Seven cup sweet: ಬಾಯಲ್ಲಿಟ್ಟರೆ ಕರಗುವ ಮೈಸೂರು ಪಾಕ್ ಮಾಡೋಕೆ ಕಷ್ಟ ಅನ್ನಿಸ್ತಿದ್ಯಾ? ಹಾಗಿದ್ರೆ ಈ ಸೆವೆನ್ ಕಪ್ ಬರ್ಫಿ ಟ್ರೈ ಮಾಡಿ. ಪರ್ಫೆಕ್ಟ್ ಶೇಪ್ ಮತ್ತು ಟೇಸ್ಟ್ ಬರಲು ಈ ಸಣ್ಣ ಟಿಪ್ಸ್ ಫಾಲೋ ಮಾಡಿ ಸಾಕು!
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮನೆಯಲ್ಲೇ ಅತಿ ಸುಲಭವಾಗಿ ಹಾಗೂ ರುಚಿಕರವಾಗಿ ತಯಾರಿಸಬಹುದಾದ ಸಾಂಪ್ರದಾಯಿಕ ಸಿಹಿ ತಿಂಡಿ ಸೆವೆನ್ ಕಪ್ ಬರ್ಫಿ (7 Cup Burfi). ಮೈಸೂರು ಪಾಕ್ ಶೈಲಿಯಲ್ಲೇ ಬಾಯಲ್ಲಿಟ್ಟರೆ ಕರಗುವ ಈ ಸಿಹಿಯನ್ನು ಕೇವಲ 7 ಕಪ್ ಅಳತೆಯ ಪದಾರ್ಥಗಳಿಂದ ಅತಿ ಕಡಿಮೆ ಸಮಯದಲ್ಲಿ ತಯಾರಿಸಬಹುದಾಗಿದೆ.
ಬೇಕಾಗುವ 7 ಕಪ್ ಸಾಮಗ್ರಿಗಳು
ಕಡಲೆ ಹಿಟ್ಟು – 1 ಕಪ್
ತುರಿದ ತೆಂಗಿನಕಾಯಿ – 1 ಕಪ್
ಸಕ್ಕರೆ – 2 ಕಪ್
ಹಾಲು – 1 ಕಪ್ (ಕಾಯಿಸಿ ಆರಿಸಿದ್ದು)
ಡ್ರೈ ಫ್ರೂಟ್ಸ್ ಪುಡಿ (ಬಾದಾಮಿ-ಗೋಡಂಬಿ) – 1 ಕಪ್
ತುಪ್ಪ – 1 ಕಪ್
(ಜೊತೆಗೆ: ರುಚಿಗೆ ಒಂದು ಚಿಟಿಕೆ ಉಪ್ಪು ಮತ್ತು ಸುವಾಸನೆಗೆ ಏಲಕ್ಕಿ ಪುಡಿ)
ಮಾಡುವ ಸರಳ ವಿಧಾನ
ಹುರಿಯಿರಿ
ಮೊದಲಿಗೆ ಬಾಣಲೆಯಲ್ಲಿ 2-3 ಚಮಚ ತುಪ್ಪ ಬಿಸಿ ಮಾಡಿ, ಅದಕ್ಕೆ 1 ಕಪ್ ಕಡಲೆ ಹಿಟ್ಟು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿದುಕೊಳ್ಳಬೇಕು. ನಂತರ 1 ಕಪ್ ತುರಿದ ತೆಂಗಿನಕಾಯಿ ಸೇರಿಸಿ ಮತ್ತೆ ಒಂದೆರಡು ನಿಮಿಷ ಹುರಿಯಿರಿ.
ಹಾಲು ಮತ್ತು ಸಕ್ಕರೆ ಸೇರ್ಪಡೆ
ಇದಕ್ಕೆ 2 ಕಪ್ ಸಕ್ಕರೆ ಹಾಗೂ 1 ಕಪ್ ಹಾಲು ಸೇರಿಸಿ ಚೆನ್ನಾಗಿ ಕಲಕಬೇಕು. ಸಕ್ಕರೆ ಕರಗಿದ ನಂತರ, ಪುಡಿಮಾಡಿದ ಬಾದಾಮಿ-ಗೋಡಂಬಿ ಮಿಶ್ರಣ ಹಾಗೂ ಒಂದು ಚಿಟಿಕೆ ಉಪ್ಪು ಸೇರಿಸಿ ನಿರಂತರವಾಗಿ ತಿರುಗಿಸುತ್ತಿರಬೇಕು.
ಹಂತ-ಹಂತವಾಗಿ ತುಪ್ಪದ ಬಳಕೆ
ಉಳಿದ ತುಪ್ಪವನ್ನು ಒಂದೇ ಬಾರಿಗೆ ಹಾಕದೆ, 3-4 ಹಂತಗಳಲ್ಲಿ ಸ್ವಲ್ಪ-ಸ್ವಲ್ಪವಾಗಿ ಸೇರಿಸುತ್ತಾ ಮಿಶ್ರಣವನ್ನು ಕೈಯಾಡಿಸುತ್ತಿರಬೇಕು. ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿ.
