ಭಾರಿ ರಿಯಾಯಿತಿ ದರದಲ್ಲಿ ಚಿನ್ನ, ಕಾರು ಕೊಡಿಸುವುದಾಗಿ ನಂಬಿಸಿ ಟೆಕ್ಕಿಗಳು ಹಾಗೂ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಪೂಜಾ ಭಾಗವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ 'ನಮ್ಮ ಅಪಾರ್ಟ್ಮೆಂಟ್ ಅಡ್ಡ' ಆ್ಯಪ್ ಮೂಲಕ ಪ್ರಚಾರ ನಡೆಸಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ್ದಾಳೆ.
ಬೆಂಗಳೂರು (ನ.04): ಭಾರಿ ರಿಯಾಯಿತಿ (Discount) ದರದಲ್ಲಿ ಚಿನ್ನದ ಒಡವೆ, ಕಾರು, ಬೈಕ್ ಹಾಗೂ ದುಬಾರಿ ಗೃಹೋಪಯೋಗಿ ವಸ್ತುಗಳನ್ನು ಕೊಡಿಸುವುದಾಗಿ ನಂಬಿಸಿ ಸಾಫ್ಟ್ವೇರ್ ಎಂಜಿನಿಯರ್ಗಳು, ಉದ್ಯಮಿಗಳು ಹಾಗೂ ಸಿನಿಮಾ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಕುಖ್ಯಾತ ವಂಚಕಿ ಪೂಜಾ ಭಾಗವತಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಬೆಂಗಳೂರಿನ ಆವಲಹಳ್ಳಿ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ಪೂಜಾ ಭಾಗವತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
'ನಮ್ಮ ಅಪಾರ್ಟ್ಮೆಂಟ್ ಅಡ್ಡ' ಆ್ಯಪ್ ಹೆಸರಲ್ಲಿ ಬಲೆ:
ಆರೋಪಿ ಪೂಜಾ ಭಾಗವತಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಈ ದಂಧೆ ನಡೆಸುತ್ತಿದ್ದಳು. 'ನಮ್ಮ ಅಪಾರ್ಟ್ಮೆಂಟ್ ಅಡ್ಡ' (Namma Apartment Adda) ಎಂಬ ಮೊಬೈಲ್ ಆ್ಯಪ್ ಮೂಲಕ ಪ್ರಚಾರ ನಡೆಸಿ, ಮಾರುಕಟ್ಟೆ ಬೆಲೆಗಿಂತ ಅರ್ಧಕ್ಕರ್ಧ ಕಡಿಮೆ ಬೆಲೆಯಲ್ಲಿ ಚಿನ್ನಾಭರಣ, ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಹಾಗೂ ಬ್ರಾಂಡೆಡ್ ಕಾರು-ಬೈಕ್ಗಳನ್ನು ಕೊಡಿಸುವುದಾಗಿ ಜಾಹೀರಾತು ನೀಡುತ್ತಿದ್ದಳು. ಇವಳ ಬಣ್ಣದ ಮಾತುಗಳನ್ನು ನಂಬಿದ ಮಂಜುನಾಥ್ ಎಂಬ ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ಹಲವರು ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಈಕೆ ಬರೋಬ್ಬರಿ ₹2.5 ಕೋಟಿಗೂ ಅಧಿಕ ಹಣ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಟೆಕ್ಕಿಗಳು, ನಿರ್ಮಾಪಕರು ಹಾಗೂ ನಿವೃತ್ತ ನೌಕರರೇ ಟಾರ್ಗೆಟ್:
ಈ ಖತರ್ನಾಕ್ ಲೇಡಿಯ ಬಲೆಗೆ ಬಿದ್ದವರ ಪಟ್ಟಿ ದೊಡ್ಡದಿದೆ. ಸಾಫ್ಟ್ವೇರ್ ಇಂಜಿನಿಯರ್ಗಳು, ವಕೀಲರು, ಉದ್ಯಮಿಗಳು, ನಿವೃತ್ತ ಸೇನಾ ಯೋಧರು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಪ್ರಶಾಂತ್ ಕೊಡಿಗೇದಾರ್ ಅವರಿಗೂ ಲಕ್ಷಾಂತರ ರೂಪಾಯಿ ವಂಚಿಸಿರುವುದು ಬಯಲಾಗಿದೆ. ಪ್ರತಿಷ್ಠಿತ ವ್ಯಕ್ತಿಗಳನ್ನೇ ಹುಡುಕಿ ಹುಡುಕಿ ಪರಿಚಯ ಮಾಡಿಕೊಂಡು, ಆರಂಭದಲ್ಲಿ ಕೆಲವರಿಗೆ ಸಣ್ಣಪುಟ್ಟ ವಸ್ತುಗಳನ್ನು ನೀಡಿ ನಂಬಿಕೆ ಗಳಿಸಿ, ನಂತರ ದೊಡ್ಡ ಮೊತ್ತ ಪಡೆದು ಕೈಕೊಡುವುದು ಈಕೆಯ ಕೃತ್ಯವಾಗಿತ್ತು.
ಜೈಲಿಗೆ ಹೋಗಿ ಬಂದರೂ ಮುಗಿಯದ ಖಯಾಲಿ - 6ಕ್ಕೂ ಹೆಚ್ಚು ಕೇಸ್!:
ಈಕೆ ಹೊಸ ವಂಚಕಿಯೇನಲ್ಲ, ಬದಲಿಗೆ ಹಳೇ ಚಾಲಾಕಿ! ಈ ಹಿಂದೆಯೂ ಇದೇ ರೀತಿಯ ವಂಚನೆ ಪ್ರಕರಣಗಳಲ್ಲಿ ಪೊಲೀಸರಿಂದ ಅರೆಸ್ಟ್ ಆಗಿ ಜೈಲು ಸೇರಿದ್ದಳು. ಆದರೆ ಜೈಲಿನಿಂದ ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದಳು. ಪ್ರಸ್ತುತ ಈಕೆಯ ವಿರುದ್ಧ ಆವಲಹಳ್ಳಿ, ಕೋಣನಕುಂಟೆ, ಪುಟ್ಟೇನಹಳ್ಳಿ, ತಲಘಟ್ಟಪುರ ಸೇರಿದಂತೆ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ 5 ರಿಂದ 6ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಆವಲಹಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಈಕೆಯ ಜಾಲದಲ್ಲಿ ಇನ್ನೂ ಯಾರೆಲ್ಲಾ ಭಾಗಿಯಾಗಿದ್ದಾರೆ ಮತ್ತು ಎಷ್ಟು ಜನರಿಗೆ ವಂಚಿಸಲಾಗಿದೆ ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.






