ವಕೀಲರೊಬ್ಬರು ಹಂಚಿಕೊಂಡ 'ಬ್ರಾಹ್ಮಣರು ತಯಾರಿಸಿದ ಹಪ್ಪಳ' ಎಂಬ ಬರಹವಿರುವ ಪ್ಯಾಕೆಟ್‌ನ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಏನಾಗ್ತಿದೆ ನೋಡಿ…

ನಮ್ಮದು ಜಾತ್ಯತೀತ ದೇಶ ಎಂದು ಭಾಷಣ ಮಾಡುವವರು ಹಲವರು. ಆದರೆ ಈ ರೀತಿಯ ಭಾಷಣ ಬೀಗುವವರೇ ಹೆಜ್ಜೆ ಹೆಜ್ಜೆಗೂ ಜಾತಿ ಜಾತಿ ಎಂದೇ ಕಿತ್ತಾಡುತ್ತಲೇ ಇರುವವರು. ಸಮಾನತೆ ಬರಬೇಕು ಎಂದು ಮಾತನಾಡುವಷ್ಟು ಸುಲಭವಲ್ಲ, ಈ ಜಾತಿಯತೆಯಿಂದ ಹೊರಕ್ಕೆ ಬರುವುದು. ಅದರಲ್ಲಿಯೂ, ಒಂದು ಜಾತಿಯ ಮೇಲೆ ಇನ್ನೊಂದು ಜಾತಿಯವರು ವಿಷ ಕಾರುವುದು, ಆ ಜಾತಿ ಹೀಗೆ, ಈ ಜಾತಿ ಹೀಗೆ ಎಂದು ಹೇಳುವುದು, ಜಾತಿಯ ಆಧಾರದ ಮೇಲೆ ಮಣೆ ಹಾಕುವುದು... ಹೀಗೆ ಜಾತಿ ಜಾತಿ ಎನ್ನುವ ಹೋರಾಟ ಇಂದು ನಿನ್ನೆಯ ಮಾತಲ್ಲ."ಕುಲ ಕುಲ ಕುಲವೆಂದು ಹೊಡೆದಾಡದಿರಿ" ಎಂಬುದು ದಾಸಶ್ರೇಷ್ಠ ಕನಕದಾಸರು ಎಷ್ಟೋ ಶತಮಾನಗಳ ಹಿಂದೆಯೇ ಹೇಳಿದ್ದರು. ಆದ್ದರಿಂದ ಜಾತಿಯ ಮಾತು ತಲೆತಲಾಂತರಗಳಿಂದ ಬಂದಿದ್ದರೂ ಅದು ಮಾತ್ರ ಹೋಗುವ ಹಾಗೆ ಕಾಣುವುದಿಲ್ಲ. ಅದರಲ್ಲಿಯೂ ಮುಖ್ಯವಾಗಿ ಇದರ ಬಗ್ಗೆ ಭಾಷಣ ಬೀಗುವ ರಾಜಕಾರಣಿಗಳು ಇದನ್ನು ಹೋಗಲೂ ಬಿಡುವುದಿಲ್ಲ ಎನ್ನಿ.

ವಕೀಲರ ಪೋಸ್ಟ್​ ವೈರಲ್​

ಆದರೆ, ಇದರ ನಡುವೆಯೇ ಇದೀಗ ಕಾರ್ತಿಕ್​ ನಾರಾಯಣ್​ ಬಟ್ಟುಲಾ ಎನ್ನುವ ವಕೀಲರೊಬ್ಬರು ಸೋಷಿಯಲ್​ ಮೀಡಿಯಾದಲ್ಲಿ ಹಾಕಿರುವ ಹಪ್ಪಳದ ಪೋಸ್ಟ್​ ಒಂದು ಭಾರಿ ವೈರಲ್​ ಆಗಿದ್ದು, ಪರ-ವಿರೋಧಗಳ ಚರ್ಚೆ ಹುಟ್ಟುಹಾಕಿದೆ. ಅಷ್ಟಕ್ಕೂ ಅವರು ಹಾಕಿರುವುದು ಏನೆಂದರೆ, ಒಂದು ಹಪ್ಪಳದ ಪ್ಯಾಕೇಟ್​ನಲ್ಲಿ ಬ್ರಾಹ್ಮಣರು ತಯಾರಿಸಿದ ಹಪ್ಪಳ (Happalam prepared by Brahmins) ಎಂದು ಬರೆಯಲಾಗಿದೆ. ಬ್ರಾಹ್ಮಣರು ಎಂದು ಬರೆಯುವ ಅಗತ್ಯವೇನಿತ್ತು, ಇದು ಜಾತೀಯತೆಯನ್ನು ತೋರಿಸುತ್ತದೆ, ತಾವೇ ಶ್ರೇಷ್ಠರು ಎನ್ನುವ ಮನೋಭಾವವನ್ನು ಇದು ತೋರಿಸುತ್ತದೆ. ಜಾತಿಯ ವಿಷ ಬೀಜ ಬಿತ್ತುವ ಕೆಲಸ ಇದು ಎಂದೆಲ್ಲಾ ಈ ಪೋಸ್ಟ್​ ಅನ್ನು ಶೇರ್​ ಮಾಡಿ ನೂರಾರು ಮಂದಿ ಕಮೆಂಟ್​ ಮಾಡಿದ್ದಾರೆ.

