ತರಕಾರಿಗಳಲ್ಲಿಯೂ ಗಂಡು-ಹೆಣ್ಣು ಎಂಬ ಭೇದವಿದ್ದು, ಕ್ಯಾಪ್ಸಿಕಂನಲ್ಲಿ ಇದನ್ನು ಸುಲಭವಾಗಿ ಗುರುತಿಸಬಹುದು. ನಾಲ್ಕು ಗುಡ್ಡೆಗಳಿರುವ ಹೆಣ್ಣು ಕ್ಯಾಪ್ಸಿಕಂ ಸಿಹಿಯಾಗಿದ್ದು ಸಲಾಡ್‌ಗೆ ಉತ್ತಮವಾದರೆ, ಮೂರು ಗುಡ್ಡೆಗಳಿರುವ ಗಂಡು ಕ್ಯಾಪ್ಸಿಕಂ ಅಡುಗೆಗೆ ಹೆಚ್ಚು ಸೂಕ್ತವಾಗಿದೆ.
ಈ ಸೃಷ್ಟಿಯಲ್ಲಿ ಮನುಷ್ಯ ಮಾತ್ರವಲ್ಲದೇ ಪ್ರಾಣಿ, ಪಕ್ಷಿಯಷ್ಟೇ ಅಲ್ಲದೇ, ತರಕಾರಿ, ಹಣ್ಣು, ಗಿಡ, ಮರ... ಹೀಗೆ ಎಲ್ಲವುಗಳಲ್ಲಿಯೂ ಗಂಡು ಮತ್ತು ಹೆಣ್ಣು ಎನ್ನುವುದು ಇರುತ್ತದೆ. ಆದರೆ ಅದನ್ನು ಗುರುತಿಸುವುದು ಸಾಮಾನ್ಯರಾದ ನಮ್ಮಿಂದ ಸಾಧ್ಯವೇ ಇಲ್ಲ. ಆದರೆ ಸೃಷ್ಟಿಯ ವೈಚಿತ್ರ್ಯವೆಂದರೆ, ಹಲವು ತರಕಾರಿಗಳು ಗಂಡು ಹೆಣ್ಣು ಎಂದು ಗುರುತಿಸುವುದು ಸುಲಭವಾದರೂ, ಅದು ನಮಗೆ ತಿಳಿದಿರುವುದಿಲ್ಲ. ಅಷ್ಟಕ್ಕೂ ತರಕಾರಿಗಳು, ಹಣ್ಣು-ಹಂಪಲು, ಹೂವು ಎಲ್ಲಾ ಗಂಡಾದರೇನು, ಹೆಣ್ಣಾದರೇನು ಅದರ ಬಳಕೆ ನಮಗೆ ಆದರೆ ಸಾಕು, ಅದನ್ನು ತೆಗೆದುಕೊಂಡು ನಮಗೇನು ಆಗುವುದು ಎಂದು ಹೇಳಿಕೊಂಡು ಸುಮ್ಮನಾಗಿ ಬಿಡುತ್ತೇವೆ.
ತರಕಾರಿಯಲ್ಲಿಯೂ ಗಂಡು-ಹೆಣ್ಣು
ಆದರೆ, ಮನುಷ್ಯರಂತೆಯೇ ತರಕಾರಿಗಳಲ್ಲಿಯೂ ಗಂಡಿಗೇ ಒಂದು ರೀತಿಯ ಗುಣ, ಹೆಣ್ಣಿಗೇ ಒಂದು ರೀತಿಯ ಗುಣವಿರುತ್ತದೆ. ನಾವು ತರಕಾರಿಗಳನ್ನು ತಂದಾಗ ಅದನ್ನು ಸಾಂಬಾರ್, ಪಲ್ಯ, ಕೋಸಂಬರಿ, ಸಲಾಡ್... ಹೀಗೆ ಎಲ್ಲದಕ್ಕೂ ಹಾಕುತ್ತೇವೆ. ಆದರೆ ಒಂದೇ ರೀತಿಯಲ್ಲಿ ನಾವು ಟ್ರೈ ಮಾಡಿದಾಗಲೂ ಕೆಲವೊಮ್ಮೆ ಅಷ್ಟೊಂದು ಚೆನ್ನಾಗಿ ಬರದಿದ್ದರೆ, ಕೆಲವೊಮ್ಮೆ ಟೇಸ್ಟಿಯಾಗಿ ಅನ್ನಿಸುವುದು ಉಂಟಲ್ವಾ? ಅದಕ್ಕೆ ಕಾರಣ ಕೂಡ ಗಂಡು-ಹೆಣ್ಣು ಎನ್ನಲಾಗುತ್ತದೆ. ಗಂಡು ತರಕಾರಿಗಳನ್ನು ಒಂದಕ್ಕೆ ಬಳಸಿದರೆ, ಹೆಣ್ಣು ತರಕಾರಿಗಳನ್ನು ಮತ್ತೊಂದಕ್ಕೆ ಬಳಸಿದರೆ ಅದು ಟೇಸ್ಟ್ ನೀಡುತ್ತದೆ ಎನ್ನಲಾಗುತ್ತಿದೆ.
ಕ್ಯಾಪ್ಸಿಕಂನಲ್ಲಿ ಗಂಡು ಹೆಣ್ಣು
ಇದೀಗ ಕ್ಯಾಪ್ಸಿಕಂ ವಿಷಯಕ್ಕೆ ಬರೋಣ. ಕ್ಯಾಪ್ಸಿಕಂನಲ್ಲಿ ಗಂಡು ಮತ್ತು ಹೆಣ್ಣನ್ನು ಸುಲಭದಲ್ಲಿ ಗುರುತಿಸೋದು ಹೇಗೆ ಎನ್ನೋದನ್ನು thereemabhatia ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ರೀಮಾ ಖುರಾನಾ ಎನ್ನುವವರು ತಿಳಿಸಿದ್ದಾರೆ. ಕ್ಯಾಪ್ಸಿಕಂ ನೋಡಿದಾಗ ನಾಲ್ಕು ಗುಡ್ಡೆಗಳು ಬಂದಿದ್ದರೆ ಅದು ಹೆಣ್ಣು ಮತ್ತು ಮೂರು ಗುಡ್ಡೆಗಳು ಇದ್ದರೆ ಅದು ಪುರುಷ ಎಂದು ಅವರು ತಿಳಿಸಿಕೊಟ್ಟಿದ್ದಾರೆ.
ಹೆಣ್ಣು ಸ್ವೀಟ್
ಇನ್ನು ಅವುಗಳ ಬಳಕೆಯ ಬಗ್ಗೆಯೂ ಹೇಳಿದ್ದಾರೆ. ಅದೇನೆಂದರೆ, ಹೆಣ್ಣು ಕ್ಯಾಪ್ಸಿಕಂ ಸ್ವೀಟ್ ಆಗಿ ಇರುತ್ತದೆ. ಆದ್ದರಿಂದ ಅದನ್ನು ಸಲಾಡ್ನಲ್ಲಿ ಬಳಸಿದರೆ ಟೇಸ್ಟ್ ಆಗಿರುತ್ತದೆ. ಪುರುಷ ಕ್ಯಾಪ್ಸಿಕಂ ಸಾಂಬಾರ್ ಇತ್ಯಾದಿ ಅಡುಗೆಗೆ ಬಳಸಿದರೆ ಚೆನ್ನಾಗಿರುತ್ತದೆ ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ.


