Vegetable And Fruits Store: ಫ್ರಿಡ್ಜ್ ಇಲ್ಲದೆಯೂ ಕೂಡ ಹಣ್ಣುಗಳು, ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಹಿರಿಯರು ಅನುಸರಿಸುತ್ತಿದ್ದ ಅದ್ಭುತವಾದ ಮತ್ತು ಸುಲಭವಾದ ವಿಧಾನಗಳು ಇಲ್ಲಿವೆ.
ಕೆಲವೊಮ್ಮೆ ಫ್ರಿಡ್ಜ್ ಇರೋದಿಲ್ಲ. ಇಂದಿನ ವಾತಾವರಣಕ್ಕೆ ಫ್ರಿಡ್ಜ್ ಇಲ್ಲ ಅಂದರೆ ತರಕಾರಿ, ಹಣ್ಣುಗಳು ಜಾಸ್ತಿ ದಿನ ಇರೋದಿಲ್ಲ. ಇದಕ್ಕೆ ಏನು ಮಾಡಬೇಕು?
1. ಗಾಳಿಯಾಡುವ ಬುಟ್ಟಿಗಳ ಬಳಕೆ:
ತರಕಾರಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ದಯವಿಟ್ಟು ಇಡಲೇಬೇಡಿ. ಬಿದಿರಿನ ಬುಟ್ಟಿ ಅಥವಾ ರಂಧ್ರಗಳಿರುವ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ, ಸ್ಟೀಲ್ ಬುಟ್ಟಿಗಳಲ್ಲಿ ಇರಿಸಿ. ಇದರಿಂದ ಗಾಳಿಯ ಸಂಚಾರ ಚೆನ್ನಾಗಿ ಆಗುತ್ತವೆ, ಅಷ್ಟು ಸುಲಭಕ್ಕೆ ತರಕಾರಿಗಳು ಕೊಳೆಯುವುದಿಲ್ಲ.
2. ಸೊಪ್ಪುಗಳನ್ನು ಹೇಗೆ ಇಡೋದು?
ಸೊಪ್ಪುಗಳನ್ನು (ಪಾಲಕ್, ದಂಟು, ಕೊತ್ತಂಬರಿ) ತಂದಕೂಡಲೇ, ಆ ಬೇರುಗಳನ್ನು ನೀರಿನಲ್ಲಿ ಅದ್ದಿಡಬೇಕು. ಒಂದು ಒದ್ದೆಯಾದ ಕಾಟನ್ ಬಟ್ಟೆಯಲ್ಲಿ ಸುತ್ತಿ ಗಾಳಿಯಾಡುವ ಜಾಗದಲ್ಲಿ ಇಟ್ಟರೆ ಎರಡು-ಮೂರು ದಿನಗಳ ಕಾಲ ಸೊಪ್ಪುಗಳು ತಾಜಾವಾಗಿರುತ್ತದೆ.
3. ಈರುಳ್ಳಿ, ಆಲೂಗಡ್ಡೆ ಮತ್ತು ಬೆಳ್ಳುಳ್ಳಿ
ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿಯನ್ನು ಎಂದಿಗೂ ನೀರಿನಲ್ಲಿ ತೊಳೆಯಲೇಬೇಡಿ. ಒಣಗಿದ, ಕತ್ತಲೆಯಾದ ಮತ್ತು ಗಾಳಿಯಾಡುವ ಜಾಗದಲ್ಲಿ ಇವುಗಳನ್ನು ಇಡಬೇಕು. ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಎಂದಿಗೂ ಕೂಡ ಒಟ್ಟಿಗೆ ಇಡಬಾರದು. ಈರುಳ್ಳಿಯಿಂದ ಹೊರಬರುವ ಅನಿಲವು ನಿಜಕ್ಕೂ ಆಲೂಗಡ್ಡೆಯನ್ನು ಬೇಗನೆ ಹಾಳುಮಾಡುವುದು.
4. ಕ್ಯಾರೆಟ್, ಮೂಲಂಗಿ, ಶುಂಠಿ
ತೇವಾಂಶವಿರುವ ಮರಳಿನಲ್ಲಿ ಇವುಗಳನ್ನು ಹೂತಿಟ್ಟರೆ ಒಂದು ವಾರಕ್ಕೂ ಹೆಚ್ಚು ಕಾಲ ತಾಜಾವಾಗಿರುತ್ತವೆ. ಹಳ್ಳಿಗಾಡಿನಲ್ಲಿ ಇಂದಿಗೂ ಇದೇ ವಿಧಾನವನ್ನು ಅನುಸರಿಸುತ್ತಾರೆ.
5. ಹಸಿಮೆಣಸಿನಕಾಯಿ:
ಹಸಿಮೆಣಸಿನಕಾಯಿಯನ್ನು ದೀರ್ಘಕಾಲ ಇಡಲು ಅದರ 'ತೊಟ್ಟು' ತೆಗೆಯಿರಿ. ನಂತರ ಅದನ್ನು ಪೇಪರ್‌ನಲ್ಲಿ ಸುತ್ತಿಡಿ ಅಥವಾ ಗಾಳಿಯಾಡುವ ಡಬ್ಬದಲ್ಲಿ ಇಡಿ.
