ತಿರುಪತಿ ತಿಮ್ಮಪ್ಪನ ದೇವಸ್ಥಾನದ ಫೇಮಸ್ ಶ್ರೀವಾರಿ ಲಡ್ಡು ಇತ್ತೀಚೆಗೆ 311ನೇ ವರ್ಷದ ಮೈಲಿಗಲ್ಲು ತಲುಪಿದೆ. ಈ ಲಡ್ಡು ಯಾಕೆ ಇಷ್ಟು ಸ್ಪೆಷಲ್? ಇದರ ಇತಿಹಾಸವೇನು? ಅದೇ ರುಚಿಯಲ್ಲಿ ಮನೆಯಲ್ಲೇ ಇದನ್ನು ಮಾಡೋದು ಹೇಗೆ? ತಿಳಿಯೋಣ ಬನ್ನಿ.

ಪ್ರಪಂಚದಾದ್ಯಂತ ಕೋಟ್ಯಂತರ ಭಕ್ತರ ನಂಬಿಕೆಯೊಂದಿಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಶ್ರೀವಾರಿ ಲಡ್ಡು ಬೆಸೆದುಕೊಂಡಿದೆ. ಇತ್ತೀಚೆಗೆ ಈ ಪ್ರಸಾದವು ತನ್ನ 311ನೇ ವರ್ಷದ ಮೈಲಿಗಲ್ಲನ್ನು ತಲುಪಿದೆ. ಭಕ್ತರು ಇದನ್ನು ಕೇವಲ ಸಿಹಿ ತಿಂಡಿಯಾಗಿ ನೋಡದೆ, ವೆಂಕಟೇಶ್ವರನ ಅನುಗ್ರಹದ ಪ್ರಸಾದವೆಂದೇ ಭಾವಿಸುತ್ತಾರೆ. ಇದೇ ಕಾರಣಕ್ಕೆ ತಿರುಪತಿ ದರ್ಶನ ಅಂದ ತಕ್ಷಣ ಶ್ರೀವಾರಿ ಲಡ್ಡು ನೆನಪಾಗುತ್ತೆ.

ತಿರುಪತಿ ಲಡ್ಡು ಯಾಕಿಷ್ಟು ಫೇಮಸ್?

ತಿರುಪತಿ ಲಡ್ಡೂವಿನ ಖ್ಯಾತಿಗೆ ಅದರ ರುಚಿ ಮಾತ್ರ ಕಾರಣವಲ್ಲ. ತಲೆಮಾರುಗಳಿಂದ ಪಾಲಿಸಿಕೊಂಡು ಬಂದಿರುವ ಸಾಂಪ್ರದಾಯಿಕ ತಯಾರಿ ವಿಧಾನ ಮತ್ತು ಗುಣಮಟ್ಟದ ಪದಾರ್ಥಗಳೇ ಇದರ ವಿಶೇಷತೆ. ಕಡಲೆ ಹಿಟ್ಟು, ತುಪ್ಪ, ಸಕ್ಕರೆ, ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ, ಕಲ್ಲುಸಕ್ಕರೆಯಂತಹ ಪದಾರ್ಥಗಳನ್ನು ಇದರಲ್ಲಿ ಬಳಸುತ್ತಾರೆ. ಅಷ್ಟೇ ಅಲ್ಲ, ತಿರುಪತಿ ಲಡ್ಡು GI (ಭೌಗೋಳಿಕ ಸೂಚಕ) ಮಾನ್ಯತೆ ಪಡೆದ ಪ್ರಸಾದವಾಗಿದೆ. ಇದು ಅದರ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ 'ತಿರುಪತಿ ಲಡ್ಡು' ಎಂಬ ಹೆಸರನ್ನು ಬೇರೆ ಯಾರೂ ವಾಣಿಜ್ಯಿಕವಾಗಿ ಬಳಸುವಂತಿಲ್ಲ. ಆ ಫೇಮಸ್ ರುಚಿಯನ್ನು ನೆನಪಿಸುವಂತೆ ಮನೆಯಲ್ಲೇ ಲಡ್ಡು ಮಾಡಬಹುದು. ಅದಕ್ಕೆ ಬೇಕಾದ ಸುಲಭ ರೆಸಿಪಿ ಇಲ್ಲಿದೆ ನೋಡಿ.

