ದೇಹಕ್ಕೆ ಪೌಷ್ಠಿಕ ಆಹಾರ ಬಹಳ ಮುಖ್ಯ. ಅದರಲ್ಲೂ ಬೆಳೆಯುವ ಕಂದಮ್ಮಗಳಿಗೆ ಬೇಕೇ ಬೇಕು. ಡ್ರೈ ಫ್ರೂಟ್ಸ್ ಉತ್ತಮವಾದ ಪೌಷ್ಠಿಕಾಂಶಗಳನ್ನು ಹೊಂದಿದ್ದು, ಇದು ಮಕ್ಕಳ ಬೆಳವಣಿಗೆಗೆ ಸಹಕಾರಿ. ದೊಡ್ಡವರಿಗಾದರೆ ಹಲ್ಲಿದೆ, ಅಗೆದು ತಿನ್ನುತ್ತಾರೆ. ವಾಲ್ನಟ್, ಪಿಸ್ತಾ, ಅಂಜೂರ, ಬಾದಾಮಿ, ಗೋಡಂಬಿ ಈ ರೀತಿಯ ಗಟ್ಟಿಯಾದ ಪದಾರ್ಥಗಳನ್ನು ಸೇವಿಸುವುದು ಬಹಳ ಕಷ್ಟ. ಹೀಗಿರುವಾಗ ಮಕ್ಕಳಿಗೆ ಈ ರೀತಿಯ ಡ್ರೈ ಫ್ರೂಟ್ಸ್ ಲಡ್ಡುಗಳನ್ನು ಮಾಡಿ ಕೊಡಿ. ಇಷ್ಟ ಪಟ್ಟು ಸೇವಿಸುತ್ತಾರೆ.

ಪ್ರತೀ ದಿನ ಪುಟ್ಟ ಮಕ್ಕಳಿಂದ ದೊಡ್ಡವರ ವರೆಗೂ ಕೈ ತುಂಬಾ ಡ್ರೈ ಫ್ರೂಟ್ಸ್ ಅನ್ನು ತಿನ್ನಲು ವೈದ್ಯರು ಹೇಳುತ್ತಾರೆ. ಅದರಲ್ಲೂ ಬೆಳೆಯುವ ಮಕ್ಕಳಿಗೆ ಇವು ಬಹಳ ಮುಖ್ಯ. ಏಕೆಂದರೆ ಇದರಲ್ಲಿ ಕೊಬ್ಬು, ಖನಿಜಾಂಶ, ವಿಟಮಿನ್, ಪ್ರೋಟೀನ್ ಅಂಶಗಳು ಹೇರಳವಾಗಿವೆ. ಇವು ಮಕ್ಕಳ ಬೆಳವಣಿಗೆಗೆ ಸಹಕರಿಸುತ್ತವೆ. ಆದರೆ ಡ್ರೈ ಫ್ರೂಟ್ಸ್ ಅನ್ನು ಒಂದು ಬೌಲ್‌ಗೆ ಹಾಕಿಕೊಟ್ಟರೆ ಬೇಕಾದ್ದು ತಿಂದು ಬೇಡವಾದದ್ದು ಹಾಗೆ ಬಿಟ್ಟುಬಿಡುತ್ತಾರೆ ಅಥವಾ ತಿನ್ನುವುದೇ ಇಲ್ಲ. ಈ ರೀತಿಯ ಮಕ್ಕಳಿಗೆ ಸಿಂಪಲ್ ಆಗಿ ಲಡ್ಡುಗಳನ್ನಾಗಿ ಮಾಡಿಕೊಟ್ಟರೆ ಖುಷಿಯಿಂದ ಸೇವಿಸುತ್ತಾರೆ. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದನ್ನು ಕೊಡಬಹುದು. ಅಲ್ಲದೆ ಇವುಗಳಲ್ಲಿ ಉಷ್ಣತೆ ಹೆಚ್ಚಿರುವುದರಿಂದ ವಯಸ್ಸಿಗೆ ಅನುಗುಣವಾಗಿ ಲಡ್ಡುಗಳು ತಯಾರಿಸಿ ಕೊಟ್ಟರೆ ಒಳಿತು. ಸಕ್ಕರೆ ಇಲ್ಲದೆಯೂ ಮಕ್ಕಳಿಗೆ ಇಷ್ಟವಾಗುವಂತೆ ಲಡ್ಡುಗಳನ್ನು ಮಾಡಬಹುದು. 

