ನಮಗೆ ಜಗದ ಸೌಂದರ್ಯವನ್ನೆಲ್ಲ ನೋಡುವ ಅವಕಾಶ ಮಾಡಿಕೊಡೋ ಕಣ್ಣುಗಳು, ದೇಹದ ಸೌಂದರ್ಯ ಹೆಚ್ಚಿಸುವಲ್ಲಿ ಕೂಡಾ ಪ್ರಮುಖ ಪಾತ್ರ ಹೊಂದಿವೆ. ಸುಂದರವಾದ, ಆರೋಗ್ಯವಂತ ಕಣ್ಣುಗಳಿದ್ದರೆ ಅವಕ್ಕೆ ಎಂಥವರನ್ನೂ ಸೆಳೆವ ಶಕ್ತಿ ಇರುತ್ತದೆ. 

ಹಿಂದೆಲ್ಲ 40 ದಾಟಿದ ನಂತರ ಕನ್ನಡಕ ಬರುತ್ತಿತ್ತು. ಅದಕ್ಕೇ ಆಗ ಇದನ್ನು ಚಾಳೀಸ್ ಎನ್ನಲಾಗುತ್ತಿತ್ತು. ಈಗ ಹಾಗಲ್ಲ, ಇನ್ನೂ ಎಲ್‌ಕೆಜಿಗೆ ಹೋಗಿರದ ಪುಟಾಣಿ ಕಣ್ಣುಗಳ ಮೇಲೆ ಕೂಡಾ ದಪ್ಪ ಗಾಜಿನ ಕನ್ನಡಕಗಳು ಕುಳಿತಿರುತ್ತವೆ. ಸ್ಕ್ರೀನ್‌ಗಳನ್ನು ನೋಡುವುದು ಹೆಚ್ಚಾಗಿರುವುದು ಇದಕ್ಕೆ ಒಂದು ಕಾರಣವಾದರೆ ಕಣ್ಣಿನ ಆರೋಗ್ಯ ಹೆಚ್ಚಿಸುವ ಆಹಾರಗಳ ಕೊರತೆಯೂ ಮತ್ತೊಂದು ಕಾರಣವಾಗಬಹುದು. ಆರೋಗ್ಯವಂತ ಹೊಳೆವ ಕಣ್ಣುಗಳಿಗಾಗಿ, ವಯಸ್ಸಾದ ನಂತರ ಮೊಮ್ಮಕ್ಕಳ ಅಂದಚೆಂದವನ್ನು ಬರಿಗಣ್ಣಿನಲ್ಲೇ ನೋಡುವ ಸೌಭಾಗ್ಯಕ್ಕಾಗಿಯಾದರೂ ಅವುಗಳ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಎಲ್ಲಕ್ಕಿಂತ ಮೊದಲು ಸ್ಕ್ರೀನ್ ಟೈಂ ಕಡಿಮೆ ಮಾಡಿ. ಚೆನ್ನಾಗಿ ನಿದ್ರಿಸಿ, ಜೊತೆಗೆ ಕಣ್ಣುಗಳ ಆರೋಗ್ಯಕ್ಕೆ ಬೇಕಾದ ಪೌಷ್ಠಿಕಾಂಶಯುತ ಆಹಾರ ಸೇವಿಸಿ. 

ಲೈಂಗಿಕ ನಿರಾಸಕ್ತಿಯೇ? ಆಹಾರವೇ ಸೆಕ್ಸ್ ಡ್ರೈವ್ ಕುಗ್ಗಿಸ್ತಿರಬಹುದು!

ಹಸಿರು ಸೊಪ್ಪು, ತರಕಾರಿಗಳು
ಪಾಲಕ್, ಮೆಂತ್ಯೆ, ಹರಿವೆ ಮುಂತಾದ ಸೊಪ್ಪುಗಳಲ್ಲಿ ವಿಟಮಿನ್ ಸಿ, ಬೀಟಾ ಕೆರೋಟಿನ್, ಲುಟೀನ್ ಹಾಗೂ ಝಿಯಾಕ್ಸಿಂತಿನ್ ಹೆಚ್ಚು ಪ್ರಮಾಣದಲ್ಲಿರುತ್ತವೆ. ಈ ಆ್ಯಂಟಿಆಕ್ಸಿಡೆಂಟ್‌ಗಳು ಕಣ್ಣುಗಳಿಗೆ ನೈಸರ್ಗಿಕ ಸನ್‌ಸ್ಕ್ರೀನ್‌ನಂತೆ ವರ್ತಿಸುತ್ತವೆ. ಅಂದರೆ, ಕಣ್ಣುಗಳನ್ನು ಅಪಾಯಕಾರಿ ಯುವಿ ಕಿರಣಗಳಿಂದ ರಕ್ಷಿಸುತ್ತವೆ. ಜೊತೆಗೆ, ಕೆಟರಾಕ್ಟ್ ಅಪಾಯವನ್ನೂ ಸಾಧ್ಯವಾದಷ್ಟು ತಗ್ಗಿಸುತ್ತವೆ. 

ಕಾಳುಕಡಿಗಳು
ಬಾದಾಮಿ, ಏಪ್ರಿಕಾಟ್, ಗೋಡಂಬಿ, ಕಡ್ಲೆಕಾಳು ಇತ್ಯಾದಿ ಕಾಳುಗಳು, ನಟ್ಸ್ ಕಣ್ಣಿನ ಸಮಸ್ಯೆಗಳನ್ನು ತಗ್ಗಿಸುತ್ತವೆ. ಏಕೆಂದರೆ ಅವುಗಳಲ್ಲಿರುವ ವಿಟಮಿನ್ ಇ ಕ್ಯಟರಾಕ್ಟ್ ತಡೆದು, ಕಣ್ಣಿನ ಸ್ನಾಯುಗಳು ಸೊರಗದಂತೆ ನೋಡಿಕೊಳ್ಳುತ್ತವೆ. ಸೂರ್ಯಕಾಂತಿ ಬೀಜಗಳಲ್ಲಿ ಝಿಂಕ್ ಹಾಗೂ ವಿಟಮಿನ್ ಇ ಅಪಾರವಾಗಿದ್ದು, ಇವು ಆರೋಗ್ಯವಂತ ಕಣ್ಣುಗಳನ್ನು ನಿಮ್ಮದಾಗಿಸುತ್ತವೆ. 

ಸಿಟ್ರಸ್ ಹಣ್ಣುಗಳು
ಮುಸಂಬಿ, ಕಿತ್ತಳೆ, ನಿಂಬೆ, ದಾಳಿಂಬೆ ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಈ ವಿಟಮಿನ್ ಕಣ್ಣುಗಳ ಟಿಶ್ಯೂಗಳನ್ನು ಆರೋಗ್ಯಯುತವಾಗಿರಿಸುತ್ತವೆ. ಹಾಗಾಗಿ, ಹೆಚ್ಚು ಸಿಟ್ರಸ್ ಹಣ್ಣುಗಳ ಸೇವನೆಯಿಂದ ಕಣ್ಣಿನ ನರಗಳ ಅವನತಿ ತಪ್ಪಿಸಬಹುದು. ನೆಲ್ಲಿಕಾಯಿ ಕೂಡಾ ವಿಟಮಿನ್ ಸಿಯ ಗುಳಿಗೆಯಂತೆ ವರ್ತಿಸುತ್ತದೆ. 

ಮ್ಯಾಗಿ, ನ್ಯಾಚೋಸ್, ಸ್ಯಾಂಡ್ವಿಚ್... ಹೆಸರುಗಳ ಹಿಂದಿನ ಕತೆ!

ಕ್ಯಾರೆಟ್
ಕ್ಯಾರೆಟ್‌ಗಳು ದೃಷ್ಟಿವರ್ಧಕಗಳಂತೆ ವರ್ತಿಸುತ್ತವೆ. ಅವುಗಳಲ್ಲಿ ಬೀಟಾ ಕೆರೋಟಿನ್ ಎಂಬ ಆ್ಯಂಟಿ ಆಕ್ಸಿಡೆಂಟ್ ಅಧಿಕವಾಗಿದ್ದು, ಇದು ಸೂರ್ಯನ ಕಿರಣಗಳ ವಿರುದ್ಧ ಕಣ್ಣಿಗೆ ರಕ್ಷಣೆ ಒದಗಿಸುತ್ತದೆ. ಜೊತೆಗೆ, ಕಣ್ಣುಗಳ ಸಮಸ್ಯೆಗಳು ಬಾರದಂತೆ ತಡೆಯುವ ಸಾಮರ್ಥ್ಯ ಕ್ಯಾರೆಟ್‌ಗಿದೆ. 

