Hotel Style Rava Dosa: ಬ್ಯಾಚುಲರ್ಸ್‌ನಿಂದ ಹಿಡಿದು ಗೃಹಿಣಿಯರವರೆಗೆ ಯಾರಾದರೂ ಸುಲಭವಾಗಿ ಮಾಡಬಹುದಾದ ಇನ್ಸ್ಟೆಂಟ್ ರವಾ ದೋಸೆ ತಯಾರಿಸಲು ಬೇಕಾದ ಪದಾರ್ಥಗಳು ಮತ್ತು ತಯಾರಿಸುವ ವಿಧಾನ ಇಲ್ಲಿದೆ. 

ದೋಸೆ.. ಹೆಸರು ಕೇಳಿದರೆನೇ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಬೆಳಗ್ಗೆ ಎದ್ದಾಗ ತೆಂಗಿನಕಾಯಿ ಚಟ್ನಿ ಅಥವಾ ಆಲೂಗಡ್ಡೆ ಪಲ್ಯದೊಂದಿಗೆ ತಟ್ಟೆಯಲ್ಲಿ ಬಿಸಿ ದೋಸೆ ಸವಿಯುವುದೆಂದರೆ ಅದರ ಮಜಾನೇ ಬೇರೆ. ಆದರೆ ನೀವು ಹೋಟೆಲ್ ಸ್ಟೈಲ್ ಗರಿಗರಿಯಾದ ರವೆ ದೋಸೆಯನ್ನು ಹಿಟ್ಟು ರುಬ್ಬುವ ತೊಂದರೆಯೇ ಇಲ್ಲದೆ ಮನೆಯಲ್ಲಿಯೇ ಕೇವಲ 10 ನಿಮಿಷದಲ್ಲಿ ಮಾಡಬಹುದು.

ಬ್ಯಾಚುಲರ್ಸ್‌ನಿಂದ ಹಿಡಿದು ಗೃಹಿಣಿಯರವರೆಗೆ ಯಾರಾದರೂ ಸುಲಭವಾಗಿ ಮಾಡಬಹುದಾದ ಇನ್ಸ್ಟೆಂಟ್ ರವಾ ದೋಸೆ ತಯಾರಿಸಲು ಬೇಕಾದ ಪದಾರ್ಥಗಳು ಮತ್ತು ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಸುಜಿ ರವೆ (ಬಾಂಬೆ ರವೆ) - 1 ಕಪ್
ಅಕ್ಕಿ ಹಿಟ್ಟು - ಅರ್ಧ ಕಪ್
ಗೋಧಿ ಹಿಟ್ಟು - 1 ಚಮಚ
ಜೀರಿಗೆ - 1 ಚಮಚ
ಶುಂಠಿ - ಸಣ್ಣ ತುಂಡು
ಚಿಟಿಕೆ ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ-ಹುರಿಯಲು ಬೇಕಾದಷ್ಟು
ನೀರು - 4-5 ಕಪ್

ತಯಾರಿಸುವ ವಿಧಾನ

*ಮೊದಲು ಒಂದು ಅಗಲವಾದ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದು ಕಪ್ ರವೆ, ಅರ್ಧ ಕಪ್ ಅಕ್ಕಿ ಹಿಟ್ಟು ಮತ್ತು ಒಂದು ಚಮಚ ಗೋಧಿ ಹಿಟ್ಟು ಸೇರಿಸಿ. ಈಗ ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಮತ್ತು ತುರಿದ ಶುಂಠಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
*ಈಗ ಈ ಮಿಶ್ರಣಕ್ಕೆ ಸುಮಾರು 4 ಕಪ್ ನೀರು ಸೇರಿಸಿ ಮತ್ತು ಯಾವುದೇ ಉಂಡೆ ಬರದಂತೆ ಚೆನ್ನಾಗಿ ಮಿಶ್ರಣ ಮಾಡಿ. ರವೆ ದೋಸೆ ಹಿಟ್ಟು ಸಾಮಾನ್ಯ ದೋಸೆ ಹಿಟ್ಟಿನಂತೆ ದಪ್ಪವಾಗಿರಬಾರದು. ಅದು ಮಜ್ಜಿಗೆಯಂತೆ ತೆಳ್ಳಗಿರಬೇಕು. ಆಗ ಮಾತ್ರ ದೋಸೆ ಗರಿಗರಿಯಾಗಿ ಬರುತ್ತದೆ.
*ಈ ಹಿಟ್ಟನ್ನು 15-20 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಇದು ರವೆ ನೀರನ್ನು ಹೀರಿಕೊಳ್ಳಲು ಮತ್ತು ಮೃದುವಾಗಲು ಅನುವು ಮಾಡಿಕೊಡುತ್ತದೆ.
*15 ನಿಮಿಷದ ನಂತರ ಹಿಟ್ಟನ್ನು ಪರಿಶೀಲಿಸಿ. ರವೆ ಕೆಳಭಾಗದಲ್ಲಿ ಹೋಗಿರುತ್ತದೆ. ಆದ್ದರಿಂದ ಅದನ್ನು ಒಂದು ಚಮಚದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ದಪ್ಪವಾಗಿದ್ದರೆ ಸ್ವಲ್ಪ ನೀರು ಸೇರಿಸಿ. ಈಗ ಅದಕ್ಕೆ ಒಂದು ಚಮಚ ಎಣ್ಣೆ ಸೇರಿಸಿ ಮಿಶ್ರಣ ಮಾಡಿ.

