ ಪ್ರತಿಯೊಂದು ಭಾಗಕ್ಕೂ ಹೈ-ಸ್ಪೀಡ್ ಹೋಮ್ ಬ್ರಾಡ್‌ಬ್ಯಾಂಡ್ ತಲುಪಿಸುವುದು. ಭಾರತೀಯ ಉದ್ಯಮಗಳು ಮತ್ತು ಸಣ್ಣ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸುವುದು ಸೇರಿದಂತೆ ಹಲವು ಗುರಿಗಳನ್ನಿಟ್ಟುಕೊಂಡು ಜಿಯೋ ಸಾಗುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

