ದುಬೈನಿಂದ ಅಕ್ರಮ ಚಿನ್ನ ಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ತಮ್ಮ ಕುಟುಂಬದೊಂದಿಗೆ ಹಾಸನಾಂಬಾ ದೇವಿಯ ದರ್ಶನ ಪಡೆದಿದ್ದಾರೆ. ನಿವೃತ್ತ ಡಿಜಿಪಿ ಆಗಿರುವ ತಮ್ಮ ತಂದೆಯೊಂದಿಗೆ ವಿಐಪಿ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಾಸನ: ದುಬೈನಿಂದ ಅಕ್ರಮವಾಗಿ ಬಹುಕೋಟಿ ಚಿನ್ನ ಸಾಗಣೆ ಪ್ರಕರಣದ ಆರೋಪಿ ನಟಿ ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್ ಹಾಸನದ ಪ್ರಸಿದ್ಧ ಶ್ರೀ ಹಾಸನಾಂಬಾ ದೇವಿಯ ದರ್ಶನ ಪಡೆದು ಪೂಜೆ ನೆರವೇರಿಸಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಟಿ ರನ್ಯಾ ರಾವ್ ತಮ್ಮ ಕುಟುಂಬದೊಂದಿಗೆ ಅಧಿಕೃತ ಶಿಷ್ಟಾಚಾರದ ಸೌಲಭ್ಯಗಳನ್ನು ಬಳಸಿಕೊಂಡು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದಿದ್ದಾರೆ.
ಶಿಷ್ಟಾಚಾರ ವಾಹನದಲ್ಲಿ ಕುಟುಂಬ ಸಮೇತ ಆಗಮಿಸಿದ ನಟಿ
ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಐತಿಹಾಸಿಕ ಹಾಸನಾಂಬೆ ದೇವಿಯ ದರ್ಶನೋತ್ಸವದ ಸಂದರ್ಭದಲ್ಲಿ ನಟಿ ರನ್ಯಾ ರಾವ್ ತಮ್ಮ ತಂದೆ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ, ಮಾಜಿ ಡಿಜಿಪಿ ರಾಮಚಂದ್ರ ರಾವ್ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆ ಆಗಮಿಸಿದ್ದರು.
ದೇವಸ್ಥಾನದ ಆವರಣಕ್ಕೆ ಸಾಮಾನ್ಯ ಭಕ್ತರ ಸಾಲಿನಲ್ಲಿ ಬರದೇ, ಸರ್ಕಾರದ ವಿಶೇಷ ವಿಐಪಿ ಪ್ರೋಟೋಕಾಲ್ ವಾಹನದಲ್ಲಿ ಆಗಮಿಸಿದ ರನ್ಯಾ ರಾವ್ ಕುಟುಂಬಕ್ಕೆ ಶೀಘ್ರ ಹಾಗೂ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದ ಗರ್ಭಗುಡಿಯ ಬಳಿ ತೆರಳಿದ ನಟಿ ರನ್ಯಾ ರಾವ್ ಹಾಗೂ ತಂದೆ ರಾಮಚಂದ್ರ ರಾವ್ ಮತ್ತು ಕುಟುಂಬ ಶ್ರೀ ಹಾಸನಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಟಿ ರನ್ಯಾ ರಾವ್ ವಿದೇಶದಿಂದ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಭಾರತಕ್ಕೆ ತಂದಿದ್ದ ಆರೋಪದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದರು. ಈ ಪ್ರಕರಣವು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.
ಅಕ್ರಮವಾಗಿ ದುಬೈನಿಂದ 12.56 ಕೋಟಿ ರು. ಮೌಲ್ಯದ 14.2 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು 2025ರ ಮಾರ್ಚ್ 3ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.
ಬಳಿಕ ಡಿಆರ್ಐ ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಅವರಿಗೆ ಡೀಫಾಲ್ಟ್ ಜಾಮೀನು ಸಿಕ್ಕಿತ್ತು. ಆದರೆ, ''ಕಾಫೀಪೋಸಾ'' ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರಿಂದ ರನ್ಯಾ ರಾವ್ ಬಿಡುಗಡೆಗೊಂಡಿರಲಿಲ್ಲ. ಸುಮಾರು ಒಂದು ವರ್ಷದ ನಿಷೇಧಿತ ಬಂಧನವನ್ನು ಪೂರೈಸಿದ ಬಳಿಕ, 2026ರ ಎಪ್ರಿಲ್ನಲ್ಲಿ ಅವರು ಬಿಡುಗಡೆಯಾಗಿದ್ದಾರೆ.
ಇತ್ತೀಚೆಗಷ್ಟೇ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ಗೆ ಭಾರಿ ಮೊತ್ತದ ದಂಡ ವಿಧಿಸಿ, ಕಠಿಣ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿತ್ತು. ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿಯ ಪುತ್ರಿಯೇ ಇಂತಹ ಬೃಹತ್ ಮಟ್ಟದ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವುದು ಕಾನೂನು ಮತ್ತು ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇನ್ನು ಕಳೆದ 1 ತಿಂಗಳ ಹಿಂದೆ ಬರೋಬ್ಬರಿ 89.98 ಕೋಟಿ ರು. ದಂಡ ಪಾವತಿಸುವಂತೆ ಕಸ್ಟಮ್ಸ್ ಇಲಾಖೆ ಆದೇಶ ನಟಿಗೆ ಆದೇಶ ಹೊರಡಿಸಿತ್ತು.
ಪ್ರೋಟೋಕಾಲ್ ನೀಡಿಕೆ ಕುರಿತು ವ್ಯಕ್ತವಾದ ಆಕ್ಷೇಪಗಳು
ಸಾಮಾನ್ಯ ಭಕ್ತಾದಿಗಳು ಹಾಸನಾಂಬೆಯ ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕಾಯುತ್ತಿರುವಾಗ, ಗಂಭೀರ ಅಪರಾಧ ಪ್ರಕರಣದ ಆರೋಪಿಯಾಗಿರುವ ವ್ಯಕ್ತಿಗೆ ಪ್ರೋಟೋಕಾಲ್ ಆಧಾರಿತ ವಾಹನ ವ್ಯವಸ್ಥೆ ಮತ್ತು ಸುಲಭ ದರ್ಶನದ ಸೌಲಭ್ಯ ಒದಗಿಸಿರುವುದು ಸಾರ್ವಜನಿಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ತಮ್ಮ ತಂದೆಯ ನಿವೃತ್ತ ಅಧಿಕಾರದ ಪ್ರಭಾವ ಹಾಗೂ ಕುಟುಂಬದ ಹಿನ್ನೆಲೆಯ ಆಧಾರದ ಮೇಲೆ ಅವರಿಗೆ ಈ ಪ್ರೋಟೋಕಾಲ್ ದರ್ಶನದ ಸೌಲಭ್ಯ ದೊರೆತಿದೆ ಎಂದು ಹೇಳಲಾಗುತ್ತಿದೆ.