ಮಾಡುವ ವಿಧಾನ
*ಒಲೆ ಹೊತ್ತಿಸಿ ಅದರ ಮೇಲೆ ಒಂದು ಪ್ಯಾನ್ ಇಟ್ಟು, ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಬಿಸಿ ಮಾಡಿ. ಪ್ಯಾನ್ ಬಿಸಿಯಾದ ನಂತರ ಉರಿಯನ್ನು ಕಡಿಮೆ ಮಾಡದೆ ಮಿಶ್ರಣ ಮಾಡಿಟ್ಟುಕೊಂಡ ಹಿಟ್ಟನ್ನು ಚಮಚದಿಂದ ತೆಗೆದುಕೊಂಡು ಪ್ಯಾನ್ ನ ಅಂಚುಗಳಿಂದ ಮಧ್ಯಕ್ಕೆ ಸುರಿಯಿರಿ (ಸಾಮಾನ್ಯ ದೋಸೆಯಂತೆ ಸೌಟಿನಲ್ಲಿ ಉಜ್ಜಬೇಡಿ). ಹಿಟ್ಟು ಸುರಿದಾಗ ಜರಡಿಯಂತೆ ರಂಧ್ರಗಳಿರಬೇಕು.
*ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಹಚ್ಚಿ. ಮಧ್ಯಮ ಉರಿಯಲ್ಲಿ ಅದು ಕೆಂಪು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ನಿಮಗೆ ಬೇಕಾದರೆ ಹಿಟ್ಟು ಹಾಕುವ ಮೊದಲು ಸಣ್ಣಗೆ ಹೆಚ್ಚಿದ ಈರುಳ್ಳಿ ಹೋಳುಗಳನ್ನು ಪ್ಯಾನ್ ಮೇಲೆ ಹಾಕಬಹುದು.
*ದೋಸೆ ಒಂದು ಬದಿ ಚೆನ್ನಾಗಿ ಬೆಂದ ನಂತರ ಅಂಚುಗಳಿಂದ ಮೇಲಕ್ಕೆತ್ತಲು ಪ್ರಾರಂಭಿಸಿದಾಗ ಅದನ್ನು ತೆಗೆದು ತಟ್ಟೆಗೆ ವರ್ಗಾಯಿಸಿ. ಇನ್ನೊಂದು ಬದಿಯಲ್ಲಿ ರವಾ ದೋಸೆ ಬೇಯಿಸುವ ಅಗತ್ಯವಿಲ್ಲ.
*ಮೃದುವಾಗಿರಲು ಬಯಸಿದರೆ ನೀವು ಎರಡೂ ಬದಿಗಳಲ್ಲಿ ಬೇಯಿಸಬಹುದು.
*ಅಷ್ಟೇ..ತುಂಬಾ ರುಚಿಕರವಾದ, ಗರಿಗರಿಯಾದ ಬಿಸಿ ರವಾ ದೋಸೆ ಸಿದ್ಧ. ಇದನ್ನು ಶೇಂಗಾ ಚಟ್ನಿ, ಶುಂಠಿ ಚಟ್ನಿ ಅಥವಾ ಸಾಂಬಾರ್ ಜೊತೆ ಬಡಿಸಿ. ರುಚಿ ನೆಕ್ಸ್ಟ್‌ ಲೆವೆಲ್‌ನಲ್ಲಿ ಇರುತ್ತದೆ.