Rava Kadubu Recipe: ಗಣೇಶ ಚತುರ್ಥಿ ಹಬ್ಬಕ್ಕೆ ವಿಘ್ನವಿನಾಶಕನಿಗೆ ನೈವೇದ್ಯ ಮಾಡಲು ವಿಶೇಷ ಪ್ರಸಾದ ಹುಡುಕ್ತಿದ್ದೀರಾ? ಗಣಪತಿಗೆ ಅತಿ ಪ್ರಿಯವಾದ ಸಾಂಪ್ರದಾಯಿಕ 'ರವೆ ಕಡುಬು' ಸುಲಭವಾಗಿ ಹೇಗೆ ಮಾಡೋದು ಅಂತ ನೋಡೋಣ ಬನ್ನಿ...

ಣೇಶ ಚತುರ್ಥಿ ಹಬ್ಬ ಬಂತೆಂದರೆ ಸಾಕು, ಭಕ್ತರು ಗಣಪತಿಗೆ ಬಗೆಬಗೆಯ ನೈವೇದ್ಯಗಳನ್ನು ಮಾಡಿ ಅರ್ಪಿಸುತ್ತಾರೆ. ತರಹೇವಾರಿ ಸಿಹಿತಿಂಡಿಗಳು, ಖಾದ್ಯಗಳನ್ನು ಸಿದ್ಧಪಡಿಸಿ ಗಣನಾಥನಿಗೆ ಸಮರ್ಪಿಸುತ್ತಾರೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ ಸಾಂಪ್ರದಾಯಿಕ ಅಡುಗೆಗಳನ್ನು ಗಣೇಶನಿಗೆ ನೈವೇದ್ಯವಾಗಿ ನೀಡಲಾಗುತ್ತದೆ. ಆದರೆ ಬಹುತೇಕ ಎಲ್ಲಾ ಕಡೆಗಳಲ್ಲೂ ಗಣೇಶನಿಗೆ ಮೋದಕ ಹಾಗೂ ಕಡುಬು/ಉಂಡೆಗಳನ್ನು ತಪ್ಪದೇ ಅರ್ಪಿಸುತ್ತಾರೆ.

ಗಣೇಶ ಚತುರ್ಥಿಯ ಪ್ರಸಾದವಾಗಿ ದಕ್ಷಿಣದ ಜನರು ಹೆಚ್ಚಾಗಿ ರವೆ, ಶೇಂಗಾ, ಎಳ್ಳು ಉಂಡೆಯನ್ನೂ ತಯಾರಿಸುತ್ತಾರೆ. ನಾವಿಲ್ಲಿ ಈ ವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ, ಗಣಪತಿಗೆ ಪ್ರಿಯವಾದ ರವೆ ಕಡುಬನ್ನು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ..

ರವೆ ಕಡುಬು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಅಕ್ಕಿ ರವೆ - 1 ಕಪ್
ತುಪ್ಪ - ಅಗತ್ಯಕ್ಕೆ ತಕ್ಕಷ್ಟು
ಕಡಲೆಬೇಳೆ (ನೆನೆಸಿಟ್ಟಿದ್ದು) - 2 ರಿಂದ 3 ಚಮಚ
ಜೀರಿಗೆ - 1 ಚಮಚ
ನೀರು - ಮೂರೂವರೆ ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಶುಂಠಿ ತುರಿ - 1 ಚಮಚ

ತಯಾರಿಸುವ ವಿಧಾನ

*ರವೆ ಉಂಡೆ ತಯಾರಿಸಲು ಮೊದಲು ಒಲೆಯ ಮೇಲೆ ಒಂದು ಬಾಣಲೆ (ಪ್ಯಾನ್) ಇಟ್ಟು, ಅದರಲ್ಲಿ 1 ಕಪ್ ಅಕ್ಕಿ ರವೆಯನ್ನು ಹಾಕಿ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ರವೆ ಹುರಿದ ನಂತರ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ ಪಕ್ಕಕ್ಕೆ ಇಡಿ.

*ನಂತರ ಅದೇ ಬಾಣಲೆಯಲ್ಲಿ ಮೂರೂವರೆ ಕಪ್ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯುವಾಗ ಅದಕ್ಕೆ ಸ್ವಲ್ಪ ತುಪ್ಪ, ಜೀರಿಗೆ, ನೆನೆಸಿಟ್ಟ ಕಡಲೆಬೇಳೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಶುಂಠಿ ತುರಿ ಹಾಕಿ ನೀರನ್ನು ಚೆನ್ನಾಗಿ ಕುದಿಸಿ.

