Curry Leaf Chicken Roast: ಅನ್ನ-ತಿಳಿಸಾರಿಗೆ ಬೊಂಬಾಟ್ ಸೈಡ್ ಡಿಶ್ ಬೇಕಾ? ಇಲ್ಲಾ ಅಂದ್ರೆ ಪಾರ್ಟಿಗಳಿಗೆ ಕ್ರಿಸ್ಪಿ ಸ್ಟಾರ್ಟರ್ ಹುಡುಕ್ತಿದ್ದೀರಾ? ಹಾಗಿದ್ರೆ ಗರಿಗರಿ ಕರಿಬೇವಿನ ಘಮದಲ್ಲಿ ಅರಳುವ ಈ ಸ್ಪೈಸಿ ಚಿಕನ್ ರೋಸ್ಟ್ ಒಮ್ಮೆ ಟ್ರೈ ಮಾಡಿ ನೋಡಿ. ಮತ್ತೆ ಮತ್ತೆ ಮಾಡ್ತೀರಾ..

ಚಿಕನ್ ಹೆಸರು ಕೇಳಿದರೆ ಸಾಕು, ಮಾಂಸಾಹಾರಿಗಳ ಬಾಯಲ್ಲಿ ನೀರೂರುತ್ತದೆ. ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಒಗ್ಗರಣೆಗೆ ಮಾತ್ರ ಬಳಸಿ, ಊಟ ಮಾಡುವಾಗ ಅದನ್ನು ಬದಿಗೆ ತಳ್ಳಿಬಿಡುತ್ತೇವೆ. ಆದರೆ, ಅದೇ ಕರಿಬೇವಿನ ಸೊಪ್ಪನ್ನು ಮುಖ್ಯ ಮಸಾಲೆಯನ್ನಾಗಿ ಬಳಸಿ ಚಿಕನ್ ರೋಸ್ಟ್ ಮಾಡಿದರೆ ಅದರ ರುಚಿಯೇ ಬೇರೆ! ಗರಿಗರಿಯಾದ ಕರಿಬೇವು ಮತ್ತು ಘಾಟಾದ ಮೆಣಸಿನ ಪರಿಮಳ ನೀಡುವ ‘ಕರಿಬೇವು ಚಿಕನ್ ರೋಸ್ಟ್’ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

1. ಮ್ಯಾರಿನೇಷನ್‌ಗಾಗಿ
ಚಿಕನ್ (ಲೆಗ್ ಪೀಸ್ ಅಥವಾ ಸಾಮಾನ್ಯ ತುಂಡುಗಳು) – 250 ಗ್ರಾಂ
ಮೊಸರು – 1/3 ಕಪ್
ನಿಂಬೆಹಣ್ಣಿನ ರಸ – 1 ಟೇಬಲ್ ಸ್ಪೂನ್
ಉಪ್ಪು – ಒಂದು ಚಿಟಿಕೆ

2. ಸ್ಪೆಷಲ್ ಮಸಾಲಾ ಪುಡಿಗೆ
ತಾಜಾ ಕರಿಬೇವಿನ ಸೊಪ್ಪು –1 ಕಪ್
ಒಣ ಮೆಣಸಿನಕಾಯಿ – 5
ಧನಿಯಾ (ಕೊತ್ತಂಬರಿ ಬೀಜ)–1 ಟೇಬಲ್ ಸ್ಪೂನ್
ಕಾಳುಮೆಣಸು (ಕರಿಮೆಣಸು)–1 ಟೇಬಲ್ ಸ್ಪೂನ್
ಜೀರಿಗೆ –1/2 ಟೀಸ್ಪೂನ್

3. ಮಸಾಲಾ ಪೇಸ್ಟ್‌ಗಾಗಿ
ಈರುಳ್ಳಿ – 1 (ದೊಡ್ಡದು)
ಹಸಿಮೆಣಸಿನಕಾಯಿ – 3
ಬೆಳ್ಳುಳ್ಳಿ ಎಸಳು – 2 ಟೇಬಲ್ ಸ್ಪೂನ್
ಶುಂಠಿ – 1 ಟೇಬಲ್ ಸ್ಪೂನ್

4. ಒಗ್ಗರಣೆ ಮತ್ತು ರೋಸ್ಟ್‌ಗಾಗಿ
ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – ಸ್ವಲ್ಪ
ಗರಂ ಮಸಾಲಾ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮ್ಯಾರಿನೇಷನ್
ಮೊದಲಿಗೆ ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು, ಮಸಾಲೆ ಒಳಗೆ ಇಳಿಯುವಂತೆ ಸಣ್ಣದಾಗಿ ಗೀರು ಹಾಕಿ. ಒಂದು ಬಟ್ಟಲಿನಲ್ಲಿ ಚಿಕನ್, ಮೊಸರು, ನಿಂಬೆರಸ ಮತ್ತು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸುಮಾರು 20 ನಿಮಿಷಗಳ ಕಾಲ ನೆನೆಯಲು ಬಿಡಿ (ಇದರಿಂದ ಚಿಕನ್ ಸಾಫ್ಟ್ ಹಾಗೂ ಜ್ಯೂಸಿಯಾಗಿ ಬೇಯುತ್ತದೆ).

ಮಸಾಲಾ ಪುಡಿ ತಯಾರಿಕೆ
ಗ್ಯಾಸ್ ಮೇಲೆ ಬಾಣಲೆ ಇಟ್ಟು ಕಾಳುಮೆಣಸು, ಒಣಮೆಣಸಿನಕಾಯಿ, ಧನಿಯಾ, ಜೀರಿಗೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಕರಿಬೇವು ಗರಿಗರಿಯಾಗಿ ಪರಿಮಳ ಬರುವವರೆಗೆ ಹುರಿದು, ತಣ್ಣಗಾದ ಮೇಲೆ ಮಿಕ್ಸಿ ಜಾರ್‌ನಲ್ಲಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.

ಪೇಸ್ಟ್ ತಯಾರಿಕೆ: ಮತ್ತೊಂದು ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

ರೋಸ್ಟ್ ಮಾಡುವ ಹಂತ

*ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸ್ವಲ್ಪ ಜೀರಿಗೆ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಮ್ಯಾರಿನೇಟ್ ಮಾಡಿದ ಚಿಕನ್, ರುಬ್ಬಿಕೊಂಡ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಸಿದ್ಧಪಡಿಸಿದ ಕರಿಬೇವಿನ ಮಸಾಲಾ ಪುಡಿಯನ್ನು ಹಾಕಿ ಚಿಕನ್ ತುಂಡುಗಳಿಗೆ ಮಸಾಲೆ ಹಿಡಿಯುವಂತೆ ಚೆನ್ನಾಗಿ ಕಲಸಿ.

*ಸ್ವಲ್ಪ ನೀರು ಚಿಮುಕಿಸಿ, ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಬೇಯಲು ಬಿಡಿ.

ಅಂತಿಮ ಹಂತ

ಕೊನೆಯದಾಗಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ತಳಹಿಡಿಯದಂತೆ ಮಧ್ಯಮಧ್ಯದಲ್ಲಿ ಕೈಯಾಡಿಸುತ್ತಾ, ಸಣ್ಣ ಉರಿಯಲ್ಲಿ ಎಣ್ಣೆ ತೇಲುವವರೆಗೆ ರೋಸ್ಟ್ ಮಾಡಿ ಗ್ಯಾಸ್ ಆಫ್ ಮಾಡಿ.

ಈಗ ಘಮಘಮಿಸುವ, ಖಾರ-ಖಾರವಾದ ಕರಿಬೇವು ಚಿಕನ್ ರೋಸ್ಟ್ ಸವಿಯಲು ಸಿದ್ಧ! ಇದು ಬಿಸಿಬಿಸಿ ಅನ್ನ, ತಿಳಿಸಾರು/ರಸಂ ಜೊತೆ ಸೈಡ್ ಡಿಶ್ ಆಗಿ ಅಥವಾ ಸ್ಟಾರ್ಟರ್ ಆಗಿ ತಿನ್ನಲು ಅತ್ಯದ್ಭುತವಾಗಿರುತ್ತದೆ.