Asianet Suvarna News Asianet Suvarna News

ಸಿಕ್ಕಾಪಟ್ಟೆ ಸ್ವೀಟ್ಸ್‌ ತಿನ್ತೀರಾ, ಹಾರ್ಟ್‌ ಅಟ್ಯಾಕ್‌ ಸಾಧ್ಯತೆ ಹೆಚ್ಚಾಗುತ್ತೆ ಅಂತಿದೆ ಅಧ್ಯಯನ

ಇತ್ತೀಚಿನ ಕೆಲ ವರ್ಷಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಒತ್ತಡದ ಜೀವನಶೈಲಿ, ಅನಾರೋಗ್ಯಕರ ಆಹಾರಪದ್ಧತಿ ಇದಕ್ಕೆ ಕಾರಣವಾಗುತ್ತಿದೆ. ಇದಲ್ಲದೆ ಇನ್ನೊಂದು ಮುಖ್ಯ ವಿಚಾರವೂ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಅದೇನೆಂದು ನಿಮ್ಗೆ ಗೊತ್ತಿದ್ಯಾ?

Health tips, Artificial sweetener erythritol ups heart attack risk, Study Vin
Author
First Published Mar 2, 2023, 9:16 AM IST

ವಾಷಿಂಗ್ಟನ್: ಸ್ವೀಟ್ಸ್‌ನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಅಧಿಕ ಸಿಹಿತಿಂಡಿಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ವೈದ್ಯರೇ ಹೇಳುತ್ತಾರೆ. ಇದರಿಂದ ಹಲವು ಕಾಯಿಲೆಗಳು ಸುಲಭವಾಗಿ ವಕ್ಕರಿಸಿಕೊಳ್ಳುತ್ತವೆ. ಹಾಗೆಯೇ ಹೃದಯದ ಆರೋಗ್ಯಕ್ಕೂ (Heart health) ಸ್ವೀಟ್ಸ್ ತುಂಬಾ ಮಾರಕ. ಜನಪ್ರಿಯ ಕೃತಕ ಸ್ವೀಟ್ನರ್ ಅಥವಾ ಸಿಹಿಕಾರಕ ಎರಿಥ್ರಿಟಾಲ್ ಸೇವನೆಯು ಹೆಚ್ಚಿನ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯದೊಂದಿಗೆ ಗುರುತಿಸಿಕೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂತಹ ಉತ್ಪನ್ನಗಳ ದೀರ್ಘಾವಧಿ ಪರಿಣಾಮಗಳನ್ನು ಪರೀಕ್ಷಿಸಲು ಹೆಚ್ಚಿನ ಸುರಕ್ಷತಾ ಸಂಶೋಧನೆಗೆ ಕರೆ ನೀಡಲಾಗಿದೆ.

ಕೃತಕ ಸಿಹಿಕಾರಕಗಳ ಬಳಕೆಯಿಂದ ಆರೋಗ್ಯಕ್ಕೆ ಅಪಾಯ
ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಸಂಶೋಧಕರು US ಮತ್ತು ಯುರೋಪ್‌ನಲ್ಲಿ 4,000 ಕ್ಕೂ ಹೆಚ್ಚು ಜನರನ್ನು ಆಧರಿಸಿ ಅಧ್ಯಯನ ನಡೆಸಿದರು. ಇದರಲ್ಲಿ ಹೆಚ್ಚಿನ ರಕ್ತದ ಎರಿಥ್ರಿಟಾಲ್ ಮಟ್ಟವನ್ನು ಹೊಂದಿರುವವರು ಹೃದಯಾಘಾತ (Heartattack), ಪಾರ್ಶ್ವವಾಯು ಅಥವಾ ಸಾವಿನಂತಹ ಪ್ರಮುಖ ಪ್ರತಿಕೂಲ ಹೃದಯ ಸಂಬಂಧಿತ ಸಮಸ್ಯೆಯನ್ನು ಅನುಭವಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿಯಲಾಯಿತು. ಸಂಶೋಧಕರು ಸಂಪೂರ್ಣ ರಕ್ತ ಅಥವಾ ಪ್ರತ್ಯೇಕಿಸಲಾದ ಪ್ಲೇಟ್‌ಲೆಟ್‌ಳಿಗೆ ಎರಿಥ್ರಿಟಾಲ್ ಸೇರಿಸುವ ಮೂಲಕ ಪರಿಣಾಮಗಳನ್ನೂ ಪರೀಶೀಲಿಸಿದ್ದಾರೆ. ಪ್ಲೇಟ್ಲೆಟ್ ಗಳು ಜೀವಕೋಶಗಳ ತುಣುಕುಗಳಾಗಿದ್ದು ಅವು ಒಂದಾಗಿ ರಕ್ತಸ್ರಾವವನ್ನು ನಿಲ್ಲಿಸುತ್ತವೆ ಮತ್ತು ರಕ್ತ ಹೆಪ್ಪುಗಟ್ಟಲು ನೆರವಾಗುತ್ತವೆ ಎಂದು ತಿಳಿಸಿದರು.

