Radish poha dosa: ಪ್ರತಿದಿನ ಬೆಳಗ್ಗೆ ಒಂದೇ ರೀತಿಯ ಇಡ್ಲಿ, ದೋಸೆ ತಿಂದು ಬೇಸರವಾಗಿದ್ದರೆ, ಈ ಬಾರಿ ಮನೆಯಲ್ಲೇ ಸುಲಭವಾಗಿ ಸಿಗುವ ಮೂಲಂಗಿ, ಅವಲಕ್ಕಿ ಹಾಗೂ ಅಕ್ಕಿ ಹಿಟ್ಟಿನಿಂದ ರುಚಿಕರವಾದ ‘ಮೂಲಂಗಿ ಅವಲಕ್ಕಿ ರೊಟ್ಟಿ’ ತಯಾರಿಸಿ. ವಿಶೇಷವೆಂದರೆ ಇದಕ್ಕೆ ಚಟ್ನಿಯೂ ಬೇಕಾಗುವುದಿಲ್ಲ! ತಯಾರಿಸುವ ಸರಳ ವಿಧಾನ ಇಲ್ಲಿದೆ.

ಪ್ರತಿದಿನ ಬೆಳಗ್ಗೆ ಒಂದೇ ರೀತಿಯ ಇಡ್ಲಿ, ದೋಸೆ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಈ ಬಾರಿ ಉಪಾಹಾರಕ್ಕೆ ಹೊಸದಾದ, ರುಚಿಕರ ಮತ್ತು ಆರೋಗ್ಯಕರವಾದ ‘ಮೂಲಂಗಿ ಅವಲಕ್ಕಿ ರೊಟ್ಟಿ’ ಟ್ರೈ ಮಾಡಿ ನೋಡಿ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಮೂಲಂಗಿ ಹಾಗೂ ಅಕ್ಕಿ ಹಿಟ್ಟಿನಿಂದಲೇ ಇದನ್ನು ಸಿದ್ಧಪಡಿಸಬಹುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಈ ಪೋಷಕಾಂಶಭರಿತ ತಿಂಡಿಗೆ ಪ್ರತ್ಯೇಕ ಸೈಡ್ ಡಿಶ್ ಅಥವಾ ಚಟ್ನಿಯೇ ಬೇಕಾಗುವುದಿಲ್ಲ! ಬೇಕೆನಿಸಿದರೆ ತೆಂಗಿನಕಾಯಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು

ಅಕ್ಕಿ ಹಿಟ್ಟು - ಒಂದೂವರೆ ಕಪ್, ದೊಡ್ಡ ಮೂಲಂಗಿ - 1, ಈರುಳ್ಳಿ - 2, ತುರಿದ ತೆಂಗಿನಕಾಯಿ - ಕಾಲು ಕಪ್, ಹಸಿಮೆಣಸಿನಕಾಯಿ - 2, ಕೊತ್ತಂಬರಿ ಸೊಪ್ಪು - ಸ್ವಲ್ಪ, ಅವಲಕ್ಕಿ - 4 ಟೇಬಲ್ ಚಮಚ, ಜೀರಿಗೆ - ಅರ್ಧ ಟೀ ಚಮಚ, ಚಿಲ್ಲಿ ಫ್ಲೇಕ್ಸ್ (ಒಣಮೆಣಸಿನಕಾಯಿ ತರಿ) - 1 ಟೇಬಲ್ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ಬಿಸಿ ನೀರು, ಬೇಯಿಸಲು ಎಣ್ಣೆ ಹಾಗೂ ತಟ್ಟಲು ಬಾಳೆ ಎಲೆ.

ತಯಾರಿಸುವ ವಿಧಾನ

ಮೊದಲಿಗೆ ಮೂಲಂಗಿ ಸಿಪ್ಪೆ ತೆಗೆದು ಸಣ್ಣದಾಗಿ ತುರಿದುಕೊಳ್ಳಿ. ಹಾಗೆಯೇ ಅವಲಕ್ಕಿಯನ್ನು ಚೆನ್ನಾಗಿ ತೊಳೆದು 10 ನಿಮಿಷ ನೀರಿನಲ್ಲಿ ನೆನೆಸಿಡಿ.

ಒಂದು ಪಾತ್ರೆಯಲ್ಲಿ ಒಂದೂವರೆ ಕಪ್ ಅಕ್ಕಿ ಹಿಟ್ಟು ತೆಗೆದುಕೊಂಡು, ಅದಕ್ಕೆ ತುರಿದ ಮೂಲಂಗಿ, ಸಣ್ಣದಾಗಿ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ. ಬಳಿಕ ತುರಿದ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ನೀರು ಹಿಂಡಿದ ನೆನೆಸಿದ ಅವಲಕ್ಕಿ ಸೇರಿಸಿ.

