- Home
- Life
- Food
- ದೋಸೆ ಹುಟ್ಟಿದ್ದು ಎಲ್ಲಿ ಗೊತ್ತಾ? ದಕ್ಷಿಣ ಭಾರತದ ಈ ಫೇವರಿಟ್ ತಿಂಡಿಯ ಹಿಂದಿದೆ ಶತಮಾನಗಳ ರೋಚಕ ಇತಿಹಾಸ!
ದೋಸೆ ಹುಟ್ಟಿದ್ದು ಎಲ್ಲಿ ಗೊತ್ತಾ? ದಕ್ಷಿಣ ಭಾರತದ ಈ ಫೇವರಿಟ್ ತಿಂಡಿಯ ಹಿಂದಿದೆ ಶತಮಾನಗಳ ರೋಚಕ ಇತಿಹಾಸ!
ಭಾರತೀಯರಲ್ಲಿ ಉತ್ತರ-ದಕ್ಷಿಣ ಎನ್ನದೆ ದೋಸೆ ಅದೆಷ್ಟು ಫೇಮಸ್ ಆಗಿದೆ ಎಂದರೆ ಇಂದು ಬೆಂಗಳೂರಿನಲ್ಲಿ 'ದೋಸೆ ಪಾಯಿಂಟ್' 'ದೋಸೆ ಹಟ್' ದಾವಣಗೆರೆ ದೋಸೆ, ಮಸಾಲೆ ದೋಸೆ ಹೆಸರಲ್ಲೇ ಹೋಟೆಲ್‌ಗಳಿವೆ. ಸಾವಿರಾರು ವರ್ಷಗಳ ಇತಿಹಾಸವಿದೆ ಗೊತ್ತೇ? ದೋಸೆ ಇತಿಹಾಸದ ಕುರಿತು ರೋಚಕ ಮಾಹಿತಿ ಇಲ್ಲಿದೆ.

ದೋಸೆಗಿದೆ ಸಾವಿರಾರು ವರ್ಷಗಳ ಇತಿಹಾಸ!
ಬಂಗಾರದ ಮೈಬಣ್ಣ, ಅಂಚಿನ ಸುತ್ತಲೂ ಗರಿಗರಿ, ಮದ್ಯದಲ್ಲಂತೂ ತುಸು ಉಬ್ಬಿದ ಉದರದೊಳಗೆ ತುಂಬಿಕೊಂಡ ಆಲೂಗಡ್ಡೆ, ತೆಂಗಿನಕಾಯಿ ಚಟ್ನಿ, ಪುಡಿ.. ಪಕ್ಕದಲ್ಲೊಂದಿಷ್ಟು ಸಾಂಬಾರ್.. ಬೆಳಗಿನ ಚುಮುಚುಮು ಚಳಿಯ ನಡುವೆ ತಿಂಡಿಗೆ ಇಷ್ಟು ಇದ್ದುಬಿಟ್ಟರೆ ಜಗತ್ತೇ ಮರೆತು ಹೋಗುತ್ತೆ.
