ಕುಳಿತಲ್ಲೆ ಎಲ್ಲಾ ಸಿಗುವಾಗ ಅಡುಗೆ ಯಾರು ಮಾಡಿಕೊಳ್ತಾರೆ, ಹೋಟೆಲ್​ತನಕ ಯಾರು ಹೋಗ್ತಾರೆ ಎಂದೆಲ್ಲಾ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡ್ತೀರಾ? ಅದರಲ್ಲಿಯೂ ಕ್ಲೌಡ್​ ಕಿಚನ್​ನಲ್ಲಿ ಆರ್ಡರ್​ ಮಾಡ್ತೀರಾ? ಹೋಟೆಲ್​ಗಳಲ್ಲಿ ಶೆಫ್​ ಆಗಿರೋ, ಕೆಲಸ ಮಾಡ್ತಿರೋ ಈ ಯುವಕರ ಮಾತೊಮ್ಮೆ ಕೇಳಿಬಿಡಿ... 

ಈಗ ಮನೆಯಲ್ಲಿ ಅಡುಗೆ ಮಾಡುವುದು ಎಂದರೆ ಹಲವರಿಗೆ ಅಲರ್ಜಿ. ಗಂಡಾಗಲೀ, ಹೆಣ್ಣು ಮಕ್ಕಳಾಗಲಿ ಈಗಿನವರಿಗೆ ಅಡುಗೆ ಮಾಡುವುದಕ್ಕೆ ಬರುವುದೂ ಅಷ್ಟಕ್ಕಷ್ಟೇ. ಇನ್ನು ಧಾವಂತದ ಯಾಂತ್ರಿಕದ ಈ ಕಾಲಘಟ್ಟದಲ್ಲಿ ನಗರ, ಮಹಾಗರ ಪ್ರದೇಶಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಅಡುಗೆ ಮಾಡುವುದು ಕಷ್ಟಸಾಧ್ಯವೂ ಆಗುವಂತಿದೆ. ಕೂಡು ಕುಟುಂಬ ಬೇಡ ಎಂದು ಪ್ರತ್ಯೇಕವಾಗಿಯೇ ವಾಸಮಾಡಬಯಸುವ ಕುಟುಂಬಗಳಲ್ಲಿ ಸಹಜವಾಗಿ ಈ ಕಷ್ಟ ಕಂಡುಬರುತ್ತಿದೆ. ಅದೇನೇ ಇದ್ದರೂ, ಒಂದೇ ಮಾತಿನಲ್ಲಿ ಹೇಳುವುದಾದರೆ ಅಗತ್ಯವಿದ್ದರೂ, ಅಗತ್ಯ ಇಲ್ಲದಿದ್ದರೂ, ಅನಿವಾರ್ಯತೆಯಿಂದಲೋ... ಒಟ್ಟಿನಲ್ಲಿ ಹೆಚ್ಚಿನವರು ಅಡುಗೆ ಮಾಡುವುದರಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಸಂದಿ ಗುಂದಿಗಳಲ್ಲಿಯೂ ಹೋಟೆಲ್​ಗಳು ತಲೆ ಎತ್ತಿ ನಿಂತಿದೆ. ಬೀದಿ ಬದಿಯ ತಿನಿಸುಗಳ ಬಳಿಯೂ ಜನಜಾತ್ರೆಯೇ ನೆರೆದಿರುವುದನ್ನು ನಗರ ಪ್ರದೇಶಗಳಲ್ಲಿ ನೋಡಬಹುದಾಗಿದೆ.