ದೊಣ್ಣೆ ಮೆಣಸು
ದೊಣ್ಣೆ ಮೆಣಸು ವಿಟಮಿನ್ ಸಿ ಹಾಗೂ ಎಗಳ ಪವರ್‌ಹೌಸ್. ಇದು ಕಣ್ಣುಗಳಲ್ಲಿರುವ ರಕ್ತನಾಳಗಳ ಆರೋಗ್ಯ ಕಾಪಾಡುತ್ತದೆ. ಜೊತೆಗೆ ಕೆಟರಾಕ್ಟ್ ಸಂಭಾವ್ಯತೆ ತಗ್ಗಿಸುತ್ತದೆ. ದೊಣ್ಣೆ ಮೆಣಸು ಫ್ಯಾಟ್ ಫ್ರೀಯಾಗಿದ್ದು, ಅಧಿಕ ಫೈಬರ್ ಹೊಂದಿದೆ. ಹಾಗಾಗಿ ಅವು ಕಡಿಮೆ ಕ್ಯಾಲೋರಿಯಲ್ಲೇ ಹೊಟ್ಟೆ ತುಂಬಿದ ಅನುಭವ ನೀಡಬಲ್ಲವು. 

ಇಂಥ ಆಹಾರ ಸೇವನೆಯಷ್ಟೇ ಅಲ್ಲ, ಜೊತೆಗೆ, ಆರೋಗ್ಯಕರ ಜೀವನಶೈಲಿಯನ್ನೂ ನಿಮ್ಮದಾಗಿಸಿಕೊಂಡರೆ ಕಣ್ಣುಗಳು ಖಂಡಿತಾ ನಿಮಗೆ ತಮ್ಮ ಕಾರ್ಯಕ್ಷಮತೆ ಮೂಲಕ ಥ್ಯಾಂಕ್ಸ್ ಹೇಳದೆ ಬಿಡವು. 
ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಟೈಪ್ 2 ಡಯಾಬಿಟೀಸ್‌ನಿಂದ ದೂರವಿರಬಹುದು. ಈ ಕಾಯಿಲೆಯು ದೊಡ್ಡವರಲ್ಲಿ ಕುರುಡುತನ ತರುತ್ತದೆ. ಇನ್ನು ಸಿಗರೇಟ್ ಸೇವನೆ, ಆಲ್ಕೋಹಾಲ್, ಡ್ರಗ್ಸ್‌ನಿಂದ ದೂರವುಳಿಯುವುದು ಎಲ್ಲ ರೀತಿಯಲ್ಲೂ ಒಳ್ಳೆಯದೇ. ಹೊರ ಹೋಗುವಾಗ ಸನ್‌ಗ್ಲಾಸ್ ಧರಿಸುವುದು, ಸ್ಕ್ರೀನ್‌ನಿಂದ ಆಗಾಗ ಬೇರೆ ಕಡೆ ಕಣ್ಣುಗಳನ್ನು ಚಲಿಸುವುದು, ಆ್ಯಂಟಿ ಗ್ಲೇರ್ ಗ್ಲಾಸ್‌ಗಳ ಬಳಕೆ, ತಣ್ಣೀರಿನಿಂದ ಆಗಾಗ ಕಣ್ಣುಗಳನ್ನು ತೊಳೆಯುವುದು, ಐಸ್ ಪ್ಯಾಕ್, ಸೌತೆಕಾಯಿಯನ್ನು ಕಣ್ಣುಗಳ ಮೇಲಿಟ್ಟು ಅವನ್ನು ಒತ್ತಡದಿಂದ ರಿಲ್ಯಾಕ್ಸ್ ಮಾಡಿಸುವುದು, ಗಾಳಿಬೆಳಕಿರುವಲ್ಲಿಯೇ ಓದುವುದು ಮುಂತಾದ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡರೆ ಕಣ್ಣುಗಳು 60ರಲ್ಲೂ 30ರಂತೆ ಕೆಲಸ ಮಾಡಬಲ್ಲವು.