ಹದ ಪರೀಕ್ಷೆ
ಸುಮಾರು 10 ರಿಂದ 15 ನಿಮಿಷಗಳಲ್ಲಿ ಮಿಶ್ರಣವು ಗಟ್ಟಿಯಾಗುತ್ತಾ, ತುಪ್ಪ ಬಿಟ್ಟುಕೊಂಡು ನೊರೆಯಂತೆ (Bubbles) ತಳ ಬಿಡಲು ಆರಂಭಿಸುತ್ತದೆ. ಇದು ಬರ್ಫಿಯ ಸರಿಯಾದ ಹದ.
ಕಟ್ ಮಾಡಿ
ಮಿಶ್ರಣವನ್ನು ತಕ್ಷಣವೇ ತುಪ್ಪ ಸವರಿದ ಪಾತ್ರೆ ಅಥವಾ ತಟ್ಟೆಗೆ ಸುರಿದು ಸಮತಟ್ಟಾಗಿಸಬೇಕು. ಮೇಲ್ಭಾಗದಲ್ಲಿ ಅಲಂಕಾರಕ್ಕಾಗಿ ಡ್ರೈ ಫ್ರೂಟ್ಸ್ ತುಂಡುಗಳನ್ನು ಉದುರಿಸಿ, ಸ್ವಲ್ಪ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಚೌಕಾಕಾರವಾಗಿ ಕತ್ತರಿಸಿದರೆ ರುಚಿಕರವಾದ 7 ಕಪ್ ಬರ್ಫಿ ಸವಿಯಲು ಸಿದ್ಧವಾಗುತ್ತದೆ.
ಕಡಿಮೆ ಶ್ರಮದಲ್ಲಿ, ಯಾವುದೇ ಪಾಕದ ಗೋಜಲಿಲ್ಲದೆ ಹೊಸಬರು ಕೂಡ ಸುಲಭವಾಗಿ ಮಾಡಬಹುದಾದ ಈ ಸಿಹಿ ತಿಂಡಿ ಈ ಬಾರಿಯ ದೀಪಾವಳಿಗೆ ಹೇಳಿಮಾಡಿಸಿದ ರೆಸಿಪಿಯಾಗಿದೆ.
ಇದು ಗಮನದಲ್ಲಿರಲಿ...
ಒಂದೇ ಕಪ್ ಅಳತೆ
ಎಲ್ಲಾ ಪದಾರ್ಥಗಳನ್ನು ಅಳೆಯಲು ಒಂದೇ ಕಪ್ ಅಥವಾ ಬಟ್ಟಲನ್ನು ಬಳಸಿ. ಇದರಿಂದ ಅಳತೆ ಮತ್ತು ಹದ ಯಾವುದೇ ಕಾರಣಕ್ಕೂ ತಪ್ಪುವುದಿಲ್ಲ.
ಕಡಲೆ ಹಿಟ್ಟು ಹುರಿಯುವ ವಿಧಾನ
ಕಡಲೆ ಹಿಟ್ಟನ್ನು ಸಣ್ಣ ಉರಿಯಲ್ಲೇ (Low flame) 2-3 ನಿಮಿಷ ಹುರಿಯಬೇಕು. ಹಿಟ್ಟು ಸೀದು ಹೋಗಬಾರದು, ಅದರ ಹಸಿ ವಾಸನೆ ಹೋಗಿ ಒಳ್ಳೆಯ ಪರಿಮಳ ಬಂದರೆ ಸಾಕು.
ತುಪ್ಪದ ಪ್ರಮಾಣ ಕಡಿಮೆ ಮಾಡಬೇಡಿ
ಈ ರೆಸಿಪಿಗೆ ಪೂರ್ತಿ 1 ಕಪ್ ತುಪ್ಪ ಬೇಕೇ ಬೇಕು. ತುಪ್ಪದ ಪ್ರಮಾಣ ಕಡಿಮೆ ಮಾಡಿದರೆ ಬರ್ಫಿ ಮೃದುವಾಗಿ ಬಾರದೆ ತುಂಬಾ ಗಟ್ಟಿಯಾಗುತ್ತದೆ (Hard ಆಗುತ್ತದೆ). ಅಲ್ಲದೆ, ತುಪ್ಪವನ್ನು ಒಂದೇ ಬಾರಿಗೆ ಸುರಿಯದೆ 3-4 ಹಂತಗಳಲ್ಲಿ ಸ್ವಲ್ಪ-ಸ್ವಲ್ಪವಾಗಿ ಸೇರಿಸುತ್ತಿರಬೇಕು.
ಕತ್ತರಿಸುವ ಸಮಯ
ಮಿಶ್ರಣವನ್ನು ತಟ್ಟೆಗೆ ಹಾಕಿದ ತಕ್ಷಣ ಕತ್ತರಿಸಲು ಹೋಗಬೇಡಿ. ಸ್ವಲ್ಪ ಬಿಸಿ ಆರಿ, ಉಗುರುಬೆಚ್ಚಗಿರುವಾಗಲೇ ಚಾಕುವಿನಿಂದ ಪೀಸ್ ಮಾಡಿಕೊಳ್ಳಿ. ಪೂರ್ತಿ ತಣ್ಣಗಾದ ಮೇಲೆ ಕತ್ತರಿಸಲು ಹೋದರೆ ಮುರಿದುಹೋಗಬಹುದು.



