ಸಕ್ಕರೆ ಟೀಗಿಂತ ಬೆಲ್ಲದ ಟೀ ರುಚಿ ಹೆಚ್ಚಿರುತ್ತೆ. ಆರೋಗ್ಯಕ್ಕೂ ಇದು ಒಳ್ಳೆಯದು. ಆದ್ರೆ ಇದನ್ನು ಅನೇಕರಿಗೆ ಮಾಡೋಕೆ ಬರೋದಿಲ್ಲ. ಪ್ರತಿ ಬಾರಿ ಹಾಲು ಒಡೆಯುತ್ತೆ ಅನ್ನೋರು ಈ ಟಿಪ್ಸ್‌ ಫಾಲೋ ಮಾಡಿ.

ಚಳಿಗಾಲ ಶುರುವಾಗ್ತಿದ್ದಂತೆ ಟೀ ಕುಡಿಯೋರ ಸಂಖ್ಯೆ ಹೆಚ್ಚಾಗುತ್ತೆ. ಪದೇ ಪದೇ ಸಕ್ಕರೆ ಟೀ ಕುಡಿಯುವ ಬದಲು ಬೆಲ್ಲದ ಟೀಗೆ ಅನೇಕರು ಆದ್ಯತೆ ನೀಡ್ತಾರೆ. ಆದ್ರೆ ಬೆಲ್ಲದ ಟೀ ಮಾಡೋದು ಸುಲಭವಲ್ಲ. ಅನೇಕ ಬಾರಿ ಬೆಲ್ಲದ ಟೀ ಒಡೆದು ಹೋಗುತ್ತೆ. ಬೆಲ್ಲದ ಚಹಾ ಒಡೆಯದಂತೆ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ

ಬೆಲ್ಲದ ಚಹಾ ತಯಾರಿಸಲು ಬೇಕಾಗುವ ಸಾಮಗ್ರಿಗಳು

1 ಕಪ್ ನೀರು, 1 ಕಪ್ ಹಾಲು, 1 ದೊಡ್ಡ ಚಮಚ ಬೆಲ್ಲ, 1 ದೊಡ್ಡ ಚಮಚ ಚಹಾ ಪುಡಿ, 1 ಇಂಚು ಶುಂಠಿ, 2 ತುಳಸಿ ಎಲೆಗಳು, 2 ಹಸಿರು ಏಲಕ್ಕಿ, 3 ಕಾಳುಮೆಣಸು.

ಬೆಲ್ಲದ ಟೀ ತಯಾರಿಸುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಶುಂಠಿ, ತುಳಸಿ ಎಲೆ, ಏಲಕ್ಕಿ ಮತ್ತು ಕಾಳುಮೆಣಸನ್ನು ಸ್ವಲ್ಪ ಜಜ್ಜಿ ಇಟ್ಟುಕೊಳ್ಳಿ. ಇದರಿಂದ ಚಹಾದ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ಈಗ ಕುದಿಯುತ್ತಿರುವ ನೀರಿಗೆ ಬೆಲ್ಲ ಹಾಕಿ ಸಂಪೂರ್ಣವಾಗಿ ಕರಗಲು ಬಿಡಿ. ನಂತರ ಚಹಾ ಪುಡಿ ಮತ್ತು ಜಜ್ಜಿಟ್ಟುಕೊಂಡ ಮಸಾಲೆಗಳನ್ನು ಸೇರಿಸಿ. ಬೆಲ್ಲ ಸಂಪೂರ್ಣ ಕರಗಿ ಮಿಶ್ರಣ ಚೆನ್ನಾಗಿ ಕುದಿಯುವವರೆಗೆ ಕಾಯಿರಿ.

ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಿ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ತಣ್ಣನೆಯ ಹಾಲನ್ನು ಬೆಲ್ಲದ ಮಿಶ್ರಣಕ್ಕೆ ನೇರವಾಗಿ ಹಾಕಬಾರದು. ಬೆಲ್ಲ ಹಾಕಿರುವ ನೀರು ಕುದಿಯುತ್ತಿರುವಾಗಲೇ ಅದಕ್ಕೆ ಬಿಸಿಯಾದ ಹಾಲನ್ನು ಸೇರಿಸಬೇಕು. ಇದರಿಂದ ತಾಪಮಾನದಲ್ಲಿನ ಹಠಾತ್ ವ್ಯತ್ಯಾಸವನ್ನು ತಪ್ಪಿಸಬಹುದು. ನಂತರ 2ರಿಂದ 4 ನಿಮಿಷಗಳ ಕಾಲ ಕುದಿಸಿ, ಗ್ಯಾಸ್ ಆಫ್ ಮಾಡಿ ಸೋಸಿಕೊಳ್ಳಿ. ಇದೀಗ ರುಚಿಕರವಾದ ಬೆಲ್ಲದ ಚಹಾ ಸಿದ್ಧ.

ಬೆಲ್ಲದ ಚಹಾ ಮಾಡುವಾಗ ಈ ತಪ್ಪು ಮಾಡಬೇಡಿ

ರಾಸಾಯನಿಕ ಮಿಶ್ರಣವಿರುವ ಅಥವಾ ಹಳೆಯ ಬೆಲ್ಲ ಬಳಸಬೇಡಿ. ಹಾಲು ಹಾಕುವ ಮೊದಲು ಬೆಲ್ಲ ಸಂಪೂರ್ಣವಾಗಿ ಕರಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ತಣ್ಣನೆಯ ಹಾಲನ್ನು ನೇರವಾಗಿ ಸೇರಿಸಬೇಡಿ. ಬೆಲ್ಲದ ಮಿಶ್ರಣ ಮತ್ತು ಹಾಲು ಎರಡೂ ಬಿಸಿಯಾಗಿರಲಿ. ರುಚಿ ಹೆಚ್ಚಿಸಲು ಶುಂಠಿ, ತುಳಸಿ, ಏಲಕ್ಕಿ ಮತ್ತು ಕಾಳುಮೆಣಸು ಬಳಸಬಹುದು.

ಬೆಲ್ಲದ ಚಹಾ ಏಕೆ ಒಡೆಯುತ್ತೆ?

ಬೆಲ್ಲದ ಚಹಾ ಒಡೆಯಲು ಪ್ರಮುಖ ಕಾರಣವೆಂದರೆ ಬೆಲ್ಲದಲ್ಲಿರುವ ಸಾವಯವ ಆಮ್ಲಗಳು ಮತ್ತು ಹಾಲಿನ ಪ್ರೋಟೀನ್ಗಳ ನಡುವಿನ ಪ್ರತಿಕ್ರಿಯೆ. ಬೆಲ್ಲದಲ್ಲಿ ಮಾಲಿಕ್ ಆಮ್ಲ ಸೇರಿದಂತೆ ಕೆಲವು ಸಾವಯವ ಆಮ್ಲಗಳು ಇರುತ್ತವೆ. ಇವು ಹಾಲಿನಲ್ಲಿರುವ ಪ್ರೋಟೀನ್ಗಳ ಮೇಲೆ ಪರಿಣಾಮ ಬೀರಿ ಹಾಲು ಒಡೆಯುವಂತೆ ಮಾಡಬಹುದು. ಅಲ್ಲದೆ, ತಾಪಮಾನದಲ್ಲಿನ ಹಠಾತ್ ಬದಲಾವಣೆಯೂ ಹಾಲು ಒಡೆಯಲು ಕಾರಣವಾಗಬಹುದು. ಹಾಗಾಗಿ ಬೆಲ್ಲದ ಚಹಾ ಮಾಡುವಾಗ ಬೆಲ್ಲವನ್ನು ಮೊದಲು ನೀರಿನಲ್ಲಿ ಕರಗಿಸಿ, ನಂತರ ಚೆನ್ನಾಗಿ ಕುದಿಸಿ ಬಿಸಿಯಾದ ಹಾಲನ್ನು ಸೇರಿಸುವುದು ಉತ್ತಮ. ಈ ಸಣ್ಣ ವಿಧಾನ ಅನುಸರಿಸಿದರೆ ಚಹಾ ಒಡೆಯುವ ಸಮಸ್ಯೆಯನ್ನು ಕಡಿಮೆ ಮಾಡಬಹುದು.