ಬಹುತೇಕ ಎಲ್ಲರ ಫೆವರೆಟ್ ಜಿಲೇಬಿ. ಆದ್ರೆ ತಯಾರಿಸುವ ವಿಧಾನ ಬಹುತೇಕರಿಗೆ ತಿಳಿದಿಲ್ಲ. ನೀವು ಮೈದಾ ಬದಲು ಅಕ್ಕಿ ಹಿಟ್ಟು ಬಳಸಿ ಮನೆಯಲ್ಲೇ ಗರಿ ಗರಿ ಜಿಲೇಬಿ ತಯಾರಿಸ್ಬಹುದು.
ಜಿಲೇಬಿ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರೂರುತ್ತೆ. ಬಿಸಿಬಿಸಿಯಾಗಿ, ಗರಿಗರಿಯಾಗಿ ಸಿಗುವ ಜಿಲೇಬಿ ಎಲ್ಲರಿಗೂ ಇಷ್ಟ. ಆದ್ರೆ ಅದನ್ನು ಮೈದಾದಲ್ಲಿ ಮಾಡಲಾಗುತ್ತೆ ಎನ್ನುವ ಕಾರಣಕ್ಕೆ ಅನೇಕರು ಜಿಲೇಬಿ ತಿನ್ನಲು ಹಿಂದೇಟು ಹಾಕ್ತಾರೆ. ನೀವೂ ಮೈದಾ ಇಷ್ಟಪಡ್ತಿಲ್ಲ ಎಂದಾದ್ರೆ ಅಕ್ಕಿ ಹಿಟ್ಟಿನ ಜಿಲೇಬಿ ಟ್ರೈ ಮಾಡಿ. ಇದು ಕೂಡ ಗರಿಗರಿಯಾಗಿ ಸವಿಯೋಕೆ ರುಚಿಯಾಗಿರುತ್ತೆ.
ಅಕ್ಕಿ ಹಿಟ್ಟಿನ ಜಿಲೇಬಿ
ಅಕ್ಕಿ ಹಿಟ್ಟಿನ ಜಿಲೇಬಿ ತಯಾರಿಸಲು ಹೆಚ್ಚು ಸಾಮಗ್ರಿಗಳ ಅಗತ್ಯವಿಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿ ರುಚಿಕರವಾದ ಜಿಲೇಬಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು
ಅರ್ಧ ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಮೊಸರು, 1 ಕಪ್ ಸಕ್ಕರೆ, ಒಂದೂವರೆ ಚಿಕ್ಕ ಚಮಚ ಬೇಕಿಂಗ್ ಪೌಡರ್, ಒಂದೂವರೆ ಚಿಕ್ಕ ಚಮಚ ಫುಡ್ ಕಲರ್, 2 ಹಸಿರು ಏಲಕ್ಕಿ ಪುಡಿ, ಕರಿಯಲು ಎಣ್ಣೆ
ಅಕ್ಕಿ ಹಿಟ್ಟಿನ ಜಿಲೇಬಿ ತಯಾರಿಸುವ ವಿಧಾನ
ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಮೊಸರು, ಬೇಕಿಂಗ್ ಪೌಡರ್ ಮತ್ತು ಫುಡ್ ಕಲರ್ ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ನಯವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ತುಂಬಾ ಗಟ್ಟಿಯಾಗಿಯೂ ಅಥವಾ ತೆಳುವಾಗಿಯೂ ಇರಬಾರದು. ನಂತರ ಪಾತ್ರೆಯನ್ನು ಮುಚ್ಚಿ 10ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಸಕ್ಕರೆ ಪಾಕ ತಯಾರಿಸಿ: ಈ ನಡುವೆ ಜಿಲೇಬಿಗಾಗಿ ಸಕ್ಕರೆ ಪಾಕ ಸಿದ್ಧಪಡಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ಅರ್ಧ ಕಪ್ ನೀರು ಹಾಕಿ ಬಿಸಿ ಮಾಡಿ. ಸಕ್ಕರೆ ಸಂಪೂರ್ಣ ಕರಗಿದ ಬಳಿಕ ಒಂದು ಎಳೆ ಪಾಕ ಬರುವವರೆಗೆ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ.
ಜಿಲೇಬಿ ಆಕಾರ ನೀಡಿ: ಈಗ ಸಿದ್ಧಪಡಿಸಿದ ಹಿಟ್ಟನ್ನು ಜಿಲೇಬಿ ಮಾಡುವ ಬಾಟಲಿ ಅಥವಾ ಸ್ವಚ್ಛವಾದ ಖಾಲಿ ಹಾಲಿನ ಪ್ಯಾಕೆಟ್ನಲ್ಲಿ ತುಂಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹಾಲಿನ ಪ್ಯಾಕೆಟ್ನ ಒಂದು ಮೂಲೆಯನ್ನು ಸ್ವಲ್ಪ ಕತ್ತರಿಸಿ, ಬಿಸಿ ಎಣ್ಣೆಗೆ ಹಿಟ್ಟನ್ನು ವೃತ್ತಾಕಾರವಾಗಿ ಬಿಡುತ್ತಾ ಜಿಲೇಬಿಯ ಆಕಾರ ನೀಡಿ.
ಗರಿಗರಿಯಾಗಿ ಕರಿಯಿರಿ: ಜಿಲೇಬಿಗಳನ್ನು ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಕರಿಯಿರಿ. ನಂತರ ಎಣ್ಣೆಯಿಂದ ತೆಗೆದು ತಕ್ಷಣವೇ ಸಿದ್ಧಪಡಿಸಿಟ್ಟ ಸಕ್ಕರೆ ಪಾಕಕ್ಕೆ ಹಾಕಿ. ಸುಮಾರು 4ರಿಂದ 5 ನಿಮಿಷಗಳ ಕಾಲ ಪಾಕದಲ್ಲಿ ನೆನೆಸಿಡಿ. ಇದರಿಂದ ಜಿಲೇಬಿಯ ಒಳಭಾಗಕ್ಕೂ ಸಿಹಿ ಚೆನ್ನಾಗಿ ಇಳಿಯುತ್ತದೆ. ನಂತ್ರ ಜಿಲೇಬಿಗಳನ್ನು ಸಕ್ಕರೆ ಪಾಕದಿಂದ ಹೊರತೆಗೆದು ಬಿಸಿಬಿಸಿಯಾಗಿ ಸವಿಯಲು ನೀಡಿ. ಅಕ್ಕಿ ಹಿಟ್ಟಿನಿಂದ ತಯಾರಿಸಿದ ಈ ಗರಿಗರಿಯಾದ, ಸಿಹಿಯಾದ ಜಿಲೇಬಿಯ ರುಚಿ ಮನೆಯ ಎಲ್ಲರಿಗೂ ಇಷ್ಟವಾಗುತ್ತೆ.






