How to use leftover rice: ರಾತ್ರಿ ಉಳಿದ ಅನ್ನ ಎಸೆಯುವ ಬದಲು ಅಥವಾ ದಿನವೂ ಚಿತ್ರಾನ್ನ ಮಾಡುವ ಬದಲು ಮನೆಯಲ್ಲೇ ಸಂಡಿಗೆಯನ್ನೇಕೆ ಮಾಡಬಾರದು? ಹಳೆಯ ಕಾಲದ ಈ ಅದ್ಭುತ ಕಿಚನ್ ಟ್ರಿಕ್ ಬಳಸಿ, ಒಂದು ರೂಪಾಯಿ ಖರ್ಚಿಲ್ಲದೆ ವರ್ಷವಿಡೀ ಬಾಳಿಕೆ ಬರುವ ರುಚಿಕರವಾದ ಅನ್ನದ ಸಂಡಿಗೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
ನಮ್ಮ ಮನೆಗಳಲ್ಲಿ ರಾತ್ರಿ ಮಾಡಿದ ಅನ್ನ ಸ್ವಲ್ಪ ಉಳಿಯುವುದು ಸಾಮಾನ್ಯ. ಆ ಅನ್ನವನ್ನು ಅನೇಕರು ಎಸೆಯುತ್ತಾರೆ ಅಥವಾ ಮರುದಿನ ಬೆಳಗ್ಗೆ ಚಿತ್ರಾನ್ನ, ಎಗ್ ರೈಸ್‌ನಂತಹವುಗಳನ್ನು ಮಾಡುತ್ತಾರೆ. ಆದರೆ, ಇವೆಲ್ಲಕ್ಕಿಂತ ಭಿನ್ನವಾಗಿ ಉಳಿದ ಅನ್ನದಿಂದ ದೀರ್ಘಕಾಲ ಬಾಳಿಕೆ ಬರುವಂತೆ ಅತ್ಯಂತ ರುಚಿಕರವಾದ, ಕ್ರಿಸ್ಪಿಯಾಗಿರುವ ಅನ್ನದ ಸಂಡಿಗೆ ತಯಾರಿಸಬಹುದು. ಇದು ನಮ್ಮ ಅಜ್ಜಿ ಕಾಲದ ಉಳಿತಾಯದ ಉಪಾಯ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಸ್ನಾಕ್ಸ್ ಕೊಳ್ಳುವ ಬದಲು, ಮನೆಯಲ್ಲೇ ರೂಪಾಯಿ ಖರ್ಚಿಲ್ಲದೆ ಇವುಗಳನ್ನು ಸಿದ್ಧಪಡಿಸಬಹುದು.

ರಾತ್ರಿ ಹೊತ್ತು ಅನ್ನ ಉಳಿದರೆ ಎಸೆಯದೆ ಅಥವಾ ರೊಟೀನ್ ಆಗಿ ಚಿತ್ರಾನ್ನ ಮಾಡದೆ, ಅತ್ಯಂತ ರುಚಿಕರವಾದ ಅನ್ನದ ಸಂಡಿಗೆ ತಯಾರಿಸಬಹುದು. ಇದು ಒಂದು ರೂಪಾಯಿ ಖರ್ಚಿಲ್ಲದೆ ಮನೆಯಲ್ಲೇ ಸ್ನಾಕ್ಸ್ ತಯಾರಿಸುವ ಅದ್ಭುತ ಉಪಾಯ. ಬೇಳೆ ಸಾರು, ಸಾಂಬಾರ್ ಅನ್ನದ ಜೊತೆ ನೆಂಚಿಕೊಳ್ಳಲು ಅಥವಾ ಸಾಯಂಕಾಲದ ಸ್ನಾಕ್ ಆಗಿ ಎಣ್ಣೆಯಲ್ಲಿ ಕರಿದು ತಿನ್ನಲು ಈ ಸಂಡಿಗೆಗಳು ಅದ್ಭುತವಾಗಿರುತ್ತವೆ. ತಯಾರಿಸುವ ವಿಧಾನ ಮತ್ತು ಬೇಕಾಗುವ ಪದಾರ್ಥಗಳ ಪೂರ್ಣ ವಿವರವನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು
ಉಳಿದ ಅನ್ನ-1 ಕಪ್
ನೀರು-1 ಕಪ್
ಟೊಮೆಟೊ ಪೇಸ್ಟ್-ಅರ್ಧ ಕಪ್
ಜೀರಿಗೆ-ಕಾಲು ಟೀ ಚಮಚ
ಎಳ್ಳು-ಅರ್ಧ ಟೀ ಚಮಚ
ಕಾರದ ಪುಡಿ-ಅರ್ಧ ಟೀ ಚಮಚ
ಅರಿಶಿನ ಸ್ವಲ್ಪ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲು ಸ್ಟವ್ ಮೇಲೆ ಒಂದು ಪಾತ್ರೆ ಇಟ್ಟು ಒಂದು ಕಪ್ ನೀರು ಹಾಕಿ ಕುದಿಸಬೇಕು. ನೀರು ಕುದಿಯಲು ಆರಂಭಿಸಿದಾಗ ಅದರಲ್ಲಿ ಒಂದು ಕಪ್ ಉಳಿದ ಅನ್ನ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಬೇಕು. ಅನ್ನ ಮೆತ್ತಗಾದ ನಂತರ ಅದಕ್ಕೆ ಅರ್ಧ ಕಪ್ ಟೊಮೆಟೊ ಪೇಸ್ಟ್ ಹಾಕಿ ಚೆನ್ನಾಗಿ ಬೆರೆಸಬೇಕು.
ಆ ನಂತರ ಅದರಲ್ಲಿಯೇ ಸ್ವಲ್ಪ ಅರಿಶಿನ, ಜೀರಿಗೆ, ಎಳ್ಳು, ಖಾರದ ಪುಡಿ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸುತ್ತಾ ಇನ್ನೆರಡು ನಿಮಿಷಗಳ ಕಾಲ ಬೇಯಿಸಬೇಕು. ಈ ಅನ್ನದ ಮಿಶ್ರಣವು ಚೆನ್ನಾಗಿ ಗಟ್ಟಿಯಾದ ಮೇಲೆ ಸ್ಟವ್ ಆಫ್ ಮಾಡಿ ಆರಲು ಬಿಡಬೇಕು.
ಈಗ ಒಂದು ಪಾಲಿಥಿನ್ ಕವರ್ ಅನ್ನು ಬಿಸಿಲಿನಲ್ಲಿ ಹರಡಿ, ಕೈಗೆ ಸ್ವಲ್ಪ ನೀರು ಹಚ್ಚಿಕೊಳ್ಳುತ್ತಾ, ಈ ಅನ್ನದ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಹಪ್ಪಳ ಅಥವಾ ಸಂಡಿಗೆಯಂತೆ ಕವರ್ ಮೇಲೆ ಒತ್ತಬೇಕು. ಇವುಗಳನ್ನು ಕಡು ಬಿಸಿಲಿನಲ್ಲಿ ಎರಡು ಮೂರು ದಿನಗಳ ಕಾಲ ಎರಡೂ ಬದಿ ತಿರುಗಿಸುತ್ತಾ ಚೆನ್ನಾಗಿ ಒಣಗಿಸಬೇಕು. ಗಲಗಲ ಎಂದು ಶಬ್ದ ಬರುವಂತೆ ಒಣಗಿದ ಸಂಡಿಗೆಗಳನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿಟ್ಟರೆ ವರ್ಷಪೂರ್ತಿ ಬಳಸಬಹುದು.
ಉತ್ತಮ ರುಚಿಗಾಗಿ ಟಿಪ್ಸ್
ಮಿಕ್ಸಿ ಬಳಕೆ: ಅನ್ನವನ್ನು ನೀರಿನಲ್ಲಿ ಬೇಯಿಸುವ ಮೊದಲು, ಮಿಕ್ಕಿದ ಅನ್ನಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಆಮೇಲೆ ಬಿಸಿ ನೀರಿನಲ್ಲಿ ಕುದಿಸಿದರೆ ಸಂಡಿಗೆಗಳು ಇನ್ನು ಸಾಫ್ಟ್ ಆಗಿ ಬರುತ್ತವೆ.