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹಾರ್ಟ್ಅಟ್ಯಾಕ್‌, ಕುಸಿದುಬಿದ್ದು ಯುವಕ ಸಾವು

ಸಾವಿರಾರು ಆಹಾರ, ಪಾನೀಯ ಬ್ರಾಂಡ್‌ಗಳಲ್ಲಿ ಕೃತಕ ಸಿಹಿಕಾರಕಗಳ ಬಳಕೆ
ನೇಚರ್ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಎರಿಥ್ರಿಟಾಲ್ ಪ್ಲೇಟ್‌ಲೆಟ್‌ಗಳು ಕ್ರಿಯಾಶೀಲಗೊಳ್ಳುವುದನ್ನು ಮತ್ತು ರಕ್ತ ಹೆಪ್ಪುಗಟ್ಟಿಸುವುದನ್ನು ಸುಲಭಗೊಳಿಸುತ್ತದೆ ಎಂದು ಹೇಳಿದೆ. ವಿಶ್ವಾದ್ಯಂತ ಸಾವಿರಾರು ಆಹಾರ ಮತ್ತು ಪಾನೀಯ ಬ್ರಾಂಡ್‌ಗಳಲ್ಲಿ ಕೃತಕ ಸಿಹಿಕಾರಕಗಳನ್ನು (Artificial sweetener) ಬಳಸಲಾಗುತ್ತದೆ. ಹೀಗಿದ್ದೂ ಎಲ್ಲಿಯೂ ಅವುಗಳ ಮೇಲೆ ನಿಷೇಧ ಹೇರಿಲ್ಲ. ಪ್ರಸ್ತುತ ಐರೋಪ್ಯ ಆಹಾರ ಸುರಕ್ಷತಾ ಪ್ರಾಧಿಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಆರೋಗ್ಯ ಸಂಸ್ಥೆಗಳು ಅವುಗಳ ಮರುಮೌಲ್ಯಮಾಪನ ನಡೆಸುತ್ತಿವೆ.

ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿದ್ದ ಬೃಹತ್ ಅಧ್ಯಯನವೊಂದು ಕೃತಕ ಸಿಹಿಕಾರಕಗಳ, ವಿಶೇಷವಾಗಿ ಅಸ್ಪರ್ಟೇಮ್, ಅಸೆಸಲ್ಪೇಮ್ ಪೊಟ್ಯಾಷಿಯಂ ಮತ್ತು ಸುಕ್ರಲೋಸ್ ನ ಹೆಚ್ಚಿನ ಸೇವನೆ ಹಾಗೂ ಹೃದಯ ರಕ್ತನಾಳ ಕಾಯಿಲೆಗಳ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸಿತ್ತು. ಕಡಿಮೆ ಕ್ಯಾಲರಿಗಳ, ಕಡಿಮೆ ಕಾರ್ಬೊಹೈಡ್ರೇಟ್‌ಗಳ ಮತ್ತು 'ಕೀಟೊ' ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಮಾಮೂಲು ಸಕ್ಕರೆಯ ಬದಲು ಎರಿಥ್ರಿಟಾಲ್‌ನಂತಹ ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತದೆ ಎಂಬುದನ್ನು ತಿಳಿಸಲಾಗಿತ್ತು.

ವಿವಾಹ ಸಮಾರಂಭ ಟೈಮಲ್ಲೇ ಹೃದಯಾಘಾತದಿಂದ ಮೃತಪಟ್ಟ ವಧು: ತಂಗಿಯ ಜತೆ ಮದ್ವೆ ಮಾಡಿಕೊಟ್ಟ ಕುಟುಂಬ

ಬೊಜ್ಜು,ಮಧುಮೇಹ ಇರುವವರಿಗೆ ಹೆಚ್ಚಿನ ಅಪಾಯ
ಬೊಜ್ಜು,ಮಧುಮೇಹ ಅಥವಾ ಮೆಟಾಬಾಲಿಕ್ ಸಿಂಡ್ರೋಮ್ ಹೊಂದಿರುವ ಜನರಿಗೆ ಮತ್ತು ತಮ್ಮ ಸಕ್ಕರೆ ಅಥವಾ ಕ್ಯಾಲರಿ ಸೇವನೆಯನ್ನು ನಿಭಾಯಿಸಲು ನೆರವಾಗುವ ಪರ್ಯಾಯಗಳನ್ನು ಬಯಸುವವರಿಗೆ ಎರಿಥ್ರಿಟಾಲ್ ಅನ್ನು ಒಳಗೊಂಡಿರುವ ಸಕ್ಕರೆ ಮುಕ್ತ ಉತ್ಪನ್ನಗಳನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಈ ಸ್ಥಿತಿಯಲ್ಲಿರುವ ಜನರು ಕೂಡಾ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಪ್ರತಿಕೂಲ ಹೃದಯನಾಳ ಪರಿಣಾಮಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ತಿಳಿದುಬಂದಿದೆ.

ಸಕ್ಕರೆಗೆ ಹೋಲಿಸಿದರೆ ಎರಿಥ್ರಿಟಾಲ್ ಸುಮಾರು ಶೇ.70ರಷ್ಟು ಸಿಹಿಯನ್ನು ಒಳಗೊಂಡಿರುತ್ತದೆ ಮತ್ತು ಮೆಕ್ಕೆ ಜೋಳಕ್ಕೆ ಹುದುಗು ಬರಿಸುವ ಮೂಲಕ ಅದನ್ನು ಉತ್ಪಾದಿಸಲಾಗುತ್ತದೆ. ಸೇವನೆಯ ಬಳಿಕ ಎರಿಥ್ರಿಟಾಲ್ ಶರೀರದಿಂದ ಸಮರ್ಪಕವಾಗಿ ಚಯಾಪಚಯಗೊಳ್ಳುವುದಿಲ್ಲ,ಬದಲಿಗೆ ಅದು ರಕ್ತಪ್ರವಾಹವನ್ನು ಸೇರಿಕೊಳ್ಳುತ್ತದೆ ಮತ್ತು ಮುಖ್ಯವಾಗಿ ಮೂತ್ರದ ಮೂಲಕ ಶರೀರದಿಂದ ಹೊರಕ್ಕೆ ಹೋಗುತ್ತದೆ. ಮಾನವ ಶರೀರವು ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಎರಿಥ್ರಿಟಾಲ್‌ನ್ನು ಉತ್ಪಾದಿಸುತ್ತದೆ ಮತ್ತು ಯಾವುದೇ ಹೆಚ್ಚುವರಿ ಸೇವನೆಯು ಶರೀರದಲ್ಲಿ ಸಂಗ್ರಹಗೊಳ್ಳುತ್ತದೆ ಎಂದು ಅಧ್ಯಯನ ವರದಿಯು ತಿಳಿಸಿದೆ.

Follow Us:
Download App:
  • android
  • ios