Asianet Suvarna News Asianet Suvarna News

ಹಬ್ಬದ ಕಳೆ ಹೆಚ್ಚಿಸುವ ವಿವಿಧ ಬಗೆಯ ಹೋಳಿಗೆ ಇಲ್ಲಿದೆ!

ಹೋಳಿಗೆಯನ್ನು ಶುಭದ ಸಂಕೇತ ಎಂದೇ ನಮ್ಮ ಹಿರಿಯರು ಪರಿಗಣಿಸಿದ್ದಾರೆ. ಯಾವುದೇ ಹಬ್ಬವಿರಲಿ, ಮದುವೆ ಇರಲಿ ಅಲ್ಲಿ ಹೋಳಿಗೆ ಅಥವಾ ಒಬ್ಬಟ್ಟು ಇರಲೇ ಬೇಕು. ಈ ಗಣೇಶ ಹಬ್ಬಕ್ಕೆ ನೀವೂ ಹೋಳಿಗೆ ಮಾಡುತ್ತಿದ್ದರೆ ಇಲ್ಲಿದೆ ಕೆಲ ಸ್ಪಷಲ್ ಹೋಳಿಗೆ ರೆಸಿಪಿಗಳು. ಬಾಯಿಗೆ ರುಚಿ ನೀಡುವುದರ ಜೊತೆಗೆ ಮನಸ್ಸಿಗೆ ಸಂತೋಷ ಹೆಚ್ಚಿಸುತ್ತದೆ. ಅಲ್ಲದೆ ಹಬ್ಬದ ಕಳೆ ಇನ್ನಷ್ಟು ಹೆಚ್ಚಿಸುತ್ತದೆ. ಟ್ರೈ ಮಾಡಿ ನೋಡಿ.

Unique Puran Poli Or Holige recipes for Gowri Ganesh Festival
Author
First Published Aug 29, 2022, 2:49 PM IST

ಹೋಳಿಗೆ ಎಂದಾಕ್ಷಣ ಎಲ್ಲರ ಕಣ್ಣು, ಮನಸ್ಸು ಅರಳಿ ಬಿಡುತ್ತದೆ. ಏಕೆಂದರೆ ತಿಂದಾಗ ಅದರ ಸಿಹಿ ಬಾಯಿ ತುಂಬಾ ಹರಡಿದರೆ ಸಾಕು ಮನಸ್ಸು ಖುಷಿಯಲ್ಲಿ ತೇಲಾಡುತ್ತದೆ. ಅದರೊಳಗೆ ತುಂಬಿದ ಊರ್ಣವು ಪ್ರತೀ ತುತ್ತಿಗೂ ಮತ್ತೊಂದು ತಿನ್ನು ಎಂದು ಪ್ರಚೋದಿಸುವುದು ಸುಳ್ಳಲ್ಲ. ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಕಂಪಲ್ಸರಿ ಪದಾರ್ಥಗಳ ಸಾಲಿನಲ್ಲಿರುವ ಹೋಳಿಗೆ ಒಂದು ವಾರಗಳ ಕಾಲ ಇಡಬಹುದಾದ ಪದಾರ್ಥ. ಹೀಗಿರುವಾಗ ನಾನಾ ಬಗೆಯ ಹೋಳಿಗೆಯ ಬಗ್ಗೆ ನಾವು ನಿಮಗೆ ತಿಳಿಸುತ್ತಿದ್ದೇವೆ. ಈ ಗಣೇಶನ ಹಬ್ಬಕ್ಕೆ ನಿಮ್ಮನೆಯಲ್ಲೂ ಹೋಳಿಗೆ ಮಾಡುತ್ತಿದ್ದರೆ ಇಲ್ಲಿದೆ ಕೆಲ ಸ್ಪೆಷಲ್ ಹೋಳಿಗೆ ರೆಸಿಪಿ.

