RRR ಚಿತ್ರದ ಬಳಿಕ ವರ್ಚಸ್ಸು ಹೆಚ್ಚಿಸಿಕೊಂಡಿರೋ ಜ್ಯೂನಿಯರ್​ ಎನ್​ಟಿಆರ್​, ರಾಜಕೀಯ ಪ್ರವೇಶದ ಸುದ್ದಿ ಹರಡುತ್ತಿದ್ದಂತೆಯೇ ಅವರ ಚಿಕನ್​ ಲೆಗ್​ಪೀಸ್​ ವಿಷಯವೂ ಮತ್ತೆ ವೈರಲ್​ ಆಗ್ತಿದೆ. ಏನಿದು ವಿಷ್ಯ? 

ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್​​ಟಿಆರ್ ಇದೀಗ ರಾಜಕೀಯ ಪ್ರವೇಶಿಸುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಲೇ ಇದೆ. 'ಆರ್​ಆರ್​ಆರ್' ಮೂಲಕ ದೊಡ್ಡ ಗೆಲುವು ಪಡೆದುಕೊಂಡಿರುವ ನಟ, ಇದಾದ ಬಳಿಕ 'ದೇವರ' ಸಿನಿಮಾ ಸಾಧಾರಣ ಗೆಲುವು ಕಂಡರೂ ವರ್ಚಸ್ಸು ಕುಗ್ಗಲಿಲ್ಲ. ಅದೇ ಇನ್ನೊಂದೆಡೆ, ಟಿಡಿಪಿ ಪಕ್ಷವನ್ನು ಬೆಂಬಲಿಸಲು ಅವರೊಬ್ಬರೇ ಸಮರ್ಥರು ಎಂಬ ಚರ್ಚೆಗಳು ಹಲವು ದಿನಗಳಿಂದ ನಡೆಯುತ್ತಿವೆ. ಆದರೆ ಅನಿರೀಕ್ಷಿತವಾಗಿ, ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ರಾಜ್ಯದಲ್ಲಿ ಟಿಡಿಪಿ ಪಕ್ಷದ ಮುಖ್ಯಮಂತ್ರಿಯಾದರು. ಆದರೆ, ನಂದಮೂರಿ ಅಭಿಮಾನಿಗಳ ಕಣ್ಣುಗಳು ಎನ್‌ಟಿಆರ್ ಮೇಲೆ ಇವೆ. ನಂದಮೂರಿ ಅವರ ಅಭಿಮಾನಿಗಳು ಅವರನ್ನು ತಮ್ಮ ಅಜ್ಜನಂತೆ ಮುಖ್ಯಮಂತ್ರಿಯಾಗಿ ನೋಡಬೇಕೆಂದು ಆಶಿಸುತ್ತಿದ್ದಾರೆ. ಅಭಿಮಾನಿಗಳ ಬೇಡಿಕೆಯಂತೆ ಈ ಪರಿಸ್ಥಿತಿಯಲ್ಲಿ ಎನ್ಟಿಆರ್ ಮತ್ತು ಅವರ ಪತ್ನಿ ದೊಡ್ಡ ಯೋಜನೆ ರೂಪಿಸಿದ್ದಾರೆ ಎಂದೂ ಅದೇ ಇನ್ನೊಂದೆಡೆ ವರದಿಯಾಗುತ್ತಿದೆ.

ಇದರ ನಡುವೆಯೇ, ಇದೀಗ ಚಿಕನ್​ ಲೆಗ್​ಪೀಸ್​ ಒಂದನ್ನು ಕಚ್ಚಿರುವುದಕ್ಕೆ ಸುಮಾರು ಏಳು ಕೋಟಿ ರೂಪಾಯಿ ಪಡೆದಿರುವುದಾಗಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದು ಜಾಹೀರಾತಿಗೆ ಅವರು ಪಡೆದಿರುವ ಹಣ ಎನ್ನಲಾಗುತ್ತಿದೆ. ನಟ-ನಟಿಯರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ದೊಡ್ಡ ಪ್ರಮಾಣದ ಹಣ ಪಡೆಯುವುದು ಹೊಸತೇನಲ್ಲ. ಆದರೆ, 'RRR' ಚಿತ್ರದ ಬಳಿಕ ಸೂಪರ್​ಸ್ಟಾರ್ ಪಟ್ಟಕ್ಕೇರಿರುವ ಜ್ಯೂ. ಎನ್​ಟಿಆರ್​, ಮೆಕ್‌ಡೊನಾಲ್ಡ್ಸ್ ಮೆಕ್‌ಸ್ಪೈಸಿ ಚಿಕನ್ (Chicken) ಶೇರ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ವರದಿಗಳನ್ನು ನಂಬುವುದಾದರೆ, ಈ ಬ್ರಾಂಡ್‌ನ ಅನುಮೋದನೆಗಾಗಿ ಅವರು ಪಡೆದಿರುವ ಶುಲ್ಕದ ಮೊತ್ತವನ್ನು ದಕ್ಷಿಣ ಭಾರತದ ಬಹುತೇಕ ನಟಿಯರು ಇಡೀ ಚಿತ್ರಕ್ಕೂ ಸ್ವೀಕರಿಸಲು ಸಾಧ್ಯವಿಲ್ಲ. ಈ ಬ್ರ್ಯಾಂಡ್‌ನ ರಾಯಭಾರಿಯಾಗಿರುವ ರಶ್ಮಿಕಾ ಮಂದಣ್ಣ ನಂತರ ಜೂನಿಯರ್ ಎನ್‌ಟಿಆರ್ ದಕ್ಷಿಣ ಭಾರತದ ಎರಡನೇ ನಟರಾಗಿದ್ದಾರೆ.