ಡ್ರೈ ಫ್ರೂಟ್ಸ್ ಲಡ್ಡು ಪ್ರಯೋಜನಗಳು
ಮಕ್ಕಳು ಸಾಮಾನ್ಯವಾಗಿ ಡ್ರೈ ಫ್ರೂಟ್ಸ್ ತಿನ್ನುವುದನ್ನು ನಿರಾಕರಿಸುವುದರಿಂದ ಲಡ್ಡುಗಳಾಗಿ ಒಂದು ಸ್ನ್ಯಾಕ್ಸ್ ರೀತಿ ಅವರಿಗೆ ಕೊಡಬಹುದು. ಸಾಮಾನ್ಯವಾಗಿ ಮಕ್ಕಳು ಸ್ವೀಟ್ ಅನ್ನು ಇಷ್ಟ ಪಡುತ್ತಾರೆ. ಹಾಗಾಗಿ ಉಂಡೆ, ಬರ್ಫಿ, ಸ್ಟಫ್ ಸ್ವೀಟ್ಸ್ ಆಗಿಯೂ ಕೊಡಬಹುದು. ಇದರಲ್ಲಿ ಹೇರಳವಾದ ಕಬ್ಬಿಣಾಂಶ (Iron), ಪ್ರೋಟೀನ್, ಕೊಬ್ಬು ಮತ್ತು ವಿಟಮಿನ್‌ಗಳಿವೆ. ಇವೆಲ್ಲವೂ ನೈಸರ್ಗಿಕವಾದ ಪದಾರ್ಥಗಳಾಗಿವೆ (Natural Food). 

ವಿವಿಧ ರೀತಿಯ ಲಡ್ಡುಗಳು
ಗೋಧಿ ಖರ್ಜೂರ ಲಡ್ಡು
ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು, ಖರ್ಜೂರ, ತುಪ್ಪ, ಗೋಡಂಬಿ, ಬಾದಾಮಿ, ಪಿಸ್ತಾ, ಏಲಕ್ಕಿ ಪುಡಿ, ಕೆಂಪು ಸಕ್ಕರೆ.
ಮಾಡುವ ವಿಧಾನ: ಎರಡು ಲೋಟ ಗೋಧಿ ಹಿಟ್ಟನ್ನು ಚೆನ್ನಾಗಿ ಹುರಿದುಕೊಳ್ಳಿ. ಹಸಿ ವಾಸನೆ ಹೋಗಿ ಚೂರು ಕೆಂಪಗಾಗಬೇಕು. ನಂತರ ಇದಕ್ಕೆ ಕಾಲು ಕಪ್ ತುಪ್ಪು ಹಾಕಿ 10 ನಿಮಿಷ ಹುರಿದುಕೊಂಡು ಸ್ಟೌ ಆಫ್ ಮಾಡಿ. ಮತ್ತೊಂದು ಪ್ಯಾನ್‌ನಲ್ಲಿ ಸ್ವಲ್ಪ ತುಪ್ಪ, ಸಣ್ಣಗೆ ಹೆಚ್ಚಿಕೊಂಡ ಬಾದಾಮಿ (Almond), ಗೋಡಂಬಿ (Cashew Nuts), ಪಿಸ್ತಾವನ್ನು (Pista) ಗೋಲ್ಡನ್ ಬ್ರೌನ್ (Golden Brown) ಬರುವವರೆಗೂ ಹುರಿದುಕೊಳ್ಳಿ. ಒಂದು ಜಾರ್‌ಗೆ ಬೀಜ ತೆಗೆದ ಖರ್ಜೂರವನ್ನು ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಖರ್ಜೂರವನ್ನು ಒಂದು ಪ್ಯಾನ್‌ಗೆ ಹಾಕಿ ಬಿಸಿ ಮಾಡಿ. ಸ್ವಲ್ಪ ಮೆತ್ತಗಾಗುತ್ತೆ. ಖರ್ಜೂರ, ಹುರಿದುಕೊಂಡ ಡ್ರೈ ಫ್ರೂಟ್ಸ್, ಏಲಕ್ಕಿ ಹಾಗೂ ಸಕ್ಕರೆ ಪುಡಿ ಮಿಶ್ರಣವನ್ನು ಹುರಿದುಕೊಂಡ ಗೋಧಿ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲಸಿ ಉಂಡೆ ಕಟ್ಟಿದರೆ ಗೋಧಿ ಖರ್ಜೂರದ ಉಂಡೆ ರೆಡಿ. ತುಪ್ಪ ಹಾಕಿದಷ್ಟು ಉಂಡೆ ರುಚಿಯಾಗಿರುತ್ತದೆ ಹಾಗೂ ಉಂಡೆ ಕಟ್ಟಲು ಚೆನ್ನಾಗಿ ಬರುತ್ತದೆ.