ಇದೊಳ್ಳೆ ಕಥೆಯಾಯಿತಲ್ರಿ...?

ಆದರೆ, ಕುತೂಹಲ ಎಂದರೆ, ಈ ಹಪ್ಪಳದ ಮೇಲೆ ಎಲ್ಲಿಯೂ ಇದು ಶ್ರೇಷ್ಠ ವರ್ಗದವರು ತಯಾರಿಸಿದ ಹಪ್ಪಳ ಎಂದು ಉಲ್ಲೇಖವಾಗಿಲ್ಲ. ಆಗಿರುವುದು ಬ್ರಾಹ್ಮಣರಿಂದ ತಯಾರಾಗಿದ್ದು ಎನ್ನುವುದು ಅಷ್ಟೇ. ಆದರೆ, ಬ್ರಾಹ್ಮಣರು ಎಂದಾಕ್ಷಣ, ಅವರು ಶ್ರೇಷ್ಠರು ಎಂದು ನೀವೇ ಉಲ್ಲೇಖಿಸಿ, ಬಾಯಿಗೆ ಬಂದ ಹಾಗೆ ಮಾತನಾಡುವುದು, ಅವರೇ ಶ್ರೇಷ್ಠರು ಎಂದು ನೀವೇ ಅವರನ್ನು ಮೇಲಕ್ಕೆ ಇಡುವುದು ಸರಿಯೇ ಎನ್ನುವುದು ಹಲವರ ಪ್ರಶ್ನೆ! ಅಷ್ಟಕ್ಕೂ ಅಯ್ಯಂಗಾರ್​ ಬೇಕರಿ, ಗೌಡ್ರ ಖಾನಾವಳಿ... ಹೀಗೆ ನೂರಾರು ಕಡೆಗಳಲ್ಲಿ, ನೂರಾರು ಪದಾರ್ಥಗಳ ಮೇಲೆ ಅವರ ಜಾತಿಯ ಹೆಸರು ನಮೂದು ಮಾಡಲಾಗುತ್ತದೆ. ಮುಸ್ಲಿಮರಾದರೆ ಹಲಾಲ್​ ಆಹಾರ ಎಂದು ಬರೆಯುತ್ತಾರೆ. ಆದರೆ ಬ್ರಾಹ್ಮಣರು ಎಂದು ನಮೂದು ಮಾಡಿದ ತಕ್ಷಣ ಅವರು ಶ್ರೇಷ್ಠರು, ಉಳಿದ ಪದಾರ್ಥಗಳಲ್ಲಿ ತಮ್ಮ ಜಾತಿಯನ್ನು ನಮೂದು ಮಾಡಿದವರು ಕನಿಷ್ಠ ಎನ್ನುವುದು ನಿಮ್ಮ ಅನಿಸಿಕೆಯೇ ಎಂದು ಪ್ರಶ್ನಿಸುತ್ತಿದ್ದಾರೆ!

ಬ್ರಾಹ್ಮಣರು ಫೋರ್ಸ್​ ಮಾಡಿದ್ರಾ?

ಒಂದು ವೇಳೆ ನಿಮಗೆ ಬ್ರಾಹ್ಮಣರಿಂದ ತಯಾರಿಸಿರುವ ಪದಾರ್ಥ ಸೇವನೆ ಮಾಡಲು ಇಷ್ಟವಿಲ್ಲದಿದ್ದರೆ, ನಿಮಗೆ ಬೇಕಾದ ಪದಾರ್ಥ ಕೊಂಡು ತಿನ್ನಿ. ಬ್ರಾಹ್ಮಣರೇನು ನಿಮಗೆ ಬಂದು ಫೋರ್ಸ್​ ಮಾಡ್ತಿದ್ದಾರಾ ಎಂದು ಕೆಲವರು ಹೀಗೆ ಪೋಸ್ಟ್​ ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಇದು ವಿಷಕಾರಿ ಸಂಸ್ಕೃತಿಯಾಗಿದೆ. ಒಂದು ಜಾತಿಯನ್ನು ಪದಾರ್ಥಗಳ ಮೇಲೆ ನಮೂದು ಮಾಡಿ ತಾವೇ ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ, ಬ್ರಾಹ್ಮಣ ಎಂದು ಬರೆದಿರುವುದೇ ಈ ಪರಿಯಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಇದರ ಜೊತೆಗೆ ಬ್ರಾಹ್ಮಣರು ಶ್ರೇಷ್ಠರು ಎಂದು ನೀವೆಲ್ಲಾ ಹೇಳ್ತಿರೋದಕ್ಕೆ ಧನ್ಯವಾದ ಸಲ್ಲಿಸಿ, ಈ ಪೋಸ್ಟ್​ ಅನ್ನು ಪಾಸಿಟಿವ್​ ಆಗಿ ಶೇರ್​ ಮಾಡಿಕೊಳ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ!