ನಿತ್ಯ ಕಾಫಿ ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ನಿಮ್ಮ ಕಾಫಿಗೆ 5ರಿಂದ 7 ಗ್ರಾಂ ಡಾರ್ಕ್ ಚಾಕೊಲೇಟ್ ಬೆರೆಸಿ ಕುಡಿದು ನೋಡಿ. ಈ ಕಾಂಬಿನೇಷನ್ ಸಖತ್ ಟೇಸ್ಟಿಯಾಗಿರುತ್ತೆ, ಜೊತೆಗೆ ಆರೋಗ್ಯಕ್ಕೂ ಬೆಸ್ಟ್. ಈ ವಿಶೇಷ ಕಾಫಿ ತಯಾರಿಸುವ ವಿಧಾನ ಮತ್ತು ಅದರ ಹಿಂದಿರುವ ವೈಜ್ಞಾನಿಕ ಮಾಹಿತಿಯನ್ನು ತಿಳಿಯೋಣ.

ನೀವು ಕಾಫಿ ಪ್ರಿಯರಾಗಿದ್ರೆ ಈ ಕಾಫಿ ಟ್ರೈ ಮಾಡಿ

ನೀವು ಕಾಫಿ ಪ್ರಿಯರೇ, ಅಥವಾ ಕಾಫಿ ಕುಡಿಯಲು ಇಷ್ಟಪಡುವವರೇ? ಹಾಗಿದ್ರೆ ನಿಮಗೆ ಈ ಹೊಸ ಕಾಂಬಿನೇಷನ್ ಇಷ್ಟವಾಗಬಹುದು. ಕಾಫಿಗೆ ಸ್ವಲ್ಪ ಡಾರ್ಕ್ ಚಾಕೊಲೇಟ್ ಬೆರೆಸಿ ತಯಾರಿಸುವ ಈ ಪಾನೀಯ ರುಚಿಯ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಗಮನ ಸೆಳೆಯುತ್ತಿದೆ. ಇದನ್ನು ಮೋಕಾ ಕಾಫಿಯ ಸರಳ ಆವೃತ್ತಿಯಂತೆಯೂ ತಯಾರಿಸಬಹುದು. ಇದರಲ್ಲಿ ಕಾಫಿಯಲ್ಲಿರುವ ಕೆಫೀನ್ ಮತ್ತು ಡಾರ್ಕ್ ಚಾಕೊಲೇಟ್‌ನಲ್ಲಿರುವ ಕೋಕೋ ಫ್ಲೇವನಾಲ್‌ಗಳಿಂದಾಗಿ ಏಕಾಗ್ರತೆ, ರಕ್ತ ಸಂಚಾರ ಹಾಗೂ ವ್ಯಾಯಾಮದ ಸಮಯದಲ್ಲಿ ದೇಹದ ಸಾಮರ್ಥ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಂಶೋಧನೆಗಳು ನಡೆದಿವೆ.

5ರಿಂದ 7 ಗ್ರಾಂ ಡಾರ್ಕ್ ಚಾಕೊಲೇಟ್ ಬಳಸಿ ಕಾಫಿ ತಯಾರಿಸಿ

ತಜ್ಞರ ಪ್ರಕಾರ, ಕಾಫಿಗೆ ಸುಮಾರು 5ರಿಂದ 7 ಗ್ರಾಂ ಡಾರ್ಕ್ ಚಾಕೊಲೇಟ್ ಬೆರೆಸುವುದರಿಂದ ಅದರ ರುಚಿ ಮತ್ತು ಅನುಭವವನ್ನು ಬದಲಾಯಿಸಬಹುದು. ಇದನ್ನು ತಯಾರಿಸಲು ಸುಮಾರು 100ರಿಂದ 150 ಮಿಲಿಲೀಟರ್ ನೀರಿಗೆ ಇನ್‌ಸ್ಟಂಟ್ ಕಾಫಿ ಪುಡಿಯನ್ನು ಬೆರೆಸಿ. ಕಾಫಿ ಸಿದ್ಧವಾದ ಬಳಿಕ ಅದಕ್ಕೆ 5ರಿಂದ 7 ಗ್ರಾಂ ಡಾರ್ಕ್ ಚಾಕೊಲೇಟ್ ಸೇರಿಸಿ. ನಂತರ ಚಾಕೊಲೇಟ್ ಸಂಪೂರ್ಣವಾಗಿ ಕರಗಿ ಕಾಫಿಯೊಂದಿಗೆ ಬೆರೆಯುವವರೆಗೆ ಚೆನ್ನಾಗಿ ಕಲಸಿ.

