- Home
- Karnataka Districts
- Bengaluru Urban
- ಬೆಂಗಳೂರು 2 ಫ್ಲೈಓವರ್‌ಗಳಿಗೆ ಗುಜರಾತ್ ಮಾದರಿ ಟೋಲ್; ಎಲೆಕ್ಟ್ರಾನಿಕ್ ಸಿಟಿ, ಪೀಣ್ಯ ಮೇಲ್ಸೇತುವೆಗೆ ಜಾರಿ!
ಬೆಂಗಳೂರು 2 ಫ್ಲೈಓವರ್‌ಗಳಿಗೆ ಗುಜರಾತ್ ಮಾದರಿ ಟೋಲ್; ಎಲೆಕ್ಟ್ರಾನಿಕ್ ಸಿಟಿ, ಪೀಣ್ಯ ಮೇಲ್ಸೇತುವೆಗೆ ಜಾರಿ!
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮತ್ತು ನೆಲಮಂಗಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು 'ಮಲ್ಟಿಲೇನ್ ಫ್ರೀ ಫ್ಲೋ ಟೋಲಿಂಗ್' (ಎಂಎಲ್‌ಎಫ್‌ಎಫ್) ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ವಾಹನಗಳು ಟೋಲ್ ಗೇಟ್‌ನಲ್ಲಿ ನಿಲ್ಲದೆ ಸರಾಗವಾಗಿ ಸಂಚರಿಸಬಹುದು.

ಬೆಂಗಳೂರು (ಸೆ.22): ಟೋಲ್ ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್ ರೀಡಿಂಗ್‌ಗಾಗಿ ವಾಹನಗಳು ಸಾಲುಗಟ್ಟಿ ನಿಲ್ಲದೇ ಸರಾಗವಾಗಿ ಸಂಚರಿಸುವ ನೂತನ ವ್ಯವಸ್ಥೆಯಾದ ‘ಮಲ್ಟಿಲೇನ್ ಫ್ರೀ ಫ್ಲೋ ಟೋಲಿಂಗ್’ (ಎಂಎಲ್‌ಎಫ್‌ಎಫ್) ಸಿಸ್ಟಮ್ ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳಾಗಿ ‘ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್’ ಮತ್ತು ಬೆಂಗಳೂರು-ನೆಲಮಂಗಲ ಹೆದ್ದಾರಿ ಮೇಲ್ದರ್ಜೆಗೆ ಏರಲಿವೆ. ಇದು ರಾಜ್ಯದಲ್ಲೇ ಮೊದಲು.
ಭಾರಿ ಗಾತ್ರದ ಟ್ರಕ್‌ಗಳು, ಕಾರುಗಳು ಸೇರಿದಂತೆ ಈ ಎರಡು ಹೆದ್ದಾರಿಗಳಲ್ಲಿ ನಿತ್ಯ ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಫಾಸ್ಟ್ ಟ್ಯಾಗ್ ರೀಡಿಂಗ್‌ಗಾಗಿ ಟೋಲ್‌ಗೇಟ್ ಬಳಿ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಜಾಮ್ ತಪ್ಪಿಸಿ ವಾಹನಗಳ ಸುಗಮ ಸಂಚಾರಕ್ಕಾಗಿ ಎಂಎಲ್‌ಎಫ್‌ಎಫ್ ಸಿಸ್ಟಮ್ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಂಎಲ್‌ಎಫ್‌ಎಫ್ ಜಾರಿಯಾಗಲಿದೆ ಎಂದು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ.ಬ್ರಹ್ಮಂಕರ್ ‘ಕನ್ನಡಪ್ರಭ’ಗೆ ತಿಳಿಸಿದರು.
ಹೇಗೆ ಕಾರ್ಯ ನಿರ್ವಹಿಸುತ್ತದೆ?:
ಹೆದ್ದಾರಿ, ಫ್ಲೈಓವರ್‌ನ ಪ್ರಮುಖ ಸ್ಥಳಗಳಲ್ಲಿ ‘ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್’ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಚಲಿಸುವ ವಾಹನಗಳ ನಂಬರ್ ಪ್ಲೇಟ್ ಮತ್ತು ಅದರ ಫಾಸ್ಟ್‌ಟ್ಯಾಗ್ ರೀಡ್ ಮಾಡುತ್ತವೆ. ಬಳಿಕ ಸಂಚರಿಸಿದ ದೂರಕ್ಕೆ ಅನುಗುಣವಾಗಿ ಸ್ವಯಂಚಾಲಿತವಾಗಿ ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಕಡಿತವಾಗುತ್ತದೆ. ಬ್ಯಾಲೆನ್ಸ್ ಇಲ್ಲದ ಫಾಸ್ಟ್‌ಟ್ಯಾಗ್ ವಾಹನಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. 72 ತಾಸುಗಳ ಒಳಗೆ ವಾಹನ ಮಾಲೀಕರು ಶುಲ್ಕ ಪಾವತಿಸಬೇಕು. ವಿಳಂಬ ಮಾಡಿದರೆ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತದೆ.
