ಐಪಿಎಲ್ ಸ್ಟಾರ್ ಬ್ಯಾಟರ್ ಅಭಿಷೇಕ್ ಪೊರೇಲ್‌ನ ಬಂಧನ ಆಗಿದೆ. ವೈದ್ಯಕೀಯ ವಿದ್ಯಾರ್ಥಿನಿಗೆ ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ ಆರೋಪ ಇವರ ಮೇಲಿದೆ. ಏನಿದು ಪ್ರಕರಣ ಅನ್ನೋದು ಈ ಸ್ಟೋರಿಯಲ್ಲಿದೆ.

ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಬಂಗಾಳದ ಕ್ರಿಕೆಟಿಗ ಅಭಿಷೇಕ್ ಪೊರೆಲ್ ಅವರನ್ನು ಅತ್ಯಾ*ಚಾರ, ಹಲ್ಲೆ ಹಾಗೂ ಜೀವ ಬೆದರಿಕೆ ಒಡ್ಡಿದ ಗಂಭೀರ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಮೇರೆಗೆ ಡುಮ್ ಡುಮ್ ಪೊಲೀಸ್ ಠಾಣೆ ವ್ಯಾಪ್ತಿಯ ಎಮಾಮಿ ಸಿಟಿಯಲ್ಲಿ ಹೂಗ್ಲಿ ಗ್ರಾಮಾಂತರ ಪೊಲೀಸರು ಪೊರೆಲ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (SP) ಕುನ್ವರ್ ಭೂಷಣ್ ಸಿಂಗ್ ಖಚಿತಪಡಿಸಿದ್ದಾರೆ.

ವಿದ್ಯಾರ್ಥಿನಿಯ ದೂರಿನಲ್ಲೇನಿದೆ?

ಸಂತ್ರಸ್ತ ಯುವತಿಯ ಪ್ರಕಾರ.. ತಾನು ಮತ್ತು ಅಭಿಷೇಕ್ ಪೊರೆಲ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಕಳೆದ ವರ್ಷದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ ನಂತರ ಪೊರೆಲ್ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ್ದರು. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ತಮ್ಮೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು ಹಾಗೂ ನಂತರ ಮದುವೆಯಾಗಲು ನಿರಾಕರಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಜೂನ್ ತಿಂಗಳಿನಲ್ಲಿ ಯುವತಿ ದೂರು ದಾಖಲಿಸಿದ್ದರು.

ಎಫ್‌ಐಆರ್ (FIR) ನಲ್ಲಿ ಉಲ್ಲೇಖಿಸಿರುವಂತೆ.. ಅಭಿಷೇಕ್ ಪೊರೆಲ್ ದೂರುದಾರಳನ್ನು ಅಕ್ರಮವಾಗಿ ಬಂಧನದಲ್ಲಿಟ್ಟು, ಆಹಾರ ನೀಡದೆ ಒಂಟಿಯಾಗಿಟ್ಟಿದ್ದರು. ಇದರಿಂದಾಗಿ ಆಕೆ ದೈಹಿಕವಾಗಿ ತೀವ್ರ ಅಸ್ವಸ್ಥಗೊಂಡು ನಡೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ವಿಮಾನ ಪ್ರಯಾಣ ಕೈಗೊಳ್ಳಬೇಕಿದ್ದರೂ ಗಾಯಗಳಿಂದಾಗಿ ತಕ್ಷಣವೇ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು ಎಂದು ಆರೋಪಿಸಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಕ್ರಿಕೆಟಿಗ ಅಭಿಷೇಕ್ ಪೊರೆಲ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ನ್ಯಾಯಾಲಯದ ನಿರ್ದೇಶನದ ಬೆನ್ನಲ್ಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ಹಿಂದೆ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ಪೊರೆಲ್ ನಿರಾಕರಿಸಿದ್ದರು.

ಯಾರೀ ಅಭಿಷೇಕ್ ಪೊರೆಲ್?

ಎಡಗೈ ಟಾಪ್-ಆರ್ಡರ್ ಬ್ಯಾಟರ್ ಆಗಿರುವ ಅಭಿಷೇಕ್ ಪೊರೆಲ್ 2023 ರಿಂದ ಐಪಿಎಲ್‌ನಲ್ಲಿ ಡೆಲ್ಹಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಐಪಿಎಲ್ ಋತುವಿನಲ್ಲಿ ಅವರು 4 ಇನ್ನಿಂಗ್ಸ್‌ಗಳಿಂದ 108 ರನ್ ಗಳಿಸಿದ್ದರು. 2021-22ರ ಋತುವಿನಲ್ಲಿ ಬಂಗಾಳ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಇವರು, ಭಾರತ ‘ಎ’ ತಂಡದ ಪರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸಗಳಲ್ಲೂ ಭಾಗವಹಿಸಿದ್ದರು. ಪೊರೆಲ್‌ಗೆ 32 ಪ್ರಥಮ ದರ್ಜೆ ಹಾಗೂ 23 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ.