ಮಗುವಿಗೆ ಹಾಲು ಸಾಲುತ್ತಿಲ್ಲ. ಇನ್ನೂ ಹಾಲು ಹಲ್ಲಿನಲ್ಲಿರುವ ಮಗುವಿಗೆ ತಿನ್ನಿಸುವುದೇನೋ ತಿಳಿಯುವುದಿಲ್ಲ. ಈಗಷ್ಟೇ ಬೆಳೆಯುತ್ತಿರುವ ಅದರ ಜೀರ್ಣಾಂಗಗಳು ಜೀರ್ಣಿಸುವಂಥ ಆಹಾರಗಳೇನಪ್ಪಾ ಗೊತ್ತಿಲ್ಲ. ಕೊಟ್ಟರೆ ಅಜೀರ್ಣ, ಕೊಡದಿರೆ ಪೋಷಕಸತ್ವಗಳ ಕೊರತೆಯಾದರೆ ಎಂಬ ಭಯ... ಒಟ್ಟಿನಲ್ಲಿ ಎಲ್ಲ ತಂದೆತಾಯಿಯರ ಆರಂಭದ ಆತಂಕಗಳಿವು. ಈ ಆತಂಕ ನಿವಾರಿಸಲೆಂದೇ ಪುಟ್ಟ ಕಂದಮ್ಮನಿಗೆ ಏನೇನು ಕೊಡಬಹುದೆಂಬ ಪುಟ್ಟ ಪಟ್ಟಿ ಇಲ್ಲಿ ನೀಡಿದ್ದೇವೆ ನೋಡಿ. 

ಸೆರೀಲ್
ಸೆರೀಲ್‌ಗಳು ಹಾಲಿನೊಂದಿಗೆ ಹಾಕಿದಾಗ ಕಾರ್ನ್ ಫ್ಲೇಕ್ಸ್‌ನಂತೆ ಮೆತ್ತಗಾಗುತ್ತವೆ. ಸಾಧ್ಯವಾದಷ್ಟು ಸಂಪೂರ್ಣ ಧಾನ್ಯಗಳ ಸೆರೀ ಕೊಡಲು ನೋಡಿ.

ಸೌತೆಕಾಯಿ
ದಿನದ ಯಾವುದೇ ಸಮಯದಲ್ಲಿ ತಿಂದರೂ ತಾಜಾ ಎನಿಸುವ ತರಕಾರಿ ಎಳೆ ಸೌತೆಕಾಯಿ. ನಿಮ್ಮ 1 ವರ್ಷದ ಮಗುವಿಗಾಗಿ ಅದನ್ನು ಫ್ರೆಂಚ್ ಫ್ರೈಸ್‌ನಂತೆ ತೆಳ್ಳಗೆ, ಉದ್ದಕೆ ಕತ್ತರಿಸಿ. ಸಿಕ್ಕಾಪಟ್ಟೆ ಬಿಸಿಲಿಲ್ಲದ ಹೊರತು, ಕೇವಲ ಕೆಲ ಸೌತೆಕಾಯಿ ಹೋಳುಗಳೇ ಸಾಕು, ಮಗುವಿನ ಡಿಹೈಡ್ರೇಶನ್ ನಿವಾರಿಸಲು. 

ದಾಲ್
ಪ್ರೋಟೀನ್‌ಭರಿತ ಬೇಳೆಗಳು ಮಗುವಿನ ಸ್ನಾಯುಗಳ ಬೆಳವಣಿಗೆಗೆ ಸಹಾಯಕ. ಹೆಚ್ಚು ಮಸಾಲೆ ಬೆರೆಸದ ದಾಲ್ ಕರಿ ತಯಾರಿಸಿ ಅದನ್ನು ಅನ್ನ ಅಥವಾ ಚಪಾತಿಯೊಂದಿಗೆ ಸೇರಿಸಿ ಸಣ್ಣ ಸಣ್ಣ ತುತ್ತು ಮಾಡಿ ಮಗುವಿಗೆ ತಿನ್ನಿಸಬಹುದು. ಮಗು ಇದನ್ನು ನುಂಗಲು ಕಷ್ಟಪಡುತ್ತಿದೆ ಎಂದಾದಲ್ಲಿ ಅನ್ನ, ಬೇಯಿಸಿದ ಬೇಳೆ, ಹೋಳುಗಳನ್ನು ಗ್ರೈಂಡ್ ಮಾಡಿ, ಸ್ವಲ್ಪ ಉಪ್ಪು ಸೇರಿಸಿ ಮಗುವಿಗೆ ತಿನ್ನಿಸಬಹುದು. 

ತರಕಾರಿ ಸೂಪ್
ಮಗುವಿಗೆ ಸೇವಿಸಲು ಬಹಳ ಸುಲಭವಾಗಿರುವ ಸೂಪ್ ಎಲ್ಲ ತರಕಾರಿಗಳ ಒಳ್ಳೆಯತನಗಳನ್ನೆಲ್ಲ ಹೊತ್ತು ಬಂದಿರುತ್ತದೆ. ಹೀಗಾಗಿ, ಕ್ಯಾರೆಟ್, ಟೊಮ್ಯಾಟೋ, ಬೀನ್ಸ್, ಆಲೂಗಡ್ಡೆ ಇತ್ಯಾದಿ ತರಕಾರಿಗಳನ್ನು ಬೇಯಿಸಿದ ನೀರನ್ನು ಬಳಸಿ ಸೂಪ್ ತಯಾರಿಸಿ. ಕ್ಯಾರೆಟ್‌ನಿಂದ ವಿಟಮಿನ್ ಎ, ಆಲೂಗಡ್ಡೆಯಿಂದ ಫೈಬರ್ ಹೀಗೆ ಎಲ್ಲ ತರಕಾರಿಗಳ ಉತ್ತಮ ಅಂಶಗಳು ಮಗುವಿನ ದೇಹ ಸೇರುತ್ತದೆ. ಇದರಿಂದ ಮಗುವಿಗೆ ಯಾವ ಪೋಷಕಸತ್ವದ ಕೊರತೆಯೂ ಆಗದಂತೆ ನೋಡಿಕೊಳ್ಳಬಹುದು. 

ಬೆಂಗಳೂರಿನ ಈ ಬಾರ್‌ ಮಹಿಳೆಯರಿಗೆ ಮಾತ್ರ!...

ಸೋಯಾ
ಮೊಟ್ಟೆ ಸೇವಿಸದ ಸಸ್ಯಾಹಾರಿಗಳಿಗೆ ಪ್ರೋಟೀನ್ ಮೂಲವಾಗಿ ಸೋಯಾ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದು ಬಹಳ ಮೃದುವಾಗಿರುವುದರಿಂದ ಬೇಯಿಸಿ ನೀಡಿದಲ್ಲಿ ಮಗುವಿಗೆ ಅಗೆಯಲು ಹಾಗೂ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಜೊತೆಗೆ ಪ್ರೋಟೀನ್ ಅಗತ್ಯ ಕೂಡಾ ಪೂರೈಕೆಯಾಗುತ್ತದೆ. 

ಪರೋಟ
ಕುಟುಂಬಕ್ಕಾಗಿ ತಯಾರಿಸಿದ ಪರೋಟವನ್ನೇ ಮಗುವಿಗೂ ನೀಡಬಹುದು. ತರಕಾರಿಗಳು, ಆಲೂಗಡ್ಡೆ ಅಥವಾ ಪನೀರ್‌ನಿಂದ ಸಮೃದ್ಧವಾಗಿರುವ ಪರೋಟಾ ಮೆತ್ತಗಿರುತ್ತದಲ್ಲದೆ, ಮಗುವಿಗೆ ಬಹಳ ರುಚಿಕರವಾಗಿಯೂ ಇರುತ್ತದೆ. ಸ್ವಲ್ಪ ಸ್ವಲ್ಪವೇ ಖಾರವನ್ನು ಅಭ್ಯಾಸ ಮಾಡಿಸಲು ಕೂಡಾ ಇದು ಸಹಕಾರಿ. 

ಚಿಕನ್
ಹಾರ್ಮೋನ್ ಇಂಜೆಕ್ಷನ್ ಪಡೆಯದ ಚಿಕನ್ ಖರೀದಿಸುವುದನ್ನು ಖಚಿತಪಡಿಸಿಕೊಳ್ಳಿ. ಮಗುವಿಗೆ ಚಿಕನ್ ಕೊಡಬೇಕಾದರೆ ಅದನ್ನು ಮೆತ್ತಗಾಗಿಸಲು ಸ್ವಲ್ಪ ಹೆಚ್ಚೇ ಬೇಯಿಸಿ. ಜೊತೆಗೆ, ಹೆಚ್ಚು ಮಸಾಲೆ ಹಾಕದಿರಿ. ಬೇಯಿಸಿದ ಮಾಂಸವನ್ನು ಸಣ್ಣ ಸಣ್ಣ ತುಂಡಾಗಿಸಿ, ಮೂಳೆಗಳನ್ನು ತೆಗೆದು ಮಗುವಿಗೆ ನೀಡಿ.

ಮೀನು
ಮೀನಿನ ಆಹಾರ ತಯಾರಿಸುವಾಗ ನೆನಪಿಡಬೇಕಾದುದೆಂದರೆ- ಇದನ್ನು ಫ್ರೈ ಮಾಡುವುದರಿಂದ ಅದು ಅತ್ಯಮೂಲ್ಯ ಪೋಷಕಸತ್ವಗಳನ್ನು ಕಳೆದುಕೊಳ್ಳುತ್ತದೆ. ಬದಲಿಗೆ ಕರಿಯಲ್ಲಿ ಮೀನನ್ನು ಬಳಸಿ. ಯಾವುದೇ ಮೂಳೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮಗುವಿಗೆ ತಿನ್ನಿಸಿ. ಮೀನಿನ ಅತಿ ಸಣ್ಣ ಮೂಳೆಗಳು ಕೂಡಾ ಮಗುವಿನ ಗಂಟಲಲ್ಲಿ ಸಿಕ್ಕಿಕೊಳ್ಳಬಹುದು ಎಂಬುದನ್ನು ನೆನಪಿಡಿ. 

ಮನೆಯಲ್ಲೇ ಇವೆ muscle ಬೆಳೆಸಿಕೊಳ್ಳೋ ಮದ್ದುಗಳು...

ಮೊಳಕೆ ಕಾಳಿನ ಕಿಚಡಿ
ಕಿಚಡಿ ತಯಾರಿಸುವಾಗ ಅದಕ್ಕೆ ಹೆಸರುಕಾಳು, ಕಡ್ಲೆಕಾಳು ಸೇರಿದಂತೆ ಮೂರ್ನಾಲ್ಕು ರೀತಿಯ ಮೊಳಕೆ ಕಾಳುಗಳನ್ನು ಸೇರಿಸಿ ಅನ್ನದೊಂದಿಗೆ ಪೂರ್ತಿ ಐದು ವಿಶಲ್ ಹೊಡೆಸಿ. ಇದಕ್ಕೆ ಪಾಲಕ್ ಸೊಪ್ಪನ್ನು ಸಹ ಸೇರಿಸಿ. ರುಚಿಯ ಜೊತೆಗೆ ಪಾಲಕ್‌ನ ಪೋಷಕಸತ್ವಗಳು ಕೂಡಾ ಕಿಚಡಿಗೆ ಸೇರುತ್ತವೆ. ಇದನ್ನು ಮಗುವಿಗೆ ತಿನ್ನಿಸಿದರೆ ಆಗಾಗ ಹೊಸ ರುಚಿಯಿಂದ ಮಗು ಸಂತೋಷದಿಂದ ತಿನ್ನುವುದು.