ಬೆಂಗಳೂರಿನ ನಾಗರಭಾವಿಯಲ್ಲಿ ಡೇಟಿಂಗ್ ಆ್ಯಪ್ ಮೂಲಕ ಹುಡುಗಿ ಬುಕ್ ಮಾಡಿದರೆ ಮನೆಗೆ ಬಂದ ಮಂಗಳಮುಖಿಯರು. ಗ್ರಾಹಕನಿಗೆ ಚಾಕು ತೋರಿಸಿ 226 ಗ್ರಾಂ ಬಂಗಾರದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಚಂದ್ರಾಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮುಂದೇನಾಯ್ತು ಇಲ್ಲಿದೆ ವಿವರ.

ಬೆಂಗಳೂರು (ಅ.29): ಸ್ನೇಹಿತನ ಮೇಲಿನ ನಂಬಿಕೆಯಿಂದ ಮನೆಯ ಕೀ ಕೊಟ್ಟು ಹೋದ ವ್ಯಕ್ತಿಯೊಬ್ಬರು ಬರೋಬ್ಬರಿ 226 ಗ್ರಾಂ ಚಿನ್ನಾಭರಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡಿದ್ದ ಸ್ನೇಹಿತನಿಗೆ ಚಾಕು ತೋರಿಸಿ ಬೆದರಿಸಿ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಇಬ್ಬರು ಮಂಗಳಮುಖಿಯರು ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ಮನೆ ಮಾಲೀಕ ರೋಹಿತ್ ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದರೋಡೆ (BNS ಸೆಕ್ಷನ್ 309) ಪ್ರಕರಣ ದಾಖಲಾಗಿದೆ.

ನಡೆದದ್ದೇನು? ಸ್ನೇಹವೇ ಮುಳುವಾಯ್ತು!

ಖಾಸಗಿ ಕಂಪನಿ ಉದ್ಯೋಗಿಯಾದ ರೋಹಿತ್, ನಾಗರಭಾವಿಯ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದಾರೆ. ಅಕ್ಟೋಬರ್ 21 ರಂದು ಅವರ ಪತ್ನಿ ತಮಿಳುನಾಡಿಗೆ ತೆರಳಿದ್ದರು. ಮರುದಿನ ಮಧ್ಯಾಹ್ನ ರೋಹಿತ್ ಹೆಸರಘಟ್ಟದಲ್ಲಿರುವ ತಮ್ಮ ಸ್ವಂತ ಮನೆಗೆ ಹೋಗುವ ಮುನ್ನ, ಒಂದು ದಿನ ಉಳಿದುಕೊಳ್ಳಲು ಬಂದಿದ್ದ ಸ್ನೇಹಿತ ತಿಲಕ್ ಎಂಬಾತನಿಗೆ ಮನೆಯ ಕೀ ಕೊಟ್ಟು ಹೋಗಿದ್ದರು. ಅಂದು ರಾತ್ರಿ ತಿಲಕ್ ‘ಗ್ರೈಂಡರ್’ (Grindr) ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯನ್ನು ಸ್ನೇಹಿತನ ಮನೆಗೆ ಆಹ್ವಾನಿಸಿದ್ದಾನೆ.

ಮಾಸ್ಕ್ ಕಳಚುತ್ತಿದ್ದಂತೆ ಅಸಲಿ ರೂಪ ಬಯಲು!

ರಾತ್ರಿ ಸುಮಾರು 10.15 ಕ್ಕೆ ಮಾಸ್ಕ್ ಧರಿಸಿ ಮನೆಗೆ ಬಂದ ಮಹಿಳೆ, ಮುಖದ ಮಾಸ್ಕ್ ತೆಗೆದಾಗ ಮಂಗಳಮುಖಿ ಎಂಬುದು ತಿಲಕ್‌ಗೆ ಗೊತ್ತಾಗಿದೆ. ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿದ ನಂತರ, ಆ ಮಹಿಳೆ ನೇರವಾಗಿ ಮಲಗುವ ಕೋಣೆಗೆ ನುಗ್ಗಿ ಕಪಾಟುಗಳನ್ನು ಜಾಲಾಡಲು ಆರಂಭಿಸಿದ್ದಾಳೆ. ಇದನ್ನು ತಿಲಕ್ ಪ್ರಶ್ನಿಸಿದಾಗ, ಸದ್ದು ಮಾಡದಂತೆ ಎಚ್ಚರಿಕೆ ನೀಡಿ ಮತ್ತೊಬ್ಬರಿಗೆ ಫೋನ್ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ಮಂಗಳಮುಖಿ ಮನೆಗೆ ಆಗಮಿಸಿದ್ದಾರೆ.

ಚಾಕು ತೋರಿಸಿ 226 ಗ್ರಾಂ ಬಂಗಾರ ಲೂಟಿ:

ಇಬ್ಬರೂ ಸೇರಿ ತಿಲಕ್‌ನನ್ನು ಹಾಲ್‌ನಲ್ಲಿ ಕೂರಿಸಿ, ಚಾಕು ತೋರಿಸಿ ಕೂಗಾಡದಂತೆ ಬೆದರಿಕೆ ಹಾಕಿದ್ದಾರೆ. ಒಬ್ಬರು ಚಾಕು ಹಿಡಿದು ಕಾವಲು ನಿಂತರೆ, ಮತ್ತೊಬ್ರುಬ ಬೆಡ್‌ರೂಂನ ಕಪಾಟು ಒಡೆದು ಚಿನ್ನಾಭರಣಗಳನ್ನು ದೋಚಿದ್ದಾರೆ. ಬಳಿಕ ತಿಲಕ್‌ನನ್ನು ತಳ್ಳಿ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಿಂದ ಗಾಬರಿಗೊಂಡ ತಿಲಕ್, ತಡರಾತ್ರಿ ರೋಹಿತ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಪಾಟಿನಲ್ಲಿದ್ದ ಮಾಂಗಲ್ಯ ಸರ, ನೆಕ್ಲೇಸ್, ಬಳೆಗಳು, 3 ಚಿನ್ನದ ಚೈನ್, ಬ್ರೇಸ್ಲೆಟ್, 5 ಉಂಗುರಗಳು ಹಾಗೂ 3 ಜೊತೆ ಓಲೆಗಳು ಸೇರಿದಂತೆ ಒಟ್ಟು 226 ಗ್ರಾಂ ಚಿನ್ನಾಭರಣ ಕಳವಾಗಿರುವುದು ದೃಢಪಟ್ಟಿದೆ.

ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡು, ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಕರೆಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.