ಇದು ಒಂದೆಡೆಯಾದರೆ, ಹೋಟೆಲ್​ವರೆಗೆ ನಡೆದುಕೊಂಡು ಅಥವಾ ಗಾಡಿಯಲ್ಲಿ ಯಾರು ಹೋಗುತ್ತಾರೆ ಎನ್ನುವ ಸೋಮಾರಿಗಳಿಗೆ ವರದಾನ ಆಗಿರುವುದು ಫುಡ್​ ಆ್ಯಪ್​ಗಳು, ಜೊಮ್ಯಾಟೊ, ಸ್ವಿಗ್ಗಿ, ಬ್ಲಿಂಕಿಟ್​, ಜೆಪ್ಟೋ ಅಂಥ ಕಂಪೆನಿಗಳಿಗೆ ಇಂಥ ಸೋಮಾರಿಗಳೇ ಬಂಡವಾಳ. ಮನೆಯಿಂದ ಹೊರಕ್ಕೆ ಒಂದಿಷ್ಟು ದೂರ ಹೋಗಲಾಗದ ಸೋಮಾರಿಗಳಿಂದಾಗಿಯೇ ಸಹಸ್ರಾರು ಮಂದಿ ಈ ಫುಡ್​ ಆ್ಯಪ್​ಗಳಲ್ಲಿ ಡಿಲೆವರಿ ಕೆಲಸ ಮಾಡಿ ಉದ್ಯೋಗ ಪಡೆಯುತ್ತಿದ್ದಾರೆ ಎನ್ನುವುದು ನಿಜವಾದರೂ, ಈ ಫುಡ್​ ಆ್ಯಪ್​ಗಳು ಮಿಲೇನಿಯರ್​ ಆಗುತ್ತಿವೆ. ಅದಕ್ಕೆ ಸಾಕ್ಷಿಯಾದದ್ದು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿರುವ ವರದಿ. ಮೇಲೆ ತಿಳಿಸಿರುವ ಫುಡ್​ ಆ್ಯಪ್​ಗಳು 2023ರಲ್ಲಿ 35 ಸಾವಿರ ಕೋಟಿ ರೂಪಾಯಿಗಳ ವ್ಯಾಪಾರ ನಡೆಸಿರುವುದಾಗಿ ವರದಿಯಾಗಿದೆ!

ಹಾಗಿದ್ದರೆ ಮನೆಯಲ್ಲಿಯೇ ಕುಳಿತು ಸೋಮಾರಿಗಳಾಗಿ ನೀವು ತರಿಸುವ ಆಹಾರಗಳು ಎಷ್ಟು ಸುರಕ್ಷಿತ ಎನ್ನುವುದು ಗೊತ್ತಾ? ನಾವೇನು ಹೇಳುವುದು? ಹಲವು ವರ್ಷಗಳಿಂದ ಶೆಫ್ ಆಗಿಯೋ ಅಥವಾ ಹೋಟೆಲ್​ಗಳಲ್ಲಿ ವಿವಿಧ ಕೆಲಸ ಮಾಡುತ್ತಿರುವ ಸಿಬ್ಬಂದಿಯೇನು ಹೇಳಿದ್ದಾರೆ ಎನ್ನುವುದನ್ನು ಒಮ್ಮೆ ಕೇಳಿಬಿಡಿ, ಆಮೇಲೆ ಆನ್​ಲೈನ್​ ಫುಡ್​ ಬೇಕೊ, ಬೇಡವೋ ಎನ್ನುವುದನ್ನು ನಿರ್ಧರಿಸಿ. ಕೆಲವರು ಫೇಮಸ್​ ಹೋಟೆಲ್​ ಎಂದುಕೊಂಡು ಅಲ್ಲಿಂದ ಆರ್ಡರ್​ ಮಾಡಿದರೆ, ಮತ್ತೆ ಹಲವರು ಆ್ಯಪ್​ಗಳಲ್ಲಿ ತೋರಿಸಿರುವ ಫೋಟೋ, ಆ ಹೋಟೆಲ್​ ಹೆಸರು, ವಿಚಿತ್ರವಾಗಿರುವ ತಿಂಡಿಯ ಹೆಸರು ನೋಡಿ ಮೋಡಿಗೆ ಒಳಗಾಗುವುದು ಇದೆ. ಹೋಟೆಲ್​ನ ಬಣ್ಣ, ಅಲ್ಲಿರುವ ಡೆಕೋರೇಷನ್​ ಹೊರಗಡೆಯಿಂದ ನೋಡಿ ಏನೋ ಒಂದು ಆರ್ಡರ್​ ಮಾಡುತ್ತಾರೆ. ಆದರೆ ನಿಜಕ್ಕೂ ಆ ಹೋಟೆಲ್​ ಒಳಗೆ ಹೇಗಿರುತ್ತದೆ ಎನ್ನುವುದು ನಿಮಗೆ ಗೊತ್ತಾ? ಅಷ್ಟಕ್ಕೂ ಹೋಟೆಲ್​ ಎಂದು ಹೆಸರು ಇಟ್ಟುಕೊಂಡಿರುವ ಅದು ಹೋಟೆಲ್ಲೇ ಆಗಿರುತ್ತಾ ಎನ್ನುವುದು ಮನೆಯಲ್ಲಿಯೇ ಕುಳಿತು ತಿನ್ನುವ ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು.

