ಹವಾಮಾನ ಬದಲಾದಾಗ ಕೆಲವರಿಗೆ ಸುಸ್ತು, ದಣಿವು ಮತ್ತು ದೇಹದಲ್ಲಿ ನಿಶ್ಶಕ್ತಿ ಕಾಣಿಸಿಕೊಳ್ಳುವುದು ಸಾಮಾನ್ಯ. ಇಂತಹ ಸಮಯದಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುವ ಬಿಸಿ ಆಹಾರಗಳನ್ನು ಸೇವಿಸ್ಬೇಕು. ಬಿಸಿಬಿಸಿಯಾದ ಸಾಬೂದಾನ ಸೂಪ್‌ ಮಾಡೋದು ಹೇಗೆ ಗೊತ್ತಾ?

ನೀವು ಬೇರೆ ಬೇರೆ ತರಕಾರಿ ಸೂಪ್‌ ಮಾಡಿ ಸೇವನೆ ಮಾಡಿರುತ್ತೀರಿ. ಈ ಬಾರಿ ಸಾಬೂದಾನ್‌ ಸೂಪ್‌ ತಯಾರಿಸಿ. ಮಾಡೋದು ಸುಲಭ. ಸಾಬುದಾನ ಬಳಸಿ ತಯಾರಿಸುವ ಈ ಬಿಸಿ ಸೂಪ್ ರುಚಿಯ ಜೊತೆಗೆ ಹೊಟ್ಟೆಗೂ ಹಗುರವಾಗಿರುತ್ತದೆ. ಸಾಬುದಾನದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಶುಂಠಿ, ಜೀರಿಗೆ, ಕಾಳುಮೆಣಸು, ತರಕಾರಿಗಳು ಮತ್ತು ಡ್ರೈಫ್ರೂಟ್ಸ್ ಸೇರಿಸುವುದರಿಂದ ಸೂಪ್ ಮತ್ತಷ್ಟು ಪೌಷ್ಟಿಕವಾಗುತ್ತದೆ.

ಸಾಬುದಾನ ಸೂಪ್‌ ಗೆ ಬೇಕಾಗುವ ಪದಾರ್ಥ

• ಅರ್ಧ ಕಪ್ ಸಾಬುದಾನ

• 4 ಚಮಚ ಕಡಲೆಕಾಯಿ

• 1 ಕಪ್ ಮಖಾನಾ

• 10 ಗೋಡಂಬಿ

• 10 ಬಾದಾಮಿ

• 2 ಮಧ್ಯಮ ಗಾತ್ರದ ಆಲೂಗಡ್ಡೆ

• 1 ಟೊಮ್ಯಾಟೊ

• ಅರ್ಧ ಚಮಚ ಜೀರಿಗೆ

• ಅರ್ಧ ಚಮಚ ಕಾಳುಮೆಣಸು

• ಸ್ವಲ್ಪ ಶುಂಠಿ

• ಹಸಿಮೆಣಸಿನಕಾಯಿ

• ಕರಿಬೇವು

• ರುಚಿಗೆ ತಕ್ಕಷ್ಟು ಸೆಂದಾ ಉಪ್ಪು

• 4–5 ಟೇಬಲ್ಸ್ಪೂನ್ ತುಪ್ಪ

• 1 ನಿಂಬೆಹಣ್ಣಿನ ರಸ

• 3 ಕಪ್ ನೀರು

• ಸ್ವಲ್ಪ ಕೊತ್ತಂಬರಿ ಸೊಪ್ಪು

ಸಾಬುದಾನ ಸೂಪ್ ಮಾಡುವುದು ಹೇಗೆ?

ಮೊದಲು ಸಾಬುದಾನವನ್ನು ಚೆನ್ನಾಗಿ ತೊಳೆದು ಸುಮಾರು 30 ನಿಮಿಷ ನೀರಿನಲ್ಲಿ ನೆನೆಸಿಡಿ. ಈಗ ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಬಾದಾಮಿ, ಗೋಡಂಬಿ, ಕಡಲೆಕಾಯಿ ಮತ್ತು ಮಖಾನಾ ಹಾಕಿ ಹುರಿದುಕೊಳ್ಳಿ. ಇವುಗಳನ್ನು ತೆಗೆದು ಪಕ್ಕಕ್ಕಿಡಿ. ಅದೇ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಕತ್ತರಿಸಿದ ಆಲೂಗಡ್ಡೆಯನ್ನು ಹಾಕಿ ಸುಮಾರು ಶೇ.80ರಷ್ಟು ಬೇಯಿಸಿಕೊಳ್ಳಿ. ನಂತರ ಮತ್ತಷ್ಟು ತುಪ್ಪ ಹಾಕಿ ಜೀರಿಗೆ ಸಿಡಿಸಿ. ಇದಕ್ಕೆ ತುರಿದ ಶುಂಠಿ ಮತ್ತು ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಟೊಮ್ಯಾಟೊ ಸೇರಿದಂತೆ ಕತ್ತರಿಸಿದ ತರಕಾರಿಗಳನ್ನು ಹಾಕಿ ಒಂದು ನಿಮಿಷ ಬೇಯಿಸಿ. ಈಗ ಸುಮಾರು 3 ಕಪ್ ನೀರು ಮತ್ತು ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ. ಕುದಿ ಬಂದ ಬಳಿಕ ಹುರಿದ ಡ್ರೈಫ್ರೂಟ್ಸ್ ಮತ್ತು ನೆನೆಸಿಟ್ಟ ಸಾಬುದಾನವನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಸುಮಾರು 5–7 ನಿಮಿಷ ಬೇಯಿಸಿ. ಸಾಬುದಾನ ಪಾರದರ್ಶಕವಾಗಿ, ಮುತ್ತಿನಂತೆ ಕಾಣಲು ಆರಂಭಿಸಿದಾಗ ಸೂಪ್ ಸಿದ್ಧವಾಗುತ್ತಿದೆ ಎಂದರ್ಥ.ಕೊನೆಯಲ್ಲಿ ಕಾಳುಮೆಣಸಿನ ಪುಡಿ ಮತ್ತು ನಿಂಬೆಹಣ್ಣಿನ ರಸ ಹಾಕಿ ಮಿಶ್ರಣ ಮಾಡಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್‌ ಮಾಡಿ.