Roti Storage Tips : ಬೆಳಿಗ್ಗೆ ಮಾಡಿದ ರೊಟ್ಟಿಯನ್ನು ಮಧ್ಯಾಹ್ನ ತಿನ್ನೋದು ಕಷ್ಟ. ಏನೇ ಮಾಡಿದ್ರೂ ರೊಟ್ಟಿ ಗಟ್ಟಿಯಾಗ್ತಿದೆ ಎಂದಾದ್ರೆ ಟೆನ್ಷನ್ ಬೇಡ. ಈ ಸರಳ ಟಿಪ್ಸ್ ಫಾಲೋ ಮಾಡಿ.

ಬಿಸಿ ಬಿಸಿ ರೊಟ್ಟಿ ಹೊಟ್ಟೆಗೆ ಹೋಗ್ತಿದ್ರೆ ಲೆಕ್ಕ ಸಿಗೋದಿಲ್ಲ. ಹಾಗಂತ ಎಲ್ಲ ಟೈಮ್ ನಲ್ಲೂ ಬಿಸಿ ರೊಟ್ಟಿ ಸಿಗೋದಿಲ್ಲ. ಒಮ್ಮೆಲೇ ರೊಟ್ಟಿ ಮಾಡಿ ಅದನ್ನು ಹಾಟ್ ಬಾಕ್ಸ್ ನಲ್ಲಿ ಇಟ್ಟಿಡ್ತೇವೆ. ಅನೇಕ ಬಾರಿ ಹಾಟ್ ಬಾಕ್ಸ್ ನಲ್ಲಿಟ್ರೂ ರೊಟ್ಟಿ ಗಟ್ಟಿಯಾಗುತ್ತೆ. ಬಾಕ್ಸ್ ಗೆ ರೊಟ್ಟಿ ಹಾಕುವಾಗ ನೀವು ಮಾಡುವ ಒಂದು ಉಪಾಯ ರೊಟ್ಟಿ ಮೃದುವಾಗಿರಲು ಕಾರಣವಾಗುತ್ತದೆ.

ತಕ್ಷಣ ಬಾಕ್ಸ್ ಗೆ ಹಾಕಿದ್ರೆ ಏನಾಗುತ್ತೆ?

ಬಿಸಿ ಬಿಸಿ ರೊಟ್ಟಿ, ಮೃದುವಾಗಿರ್ಬೇಕು ಎನ್ನುವ ಕಾರಣಕ್ಕೆ ಪ್ಯಾನ್ ನಿಂದ ತೆಗೆದ ರೊಟ್ಟಿಯನ್ನು ಹಾಟ್ ಬಾಕ್ಸ್ ಗೆ ಒಂದರ ಮೇಲೆ ಒಂದರಂತೆ ಹಾಕಿ ಮುಚ್ಚಳ ಮುಚ್ಚುತ್ತೇವೆ. ಹೀಗೆ ಮಾಡಿದ್ರೆ ಕೆಲ ಸಮಯ ರೊಟ್ಟಿ ಮೃದುವಾಗಿರುತ್ತೆ. ಆದ್ರೆ ದೀರ್ಘಕಾಲ ಮೃದುವಾಗಿರೋದಿಲ್ಲ. ಇಂಥ ರೊಟ್ಟಿ ಬೇಗ ಹಾಳಾಗುವ ಸಾಧ್ಯತೆ ಹೆಚ್ಚು.

ಪ್ಯಾನ್ ನಿಂದ ತೆಗೆದ ಮೇಲೂ ಸಾಕಷ್ಟು ಶಾಖ ಮತ್ತು ತೇವಾಂಶವನ್ನು ರೊಟ್ಟಿ ಉಳಿಸಿಕೊಳ್ಳುತ್ತದೆ. ಅವುಗಳನ್ನು ತಕ್ಷಣ ಮುಚ್ಚಿದ ಪಾತ್ರೆಯಲ್ಲಿ ಇರಿಸಿದಾಗ, ಈ ಉಗಿ ಹೊರಬರಲು ಸಾಧ್ಯವಿಲ್ಲ. ಕ್ರಮೇಣ, ಉಗಿ ಪಾತ್ರೆಯ ಮೇಲ್ಮೈಯಲ್ಲಿ ನೀರಿನ ಹನಿಗಳಾಗಿ ಸಂಗ್ರಹವಾಗುತ್ತದೆ. ಈ ತೇವಾಂಶವು ರೊಟ್ಟಿಗೆ ಬರುತ್ತೆ. ಇದು ರೊಟ್ಟಿಯನ್ನು ಮೃದುವಾಗಿ ಕಾಣುವಂತೆ ಮಾಡಬಹುದು, ಆದರೆ ಪಾತ್ರೆಯಲ್ಲಿ ಹೆಚ್ಚು ತೇವಾಂಶ ಸಂಗ್ರಹವಾದರೆ ಅದು ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ರೊಟ್ಟಿಗಳನ್ನು ದೀರ್ಘಕಾಲದವರೆಗೆ ಇಡಬೇಕು ಅಂದ್ರೆ ನೀವು ಬರೀ ಗಾಳಿಯಾಡದ ಪಾತ್ರೆಯನ್ನು ಬಳಸಿದ್ರೆ ಸಾಕಾಗೋದಿಲ್ಲ.