ಹೊಸೂರು ರಸ್ತೆಯಲ್ಲಿ 10 ಕಿ.ಮೀ ಉದ್ದದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ಮತ್ತು 14 ಕಿ.ಮೀ ಉದ್ದದ ಅತ್ತಿಬೆಲೆ ಟೋಲ್ ಬೂತ್‌ಗಳನ್ನು ತೆರವುಗೊಳಿಸಿ ಎಂಎಫ್‌ಎಫ್ಎಲ್ ವ್ಯವಸ್ಥೆ ಜಾರಿ ಮಾಡಲಾಗುತ್ತದೆ. ಅದೇ ರೀತಿ ಗೊರಗುಂಟೆಪಾಳ್ಯದಿಂದ ಆರಂಭವಾಗುವ ಬೆಂಗಳೂರು-ನೆಲಮಂಗಲ (ಫ್ಲೈಓವರ್ ಸಹಿತ) ಹೆದ್ದಾರಿಯನ್ನು ಎಂಎಲ್‌ಎಫ್‌ಎಫ್ ವ್ಯವಸ್ಥೆಗೆ ಒಳಪಡಿಸಲಾಗುತ್ತದೆ. ಗುಜರಾತ್ ಸೇರಿದಂತೆ ದೇಶದ ಕೆಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಯಲ್ಲಿದೆ.
ಎಲ್ಲಿ ಜಾರಿ?:
ಹೊಸೂರು ರಸ್ತೆ: 10 ಕಿ.ಮೀ ಉದ್ದದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ಮತ್ತು 14 ಕಿ.ಮೀ ಉದ್ದದ ಅತ್ತಿಬೆಲೆ ಟೋಲ್ ಬೂತ್‌ಗಳನ್ನು ತೆರವುಗೊಳಿಸಿ ಈ ಎಂಎಲ್‌ಎಫ್‌ಎಫ್ ವ್ಯವಸ್ಥೆ ಜಾರಿ ಮಾಡಲಾಗುತ್ತದೆ.
ಬೆಂಗಳೂರು-ನೆಲಮಂಗಲ ಹೆದ್ದಾರಿ: ಗೊರಗುಂಟೆಪಾಳ್ಯದಿಂದ ಆರಂಭವಾಗುವ ಬೆಂಗಳೂರು-ನೆಲಮಂಗಲ (ಫ್ಲೈಓವರ್ ಸಹಿತ) ಹೆದ್ದಾರಿಯನ್ನು ಈ ವ್ಯವಸ್ಥೆಗೆ ಒಳಪಡಿಸಲಾಗುತ್ತದೆ.
ಟೋಲ್ ಇರಲಿದೆ:
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮತ್ತು ನಿರ್ವಹಣೆಯ 20 ವರ್ಷಗಳ ಒಪ್ಪಂದದ ಅವಧಿ ಮುಗಿದಿದೆ. ಆದರೆ, ಟೋಲ್ ಸಂಗ್ರಹ ನಿಲ್ಲಿಸಬೇಕು ಎಂಬ ಯಾವುದೇ ನಿಯಮಗಳು ಇಲ್ಲ. ಫ್ಲೈಓವರ್ ನಿರ್ವಹಣೆಗಾಗಿ ಟೋಲ್ ಸಂಗ್ರಹ ಅನಿವಾರ್ಯ. ಈ ಹಣ ಎನ್‌ಎಚ್‌ಎಐಗೆ ಹೋಗುತ್ತದೆ ಎಂದು ವಿಲಾಸ್ ಪಿ. ಬ್ರಹ್ಮಂಕರ್ ತಿಳಿಸಿದರು.
ಟೋಲ್ ಹೆಚ್ಚಳ , ದ್ವಿಚಕ್ರ ವಾಹನಗಳಿಗೆ ಉಚಿತ
ಒಪ್ಪಂದ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಖಾಸಗಿ ನಿರ್ವಹಣೆಯಿಂದ ಎನ್‌ಎಚ್‌ಎಐ ವ್ಯಾಪ್ತಿಗೆ ಬಂದಿರುವ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಮುಂದಿನ ದಿನಗಳಲ್ಲಿ ಟೋಲ್ ಶುಲ್ಕವನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗುತ್ತದೆ. ಅಲ್ಲದೇ, ದ್ವಿಚಕ್ರ ವಾಹನಗಳಿಗೆ ಇರುವ ಟೋಲ್ ಶುಲ್ಕವನ್ನು ರದ್ದುಗೊಳಿಸಲಾಗುತ್ತದೆ. ಹಾಲಿ ‘ಎನ್‌ಎಚ್‌ಎಐ ಫೀ ರೂಲ್ಸ್-1997’ಕ್ಕೆ ಒಳಪಟ್ಟಿರುವ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ತಮಿಳುನಾಡು ಗಡಿವರೆಗಿನ ಈ ರಾಷ್ಟ್ರೀಯ ಹೆದ್ದಾರಿಯನ್ನು ‘ಎನ್‌ಎಚ್‌ಎಐ ಫೀ ರೂಲ್ಸ್ 2008’ಕ್ಕೆ ಒಳಪಡಿಸಲಾಗುತ್ತದೆ. ಹೀಗಾಗಿ, ಶುಲ್ಕ ಪರಿಷ್ಕರಣೆಯಾಗಲಿದೆ ಎಂದು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ವಿಲಾಸ್ ತಿಳಿಸಿದರು.
ಎರಡು ಪ್ರಮುಖ ಹೆದ್ದಾರಿಗಳು ನಗರ ವ್ಯಾಪ್ತಿಯಲ್ಲೇ ಇವೆ. ಟೋಲ್ ಗೇಟ್‌ಗಳ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ವಾಹನಗಳ ಸುಗಮ ಸಂಚಾರಕ್ಕಾಗಿ ‘ಎಂಎಲ್‌ಎಫ್‌ಎಫ್ ಸಿಸ್ಟಮ್’ ಅನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವ ಉದ್ದೇಶವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಂಕರ್ ತಿಳಿಸಿದರು.
ವರದಿ- ವರದಿ- ಮಂಜುನಾಥ ನಾಗಲೀಕರ್

