Naga Panchami Recipes: ನಾಗಪಂಚಮಿ ಹಬ್ಬ ಬಂತೆಂದರೆ ಸಾಕು, ಎಲ್ಲರ ಮನೆಯಲ್ಲೂ ಹಬೆಯಲ್ಲಿ ಬೇಯಿಸಿದ ಘಮಘಮಿಸುವ ಕಡುಬುಗಳೇ ಕಾಣಸಿಗುತ್ತವೆ. ಈ ಬಾರಿ ಹಬ್ಬದ ಸಂಭ್ರಮ ಹೆಚ್ಚಿಸಲು ಮೃದುವಾದ ಸಿಹಿ ಕಡುಬು ಮತ್ತು ರುಚಿಕರವಾದ ಖಾರ ಕಡುಬು ತಯಾರಿಸುವ ವಿಧಾನ ಇಲ್ಲಿದೆ. ಅಕ್ಕಿ ಹಿಟ್ಟಿನ ಹದ ತಪ್ಪದಂತೆ, ಹಬೆಯಲ್ಲಿ ಅತೀ ಸುಲಭವಾಗಿ ಮಾಡುವ ಈ ರೆಸಿಪಿ ಒಮ್ಮೆ ಪ್ರಯತ್ನಿಸಿ ನೋಡಿ...
ನಾಗಪಂಚಮಿ ಬಂತೆಂದರೆ ಸಾಕು, ನಾಡಿನಾದ್ಯಂತ ಹಬ್ಬದ ಅಡುಗೆಯ ಸಡಗರ ಶುರುವಾಗುತ್ತದೆ. ಈ ದಿನದ ವಿಶೇಷವೆಂದರೆ ಹಬೆಯಲ್ಲಿ ಬೇಯಿಸಿದ ಕಡುಬುಗಳು. ಹಾಗಾಗಿ ಇಂದು ಅತ್ಯಂತ ರುಚಿಕರವಾದ 'ಸಿಹಿ ಕಡುಬು' ಮತ್ತು 'ಖಾರ ಕಡುಬು' ತಯಾರಿಸುವ ಸರಳ ವಿಧಾನವನ್ನು ನೋಡೋಣ.. ಇದು ಆರೋಗ್ಯಕರವೂ, ರುಚಿಕರವೂ ಆಗಿದ್ದು ಈ ರೆಸಿಪಿಗಳ ವಿವರ ಇಲ್ಲಿದೆ.
ಖಾರ ಕಡುಬಿನ ಹೂರಣ ಸಿದ್ಧತೆ
ಮೊದಲು ಖಾರ ಕಡುಬಿಗೆ ಬೇಕಾದ ಬೇಳೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದು ಕಪ್ ತೊಗರಿಬೇಳೆ, ಒಂದು ಕಪ್ ಕಡ್ಲೆಬೇಳೆ ಮತ್ತು ಅರ್ಧ ಕಪ್ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು 3 ರಿಂದ 4 ಗಂಟೆಗಳ ಕಾಲ ನೆನೆಸಿಡಿ. ನಂತರ ನೀರನ್ನು ಪೂರ್ತಿ ಸೋಸಿ, ನೀರು ಹಾಕದೆ ತರಿತರಿಯಾಗಿ (ಆಂಬೊಡೆಯ ಹದಕ್ಕೆ) ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಶುಂಠಿ ತುರಿ, ಕೊತ್ತಂಬರಿ ಸೊಪ್ಪು ಮತ್ತು ಒಂದು ಬೌಲ್ ಕಾಯಿತುರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
ಸಿಹಿ ಕಡುಬಿನ ಹೂರಣ ತಯಾರಿಕೆ
ಒಂದು ಪಾತ್ರೆಯನ್ನು ಸ್ಟೌಲ್ ಮೇಲಿಟ್ಟು ಒಂದು ಬೌಲ್ ಬೆಲ್ಲ, ಸ್ವಲ್ಪ ನೀರು ಸೇರಿಸಿ ಕರಗಿಸಿ ಶೋಧಿಸಿಕೊಳ್ಳಿ. ನಂತರ ಶೋಧಿಸಿಕೊಂಡ ಬೆಲ್ಲದ ಪಾಕಕ್ಕೆ ಒಂದು ಬೌಲ್ ಕಾಯಿತುರಿ ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸಿ. ನೀರಿನಂಶ ಕಡಿಮೆಯಾದಾಗ ಏಲಕ್ಕಿ ಪುಡಿ ಸೇರಿಸಿ ಕೆಳಗಿಳಿಸಿ. ಇದು ಮೃದುವಾದ ಹೂರಣವಾಗಿರಲಿ.
ಮೃದುವಾದ ಹಿಟ್ಟಿನ ರಹಸ್ಯ
ಕಡುಬಿನ ಹೊರಪದರ ಮೃದುವಾಗಿ ಬರಲು ಅಕ್ಕಿ ಹಿಟ್ಟನ್ನು ಸರಿಯಾದ ಕ್ರಮದಲ್ಲಿ ಸಿದ್ಧಪಡಿಸಬೇಕು. ಒಂದು ಪಾತ್ರೆಯಲ್ಲಿ ನಾಲ್ಕುವರೆ ಕಪ್ ನೀರು, ಒಂದು ಚಮಚ ಎಣ್ಣೆ ಮತ್ತು ಸ್ವಲ್ಪ ಉಪ್ಪು ಹಾಕಿ ಕುದಿಸಿ. ನೀರು ಕುದಿ ಬಂದಾಗ ಮೂರು ಕಪ್ ಅಕ್ಕಿ ಹಿಟ್ಟು ಸೇರಿಸಿ (1:1.5 ಪ್ರಮಾಣ), ಮುದ್ದೆಯಂತೆ ಐದು ನಿಮಿಷ ಬೇಯಿಸಿ. ನಂತರ ಸ್ಟವ್ ಆಫ್ ಮಾಡಿ ಹತ್ತು ನಿಮಿಷ ಮುಚ್ಚಿಡಿ. ಹಿಟ್ಟು ಬಿಸಿ ಇರುವಾಗಲೇ ಒದ್ದೆ ಕೈಯಿಂದ ಚೆನ್ನಾಗಿ ನಾದಿ, ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
ಕಡುಬು ತಯಾರಿಸುವ ವಿಧಾನ
ಹಪ್ಪಳ ಒತ್ತುವ ಮಿಷನ್ ಅಥವಾ ಚಪಾತಿ ಮಣೆ ಮೇಲೆ ಪ್ಲಾಸ್ಟಿಕ್ ಕವರ್ ಇಟ್ಟು, ಎಣ್ಣೆ ಸವರಿ ಅಕ್ಕಿ ಹಿಟ್ಟಿನ ಉಂಡೆಯನ್ನು ತೆಳ್ಳಗೆ ಒತ್ತಿಕೊಳ್ಳಿ. ಅದರ ಮಧ್ಯದಲ್ಲಿ ಸಿದ್ಧಪಡಿಸಿದ ಸಿಹಿ ಅಥವಾ ಖಾರ ಹೂರಣವನ್ನು ಇಟ್ಟು ಅರ್ಧಚಂದ್ರಾಕೃತಿಯಲ್ಲಿ ಮಡಚಿ ಅಂಚುಗಳನ್ನು ಒತ್ತಿ.
ಹಬೆಯಲ್ಲಿ ಬೇಯಿಸಿ
ಸಿದ್ಧವಾದ ಕಡುಬುಗಳನ್ನು ಬಾಳೆ ಎಲೆ ಹಾಕಿದ ಸ್ಟೀಮರ್ ಅಥವಾ ಇಡ್ಲಿ ಪಾತ್ರೆಯಲ್ಲಿ ಜೋಡಿಸಿ.
ಸಿಹಿ ಕಡುಬು: ಕೇವಲ 5 ರಿಂದ 6 ನಿಮಿಷ ಬೇಯಿಸಿದರೆ ಸಾಕು.
ಖಾರ ಕಡುಬು: ಒಳಗಿನ ಬೇಳೆ ಬೇಯಬೇಕಿರುವುದರಿಂದ ಸುಮಾರು 20 ನಿಮಿಷಗಳ ಕಾಲ (15 ನಿಮಿಷ ಜೋರು ಉರಿ, 5 ನಿಮಿಷ ಸಣ್ಣ ಉರಿ) ಬೇಯಿಸಬೇಕು.
ಬಿಸಿಯಾದ ಸಿಹಿ ಕಡುಬನ್ನು ತುಪ್ಪದೊಂದಿಗೆ ಹಾಗೂ ಖಾರ ಕಡುಬನ್ನು ಚಟ್ನಿ ಮತ್ತು ತುಪ್ಪದೊಂದಿಗೆ ಸವಿಯಲು ನೀಡಿ. ಈ ನಾಗಪಂಚಮಿಗೆ ನಿಮ್ಮ ಮನೆಯಲ್ಲೂ ಈ ರುಚಿಕರ ಕಡುಬುಗಳನ್ನು ಪ್ರಯತ್ನಿಸಿ ನೋಡಿ!