ಹೌದು ಗರಿಗರಿ ಘಮ್ಮೆನ್ನುವ ಮಸಾಲೆ ದೋಸೆ ಯಾರಿಗೆ ತಾನೇ ಇಷ್ಟವಾಗಲ್ಲ? ಭಾರತೀಯರಲ್ಲಿ ಉತ್ತರ ದಕ್ಷಿಣ ಎನ್ನದೆ ಅದೆಷ್ಟು ಫೇಮಸ್ ಆಗಿದೆ ಎಂದರೆ ಇಂದು ಬೆಂಗಳೂರಿನಲ್ಲಿ ದೋಸೆ ಹೆಸರಲ್ಲೇ ಸಾವಿರಾರು ಹೋಟೆಲ್ ಗಳು ಸಿಗುತ್ತವೆ ಇನ್ನು ವಿಜಯನಗರ, ಗಾಂಧಿನಗರ, ನೆಹರು ಸರ್ಕಲ್ ಸ್ಟೀಟ್ ಫುಡ್ ಒಳ ಹೊಕ್ಕರಂತೂ ಅಲ್ಲಿ ಮೊದಲಿಗೆ ಕಣ್ಣಿಗೆ ಬೀಳುವುದೇ ದೋಸೆ ಪಾಯಿಂಟ್. ಹೋಟೆಲ್ ಗೆ ಹೋದ್ರೂ ದೋಸೆ, ರೆಸ್ಟೋರೆಂಟ್‌ಗೂ ಹೋದ್ರೂ ದೋಸೆ.. ದೋಸೆಗೆ ಭಾರೀ ಬೇಡಿಕೆ ಇದೆ. ಬರುವ ಗ್ರಾಹಕರು ಮೊದಲು ಕೇಳುವುದೇ ದೋಸೆಯನ್ನೇ. ಬೆಣ್ಣೆ ದೋಸೆ, ಮಸಾಲೆ ದೋಸೆ, ಸೆಟ್ ದೋಸೆ, ನೀರ್ ದೋಸೆ.. ಅಬ್ಬಬ್ಬಾ ಅದರಲ್ಲೂ ಎಷ್ಟೊಂದು ವರೈಟಿ ದೋಸೆಗಳಿವೆ ಅಲ್ವಾ?
ಗರಿಗರಿ ದೋಸೆಯ ಇತಿಹಾಸ ತಿಳಿಯಿರಿ
ದೋಸೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಅದೀಗ ವಿದೇಶಗಳಲ್ಲೂ ಜನಪ್ರಿಯವಾಗ್ತಿದೆ. ಭಾರತಕ್ಕೆ ಬರುವ ಪ್ರವಾಸಿಗರು ದೋಸೆ ರುಚಿಗೆ ಮನಸೋತು ತಮ್ಮ ದೇಶಗಳಲ್ಲೂ ದೋಸೆ ಪಾಯಿಂಟ್ ಶುರು ಮಾಡುತ್ತಿದ್ದಾರೆ. ಹೀಗೆ ದೇಶ-ವಿದೇಶಗಳಲ್ಲಿ ಜನಪ್ರಿಯವಾಗಿರುವ ದೋಸೆಗೆ ಮೈಸೂರು ಪಾಕನಂತೆ ತನ್ನದೇ ಆದ ಇತಿಹಾಸವಿದೆ ಎಂಬುದು ಬಹಳ ಜನಕ್ಕೆ ಗೊತ್ತಿಲ್ಲ. ನಾವೀಗ ತಿನ್ನುವ ದೋಸೆಯ ಹಿಂದೆ ಸಾವಿರ ವರ್ಷಗಳಿಗೂ ಹಳೆಯ ಇತಿಹಾಸವಿದೆ. ದೋಸೆ ಶುದ್ಧ ದಕ್ಷಿಣ ಭಾರತೀಯ ಸಂಪ್ರದಾಯದ ಅಡುಗೆ ಮನೆಯಲ್ಲಿ ಹುಟ್ಟಿ, ಕಾಲ ಕಳೆದಂತೆ ಹೇಗೆ ವಿಶ್ವಪ್ರಸಿದ್ಧಿಯಾಯ್ತು? ಅದರ ಗರಿಗರಿ, ವಿಶಿಷ್ಟ ಸ್ವಾದದ ಹಿಂದಿನ ರಹಸ್ಯವೇನು ಅನ್ನೋದು ಇಲ್ಲಿ ತಿಳಿಯಿರಿ.
ದೋಸೆಗಿದೆ ಸಾವಿರಾರು ವರ್ಷಗಳ ಇತಿಹಾಸ!
ದೋಸೆಯ ಮೂಲ ಹುಡುಕುತ್ತ ಹೋದರೆ ಅದು 50-60 ವರ್ಷಕ್ಕಲ್ಲ, ನಿಮ್ಮನ್ನು ಸಾವಿರ ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತದೆ. ಅಚ್ಚರಿ ಆಯ್ತಾ? ಹೌದು ದೋಸೆ ಅಷ್ಟು ಪ್ರಾಚೀನವಾದದ್ದು. ಇವತ್ತು ನಾವು ತಿನ್ನುವ ದೋಸೆ ಸಾವಿರ ವರ್ಷಗಳ ಹಿಂದೆಯೇ ಕರ್ನಾಟಕ ತಮಿಳನಾಡು ಭಾಗದಲ್ಲಿ ಮಾಡಲಾಗುತ್ತಿತ್ತು. ಆದರೆ ಆಗಿನ ದೋಸೆ ಈಗಿನಂತೆ ತೆಳ್ಳಗೆ ಗರಿಗರಿಯಾಗುತ್ತಿರಲಿಲ್ಲ. ಬದಲಾಗಿ ಸ್ವಲ್ಪ ದಪ್ಪವಾಗಿರುತ್ತಿತ್ತು. ಮುಖ್ಯವಾಗಿ ಆಗಲೂ ಅಕ್ಕಿಯಿಂದಲೇ ತಯಾರಿಸಲಾಗುತ್ತಿತ್ತು. ಆ ಕಾಲಕ್ಕೂ ದೋಸೆ ವಿಶೇಷ ತಿಂಡಿಯೇನು ಆಗಿರಲಿಲ್ಲ.. ದಿನಾ ತಿನ್ನುವ ಬೆಳಗಿನ ತಿಂಡಿಗಳಲ್ಲೊಂದಾಗಿತ್ತು.
12ನೇ ಶತಮಾನದ 'ಮಾನಸೋಲ್ಲಾಸ' ಗ್ರಂಥದಲ್ಲೂ ದೋಸೆಯ ಉಲ್ಲೇಖ
ದೋಸೆಗೆ ಸಾವಿರ ವರ್ಷಗಳಷ್ಟು ಇತಿಹಾಸವಿದೆ ಎಂಬುದಕ್ಕೆ ಸಾಕ್ಷಿಯಿದೆ. ದೋಸೆಗೆ ಸಂಬಂಧಿಸಿದಂತೆ 12ನೇ ಶತಮಾನದಲ್ಲಿ ರಚಿಸಲಾದ ಸಂಸ್ಕೃತದ 'ಮಾನಸೋಲ್ಲಾಸ' ಗ್ರಂಥದಲ್ಲೂ ದೋಸೆಯನ್ನು ಹೋಲುವ ಆಹಾರದ ಉಲ್ಲೇಖವಿದೆ. ಮಾನಸೋಲ್ಲಾಸ ಗ್ರಂಥವನ್ನು ಪಶ್ಚಿಮ ಚಾಲುಕ್ಯರ ಅರಸ ಮೂರನೇ ಸೋಮೇಶ್ವರನ ಆಳ್ವಿಕೆಯಲ್ಲಿ ರಚಿಸಲಾಗಿದೆ. ಅದರ ಬರೆದಿರುವಂತೆ, ಆ ಕಾಲಕ್ಕೆ ಅಕ್ಕಿಯನ್ನು ಹುದುಗಿಸಿ ತಯಾರಿಸಿ ತಿನ್ನುತ್ತಿದ್ದ ಬಗ್ಗೆ ಬರೆಯಲಾಗಿದೆ. ಅಂದರೆ ಹನ್ನೆರಡನೇ ಶತಮಾನದಲ್ಲೇ ದೋಸೆಯನ್ನು ಹೋಲುವ ತಿನಿಸು ರಾಜಮನೆತನದ ಅಡುಗೆ ಮನೆಯಲ್ಲೂ ಸ್ಥಾನ ಪಡೆದಿತ್ತು ಎಂದಾಯಿತು.
ದೋಸೆದೋಸೆಯ ರುಚಿ, ಗರಿಗರಿ, ಸ್ವಾದದ ಹಿಂದಿನ ರಹಸ್ಯವೇನು?
ಯ ಸ್ವರೂಪ, ರುಚಿ ಇಂದು ತುಂಬಾ ಬದಲಾಗಿದೆ. ಸಾಕಷ್ಟು ವರೈಟಿಗಳು ಬಂದಿವೆ. ಆದರೆ ಇದೆಲ್ಲದರ ಬದಲಾವಣೆಯ ಹಿಂದೆ ಹುದುಗಿಸುವ ಪ್ರಕ್ರಿಯೆ ಪ್ರಮುಖ ಪಾತ್ರ ವಹಿಸಿದೆ. ಆರಂಭದಲ್ಲಿ ಕೇವಲ ಅಕ್ಕಿಯಿಂದ ತಯಾರಿಸುತ್ತಿದ್ದ ದೋಸೆಗೆ ನಂತರ ಉದ್ದಿನ ಬೇಳೆಯನ್ನು ಸೇರಿಸಲಾಯಿತು. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿ, ರುಬ್ಬಿ ಹಿಟ್ಟನ್ನು ತಯಾರಿಸಿ ಕೆಲವು ಗಂಟೆಗಳ ಕಾಲ ಹುದುಗಲು ಬಿಟ್ಟು ತಯಾರಿಸಲಾಗುತ್ತದೆ.
ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ರಾತ್ರಿಯೇ ನೆನೆಸಿಡಲಾಗುತ್ತದೆ. ಇದರಿಂದ ಏಳೆಂಟು ಕಾಲ ಹುದುಗಿದ ಬಳಿಕ ಹಿಟ್ಟಿಗೆ ಸ್ವಲ್ಪ ಹುಳಿ ರುಚಿ ಬರುತ್ತದೆ. ಜೊತೆಗೆ ಹಿಟ್ಟು ಹಗುರವಾಗಿ ಗಾಳಿಯ ಗುಳ್ಳೆಗಳು ಏಳುತ್ತವೆ. ದೋಸೆಯನ್ನು ತಯಾರಿಸಿದಾಗ ಅದಕ್ಕೆ ವಿಶಿಷ್ಟ ರುಚಿ, ಮೇಲಿನ ರಂಧ್ರಗಳಿಂದಾಗಿ ವಿಶಿಷ್ಟವಾಗಿ ಕಾಣುತ್ತದೆ. ಇಂದು ನಾವು ಸವಿಯುವ ದೋಸೆ, ಅದರ ರುಚಿ, ಆಕಾರ ಏನೇ ಇರಲಿ, ಆದರೆ ಆಧುನಿಕ ಆಹಾರ ವಿಜ್ಞಾನ ಬೆಳೆಯುವ ಮೊದಲೇ ನಮ್ಮ ಹಿರಿಯರು ಇಂತಹ ನೈಸರ್ಗಿಕ ಪ್ರಕ್ರಿಯೆಯನ್ನು ಅಡುಗೆಯಲ್ಲಿ ಬಳಸುತ್ತಿದ್ದರು ಎಂಬುದೇ ವಿಶೇಷ ಅನ್ನಿಸಲ್ವೇ?
ದೋಸೆ ಹಿಟ್ಟು ಹುದುಗಿಸಿದರೆ ಏನಾಗುತ್ತೆ?