ಮನೆಯಲ್ಲೇ ಮಾಡಲು ಬೇಕಾಗುವ ಸಾಮಗ್ರಿಗಳು

ಇದು ತಿರುಪತಿ ಲಡ್ಡು ಸ್ಟೈಲ್‌ನಲ್ಲಿ ಮನೆಯಲ್ಲೇ ಮಾಡಬಹುದಾದ ಒಂದು ರೆಸಿಪಿ. ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು – 2 ಕಪ್ ಅಕ್ಕಿ ಹಿಟ್ಟು – 2 ಟೇಬಲ್‌ಸ್ಪೂನ್ (ಬೂಂದಿ ಗರಿಗರಿಯಾಗಿ ಬರಲು) ಸಕ್ಕರೆ – 2½ ಕಪ್ ತುಪ್ಪ – ½ ಕಪ್ ಗೋಡಂಬಿ – ¼ ಕಪ್ ಒಣದ್ರಾಕ್ಷಿ – 2 ಟೇಬಲ್‌ಸ್ಪೂನ್ ಕಲ್ಲುಸಕ್ಕರೆ (ಬೇಕಿದ್ದರೆ) – 2 ಟೇಬಲ್‌ಸ್ಪೂನ್ ಏಲಕ್ಕಿ ಪುಡಿ – ½ ಟೀಸ್ಪೂನ್ ಒಂದು ಚಿಟಿಕೆ ಪಚ್ಚ ಕರ್ಪೂರ (ಬೇಕಿದ್ದರೆ; ಅಡುಗೆಗೆ ಬಳಸುವಂಥದ್ದು ಮಾತ್ರ) ಅಡುಗೆ ಸೋಡಾ – ಒಂದು ಚಿಟಿಕೆ ಎಣ್ಣೆ ಅಥವಾ ತುಪ್ಪ – ಕರಿಯಲು ಬೇಕಾದಷ್ಟು ನೀರು

ತಿರುಪತಿ ಲಡ್ಡು ಸ್ಟೈಲ್‌ನಲ್ಲಿ ಮಾಡೋದು ಹೇಗೆ?

ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಒಂದು ಚಿಟಿಕೆ ಅಡುಗೆ ಸೋಡಾ ಸೇರಿಸಿ, ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಬೂಂದಿ ಸೌಟಿನ ಮೂಲಕ ಬಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಸಣ್ಣ ಸಣ್ಣ ಬೂಂದಿಗಳನ್ನು ಮಾಡಿ ಕರಿದು ತೆಗೆಯಿರಿ. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ಸ್ವಲ್ಪ ನೀರು ಸೇರಿಸಿ ಒಂದು ಎಳೆ ಪಾಕ ಬರುವವರೆಗೆ ಕುದಿಸಿ. ನಂತರ ಇದಕ್ಕೆ ಬೂಂದಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷಿ, ಕಲ್ಲುಸಕ್ಕರೆ ತುಂಡುಗಳು ಮತ್ತು ಬೇಕಿದ್ದರೆ ಒಂದು ಚಿಟಿಕೆ ಪಚ್ಚ ಕರ್ಪೂರ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಸ್ವಲ್ಪ ಆರಿದ ಮೇಲೆ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿದರೆ ರುಚಿಕರ ಲಡ್ಡು ಸಿದ್ಧ.

ಈ ಟಿಪ್ಸ್ ಪಾಲಿಸಿದರೆ ರುಚಿ ಇನ್ನಷ್ಟು ಸೂಪರ್!

ಬೂಂದಿಯನ್ನು ಹೆಚ್ಚು ಗರಿಗರಿಯಾಗಿಸದೆ, ಮೃದುವಾಗಿ ಕರೆದರೆ ಲಡ್ಡು ರುಚಿಯಾಗಿರುತ್ತದೆ. ಸಕ್ಕರೆ ಪಾಕ ಸರಿಯಾಗಿ ಒಂದು ಎಳೆ ಹದದಲ್ಲಿರುವುದು ಬಹಳ ಮುಖ್ಯ. ಗೋಡಂಬಿ, ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿದರೆ ಪರಿಮಳ ಮತ್ತು ರುಚಿ ಹೆಚ್ಚುತ್ತದೆ. ಸ್ವಲ್ಪ ಕಲ್ಲುಸಕ್ಕರೆ ಸೇರಿಸುವುದರಿಂದಲೂ ತಿರುಪತಿ ಲಡ್ಡು ಸ್ಟೈಲ್ ರುಚಿಯನ್ನು ಪಡೆಯಬಹುದು.

ಗಮನಿಸಿ: ಇದು ತಿರುಪತಿ ದೇವಸ್ಥಾನದಲ್ಲಿ ನೀಡುವ ಅಸಲಿ ಶ್ರೀವಾರಿ ಲಡ್ಡೂವಿನ ರೆಸಿಪಿ ಅಲ್ಲ. ಅದರ ರುಚಿಯನ್ನು ನೆನಪಿಸುವ ಹಾಗೆ ಮನೆಯಲ್ಲೇ ಮಾಡಿ ನೋಡಬಹುದಾದ ಒಂದು 'ತಿರುಪತಿ ಲಡ್ಡು ಸ್ಟೈಲ್' ರೆಸಿಪಿ ಮಾತ್ರ.