ಟೊಮೆಟೊ ಫ್ಲೇವರ್: ನೀವು ಹಾಕುವ ಟೊಮೆಟೊ ಪೇಸ್ಟ್ ಜೊತೆಗೆ ಒಂದು ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಶುಂಠಿ ಸೇರಿಸಿ ರುಬ್ಬಿಕೊಂಡರೆ ಹೋಟೆಲ್ ಶೈಲಿಯ ರುಚಿ ಸಂಡಿಗೆ ಸಿಗುತ್ತದೆ.
ಇಂಗು ಬಳಸಿ: ಜೀರಿಗೆ ಜೊತೆಗೆ ಒಂದು ಚಿಟಿಕೆ ಇಂಗು ಸೇರಿಸಿದರೆ ಸಂಡಿಗೆಯ ಪರಿಮಳ ಅದ್ಭುತವಾಗಿರುತ್ತದೆ ಮತ್ತು ಇದು ಜೀರ್ಣಶಕ್ತಿಗೂ ಒಳ್ಳೆಯದು.
ಒಣಗಿಸುವ ಮತ್ತು ಶೇಖರಿಸುವ ಟಿಪ್ಸ್
ಎಣ್ಣೆ ಹಚ್ಚಬೇಡಿ: ಪ್ಲಾಸ್ಟಿಕ್ ಕವರ್ ಮೇಲೆ ಸಂಡಿಗೆ ಹಾಕುವಾಗ ಎಣ್ಣೆ ಹಚ್ಚಬೇಡಿ. ಎಣ್ಣೆ ಹಚ್ಚಿದರೆ ಕೆಲವು ತಿಂಗಳ ನಂತರ ಸಂಡಿಗೆಯಿಂದ ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ. ಬದಲಾಗಿ ಕವರ್ ಅನ್ನು ಸ್ವಲ್ಪ ನೀರಿನಿಂದ ಒದ್ದೆ ಮಾಡಿ ಸಾಕು.
ಸರಿಯಾಗಿ ಒಣಗಿಸಿ: ಸಂಡಿಗೆಗಳು ಮೇಲ್ನೋಟಕ್ಕೆ ಒಣಗಿದಂತೆ ಕಂಡರೂ, ಕನಿಷ್ಠ 3 ದಿನಗಳ ಕಾಲ ಕಡು ಬಿಸಿಲಿನಲ್ಲಿ ಒಣಗಿಸಬೇಕು. ಇಲ್ಲದಿದ್ದರೆ ಡಬ್ಬದಲ್ಲಿ ಇಟ್ಟಾಗ ಬೂಸ್ಟ್ (fungus) ಬರುವ ಸಾಧ್ಯತೆ ಇರುತ್ತದೆ.
ಸಣ್ಣ ಸೈಜ್: ಸಂಡಿಗೆಗಳನ್ನು ತುಂಬಾ ದಪ್ಪಗೆ ಹಾಕಬೇಡಿ. ಒಣಗಿದ ಮೇಲೆ ಅವು ಸಣ್ಣದಾಗುತ್ತವೆ, ಆದರೆ ಎಣ್ಣೆಯಲ್ಲಿ ಕರಿದಾಗ ಚೆನ್ನಾಗಿ ಉಬ್ಬುತ್ತವೆ. ದಪ್ಪಗಿದ್ದರೆ ಒಳಭಾಗ ಸರಿಯಾಗಿ ಒಣಗುವುದಿಲ್ಲ.
ಗಮನಿಸಿ
ಒಂದು ವೇಳೆ ನಿಮಗೆ ಟೊಮೆಟೊ ಇಷ್ಟವಿಲ್ಲದಿದ್ದರೆ, ಕೇವಲ ಬಿಳಿ ಎಳ್ಳು ಮತ್ತು ಓಂ ಕಾಳು (Ajwain) ಹಾಕಿ ಕೂಡ ಮಾಡಬಹುದು. ಇದು ಅನ್ನದ ಜೊತೆ ನೆಂಚಿಕೊಳ್ಳಲು ಬಹಳ ರುಚಿಯಾಗಿರುತ್ತದೆ.
