ಉದ್ದು, ಅಕ್ಕಿ ನೆನೆಸುವ ಅಗತ್ಯವಿಲ್ಲದೆ ಕೇವಲ 5 ನಿಮಿಷದಲ್ಲಿ ದೋಸೆ ತಯಾರಿಸಲು ಇನ್‌ಸ್ಟಂಟ್ ದೋಸಾ ಮಿಕ್ಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಮತ್ತು ಅವಲಕ್ಕಿಯನ್ನು ತರಿತರಿಯಾಗಿ ರುಬ್ಬಿ ಮಾಡುವ ಈ ಪುಡಿಯನ್ನು ಆರು ತಿಂಗಳವರೆಗೆ ಕೆಡದಂತೆ ಶೇಖರಿಸಿಡಬಹುದು.

ದಕ್ಷಿಣ ಭಾರತೀಯರ ಫೆವರೆಟ್​ ದೋಸೆ ಈಗ ಎಲ್ಲಾ ಕಡೆ ಫೇಮಸ್​. ಆದರೆ, ಸಾಮಾನ್ಯವಾಗಿ ದೋಸೆ ಮಾಡುವಾಗ, ಹಿಂದಿನ ದಿನವೇ ಉದ್ದು, ಅಕ್ಕಿ, ಬೇಳೆ-ಕಾಳು... ಹೀಗೆ ವಿಭಿನ್ನ ದೋಸೆಗಳಿಗೆ ಏನೇನು ಬೇಕೋ ಅವನ್ನೆಲ್ಲಾ ನೆನೆ ಹಾಕಿ ಇಡಬೇಕು. ಆದರೆ ಇದು ಇನ್​ಸ್ಟೆಂಟ್​ ಯುಗ ಅಲ್ವಾ? ಅದರಲ್ಲಿಯೂ ಕಚೇರಿಗೆ ಹೋಗುವ ಮಹಿಳೆಯರಿಗೆ ಸಂಜೆ ಬಂದು ಇದನ್ನೆಲ್ಲಾ ಮಾಡಿ ಅದನ್ನು ರುಬ್ಬಿ ಇಡುವಷ್ಟು ಪುರುಸೊತ್ತು ಕೂಡ ಇರಲ್ಲ. ಇದೇ ಕಾರಣಕ್ಕೆ ಮನೆಯಲ್ಲಿಯೇ ಸುಲಭದಲ್ಲಿ ದೋಸೆ ಹಿಟ್ಟನ್ನು ಅರ್ಥಾತ್​ ದೋಸಾ ಮಿಕ್ಸ್​ ರೆಡಿ ಮಾಡಿ ಇಟ್ಟುಕೊಳ್ಳಬಹುದು. ರವೆಯ ರೂಪದಲ್ಲಿ ಇರುವ ದೋಸಾ ಮಿಕ್ಸ್​ ಆರು ತಿಂಗಳವರೆಗೆ ಕೆಡದೇ ಇಡಬಹುದು. ಹೊರಗಡೆ ಮೂರು ತಿಂಗಳವರೆಗೆ, ಫ್ರಿಜ್​ನಲ್ಲಿ ಆದ್ರೆ ಆರು ತಿಂಗಳು ಫ್ರೆಷ್​ ಆಗಿಯೇ ಇಡಬಹುದು. ದೋಸೆ ತಿನ್ನಬೇಕು ಎನ್ನಿಸಿದರೆ ಐದೇ ನಿಮಿಷದಲ್ಲಿ ರೆಡಿ ಮಾಡಿಕೊಳ್ಳಬಹುದು.

ಹಾಗಿದ್ರೆ ಅದನ್ನು ಹೇಗೆ ಮಾಡಬೇಕು ಎನ್ನೋದನ್ನು ನೋಡೋಣ ಬನ್ನಿ. chef_mohan_tips ಇನ್​ಸ್ಟಾಗ್ರಾಮ್​ನಲ್ಲಿ ಷೆಫ್​ ಹೇಳಿಕೊಟ್ಟ ಟಿಪ್ಸ್​ ಇಲ್ಲಿದೆ. 3 ಭಾಗ ಅಕ್ಕಿ, 1 ಭಾಗ ಉದ್ದಿನ ಬೇಳೆ ಪ್ರಮಾಣದಲ್ಲಿಯೇ ಇದನ್ನು ಮಾಡಬೇಕು.