ನಂತರ ಜೀರಿಗೆ, ಚಿಲ್ಲಿ ಫ್ಲೇಕ್ಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವೂ ಹಿಟ್ಟಿನೊಂದಿಗೆ ಚೆನ್ನಾಗಿ ಬೆರೆಯುವಂತೆ ಕೈಯಿಂದ ಕಲಸಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ಬಿಸಿ ನೀರು ಸೇರಿಸುತ್ತಾ ತೀರಾ ಗಟ್ಟಿಯೂ ಅಲ್ಲದ, ತೀರಾ ತೆಳ್ಳಗೂ ಅಲ್ಲದ ಮೃದುವಾದ ಹಿಟ್ಟಿನ ಮುದ್ದೆಯಂತೆ ಕಲಸಿಕೊಳ್ಳಿ.

ಈಗ ಒಂದು ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಸವರಿ, ಅದರ ಮೇಲೆ ಸ್ವಲ್ಪ ಹಿಟ್ಟನ್ನು ಇಟ್ಟು ದುಂಡಗೆ ಮತ್ತು ತೆಳ್ಳಗೆ ಚಪಾತಿ ಅಥವಾ ರೊಟ್ಟಿಯಂತೆ ತಟ್ಟಿ.

ಒಲೆಯ ಮೇಲೆ ಹಂಚು ಬಿಸಿ ಮಾಡಿ. ಹಂಚು ಕಾದ ನಂತರ ತಟ್ಟಿದ ಹಿಟ್ಟನ್ನು ಬಾಳೆ ಎಲೆ ಸಮೇತ ಹಂಚಿನ ಮೇಲೆ ತಲೆಕೆಳಗಾಗಿ ಹಾಕಿ, ನಿಧಾನವಾಗಿ ಎಲೆಯನ್ನು ತೆಗೆಯಿರಿ.

ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ನಿಮಿಷ ಬೇಯಿಸಿ. ನಂತರ ಮುಚ್ಚಳ ತೆಗೆದು ಇನ್ನೊಂದು ಬದಿಗೆ ತಿರುಗಿಸಿ, ಮತ್ತೆ ಮುಚ್ಚಳ ಮುಚ್ಚಿ 1 ನಿಮಿಷ ಬಂಗಾರದ ಬಣ್ಣಕ್ಕೆ ಬರುವವರೆಗೆ ಬೇಯಿಸಿ.

ಅಷ್ಟೇ, ಗರಿಗರಿಯಾದ ಮತ್ತು ಬಾಯಲ್ಲಿ ನೀರೂರಿಸುವ ಬಿಸಿಬಿಸಿ ಮೂಲಂಗಿ ಅವಲಕ್ಕಿ ರೊಟ್ಟಿ ಸವಿಯಲು ಸಿದ್ಧ! ಚಟ್ನಿ ಇಲ್ಲದೆಯೂ ತಿನ್ನಲು ಸಖತ್ ರುಚಿಯಾಗಿರುವ ಈ ರೊಟ್ಟಿಯನ್ನು, ಬೇಕಿದ್ದರೆ ಕೊಬ್ಬರಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಸವಿಯಬಹುದು.

ಬಾಳೆ ಎಲೆ ಇಲ್ಲದಿದ್ದರೆ ಏನು ಮಾಡಬೇಕು?

ಮನೆಯಲ್ಲಿ ಬಾಳೆ ಎಲೆ ಸಿಗದಿದ್ದರೆ ಚಿಂತಿಸಬೇಡಿ, ಅದರ ಬದಲಾಗಿ ಬಟರ್ ಪೇಪರ್ (Butter Paper) ಅಥವಾ ಎಣ್ಣೆ ಸವರಿದ ಹೋಳಿಗೆ ಶೀಟ್ ಬಳಸಿ ತಟ್ಟಬಹುದು. ಬೇಕಿದ್ದರೆ ತಣ್ಣಗಿರುವ ತವಾಗೆ ಸ್ವಲ್ಪ ಎಣ್ಣೆ ಸವರಿ, ನೇರವಾಗಿ ತವಾ ಮೇಲೆಯೇ ತಟ್ಟಿ ನಂತರ ಒಲೆಯ ಮೇಲಿಟ್ಟು ಬೇಯಿಸಬಹುದು.