*ನೀರು ಚೆನ್ನಾಗಿ ಕುದಿಯುವಾಗ, ಹುರಿದಿಟ್ಟುಕೊಂಡ ಅಕ್ಕಿ ರವೆಯನ್ನು ಸ್ವಲ್ಪ ಸ್ವಲ್ಪವಾಗಿ ಹಾಕುತ್ತಾ ಗಂಟಾಗದಂತೆ ಕಲಕಿ. ನಂತರ ಮುಚ್ಚಳ ಮುಚ್ಚಿ, ಮಧ್ಯಮ ಉರಿಯಲ್ಲಿ ಅನ್ನ ಬೇಯಿಸುವಂತೆ ಗಟ್ಟಿಯಾಗುವವರೆಗೆ ಬೇಯಿಸಿಕೊಳ್ಳಿ.

*ಮಿಶ್ರಣವು ಚೆನ್ನಾಗಿ ಬೆಂದು ಮುದ್ದೆಯಂತಾದಾಗ ಒಲೆ ಆಫ್ ಮಾಡಿ. ಈಗ ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿಕೊಳ್ಳಿ. ಬೆಂದ ರವೆಯ ಮಿಶ್ರಣವನ್ನು ಆ ತಟ್ಟೆಗೆ ಹಾಕಿ ಸ್ವಲ್ಪ ಆರಲು ಬಿಡಿ.

*ನಂತರ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು, ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಕೈಗೆ ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.

*ಒಲೆಯ ಮೇಲೆ ಇಡ್ಲಿ ಪಾತ್ರೆ ಅಥವಾ ಸ್ಟೀಮರ್ ಇಟ್ಟು, ಅದರಲ್ಲಿ ಈ ಉಂಡೆಗಳನ್ನು ಇಟ್ಟು 7 ರಿಂದ 8 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ ಒಲೆ ಆಫ್ ಮಾಡಿ. ಇಷ್ಟಾದರೆ ರುಚಿಕರವಾದ ಕಡುಬು ಸಿದ್ಧ.

ಕೊನೆಯದಾಗಿ ಇವುಗಳನ್ನು ಹೊರತೆಗೆದು, ಮೇಲಿಂದ ಸ್ವಲ್ಪ ತುಪ್ಪ ಸವರಿ ಗಣೇಶನಿಗೆ ನೈವೇದ್ಯವಾಗಿ ಅರ್ಪಿಸಿ. ನಂತರ ಇದನ್ನು ಸವಿದರೆ ಅಮೃತ ಸವಿದಂತಹ ಅನುಭವವಾಗುತ್ತದೆ!

ಗಮನಿಸಿ...

ಹೆಚ್ಚಿನ ರುಚಿಗೆ ಹಸಿಮೆಣಸಿನಕಾಯಿ ಮತ್ತು ಕರಿಬೇವು

ಖಾರ ಪ್ರಿಯರಾಗಿದ್ದರೆ, ನೀರು ಕುದಿಯುವಾಗ ಸಣ್ಣದಾಗಿ ಹೆಚ್ಚಿದ 1 ಹಸಿಮೆಣಸಿನಕಾಯಿ ಹಾಗೂ ಸ್ವಲ್ಪ ಕರಿಬೇವಿನ ಸೊಪ್ಪನ್ನು ಸೇರಿಸಿದರೆ ರುಚಿ ಮತ್ತು ಘಮ ಮತ್ತಷ್ಟು ಹೆಚ್ಚುತ್ತದೆ.

ಉಂಡೆ ಒಡೆಯದಂತೆ ಮಾಡಲು

ರವೆ ಬೆಂದ ನಂತರ ಪೂರ್ತಿಯಾಗಿ ತಣ್ಣಗಾಗಲು ಬಿಡಬೇಡಿ. ಮಿಶ್ರಣವು ಬೆಚ್ಚಗಿರುವಾಗಲೇ (ಹದವಾದ ಬಿಸಿ ಇರುವಾಗಲೇ) ಕೈಗೆ ತುಪ್ಪ ಸವರಿಕೊಂಡು ಉಂಡೆಗಳನ್ನು ಕಟ್ಟಬೇಕು. ಪೂರ್ತಿ ತಣ್ಣಗಾದರೆ ಉಂಡೆ ಮಾಡುವಾಗ ಬಿರುಕು ಬಿಡುತ್ತವೆ (Cracks ಬರುತ್ತವೆ)

ಆವಿಯಲ್ಲಿ ಅತಿಯಾಗಿ ಬೇಯಿಸಬೇಡಿ

ರವೆ ಮೊದಲೇ ಬೆಂದಿರುವುದರಿಂದ, ಆವಿಯಲ್ಲಿ ಕೇವಲ 6 ರಿಂದ 8 ನಿಮಿಷ ಬೇಯಿಸಿದರೆ ಸಾಕು. ಅತಿಯಾಗಿ ಬೇಯಿಸಿದರೆ ಕಡುಬು ರಬ್ಬರ್‌ನಂತೆ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ.