ಖ್ಯಾತ ಕ್ವಿಕ್ ಕಾಮರ್ಸ್ ಕಂಪನಿ 'ಬ್ಲಿಂಕಿಟ್' (Blinkit) ಮೇಲೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ದಾಳಿ ನಡೆಸಿದ್ದು ಗಂಭೀರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಳಿಗೆಯ ಪರವಾನಗಿಯನ್ನು (License) ಅಮಾನತುಗೊಳಿಸಿದೆ. ಅಷ್ಟಕ್ಕೂ ಆಗಿದ್ದೇನು? ಈ ಸ್ಟೋರಿ ಓದಿ..

ಮುಂಬೈ: ಖ್ಯಾತ ಕ್ವಿಕ್ ಕಾಮರ್ಸ್ ಕಂಪನಿ 'ಬ್ಲಿಂಕಿಟ್' (Blinkit) ಮೇಲೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ದಾಳಿ ನಡೆಸಿದ್ದು ಗಂಭೀರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಳಿಗೆಯ ಪರವಾನಗಿಯನ್ನು (License) ಅಮಾನತುಗೊಳಿಸಿದೆ.

ಏನಿದು ಘಟನೆ?

ಮಹಾರಾಷ್ಟ್ರದಲ್ಲಿ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ನೇತೃತ್ವದಲ್ಲಿ ಅಶುಚಿಯಾದ ಮತ್ತು ಅಸುರಕ್ಷಿತ ಆಹಾರ ಪದಾರ್ಥಗಳ ವಿರುದ್ಧ ಸಮರ ಸಾರಲಾಗಿದೆ. ಇದರ ಭಾಗವಾಗಿ ಮುಂಬೈನ ಮಲಾಡ್ (ಪಶ್ಚಿಮ) ಭಾಗದಲ್ಲಿರುವ ಬ್ಲಿಂಕ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್ (Blink Commerce Pvt Ltd) ಮಳಿಗೆಯ ಮೇಲೆ ಎಫ್‌ಡಿಎ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿನ ಭೀಕರ ಪರಿಸ್ಥಿತಿ ಕಂಡು ಅಧಿಕಾರಿಗಳೇ ದಸ್ತೇಬಾಜಾಗಿದ್ದಾರೆ.

ದಾಳಿ ವೇಳೆ ಸಿಕ್ಕಿದ್ದೇನು?

  • ಜಿರಳೆಗಳ ಕಾಟ: ತರಕಾರಿ ಮತ್ತು ಹಣ್ಣುಗಳ ಸಂಗ್ರಹದ ನಡುವೆ ನೂರಾರು ಜಿರಳೆಗಳು ಓಡಾಡುತ್ತಿರುವುದು ಕಂಡುಬಂದಿದೆ.
  • ಅವಧಿ ಮೀರಿದ ವಸ್ತುಗಳು: ಮಳಿಗೆಯಲ್ಲಿ ಅವಧಿ ಮುಗಿದ (Expired) ಆಹಾರ ಪದಾರ್ಥಗಳು ಮತ್ತು ಪ್ಯಾಕೇಜ್‌ಗಳನ್ನು ತಿದ್ದಲಾದ ವಸ್ತುಗಳು ಪತ್ತೆಯಾಗಿವೆ.
  • ಅಶುಚಿತ್ವದ ಪರಾಕಾಷ್ಠೆ: ಆಹಾರ ಪದಾರ್ಥಗಳನ್ನು ತುಕ್ಕು ಹಿಡಿದ ರಾಕ್‌ಗಳಲ್ಲಿ ಇಡಲಾಗಿತ್ತು. ಕೆಲವು ಆಹಾರ ಪೊಟ್ಟಣಗಳನ್ನು ನೇರವಾಗಿ ನೆಲದ ಮೇಲೆ ಇರಿಸಲಾಗಿತ್ತು.
  • ಸಿಬ್ಬಂದಿ ನಿರ್ಲಕ್ಷ್ಯ: ಆಹಾರವನ್ನು ನಿರ್ವಹಿಸುವ ಸಿಬ್ಬಂದಿ ವೈದ್ಯಕೀಯ ತಪಾಸಣಾ ದಾಖಲೆಗಳಿರಲಿಲ್ಲ ಹಾಗೂ ಅವರು ಯಾವುದೇ ಸುರಕ್ಷತಾ ಗೇರ್‌ಗಳನ್ನು (ಕೈಗವಸು, ಮಾಸ್ಕ್) ಧರಿಸುತ್ತಿರಲಿಲ್ಲ.
  • ಕೋಲ್ಡ್ ಸ್ಟೋರೇಜ್ ಅವ್ಯವಸ್ಥೆ: ಕೋಲ್ಡ್ ಸ್ಟೋರೇಜ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿರಲಿಲ್ಲ ಹಾಗೂ ತ್ಯಾಜ್ಯ ವಿಲೇವಾರಿಯಲ್ಲಿ ಭಾರೀ ಲೋಪ ಕಂಡುಬಂದಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಅಡಿಯಲ್ಲಿ ಬ್ಲಿಂಕಿಟ್‌ನ ಈ ಮಳಿಗೆಯ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಕೇಂದ್ರದಿಂದ ಯಾವುದೇ ರೀತಿಯ ಆಹಾರ ಪದಾರ್ಥಗಳ ಮಾರಾಟ ಅಥವಾ ವಿತರಣೆ ಮಾಡುವಂತಿಲ್ಲ ಎಂದು ಎಫ್‌ಡಿಎ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಒಂದು ವೇಳೆ ಅಮಾನತು ಅವಧಿಯಲ್ಲಿ ವ್ಯಾಪಾರ ಮುಂದುವರಿಸಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಮುಂಬೈ ಮತ್ತು ಮಹಾರಾಷ್ಟ್ರದಾದ್ಯಂತ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಎಫ್‌ಡಿಎ ತಿಳಿಸಿದೆ.