6. ನಿಂಬೆಹಣ್ಣು
ಒಂದು ಗಾಜಿನ ಪಾತ್ರೆ ಅಥವಾ ಮಣ್ಣಿನ ಪಾತ್ರೆಯಲ್ಲಿ ನೀರು ತುಂಬಿಸಿ ಅದರೊಳಗೆ ನಿಂಬೆಹಣ್ಣು ಇಡಿ. ಪ್ರತಿದಿನ ನೀರನ್ನು ಬದಲಾಯಿಸಬೇಕು, ಆಗ ನಿಂಬೆಹಣ್ಣು ಹಲವು ದಿನಗಳವರೆಗೆ ಬರುತ್ತದೆ.
7. ಟೊಮೆಟೊ
ಟೊಮ್ಯಾಟೋಗಳ ಮೇಲೆ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಿ. ಟೊಮ್ಯಾಟೋದ ತೊಟ್ಟಿನ ಭಾಗ ಕೆಳಮುಖವಾಗಿ ಇರುವಂತೆ ಜೋಡಿಸಿ ಇಟ್ಟರೆ ಅವು ಬೇಗನೆ ಕೊಳೆಯುವುದಿಲ್ಲ.
8. ಮಣ್ಣಿನ ಮಡಿಕೆ ವಿಧಾನ
ಒಂದು ದೊಡ್ಡ ಮಣ್ಣಿನ ಮಡಕೆಯೊಳಗೆ ಸ್ವಲ್ಪ ಮರಳನ್ನು ಹಾಕಬೇಕು, ಅದಕ್ಕೆ ನೀರು ಚಿಮುಕಿಸಬೇಕು. ಅದರ ಮೇಲೆ ಮತ್ತೊಂದು ಸಣ್ಣ ಮಡಿಕೆಯನ್ನು ಇಟ್ಟು ಅದರಲ್ಲಿ ತರಕಾರಿಗಳನ್ನು ಇಡಿ. ದೊಡ್ಡ ಮಡಿಕೆಯ ಬಾಯಿಯನ್ನು ಒದ್ದೆ ಬಟ್ಟೆಯಿಂದ ಮುಚ್ಚಬೇಕು. ಇದು ನೈಸರ್ಗಿಕ ಫ್ರಿಡ್ಜ್ ಥರ ಇರುವುದು.
9. ಒಣಗಿಸುವಿಕೆ (Sun Drying):
ಬೀನ್ಸ್, ಹಾಗಲಕಾಯಿ ಮುಂತಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಅದನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಬಹುದು. ಇದನ್ನು ಬೇಕಾದಾಗ ನೀರಿನಲ್ಲಿ ನೆನೆಸಿ ಅಡುಗೆಗೆ ಬಳಸಬಹುದು.
ಕೆಲವು ಮುಖ್ಯ ಸಲಹೆಗಳು:
ತರಕಾರಿಗಳನ್ನು ಕತ್ತರಿಸಿದ ನಂತರ ಹೆಚ್ಚು ಹೊತ್ತು ಹೊರಗಡೆ ಇಡಬೇಡಿ
ಕೊಳೆತ ಅಥವಾ ಹಾಳಾದ ತರಕಾರಿಗಳನ್ನು ತಕ್ಷಣವೇ ತೆಗೆಯಬೇಕು, ಇಲ್ಲದಿದ್ದರೆ ಉಳಿದ ತರಕಾರಿಗಳೂ ಕೂಡ ಹಾಳಾಗುತ್ತವೆ.
ಸಾಮಾನ್ಯವಾಗಿ ತರಕಾರಿಗಳನ್ನು ಇಡುವ ಜಾಗ ತಂಪಾಗಿರಲಿ.
ಹಸಿ ಶುಂಠಿ ಅಥವಾ ಮಾವಿನಕಾಯಿಯಂತಹ ಪದಾರ್ಥಗಳನ್ನು ಉಪ್ಪಿನ ನೀರಿನಲ್ಲಿ ಹಾಕಿಟ್ಟರೆ ಬಹಳ ದಿನ ಬಾಳಿಕೆ ಬರುತ್ತವೆ.
ತರಕಾರಿಗಳನ್ನು ತಂದ ತಕ್ಷಣ ತೊಳೆಯಬಾರದು. ತೇವಾಂಶವಿದ್ದರೆ ಬ್ಯಾಕ್ಟೀರಿಯಾಗಳು ಬೇಗ ಹರಡುತ್ತವೆ. ಅಡುಗೆಗೆ ಬಳಸುವ ಮುನ್ನ ತೊಳೆಯುವುದು ಉತ್ತಮ.