ಇಂಗ್ಲಿಷ್ ವೆಬ್‌ಸೈಟ್ ಸುದ್ದಿಯ ಪ್ರಕಾರ, 40 ವರ್ಷದ ಜೂನಿಯರ್ ಎನ್‌ಟಿಆರ್ ಮೆಕ್‌ಡೊನಾಲ್ಡ್ಸ್ ಮೆಕ್‌ಸ್ಪೈಸಿ ಚಿಕನ್ ಶೇರ್‌ಗಳ ಬ್ರಾಂಡ್‌ನ 24 ಸೆಕೆಂಡುಗಳ ಜಾಹೀರಾತಿಗಾಗಿ 6-8 ಕೋಟಿ ವಿಧಿಸಿದ್ದಾರೆ. ಅವರು 7 ಕೋಟಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರತಿ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗೆ ಅವರು ಒಂದೇ ಮೊತ್ತವನ್ನು ವಿಧಿಸುತ್ತಾರೆಂದು ಹೇಳಲಾಗುತ್ತಿದೆ. ಆದಾಗ್ಯೂ, ಈ ಬಗ್ಗೆ ಎಲ್ಲಿಯೂ ಅಧಿಕೃತ ದೃಢೀಕರಣವಿಲ್ಲ. ಆದರೆ ಈ ಶುಲ್ಕದ ಮಾಹಿತಿ ಸರಿಯಾಗಿದ್ದರೆ, ದಕ್ಷಿಣ ಭಾರತದ ಬಹುತೇಕ ನಟಿಯರು ಚಿತ್ರಕ್ಕೆ ಪಡೆಯುವ ಶುಲ್ಕಕ್ಕಿಂತ ಇದು ಹೆಚ್ಚು ಎನ್ನಲಾಗಿದೆ. ನಟಿ ನಯನತಾರಾ ಬಿಟ್ಟರೆ ದಕ್ಷಿಣ ಭಾರತದ ಯಾವ ನಾಯಕಿಯೂ ಆರು ಕೋಟಿಗಿಂತ ಹೆಚ್ಚು ಸಂಭಾವನೆ ಇದುವರೆಗೆ ಪಡೆದದ್ದಿಲ್ಲ. ಇನ್ನು ನಯನತಾರಾ ವಿಷಯ ಹೇಳುವುದಾದರೆ ಇವರು ಪ್ರತಿ ಚಿತ್ರಕ್ಕೆ 8-10 ಕೋಟಿ ಚಾರ್ಜ್ ಮಾಡುತ್ತಾರೆ.

ಮೆಕ್‌ಡೊನಾಲ್ಡ್ಸ್‌ನ ಬ್ರಾಂಡ್ ಅಂಬಾಸಿಡರ್ ಆದ ನಂತರ, ಜೂನಿಯರ್ ಎನ್‌ಟಿಆರ್ ತಮ್ಮ ಹೇಳಿಕೆಯೊಂದರಲ್ಲಿ, 'ಮೆಕ್‌ಡೊನಾಲ್ಡ್ಸ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ಮೆಕ್‌ಸ್ಪೈಸಿ ಚಿಕನ್ ಶೇರ್‌ಗಳಿಗೆ ಸೇರಲು ನಾನು ಸಂತೋಷಪಡುತ್ತೇನೆ. ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪ್ರೀತಿಸುವ ಐಕಾನಿಕ್ ಬ್ರ್ಯಾಂಡ್ ಆಗಿದೆ. ಈ ಪ್ರಯಾಣದ ಭಾಗವಾಗಿರುವುದು ನಿಜಕ್ಕೂ ಅದ್ಭುತವಾಗಿದೆ. ನಾನು ಯಾವಾಗಲೂ ಸಹಯೋಗ ಮತ್ತು ಹಂಚಿಕೆಯಲ್ಲಿ ನಂಬಿಕೆ ಇಟ್ಟಿದ್ದೇನೆ' ಎಂದಿದ್ದರು. ಹಳೆಯ ವಿಡಿಯೋ ಈಗ ಮತ್ತೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ, ಜ್ಯೂನಿಯರ್​ ಎನ್​ಟಿಆರ್​ ತಮ್ಮ ಎರಡು ದಶಕಗಳ ವೃತ್ತಿ ಜೀವನದಲ್ಲಿ RRR ಪ್ರಪಂಚದಾದ್ಯಂತ ಅವರಿಗೆ ಅಪಾರ ಅಭಿಮಾನಿಗಳನ್ನು ಕೊಟ್ಟಿದೆ. ಜೂನಿಯರ್ ಎನ್​ಟಿಆರ್ ತಮ್ಮ ನಟನೆಯ ಜೊತೆಗೆ ತಮ್ಮ ವಿನಮ್ರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಪ್ರಣತಿ ಅವರೊಂದಿಗೆ 5 ಮೇ 2011 ರಂದು ಮದುವೆ ಮಾಡಿಕೊಂಡಾಗಲೇ ಸುದ್ದಿಯಾಗಿದ್ದರು. ಇದಕ್ಕೆ ಕಾರಣ, ಅವರ ಅದ್ಧೂರಿ ವಿವಾಹದ ಒಟ್ಟು ಬಜೆಟ್ 100 ಕೋಟಿ ರೂಪಾಯಿ ಆಗಿತ್ತು! ಇಂತಿಪ್ಪ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಜನಪ್ರಿಯತೆ ಎಷ್ಟಿದೆಯೆಂದರೆ, ಅವರು ಹೊಸ ಚಿತ್ರಗಳಿಗೆ ಮಾತ್ರವಲ್ಲದೆ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಗೂ ಆಫರ್‌ಗಳನ್ನು ಪಡೆಯುತ್ತಿದ್ದಾರೆ.