ರಾಘವೇಂದ್ರ ಅಗ್ನಿಹೋತ್ರಿ ಮಂಗಳೂರು

ಈ ಪ್ರತಿಭಾ ಸಂಪನ್ನರು ಇಷ್ಟು ದಿನ ಎಲ್ಲಿದ್ದರೋ ಆ ದೇವನೇ ಬಲ್ಲ. ಲಾಕ್ ಡೌನ್ ಪರಿಣಾಮ ಮನೆ ಮನೆಯಲ್ಲೂ ಭೀಮಸೇನ, ನಳಮಹಾರಾಜರಂಥ ಆಧುನಿಕ ಶೆಫ್ ಗಳು ದಿಢೀರ್ ಎಂದು ಹುಟ್ಟಿಕೊಂಡಿ ದ್ದಾರೆ. ಮನೆ ಮನೆಯೂ ಪ್ರಯೋಗಶೀಲ ಪಾಕಶಾಲೆಯಾಗಿ ಪರಿಣಮಿಸಿವೆ. ಸಾಮಾಜಿಕ ಜಾಲತಾಣಗಳನ್ನು ತೆರೆಯುತ್ತಿದ್ದಂತೇ ಅಬ್ಬಬ್ಬಾ ಅದೆಷ್ಟು ರೆಸಿಪಿ ಕಂಡು ಕೇಳರಿಯದ ಡಿಶ್ ಗಳು. 

ಸಾಮಾಜಿಕ ಜಾಲತಾಣಗಳನ್ನು ಬೆಳಿಗ್ಗೆ ತೆರೆದರೆ ಸಾಕು ಕಲರ್ ಫುಲ್ ದೋಸೆ, ಇಡ್ಲಿಯ ಚಿತ್ರಗಳು. ಬಸಳೆದೋಸೆ, ದಾಸವಾಳ ಸಪ್ಪಿನ ಹಸಿರು ದೋಸೆ, ಹೊಂಬಣ್ಣದ ಪೈನಾಪಲ್ ದೋಸೆ, ಕೆಂಬಣ್ಣದ ಬೀಟ್ರೂಟ್ ದೋಸೆ, ಮತ್ತೆ ಕೆಲವರ ಮನೆಯಲ್ಲಿ ಬಿಳಿ ಇಡ್ಲಿಗೆ ಕೆಂಪು ಚಟ್ಣಿಯಾದರೆ ಇನ್ನೂಕೆಲವರ ಮನೆಯಲ್ಲಿ ಹಸಿರು ಬಣ್ಣದ ಪಾಲಕ್ ಇಡ್ಲಿಗೆ ಬಿಳಿ ಚಟ್ಣಿ. ಹೀಗೆ ವಿಧ ವಿಧ ತಿಂಡಿಗಳ ದೃಶ್ಯಾವಳಿ ಲಾಕ್ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿತ್ತು.

ಗೋಡಂಬಿ ಇಷ್ಟ ಎನ್ನುವವರಿಗೆ ಗೇರು ಹಣ್ಣಿನ ಬಗ್ಗೆ ಏನ್ ಗೊತ್ತು?

ಸ್ವಲ್ಪ ಬ್ರೇಕ್  :   ಬೆಳಿಗ್ಗೆ ತಿಂಡಿ ಸಮಯ ಮುಗಿಯಿತು. ಸ್ವಲ್ಪ ಬ್ರೇಕ್ ಪಡೆದು ಮತ್ತೆ ಜಾಲತಾಣ ತೆರೆದರೆ ವಿವಿಧ ಬಣ್ಣಗಳ ಜ್ಯೂಸ್. ಕೋಕಮ್, ಪೈನಾಪಲ್, ನೆಲ್ಲಿಕಾಯಿ, ಮಾವಿನ ಶರಬತ್ ಗಳ ಚಿತ್ರ ಕಾಣುತ್ತಿತ್ತು. ಜ್ಯೂಸ್ ಇಷ್ಟವಾಗದವರಿಗೆ ಆರೋಗ್ಯವರ್ಧಕ ಕಷಾಯಗಳು ಒಂದೆರಡೇ ಅಲ್ಲ, ಎಷ್ಟೊಂದು ಬಗೆ ಬಗೆಯ ಕಷಾಯಗಳು, ಅರಿಶಿಣ, ತುಳಸಿ, ಅಶ್ವಗಂಧ, ಚಕ್ಕೆ, ಬಿಲ್ಪತ್ರೆಯ ಕಷಾಯ, ಗ್ರೀನ್ ಟೀ, ಬ್ಲಾಕ್ ಟೀ ಹೀಗೆ ಆರೋಗ್ಯ ವರ್ಧನೆಗೆ ಏನು ಬೇಕೊ ಅದೆಲ್ಲ ಜಾಲತಾಣಗಳಲ್ಲೇ ಸಿಗುತ್ತಿತ್ತು. ಮತ್ತೆ ಮಧ್ಯಾಹ್ನವಾಗುತ್ತಿತ್ತಂತೇ ಊಟದ ರೆಸಿಪಿಗಳು. ಜಾಲತಾಣಗಳನ್ನು ನೋಡಿಯೇ ಅರ್ಧ ಉದರ ಭರ್ತಿಯಾಗುವಷ್ಟು ಚಿತ್ರಗಳು.
ಯಾವ ಪುಸ್ತಕದಲ್ಲೂ ಸಿಗದ  ರೆಸಿಪಿಗಳ ಮಹಾಪುರವೇ ಜಾಲತಾಣಗಳಲ್ಲಿ ಗೋಚರವಾಗುತ್ತಿತ್ತು. ಊಟಕ್ಕೆ ವಿಧ ವಿಧ ಪದಾರ್ಥಗಳಾದ ತಂಬುಳಿ, ಗೊಜ್ಜು, ಪಲ್ಯ, ಸಾಂಬಾರ್ ಗಳು ಮನ ತಣಿಸುವುದಷ್ಟೇ ಅಲ್ಲ, ನಮ್ಮ ಮನೆಯಲ್ಲೂ ಮಾಡಬೇಕೆಂಬ ತವಕ ಜಾಲತಾಣಿಗರಲ್ಲಿ ಹುಟ್ಟುಹಾಕುತ್ತಿತ್ತು.

 ಜಾಲತಾಣವೇ ಗುರು :   ಹೊಸ ಹೊಸ ಪ್ರಯೋಗಗಳಿಗೆ ಲಾಕ್ ಡೌನ್ ನಾಂದಿ ಹಾಡಿದ್ದಂತೂ ಸತ್ಯ . ತಮ್ಮ ಮನೆಯಲ್ಲೇ ಹೊಸ ಹೊಸ ಪ್ರಯೋಗ ನಡೆಸಲು ಜಾಲತಾಣವೇ ಸೇತುವಾಯಿತು. ಜಾಲತಾಣದಲ್ಲಿ ಕಂಡಿದ್ದನ್ನು ತಮ್ಮ ಮನೆಯಲ್ಲೂ ಪ್ರಯೋಗ ಮಾಡಿ ಯಶಸ್ವಿಯಾಗಿ ಫೋಟೊವನ್ನು ಜಾಲತಾಣಕ್ಕೆ ಹರಿದುಬಿಟ್ಟರು. ಹೀಗೆ ಗುರುವಿನಿಂದ ಶಿಷ್ಯ, ಶಿಷ್ಯನಿಂದ ಮತ್ತೋರ್ವ ಶಿಷ್ಯರು ಹುಟ್ಟಿಕೊಂಡರು. ಹೀಗೆ ಜಾಲತಾಣವೇ ಪಾಕ ಪ್ರಯೋಗಗಳಿಗೆ ಸೇತುವಾಯಿತು. ಆದರೆ ಈ ಪ್ರಯೋಗ ಕೊಳ್ಳುಬಾಕ ಸಂಸ್ಕೃತಿಯನ್ನು ಹಿಂದಿಕ್ಕಿ ಹೊಟ್ಟೆಬಾಕ ಸಂಸ್ಕೃತಿಯನ್ನು ಹುಟ್ಟುಹಾಕಿತೇ ಎಂಬ ಜಿಜ್ಞಾಸೆ ಕೆಲವರಲ್ಲಿ ಹುಟ್ಟುಹಾಕಿದೆ. 

ರುಚಿರುಚಿ ಗೋಡಂಬಿ ಭರ್ಪಿ ಸಿದ್ಧಮಾಡುವುದು ಹೇಗೆ?

ಆಹಾರವೆಂಬ ವಿಜ್ಞಾನ ಅಡುಗೆಯೆಂಬ ಪ್ರಯೋಗಶಾಲೆ:  ಇದು ಇಂದು ನಿನ್ನೆಯ ಮಾತಲ್ಲ. ನಮ್ಮ ಪರಂಪರಾಗತ ಆಹಾರದಲ್ಲೇ ವಿಜ್ಞಾನ ಹುದುಗಿದೆ. ಸಾಂಬಾರ ಬಟ್ಟಲೇ ಔಷಧ ಭಂಡಾರ. ಇಂದಲ್ಲ, ಹಿಂದೆಯೇ ಅಡುಗೆಮನೆಯೆಂಬ ಪ್ರಯೋಗಶಾಲೆಯಲ್ಲಿ ಹಲವು ಪ್ರಯೋಗಗಳು ನಡೆಯುತ್ತಿತ್ತು. ಉದಾಹರಣೆಗೆ ಹಾಲು, ಹಾಲಿಗೆ ಹೆಪ್ಪು ಹಾಕಿದಾಗ ಮರುದಿನ ಅದು ಹಾಲಾಗಿ ಉಳಿಯುವುದಿಲ್ಲ. ಅಕಸ್ಮಾತ್ ಹಾಲಿಗೆ ಹೆಪ್ಪು ಹಾಕಲು ಮರೆತರೆ ಹಾಲು ಹಾಳಾಗುತ್ತದೆ. ಹಾಲಿಗೆ ಹೆಪ್ಪೆಂಬ ಆಧ್ಯಾತ್ಮ ಬೆರೆತಾಗ ಹಾಲು ಮೊಸರಿನ ರೂಪ ತಾಳುತ್ತದೆ. ಹಾಲಿಗೆ ಸಂಸ್ಕಾರ ದೊರೆತಾಗ ಮೊಸರು, ಮಜ್ಜಿಗೆ, ಬೆಣ್ಣೆ, ಬಳಿಕ ವರ್ಷಗಟ್ಟಲೇ ಇಟ್ಟರೂ ಕೆಡದ ತುಪ್ಪವಾಗಿ ಮಾರ್ಪಡುತ್ತದೆ. 

ರಾತ್ರಿ ಬೆಳಗಾಗುವದರೊಳಗೆ ವಿಜ್ಞಾನ ಪ್ರಯೋಗಶಾಲೆಯಲ್ಲಿ ನಡೆಯುವ ಪ್ರಯೋಗ ನಮ್ಮ ಕಿಚನ್ ನಲ್ಲಿ ನಡೆಯುತ್ತಿರುತ್ತದೆ. ಒಂದುಕಡೆ ಹಾಲಿನಲ್ಲಿ ಬ್ಯಾಕ್ಟೀರಿಯಾ ಉತ್ಪಾದನೆಯಾಗಿ ಹಾಲು ಮೊಸರಾಗಿ ಮಾರ್ಪಟ್ಟರೆ, ಇನ್ನೊಂದೆಡೆ ದೋಸೆ ಹಿಟ್ಟಿನಲ್ಲೂ ಬ್ಯಾಕ್ಟೀರಿಯಾ ಉತ್ಪಾದನೆಯಾಗಿ ಮರುದಿನ ದೋಸೆ ಹೊಯ್ಯಲು ರೆಡಿಯಾಗಿರುತ್ತದೆ. ನಮ್ಮ ಕಣ್ಣಿಗೆ ಕಾಣದ ಪ್ರಯೋಗ ಅಲ್ಲಿ ದಿನನಿತ್ಯವೂ ನಡೆಯುತ್ತಲೇ ಇರುತ್ತದೆ. ಪಾರಂಪರಿಕ ಪ್ರಯೋಗ ಅಡುಗೆ ಮನೆಯೆಂಬ ಪಾಕಶಾಲೆಯಲ್ಲಿ ದಿನವೂ ನಡೆಯುತ್ತಿತ್ತು. 

ಬದಲಾದ ಜೀವನ ಶೈಲಿ: ಆಧುನಿಕ ಲೈಫ್ ಸ್ಟೈಲ್ ಗೆ ಮಾರುಹೋಗಿ ಕಿಚನ್ ಎಂಬ ಪ್ರಯೋಗಶಾಲೆಯಲ್ಲಿ ಪ್ರಯೋಗಗಳೇ ನಡೆಯುತ್ತಿರಲಿಲ್ಲ. ಹಿರಿಯರೆಲ್ಲ ವೃದ್ಧಾಶ್ರಮ ಸೇರಿದ ಬಳಿಕ ಪ್ರಯೋಗಗಳಿಲ್ಲದೇ ಅಡುಗೆಮನೆಯೇ ಬಣಗುಡುತ್ತಿತ್ತು. ಮನೆ ಬಾಗಿಲಿಗೆ ಸ್ವಿಗ್ಗಿ, ಝೊಮಾಟೊದವರು ಬರಲು ಪ್ರಾರಂಭಿಸಿದ ಮೇಲಂತೂ ಅಡುಗೆಮನೆ ಮೌನವನ್ನು ಹೊದ್ದು ಮಲಗಿತ್ತು. ಮತ್ತೆ ಈಗ ಲಾಕ್ ಡೌನ್ ಬಳಿಕ ಅಡುಗೆಮನೆ ತನ್ನ ಹಳೆ ವೈಭವವನ್ನು ಮರಳಿ ಪಡೆದಿದೆ. 