ಅವೆಲ್ಲವನ್ನೂ ಈ ವಿಡಿಯೋದಲ್ಲಿ ಎಷ್ಟು ಸುಂದರವಾಗಿ ಹೇಳಿದ್ದಾರೆ ನೋಡಿ ಈ ಯುವಕರು. ಎಷ್ಟೋ ಹೋಟೆಲ್​ಗಳು ಹೆಸರಿಗೆ ಮಾತ್ರ ಹೋಟೆಲ್​ ಎಂದು ಇದ್ದು, ಅದಕ್ಕೆ ಸುಂದರವಾದ ಹೆಸರು, ಬಣ್ಣ ಬಳಿದು ಇಡಲಾಗುತ್ತದೆ. ಆದರೆ ಒಳಗಡೆ ಹೋದರೆ ಅಲ್ಲಿಯ ಗಜೀಲು ನೋಡಿದರೆ ವಾಂತಿ ಬರುವಂತೆ ಇರುತ್ತದೆ. ಇನ್ನು ಕೆಲವರು ಮನೆಯಲ್ಲಿಯೇ ಯಾವ್ಯಾವುದೋ ಕೆಟ್ಟ ಸ್ಥಿತಿಯಲ್ಲಿ ತಿನಿಸುಗಳನ್ನು ನೀಡುತ್ತಾರೆ, ಆದರೆ ಅದಕ್ಕೊಂದು ಹೋಟೆಲ್​ ಎಂದು ಹೆಸರು ಇಟ್ಟುಕೊಂಡಿರುತ್ತಾರೆ ಎಂಬ ಸತ್ಯವನ್ನು ಇದರಲ್ಲಿ ಅವರು ತಿಳಿಸಿದ್ದಾರೆ. ಅದರಲ್ಲಿಯೂ cloud kitchen ಸ್ಥಿತಿಯನ್ನು ಅವರು ತಿಳಿಸಿದ್ದಾರೆ. ಹಿಂದೆಲ್ಲಾ ಶುಗರ್​, ಬಿಪಿ ಪ್ರತಿಮನೆಯಲ್ಲಿಯೂ ಕೇಳಿಬರುವಂತೆಯೇ ಇಂದಿಗೆ ಕ್ಯಾನ್ಸರ್​ ಎನ್ನುವ ಮಹಾಮಾರಿ ಈ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದಕ್ಕೆ ಕಾರಣ ಏನು ಎನ್ನುವುದನ್ನು ಸ್ವಲ್ಪ ತಲೆಕೆಡಿಸಿಕೊಂಡು ಸ್ಟಡಿ ಮಾಡಿದರೆ, ಅವುಗಳಿಂದ ನಿಮ್ಮ ಈ ಮನೆಯಲ್ಲಿಯೇ ಕುಳಿತು ತಿನ್ನುವ ಸೋಮಾರಿತನ ಎಷ್ಟು ಕೊಡುಗೆ ನೀಡುತ್ತದೆ ಎನ್ನುವುದು ಅರ್ಥವಾದೀತು. allrounderakshaya ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರುವ ಈ ವಿಡಿಯೋ ಅನ್ನು ಒಮ್ಮೆ ಗಮನವಿಟ್ಟು ಕೇಳಿ...

View post on Instagram