ಬಾದಾಮಿಯಲ್ಲಿ ಬಗೆಬಗೆಯ ಪೋಷಕಸತ್ವಗಳಿವೆ. ಅದೇ ಕಾರಣಕ್ಕೆ ಉತ್ತಮ ಡಯಟ್‌ನಲ್ಲಿ ಯಾವಾಗಲೂ ಬಾದಾಮಿಯ ಹೆಸರು ಇದ್ದೇ ಇರುತ್ತದೆ. ಸೂಪರ್‌ಫುಡ್ ಲಿಸ್ಟ್‌ನಲ್ಲಿ ಕೂಡಾ ಕ್ರಂಚೀ ಬಾದಾಮಿ ಇರಲೇಬೇಕು. ಪ್ರೋಟೀನ್, ಒಮೆಗಾ 3 ಫ್ಯಾಟಿ ಆ್ಯಸಿಡ್ಸ್, ಫೈಬರ್‌ನಂತ ಉತ್ತಮ ಸತ್ವಗಳು ಹೇರಳವಾಗಿರುವ ಬಾದಾಮಿಯನ್ನು ನೆನೆಸಿಟ್ಟು ಮಕ್ಕಳಿಗೆ ತಿನ್ನಿಸುವುದನ್ನು ಬಹುತೇಕ ಪೋಷಕರು ಮಾಡುತ್ತಾರೆ. ಈ ಸತ್ವಗಳು ಹೃದಯ ಹಾಗೂ ಮೆದುಳಿನ ಆರೋಗ್ಯ ಹೆಚ್ಚಿಸುವ ಜೊತೆಗೆ, ಡಯಾಬಿಟಿಕ್ ರೋಗಿಗಳಿಗೂ ಉತ್ತಮ ಆಹಾರ. 

ಹಾಗಾದರೆ, ಬಾದಾಮಿಯನ್ನು ಹೆಚ್ಚು ಸೇವಿಸಲು ಬಾದಾಮಿಯಿಂದ ಹೆಚ್ಚು ಹೆಚ್ಚು ರುಚಿಯಾದ ಆಹಾರಗಳನ್ನು ತಯಾರಿಸಿ. ಅಂಥ ಕೆಲ ರೆಸಿಪಿಗಳನ್ನು ಇಲ್ಲಿ ಕೊಡಲಾಗಿದೆ. ಟ್ರೈ ಮಾಡಿ. 

ನಿಮ್ಮ ಬ್ಲಡ್‌ ಗ್ರೂಪ್‌ಗೆ ತಕ್ಕ ಆಹಾರ ಯಾವುದು ನಿಮಗೆ ಗೊತ್ತಾ?

1. ಬಾದಾಮಿ ಹಾಗೂ ಪಾಲಕ್ ಸ್ಮೂತಿ
ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಸ್ಮೂತಿ ಬೆಸ್ಟ್ ಎಂದು ನಿಮಗೆ ತಿಳಿದಿರಬಹುದು. ಮಾಡಲೂ ಸುಲಭ, ರುಚಿಯೂ ಹೆಚ್ಚು, ಆರೋಗ್ಯಕಾರಿಯೂ, ಜೊತೆಗೆ ಫಟಾಫಟ್ ತಿಂದು ಮುಗಿಸಬಹುದು. ಹಾಗಿದ್ದರೆ ಮುಂದಿನ ಬಾರಿ ಬ್ರೇಕ್‌ಫಾಸ್ಟ್‌ಗೆ ಬಾದಾಮಿ ಮತ್ತು ಪಾಲಕ್ ಸ್ಮೂತಿ ಮಾಡಿ ನೋಡಿ. ಒಂದಿಷ್ಟು ನೆನೆಸಿದ ಬಾದಾಮಿ, ಮುಷ್ಠಿಯಷ್ಟು ಪಾಲಕ್ ಸೊಪ್ಪು, ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸನ್ನು ಸೇರಿಸಿ ಸ್ವಲ್ಪ ಹಾಲು ಹಾಕಿ. ಮಿಕ್ಸಿಯಲ್ಲಿ ನುಣ್ಣಗೆ ಆದರೆ ದಪ್ಪಗೆ ರುಬ್ಬಿಕೊಳ್ಳಿ. 
ದೊಡ್ಡ ಗ್ಲಾಸ್‌ನಲ್ಲಿ ಕುಡಿಯಿರಿ. 

2. ಬಾದಾಮಿ ಹಾಗೂ ಬ್ರೊಕೋಲಿ ಸೂಪ್
ಎರಡು ಸೂಪರ್‌ಫುಡ್‌ಗಳ ಅತ್ಯುತ್ತಮ ಅಂಶಗಳನ್ನು ನಮ್ಮದಾಗಿಸಿಕೊಳ್ಳುವುದು ಹೀಗೆ. ಫೈಬರ್ ಹಾಗೂ ಪ್ರೋಟೀನ್‌ನಿಂದ ತುಂಬಿದ ಈ ಶ್ರೀಮಂತ ಖಾದ್ಯವು ನಿಮ್ಮ ಮಧ್ಯಾಹ್ನದ ಊಟವನ್ನು ವಿಶೇಷವಾಗಿಸಬಲ್ಲದು. ಬಾದಾಮಿ, ಬ್ರೋಕೋಲಿ ಹಾಗೂ ಕಾಳುಮೆಣಸು ಬಳಸಿ ರುಚಿಯಾದ ಸೂಪ್ ತಯಾರಿಸಿ. 

3. ಆಲ್ಮಂಡ್ ಪರ್ಲ್ಸ್
ಟೋಸ್ಟೆಡ್ ಓಟ್ಸ್, ಸಾಸಿವೆ, ಜೀರಿಗೆ, ಅಜ್ವಾನ್‌ಗಳನ್ನು ಕಾರ್ನ್ ಫ್ಲೇಕ್ಸ್ ಹಾಗೂ ಬ್ಲೂಬೆರಿ ಜೊತೆ ಸೇರಿಸಿ ಅದಕ್ಕೆ ಚೆನ್ನಾಗಿ ಹುರಿದ ಬಾದಾಮಿಯನ್ನು ಚೆನ್ನಾಗಿ ಬೆರೆಸಿ. ಮೇಲಿನಿಂದ ನಿಂಬೆಯ ಹುಳಿ ಸೇರಿಸಿ. ಸಂಜೆಯ ಸ್ನ್ಯಾಕ್ಸ್‌ಗೆ ಆಲ್ಮಂಡ್ ಪರ್ಲ್ಸ್ ಹೇಳಿ ಮಾಡಿಸಿದ್ದು. 

ಯೋಗ್ಯ ಆಹಾರದಿಂದ ಹೊಳೆಯುವ ಕಣ್ಣುಗಳ ಆರೋಗ್ಯ!

4. ಬಾದಾಮಿ, ಗೆಣಸು ಹಾಗೂ ದಾಳಿಂಬೆ ಚಾಟ್
ಹಣ್ಣುಗಳು ನಟ್ಸ್ ಹಾಗೂ ತರಕಾರಿಯ ಕಾಂಬಿನೇಶನ್ ಯಾರಿಗೆ ತಾನೇ ಇಷ್ಟವಾಗದು? ದಾಳಿಂಬೆ ಕಾಳುಗಳು, ಹುರಿದ ಬಾದಾಮಿ, ಗೆಣಸಿನ ಜೊತೆಗೆ ಚಾಟ್ ಮಸಾಲಾ, ಮೆಣಸು, ಮಿಂಟ್ ಚಟ್ನಿ, ಟೊಮ್ಯಾಟೋ ಹಾಗೂ ಈರುಳ್ಳಿ ಸೇರಿಸಿ ಸವಿದು ನೋಡಿ. 

5. ಪರ್ಲ್ ಬಾರ್ಲಿ, ದಾಳಿಂಬೆ ಹಾಗೂ ಬಾದಾಮಿ ಸಲಾಡ್
ಹೈ ಫೈಬರ್ ಹೊಂದಿರುವ ಬಾರ್ಲಿಯನ್ನು ಬಳಸಿ ಸಲಾಡ್ ಮಾಡಿದರೆ ಊಟದಷ್ಟೇ ಸೊಗಸಾಗಿ ಹೊಟ್ಟೆ ತುಂಬುತ್ತದೆ. ಬೇಯಿಸಿದ ಬಾರ್ಲಿಗೆ ದಾಳಿಂಬೆ, ಬಾದಾಮಿ ಜೊತೆಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ಸೇವಿಸಿದರೆ ಉತ್ತಮ ಬ್ರೇಕ್‌ಫಾಸ್ಟ್ ಆಗಬಲ್ಲದು. 

6. ಡೇಟ್ಸ್ ಆಲ್ಮಂಡ್ ಸ್ಮೂತಿ
ಕರ್ಜೂರ, ಬಾದಾಮಿ, ಬಾಳೆಹಣ್ಣು ಹಾಗೂ ಕೋಕೋ ಪೌಡರ್ ಹಾಕಿ ತಯಾರಿಸುವ ಸ್ಮೂತಿ ರುಚಿಯಷ್ಟೇ ಅಲ್ಲ, ಹೊಟ್ಟೆ ತುಂಬಿಸುತ್ತದೆ ಕೂಡಾ. ಜೊತೆಗೆ, ಮಕ್ಕಳಂತೂ ಇಷ್ಟ ಪಟ್ಟು ಸೇವಿಸುವ ಪೌಷ್ಟಿಕಾಂಶಯುಕ್ತ ಆಹಾರವಿದು.