ಹಬ್ಬದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗುವ ಭಯವೇ? ಇಲ್ಲಿದೆ ಮನೆಯಲ್ಲೇ ಮಾಡಬಹುದಾದ ಸ್ವಿಟ್ಸ್!

ಖರ್ಜೂರ ಲಡ್ಡು
ಬೇಕಾಗುವ ಸಾಮಗ್ರಿಗಳು:
ಖರ್ಜೂರ, ವಾಲನಟ್, ಪಿಸ್ತಾ, ಗೋಡಂಬಿ, ಬಾದಾಮಿ, ದ್ರಾಕ್ಷಿ, ತುಪ್ಪ, ಏಲಕ್ಕಿ, ಸಕ್ಕರೆ.
ಮಾಡುವ ವಿಧಾನ: ಒಂದು ಪ್ಯಾನ್‌ಗೆ ಪಿಸ್ತಾ, ಗೋಡಂಬಿ, ಬಾದಾಮಿ, ವಾಲನಟ್ ಎಲ್ಲವನ್ನೂ ತುಪ್ಪ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಹುರಿದ ಎಲ್ಲಾ ಡ್ರೆöÊ ಫ್ರೂಟ್ಸ್ ಅನ್ನು ಸಣ್ಣಗೆ ರುಬ್ಬಿಕೊಳ್ಳಿ. ಒಂದು ಜಾರ್‌ಗೆ ಏಲಕ್ಕಿ, ಸಕ್ಕರೆ ಹಾಕಿ ಪುಡಿ ಮಾಡಿಕೊಳ್ಳಿ. ಅದೇ ಜಾರ್‌ಗೆ ಬೀಜ ತೆಗೆದ ಖರ್ಜೂರವನ್ನು ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಖರ್ಜೂರವನ್ನು ಒಂದು ಪ್ಯಾನ್‌ಗೆ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿಕೊಂಡ ಎಲ್ಲಾ ಮಿಶ್ರಣ, ತುಪ್ಪ, ದ್ರಾಕ್ಷಿ ಹಾಕಿ ಕಲಸಿ. ಈ ಮಿಶ್ರಣವು ಬಿಸಿ ಇದ್ದಾಗಲೇ ಉಂಡೆ ಕಟ್ಟಿದರೆ ಖರ್ಜೂರದ ಉಂಡೆ ರೆಡಿ.

ಎಳ್ಳಿನ ಲಡ್ಡು
ಬೇಕಾಗುವ ಸಾಮಗ್ರಿಗಳು:
ಬಿಳಿ ಎಳ್ಳು, ಬೆಲ್ಲ, ತುಪ್ಪ, ಏಲಕ್ಕಿ.
ಮಾಡುವ ವಿಧಾನ: ಚೆನ್ನಾಗಿ ತೊಳೆದ ಬಿಳಿ ಎಳ್ಳನ್ನು ಪ್ಯಾನ್‌ಗೆ ಹಾಕಿ ಚಟ ಚಟ ಎನ್ನುವವರೆಗೂ ಹುರಿಯಿರಿ. ತಣ್ಣಗಾದ ಮೇಲೆ ಜಾರ್‌ಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. ಮತ್ತೊಂದು ಪ್ಯಾನ್‌ಗೆ ಬೆಲ್ಲದ ಎಳೆ ಪಾಕ ಮಾಡಿಕೊಳ್ಳಿ. ಪಾಕ ಬಂದ ನಂತರ ತುಪ್ಪ, ಏಲಕ್ಕಿ ಪುಡಿ, ರುಬ್ಬಿಕೊಂಡ ಎಳ್ಳಿನ ಪುಡಿ ಹಾಕಿ ಕಲಸಿಕೊಳ್ಳಿ. ಬಿಸಿ ಇರುವಾಗಲೇ ಉಂಡೆ ಕಟ್ಟಿದರೆ ಎಳ್ಳಿನ ಉಂಡೆ ಸವಿಯಲು ಸಿದ್ಧ.

ಹಬ್ಬದ ಕಳೆ ಹೆಚ್ಚಿಸುವ ವಿವಿಧ ಬಗೆಯ ಹೋಳಿಗೆ ಇಲ್ಲಿದೆ!