ದೋಸೆಯನ್ನ ಹಿಟ್ಟಿನಲ್ಲಿ ಕಲಸಿ, ಆ ಕ್ಷಣವೇ ದೋಸೆ ಮಾಡುವುದಿಲ್ಲ. ದೋಸೆಗೆ ಅದರದ್ದೇ ರೆಸಿಪಿ ಇದೆ. ಅದರಂತೆಯೇ ಮಾಡಬೇಕು. ಮೊದಲಿಗೆ ದೋಸೆ ಹಿಟ್ಟಿನ ತಯಾರಿಕೆ ಕೇವಲ ಅಕ್ಕಿ ಮತ್ತು ಬೇಳೆಯನ್ನು ರುಬ್ಬುವುದಕ್ಕೆ ಸೀಮಿತವಾಗಿಲ್ಲ. ಹುದುಗುವಿಕೆಯೇ ಅದರ ಪ್ರಮುಖ ಹಂತ. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ರುಬ್ಬಿದ ನಂತರ ಹಿಟ್ಟನ್ನು ಬೆಚ್ಚಗಿನ ವಾತಾವರಣದಲ್ಲಿ ಇಡಲಾಗುತ್ತದೆ. ಆಗ ಅದರಲ್ಲಿರುವ ನೈಸರ್ಗಿಕ ಸೂಕ್ಷ್ಮಜೀವಿಗಳು ಚಟುವಟಿಕೆಯಿಂದಾಗಿ ಹಿಟ್ಟಿನ ಪ್ರಮಾಣ ಸ್ವಲ್ಪ ಹೆಚ್ಚಾಗಿ, ಅದು ಹಗುರವಾಗುತ್ತದೆ. ರುಚಿಯಲ್ಲೂ ಬದಲಾವಣೆಯಾಗುತ್ತದೆ. ಹೀಗೆ ಸಿದ್ಧವಾದ ಹಿಟ್ಟನ್ನು ಕಾದ ಕಾವಲಿಗೆ ತೆಳುವಾಗಿ ಹರಡಿದಾ ಅದರ ಮೇಲ್ಮೈ ಬಂಗಾರದ ಬಣ್ಣದ, ಅಂಚಿನಲ್ಲಿ ಗರಿಗರಿಯಾದ ದೋಸೆ ರೆಡಿಯಾಗುತ್ತದೆ.
ದೋಸೆ ಒಂದೊಂದು ರಾಜ್ಯದಲ್ಲೂ ಒಂದೊಂದು ರುಚಿ!
ಸಾಮಾನ್ಯವಾಗಿ ಅನ್ನ, ಚಿನ್ನಾನ್ನ, ಉಪ್ಪಿಟ್ಟು ಇವೆಲ್ಲ ಯಾವ ದೇಶಕ್ಕೂ ಹೋದ್ರೂ ರುಚಿ ಬದಲಾಗುವುದಿಲ್ಲ. ಆದ್ರೆ ದೋಸೆ ಮಾತ್ರ ಒಂದು ರಾಜ್ಯದಲ್ಲೂ ಒಂದೊಂದು ರುಚಿ ಸಿಗುತ್ತದೆ. ಇದಕ್ಕೆ ಕಾರಣವೇಂದರೆ ಅಲ್ಲಿನ ಜನರ ಆಹಾರ ಪದ್ಧತಿಗೆ ಅನುಗುಣವಾಗಿ ಹೊಸ ರೂಪಗಳನ್ನು ಪಡೆಯುತ್ತದೆ. ಕರ್ನಾಟಕದಲ್ಲಿ ಮಸಾಲೆ ದೋಸೆ ವಿಶೇಷ ಜನಪ್ರಿಯತೆ ಗಳಿಸಿತು. ಆಲೂಗಡ್ಡೆ ಪಲ್ಯವನ್ನು ದೋಸೆಯ ಒಳಗೆ ತುಂಬಿ ತಯಾರಿಸುವ ಈ ಖಾದ್ಯ ಇಂದು ದೇಶಾದ್ಯಂತ ಪ್ರಸಿದ್ಧವಾಗಿದೆ. ಅದೇ ಆಂಧ್ರಪ್ರದೇಶಕ್ಕೆ ಹೋದರೆ ಅಲ್ಲಿ ಖಾರವಾದ ಚಟ್ನಿಯನ್ನ ದೋಸೆ ಒಳಗೆ ತುಂಬಲಾಗುತ್ತೆ. ತಮಿಳನಾಡಿಗೆ ಹೋದರೆ ಅದರ ರುಚಿಯೇ ಬೇರೆ, ಕೇರಳಕ್ಕೆ ಹೋದರಂತೆ ಅಲ್ಲಿನ ದೋಸೆ ರುಚಿ ಮತ್ತೆ ಮತ್ತೆ ಸವಿಯಬೇಕೆನಿಸುವಷ್ಟು ರುಚಿಯಾಗಿರುತ್ತದೆ. ಹೀಗೆ ಒಂದೇ ದೋಸೆ ಆಯಾ ಪ್ರದೇಶದ ಆಹಾರ ಸಂಸ್ಕೃತಿ ಮತ್ತು ಸ್ಥಳೀಯ ಪದಾರ್ಥಗಳಿಗೆ ಅನುಗುಣವಾಗಿ ರುಚಿ, ಸ್ವಾದ, ಆಕಾರ ಬದಲಾಗುತ್ತಲೇ ಹೋಗುತ್ತದೆ.
ದಕ್ಷಿಣ ಭಾರತದ ಅಡುಗೆ ಮನೆಯಿಂದ ದೋಸೆ ವಿಶ್ವಪರ್ಯಟನಾ
20ನೇ ಶತಮಾನದಲ್ಲಿ ದೋಸೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ದಕ್ಷಿಣ ಭಾರತದ ಜನರು ದೇಶದ ವಿವಿಧ ನಗರಗಳಿಗೆ ವಲಸೆ ಹೋದರು. ಇದರೊಂದಿಗೆ ದಕ್ಷಿಣ ಭಾರತದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಖ್ಯೆಯೂ ಹೆಚ್ಚಾಯಿತು. ಇದರ ಪರಿಣಾಮವಾಗಿ ದೋಸೆ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗದೆ, ದೇಶದ ಇತರ ಭಾಗಗಳಿಗೂ ಪರಿಚಯವಾಯಿತು. ನಂತರ ವಿದೇಶಗಳಲ್ಲೂ ದೋಸೆ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿತು.
ಸಾವಿರ ವರ್ಷಗಳ ಇತಿಹಾಸವಿರುವ ದೋಸೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದೆ
ಇಂದು ದೋಸೆ ಹಲವು ಹೊಸ ರೂಪಗಳಲ್ಲಿ ನಮ್ಮ ಮುಂದೆ ಬರುತ್ತಿದೆ. ರಾಗಿ ದೋಸೆ, ಸಿರಿಧಾನ್ಯಗಳ ದೋಸೆ, ಮಸಾಲೆ ದೋಸೆ ಸೇರಿದಂತೆ ಹಲವು ಬಗೆಯ ದೋಸೆಗಳು ಜನರ ಮೆಚ್ಚುಗೆ ಗಳಿಸಿವೆ. ಪಾಶ್ಚಾತ್ಯ ಖಾದ್ಯಗಳ ಪ್ರಭಾವದಿಂದ ಹೊಸ ಹೊಸ ಫ್ಯೂಷನ್ ದೋಸೆಗಳೂ ಹುಟ್ಟಿಕೊಂಡಿವೆ. ಹೀಗೆ ಸಾವಿರ ವರ್ಷಗಳ ಹಿಂದಿನ ಸರಳ ಆಹಾರವೊಂದು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ತನ್ನ ಮೂಲ ರುಚಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಇಂದು ವಿಶ್ವದಾದ್ಯಂತ ಜನಪ್ರಿಯವಾಗಿದೆ. ದೋಸೆ ಕೇವಲ ಒಂದು ಉಪಾಹಾರವಲ್ಲ, ಅದು ದಕ್ಷಿಣ ಭಾರತದ ಆಹಾರ ಸಂಸ್ಕೃತಿಯ ಹೆಮ್ಮೆಯ ಸಂಕೇತವೂ ಹೌದು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.