ಬೇಕಾಗುವ ಸಾಮಗ್ರಿಗಳು

  • 200 ಗ್ರಾಂ ಉದ್ದಿನ ಬೆಳೆ
  • 20 ಗ್ರಾಂ ಮೆಂತ್ಯ,
  • 50 ಗ್ರಾಂ ದಪ್ಪ ಅವಲಕ್ಕಿ
  • 600 ಗ್ರಾಂ ದೋಸೆ ಅಕ್ಕಿ

ಮಾಡುವ ವಿಧಾನ ಹೀಗಿದೆ

  • ಮೊದಲಿಗೆ 200 ಗ್ರಾಂ ಉದ್ದಿನ ಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ.
  • ಅದರ ಮೇಲೆ 20 ಗ್ರಾಂ ಮೆಂತ್ಯ (ಗೋಲ್ಡನ್​ ಕಲರ್​ ಬರುವುದಕ್ಕಾಗಿ) ಹಾಕಿ
  • ಇದನ್ನು ಒಂದು ಸುತ್ತು ಸುತ್ತಿ. ನುಣ್ಣಗೆ ಆಗಬಾರದು. ತರಿತರಿಯಾಗಿ ಇರಬೇಕು. ಅದನ್ನು ತೆಗೆದು ಇಡಿ.
  • ಬಳಿಕ 50 ಗ್ರಾಂ ಅವಲಕ್ಕಿ ಮಿಕ್ಸಿಯಲ್ಲಿ ಹಾಕಿ.
  • 600 ಗ್ರಾಂ ಇಡ್ಲಿ ಅಕ್ಕಿ ಸೇರಿಸಿ.
  • ಈಗಲೂ ನುಣ್ಣಗೆ ರುಬ್ಬಬಾರದು. ಮಿಕ್ಸಿಯ ಜಾರ್​ ಬಿಸಿಯಾಗದಂತೆ ನೋಡಿಕೊಳ್ಳಿ. ತರಿತರಿಯಾಗಿ ಎಲ್ಲವನ್ನೂ ಸೇರಿ ರುಬ್ಬಿ. ರವೆಯ ರೀತಿಯಲ್ಲಿ ಇರಬೇಕು, ನುಣ್ಣಗೆ ಆಗಬಾರದು.
  • ಇದನ್ನು ಏರ್​ಟೈಟ್​ ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಡಿ. ಹೊರಗಡೆ ಇಟ್ಟರೆ ಮೂರು ತಿಂಗಳು, ಫ್ರಿಜ್​ನಲ್ಲಿ ಇಟ್ಟರೆ ಆರು ತಿಂಗಳವರೆಗೆ ಇದನ್ನು ಶೇಖರಿಸಬಹುದು.
  • ದೋಸೆ ತಿನ್ನಬೇಕು ಎನ್ನಿಸಿದಾಗ, 3 ಕಪ್​ ಈ ಮಿಕ್ಸಿಂಗ್​ ಪೌಡರ್​, ಒಂದು ಕಪ್​ ಮಜ್ಜಿಗೆ ಮತ್ತು ಅರ್ಧ ಕಪ್​ ನೀರು ಹಾಕಿ ಗಂಟು ಇಲ್ಲದಂತೆ ಮಿಕ್ಸ್​ ಮಾಡಿ.
  • ತವೆಯ ಮೇಲೆ ನೀರು ಹಾಕಿ, ಒಣ ಬಟ್ಟೆಯಲ್ಲಿ ಒಂದು ಸಲ ಕೈಯಾಡಿಸಿ. ದೋಸೆ ಹಿಟ್ಟು ಹಾಕಿ, ಮೇಲಿನಿಂದ ಬೆಣ್ಣೆನೋ, ತುಪ್ಪನೋ, ಎಣ್ಣೆನೋ ಹಾಕಿ.