ತರಕಾರಿಗಳೇ ಸಿಗದ ದಿನಗಳಲ್ಲಿ ಪುಷ್ಕಳ ಭೋಜನ ದೊರೆಯುವಂತೇ ನೋಡಿಕೊಂಡಿದ್ದು ಈ ಆಧುನಿಕ ನಳ, ಭೀಮಸೇನರು. ಮನೆ ಹಿತ್ತಲಲ್ಲೇ ಇರುವ ಸೊಪ್ಪಿನಿಂದ ಮಾಡಿದ ತಂಬುಳಿಗಳು ಮತ್ತೆ ವಿಜೃಂಭಿಸಲು ಪ್ರಾರಂಭವಾಯಿತು. ಅಜ್ಜಿ ಕಜ್ಜಾಯವೇ ಮತ್ತೆ ಮೇಳೈಸುತ್ತಿವೆ. ಆಧುನಿಕ ವಿಜ್ಞಾನಕ್ಕೆ ಸವಾಲು ಉಪ್ಪಿನಕಾಯಿ ಊಟಕ್ಕೊಂದು ಒಳ್ಳೆಯ ಉಪ್ಪಿನಕಾಯಿ ಇದ್ದರೆ ಇನ್ನೆರಡು ತುತ್ತು ಹೆಚ್ಚಿಗೆ ಉಣ್ಣಲು ಸಾಧ್ಯ. ಹಾಗಾಗಿ ಉಪ್ಪಿನಕಾಯಿಗೆ ಊಟದ ತಟ್ಟೆಯಲ್ಲಿ ಸಣ್ಣ ಜಾಗವಾದರೂ ಪ್ರಧಾನ ಪಾತ್ರ. ಈಗಿರುವ ಪ್ರಿಸರ್ವೇಟಿವ್, ಕಲರ್, ಟೇಸ್ಟಿಂಗ್ ಪೌಡರ್ ಬಳಸದೇ ಅಜ್ಜಿ, ಮುತ್ತಜ್ಜಿಯ ಕಾಲದಲ್ಲೂ ಅತ್ಯುತ್ತಮ ಉಪ್ಪಿನಕಾಯಿ ಸಿದ್ಧವಾಗುತ್ತಿತ್ತು. ವರ್ಷ , ಎರಡುವರ್ಷ ಇಟ್ಟರೂ ಏನೆನೂ ಆಗದ ಉಪ್ಪಿನಕಾಯಿ ಚಪ್ಪರಿಸುವ ಕಾಲ ಜಮಾನಾದಲ್ಲೇ ಇತ್ತು. ಆ ತಾಂತ್ರಿಕತೆ ಈಗಿನ ವಿಜ್ಞಾನಕ್ಕೇ ಒಂದು ಸವಾಲು. ಈಗಲೂ ಹಳ್ಳಿಗಳಲ್ಲಿ ಈ ತಂತ್ರಜ್ಞಾನ ಮುಂದುವರಿದಿದೆ. 

ಆ ತಂತ್ರಜ್ಞಾನವನ್ನು ಅವರು ಯಾವುದೇ ಶಾಲೆಯಲ್ಲಿ ಕಲಿತದ್ದಂತೂ ಅಲ್ಲ. ಬದಲಾಗಿ ಅಡುಗೆಮನೆಯೆಂಬ ಪ್ರಯೋಗಶಾಲೆಯಲ್ಲೇ ಕಲಿತದ್ದು. ತಾಯಿ ತನ್ನ ಮಗಳಿಗೆ, ಅತ್ತೆ ತನ್ನ ಸೊಸೆಗೆ ಹೇಳಿ ಅಥವಾ ಪ್ರಯೋಗ ಮಾಡಿಯೇ ಕಲಿತದ್ದು. ಇಂಥ ಪ್ರಯೋಗಗಳಿಗೆ ಲಕ್ಡೌನ್ ಮತ್ತೆ ಮರುಹುಟ್ಟು ನೀಡಿದೆ. ಪ್ರತಿ ಮನೆಯಲ್ಲೂ ಹೊಸ ಹೊಸ ಪ್ರಯೋಗಶೀಲತೆ, ಸೃಜನಶೀಲತೆ ಮನಸ್ಸುಗಳನ್ನು ಕೊರೋನಾ ಲಾಕ್ ಡೌನ್ ಹುಟ್ಟುಹಾಕಿದ್ದಂತೂ ಸುಳ್ಳಲ್ಲ.