ರೊಟ್ಟಿಯನ್ನು ಹೀಗೆ ಸಂಗ್ರಹಿಸಿ

ರೊಟ್ಟಿಗಳನ್ನು ಕೆಲವು ಗಂಟೆಗಳಲ್ಲಿ ಸೇವಿಸೋರಿದ್ರೆ ಅವುಗಳನ್ನು ಶುದ್ಧ ಹತ್ತಿ ಅಥವಾ ಮಸ್ಲಿನ್ ಬಟ್ಟೆಯಿಂದ ಮುಚ್ಚುವುದು ಉತ್ತಮ . ಇದು ಹೆಚ್ಚುವರಿ ಉಗಿ ಹೊರಬರಲು ಸ್ವಲ್ಪ ಜಾಗ ನೀಡುತ್ತದೆ. ರೊಟ್ಟಿಗಳು ತುಂಬಾ ಒದ್ದೆಯಾಗುವುದನ್ನು ತಡೆಯುತ್ತದೆ. ರೊಟ್ಟಿಗಳನ್ನು ಮೃದುವಾಗಿಡುವುದು ನಿಮ್ಮ ಗುರಿಯಾಗಿದ್ದರೆ, ಅವುಗಳನ್ನು ಪ್ಯಾನ್ನಿಂದ ತೆಗೆದ ನಂತರ ಹೆಚ್ಚು ಹೊತ್ತು ತೆರೆದ ಸ್ಥಳದಲ್ಲಿ ಬಿಡುವುದು ಸೂಕ್ತವಲ್ಲ. ರೊಟ್ಟಿಗಳನ್ನು ಸ್ವಲ್ಪ ಸಮಯದವರೆಗೆ ತೆರೆದ ಸ್ಥಳದಲ್ಲಿ ಇಡಿ. ಅವು ಆವಿ ಬಿಟ್ಟ ನಂತ್ರ ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಪಾತ್ರೆಯಲ್ಲಿ ಸಂಗ್ರಹಿಸಿ.

ಟಿಫನ್ ಬಾಕ್ಸ್ ಗೆ ರೊಟ್ಟಿಗಳನ್ನು ಪ್ಯಾಕ್ ಮಾಡುವಾಗಲೂ ಇದೇ ರೀತಿ ರೂಲ್ಸ್ ನೀವು ಫಾಲೋ ಮಾಡ್ಬೇಕು. ತುಂಬಾ ಬಿಸಿಯಾದ ರೊಟ್ಟಿಗಳನ್ನು ತಕ್ಷಣ ಬಿಗಿಯಾಗಿ ಮುಚ್ಚಿದ ಪಾತ್ರೆಯಲ್ಲಿ ಪ್ಯಾಕ್ ಮಾಡಿದರೆ, ಒಳಗೆ ಉಗಿ ಸಿಲುಕಿಕೊಳ್ಳಬಹುದು. ಸ್ವಲ್ಪ ಸಮಯದ ನಂತರ, ಮುಚ್ಚಳದೊಳಗೆ ತೇವಾಂಶ ಕಾಣಿಸಿಕೊಳ್ಳಬಹುದು ಮತ್ತು ರೊಟ್ಟಿಗಳು ಒದ್ದೆಯಾಗಿ, ಜಿಗುಟಾಗಬಹುದು. ಪ್ಯಾಕ್ ಮಾಡುವ ಮೊದಲು ರೊಟ್ಟಿಗಳನ್ನು ಸ್ವಲ್ಪ ಸಮಯದವರೆಗೆ ಹೊರಗೆ ಇಡಿ. ನಂತರ ಅವುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಸುತ್ತಿ.

ದೀರ್ಘಕಾಲದ ಬಳಕೆಗೆ ಹೀಗೆ ಮಾಡಿ

ಮರುದಿನ ಅಥವಾ ಸಂಜೆ ರೊಟ್ಟಿಗಳನ್ನು ತಿನ್ನುವವರಿದ್ದರೆ ಕೋಣೆಯ ಉಷ್ಣಾಂಶದಲ್ಲಿ ಮುಚ್ಚಿದ ಪಾತ್ರೆಯಲ್ಲಿ ಅವುಗಳನ್ನು ಬಿಡುವುದು ಸರಿಯಾದ ವಿಧಾನವಲ್ಲ. ಮೊದಲು ರೊಟ್ಟಿಗಳನ್ನು ಕೋಣೆಯ ಉಷ್ಣಾಂಶಕ್ಕೆ ತಣ್ಣಗಾಗಲು ಬಿಡಿ, ನಂತರ ಅವುಗಳನ್ನು ಸ್ವಚ್ಛ, ಒಣ ಮತ್ತು ಮುಚ್ಚಿದ ಪಾತ್ರೆಯಲ್ಲಿ ರೆಫ್ರಿಜರೇಟರ್ನಲ್ಲಿ ಇಡಿ. ಊಟದ ಸಮಯದಲ್ಲಿ ಅವುಗಳನ್ನು ಮತ್ತೆ ಬಿಸಿ ಮಾಡಬಹುದು. ರೊಟ್ಟಿಗಳು ಗಟ್ಟಿಯಾಗಿದ್ದರೆ, ಬಿಸಿ ಮಾಡಿದ ನಂತ್ರ ಅವು ಮೃದುವಾಗುತ್ತವೆ.

ಶುಚಿ ಮುಖ್ಯ

ರೊಟ್ಟಿಗಳನ್ನು ಮೃದುವಾಗಿಡುವುದು ಮಾತ್ರವಲ್ಲ ಸ್ವಚ್ಛತೆ ಕೂಡ ಮುಖ್ಯ. ರೊಟ್ಟಿಗಳನ್ನು ಸಂಗ್ರಹಿಸಿರುವ ಬಟ್ಟೆ, ಹಾಟ್ ಬಾಕ್ಸ್ ಅಥವಾ ಪಾತ್ರೆ ಸಂಪೂರ್ಣವಾಗಿ ಸ್ವಚ್ಛವಾಗಿರಬೇಕು ಮತ್ತು ಒಣಗಿರಬೇಕು.