ಬಾದಾಮಿ (Almond) ಹೋಳಿಗೆ 
ಬಾದಾಮಿ ಹೋಳಿಗೆ ಇದು ಸಾಮಾನ್ಯವಾಗಿ ಯುಗಾದಿ ಸಂದರ್ಭದಲ್ಲಿ ಹೆಚ್ಚಾಗಿ ಮಾಡಲಾಗುತ್ತದೆ. ಇದು ಕುಟುಂಬದಲ್ಲಿ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ತಂದುಕೊಡುತ್ತದೆ ಎಂಬ ನಂಬಿಕೆ ಇದೆ.
ಬೇಕಾಗುವ ಸಾಮಗ್ರಿಗಳು: ಬಾದಾಮಿ, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ, ಕೇಸರಿ, ಮೈದಾ, ಚಿರೋಟಿ ರವೆ, ಅರಿಶಿಣ, ನೀರು, ಉಪ್ಪು.
ಮಾಡುವ ವಿಧಾನ: ಮೊದಲು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನಂತರ ಒಂದು ಬೌಲ್‌ನಲ್ಲಿ ಮೈದಾ, ಚಿರೋಟಿ ರವೆ, ಅರಿಶಿಣ, ಚಿಟಿಕೆ ಉಪ್ಪು ಹಾಗೂ ನೀರು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ನೀರಾಗಿಯೇ ಕಲಸಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನೆನೆಯಲು ಬಿಡಿ. ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಜಾರ್‌ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ತೆಂಗಿನ ತುರಿ, ಏಲಕ್ಕಿ, ಕೇಸರಿ ಹಾಕಿ ರುಬ್ಬಿಕೊಳ್ಳಿ. ನೀರು ಹಾಕದೇ ಇದನ್ನು ಪೌಡರ್ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ ಬೆಲ್ಲ ಹಾಕಿ ಮತ್ತೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ಶಿಫ್ಟ್ ಮಾಡಿ ಉಂಡೆ ಕಟ್ಟುಕೊಳ್ಳಿ. 
ಮೊದಲೇ ಕಲಸಿಟ್ಟುಕೊಂಡ ಹಿಟ್ಟನ್ನು ಒಂದು ಉಂಡೆಯಷ್ಟು ತೆಗೆದುಕೊಂಡು ಅದಕ್ಕೆ ಬಾದಾಮಿ ಊರಣವನ್ನು ಸ್ಟಫ್ ಮಾಡಿ ಲಟ್ಟಿಸಿ ತುಪ್ಪ ಹಾಕಿ ಬೇಯಿಸಿದರೆ ಬಾದಾಮಿ ಹೋಳಿಗೆ ರೆಡಿ.

ಗಣೇಶ ಚತುರ್ಥಿಗೆ ಮನೆಯಲ್ಲೇ ರುಚಿಕರವಾದ ಲಡ್ಡು ಮಾಡಿ

ಪೈನಾಪಲ್ (Peneapple) ಹೋಳಿಗೆ
ಬೇಕಾದ ಸಾಮಾಗ್ರಿಗಳು:
ಪೈನಾಪಲ್, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ, ಮೈದಾ, ಚಿರೋಟಿ ರವೆ, ನೀರು, ಉಪ್ಪು.
ಮಾಡುವ ವಿಧಾನ: ಮೊದಲು ಒಂದು ಬೌಲ್‌ನಲ್ಲಿ ಮೈದಾ, ಚಿರೋಟಿ ರವೆ, ಚಿಟಿಕೆ ಉಪ್ಪು ನೀರು ಹಾಕಿ ಕಲಸಿ ಕಣಕ ರೆಡಿ ಮಾಡಿಕೊಳ್ಳಬೇಕು. ಇದಕ್ಕೆ ಮೇಲೆ ಸ್ವಲ್ಪ ಎಣ್ಣೆ ಹಾಕಿ ನೆನೆಯಲು ಬಿಡಬೇಕು. ಮತ್ತೊಂದು ಪ್ಯಾನ್‌ನಲ್ಲಿ ಸಣ್ಣಗೆ ಹೆಚ್ಚಿಕೊಂಡ ಪೈನಾಪಲ್ ಅನ್ನು ನೀರು ಹಾಕಿ ಬೇಯಿಸಿಕೊಳ್ಳಬೇಕು. ಬೆಂದ ನಂತರ ಒಂದು ಜಾರ್‌ಗೆ ಹಾಕಿ ರುಬ್ಬಿಕೊಂಡು ಬೌಲ್‌ಗೆ ಶಿಫ್ಟ್ ಮಾಡಿಕೊಳ್ಳಬೇಕು. ಅದೇ ಜಾರ್ ತೆಂಗಿನ ತುರಿ, ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಎರಡೂ ಮಿಶ್ರಣವನ್ನು ಸ್ಟೌಮೇಲಿಟ್ಟು ಬೇಯಿಸಿಕೊಳ್ಳಬೇಕು. ಇದಕ್ಕೆ ನೀರು ನೀರು ಮಾಡಿಕೊಂಡ ಬೆಲ್ಲ ಹಾಕಿ ಕುದಿಯುವವರೆಗೂ ಕೈಯ್ಯಾಡಬೇಕು. ಈ ಹಂತದಲ್ಲಿ ಹುರಿದುಕೊಂಡ ಚಿರೋಟಿ ರವೆ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನೀರಿನಾಂಶ ಹೋಗಿ ಈ ಮಿಶ್ರಣ ಊರ್ಣದ ರೂಪಕ್ಕೆ ತಿರುಗುವವರೆಗೂ ೫-೬ ಚಮಚ ತುಪ್ಪ ಹಾಕುತ್ತಾ ಚೆನ್ನಾಗಿ ಕೈಯ್ಯಾಡಬೇಕು. ಊರ್ಣ ತಯಾರಾದ ನಂತರ ಸಣ್ಣ ಉಂಡೆ ಕಟ್ಟಿ ಕಣಕವನ್ನು ತೆಗೆದುಕೊಂಡು ಸ್ಟಫ್ ಮಾಡಿ ಲಟ್ಟಿಸಿ ಬೇಯಿಸಿದರೆ ಪೈನಾಪಲ್ ಹೋಳಿಗೆ ರೆಡಿ.

ಮಾವಿನ (Mango) ಹೋಳಿಗೆ
ಬೇಕಾಗುವ ಸಾಮಗ್ರಿಗಳು:
ಮಾವಿನ ಹಣ್ಣು, ಬೆಲ್ಲ, ಏಲಕ್ಕಿ, ಮೈದಾ, ಚಿರೋಟಿ ರವೆ, ನೀರು, ಉಪ್ಪು.
ಮಾಡುವ ವಿಧಾನ: ಮೊದಲು ಮೈದಾ, ಚಿರೋಟಿ ರವೆ, ಉಪ್ಪು, ನೀರು ಹಾಕಿ ಕಲಸಿಕೊಂಡು, ಎಣ್ಣೆ ಹಾಕಿ ಕಣಕ ರೆಡಿ ಮಾಡಿಕೊಳ್ಳಿ. ಇದನ್ನು ಒಂದರ್ಧ ಗಂಟೆಗಳ ಕಾಲ  ನೆನೆಯಲು ಬಿಡಬೇಕು. ನಂತರ ಒಂದು ಪ್ಯಾನ್‌ಗೆ ನೀರು, ಚಿಟಕೆ ಉಪ್ಪು ಹಾಕಿ ಕುದಿಯಲು ಬಿಡಿ. ನಂತರ ಇದಕ್ಕೆ ಹುರಿದಿಟ್ಟುಕೊಂಡ ಚಿರೋಟಿ ರವೆ ಹಾಕಿ ಚೆನ್ನಾಗಿ ಕಲಸಿದ ನಂತರ ತುಪ್ಪ, ರುಬ್ಬಿದ ಮಾವಿನ ಹಣ್ಣು, ಏಲಕ್ಕಿ, ಬೆಲ್ಲ ಹಾಕಿ ಚೆನ್ನಾಗಿ ಕೈಯ್ಯಾಡಿ. ಊರ್ಣದ ರೀತಿ ಗಟ್ಟಿಯಾದ ನಂತರ ಸ್ಟೌ ಆಫ್ ಮಾಡಿ ಉಂಡೆ ಕಟ್ಟಿಕೊಳ್ಳಿ. ನೆನೆಸಿಟ್ಟ ಕಣಕವನ್ನು ಉಂಡೆಯಾಗಿ ತೆಗೆದುಕೊಂಡು ಅದಕ್ಕೆ ಊರ್ಣವನ್ನು ಸ್ಟಫ್ ಮಾಡಿ ಲಟ್ಟಿಸಿ ಬೇಯಿಸಿದರೆ ಮಾವಿನ ಹಣ್ಣಿನ ಹೋಳಿಗೆ ರೆಡಿ.

ಗಣೇಶ ಹಬ್ಬಕ್ಕೆ ಈ ಬಾರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಮೋದಕ ತಯಾರಿಸಿ

ಕ್ಯಾರೆಟ್ (Carrot) ಹೋಳಿಗೆ
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ, ಮೈದಾ, ಚಿರೋಟಿ ರವೆ, ನೀರು, ಉಪ್ಪು.
ಮಾಡುವ ವಿಧಾನ: ಮೊದಲು ಮೈದಾ, ಚಿರೋಟಿ ರವೆ,  ಉಪ್ಪು, ನೀರು, ಎಣ್ಣೆ ಹಾಕಿ ಕಣಕವನ್ನು ತಯಾರಿಸಿಕೊಳ್ಳಿ. ಮತ್ತೊಂದು ಪ್ಯಾನ್‌ನಲ್ಲಿ ಬೇಯಿಸಿ ರುಬ್ಬಿಕೊಂಡ ಕ್ಯಾರೆಟ್, ರುಬ್ಬಿದ ತೆಂಗಿನಕಾಯಿ, ಬೆಲ್ಲ, ಏಲಕ್ಕಿ ಹಾಕಿಕೊಂಡು ಊರ್ಣ ತಯಾರಿಸಿಕೊಳ್ಳಿ. ಕಣಕದ ಉಂಡೆ ತೆಗೆದುಕೊಂಡು, ಊರ್ಣದ ಉಂಡೆಯನ್ನು ಸ್ಟಫ್ ಮಾಡಿ ಲಟ್ಟಿಸಿಕೊಂಡು ಬೇಯಿಸಿದರೆ ಕ್ಯಾರೆಟ್ ಹೋಳಿಗೆ ರೆಡಿ.

ಖರ್ಜೂರ (Dates) ಹೋಳಿಗೆ
ಬೇಕಾಗುವ ಸಾಮಗ್ರಿಗಳು:
ಖರ್ಜೂರ, ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ, ಮೈದಾ, ಚಿರೋಟಿ ರವೆ, ನೀರು, ಉಪ್ಪು.
ಮಾಡುವ ವಿಧಾನ: ಮೈದಾ, ಚಿರೋಟಿ ರವೆ, ಉಪ್ಪು, ನೀರು ಹಾಕಿ ಕಣಕ ತಯಾರಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್‌ಗೆ ಬೀಜ ತೆಗೆದಿಟ್ಟುಕೊಂಡ ಖರ್ಜೂರ ಹಾಕಿ ಸ್ವಲ್ಪ ರುಬ್ಬಿಕೊಳ್ಳಿ. ಇದಕ್ಕೆ ತೆಂಗಿನಕಾಯಿ ತುರಿ, ಏಲಕ್ಕಿ, ಬೆಲ್ಲ ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪ್ಯಾನ್‌ಗೆ ಹಾಕಿ ಬಿಸಿ ಮಾಡಿಕೊಳ್ಳಿ. ಕಣಕವನ್ನು ಉಂಡೆ ಮಾಡಿಕೊಂಡು ಅದಕ್ಕೆ ಊರ್ಣವನ್ನು ಸ್ಟಫ್ ಮಾಡಿ ಲಟ್ಟಿಸಿ, ಬೇಯಿಸಿದರೆ ಖರ್ಜೂರದ ಹೋಳಿಗೆ ರೆಡಿ.

Follow Us:
Download App:
  • android
  • ios