ಈ ಕಾಂಬಿನೇಷನ್ ಸಾಮಾನ್ಯ ಕಾಫಿಗಿಂತ ಸ್ವಲ್ಪ ವಿಭಿನ್ನವಾದ ರುಚಿಯನ್ನು ನೀಡುತ್ತದೆ. ಚಾಕೊಲೇಟ್‌ನ ಸಣ್ಣ ಕಹಿ ರುಚಿ ಮತ್ತು ಕಾಫಿಯ ಹುರಿದ ಬೀಜಗಳ ವಿಶಿಷ್ಟ ಪರಿಮಳ ಸೇರಿ ರಿಚ್ ಅನುಭವ ನೀಡಬಹುದು. ಆದರೆ ಇದರ ರುಚಿ ಚಾಕೊಲೇಟ್‌ನಲ್ಲಿರುವ ಕೋಕೋ ಪ್ರಮಾಣ ಮತ್ತು ಕಾಫಿಯ ಸ್ಟ್ರಾಂಗ್‌ನೆಸ್ ಅನ್ನು ಅವಲಂಬಿಸಿರುತ್ತದೆ.

ಡಾರ್ಕ್ ಚಾಕೊಲೇಟ್‌ನಲ್ಲಿರುವ ಕೋಕೋ ಫ್ಲೇವನಾಲ್‌ಗಳ ಪ್ರಯೋಜನಗಳು

ಡಾರ್ಕ್ ಚಾಕೊಲೇಟ್‌ನಲ್ಲಿರುವ ಕೋಕೋ ಫ್ಲೇವನಾಲ್‌ಗಳ ಕುರಿತು ವಿದೇಶಗಳಲ್ಲಿ ಹಲವು ಸಂಶೋಧನೆಗಳು ನಡೆದಿವೆ. ಇದರಲ್ಲಿರುವ ಕೋಕೋ ಫ್ಲೇವನಾಲ್‌ಗಳು ದೇಹದಲ್ಲಿ ರಕ್ತ ಸಂಚಾರವನ್ನು ಸುಧಾರಿಸಲು ಮತ್ತು ರಕ್ತನಾಳಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುವ ಸಾಧ್ಯತೆಯಿದೆ. ಅಂದರೆ, ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸಲು ಇವು ಸಹಾಯ ಮಾಡಬಹುದು. ಇದರಿಂದ ದೇಹದಲ್ಲಿ ರಕ್ತದ ಹರಿವು ಉತ್ತಮವಾಗುವ ಸಾಧ್ಯತೆಯೂ ಇದೆ.

ಓಟಗಾರರ ಮೇಲೆ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದ ಫಲಿತಾಂಶಗಳು

ಒಂದು ಸಂಶೋಧನೆಯಲ್ಲಿ 46 ಪುರುಷ ಓಟಗಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಿಗೆ ಎರಡು ವಾರಗಳ ಕಾಲ ಪ್ರತಿದಿನ ಶೇ.70ರಷ್ಟು ಕೋಕೋ ಅಂಶವಿರುವ 50 ಗ್ರಾಂ ಡಾರ್ಕ್ ಚಾಕೊಲೇಟ್ ನೀಡಲಾಗಿತ್ತು. ಇದಾದ ಬಳಿಕ ರಕ್ತನಾಳಗಳ ಕಾರ್ಯಕ್ಷಮತೆ ಮತ್ತು ಓಟಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳಲ್ಲಿ ಸುಧಾರಣೆ ಕಂಡುಬಂದಿತ್ತು.

ಏಕಾಗ್ರತೆ ಮತ್ತು ವ್ಯಾಯಾಮದ ಸಾಮರ್ಥ್ಯದ ಮೇಲೂ ಸಂಶೋಧನೆ!

ಇನ್ನೊಂದು ಸಣ್ಣ ಸಂಶೋಧನೆಯಲ್ಲಿ ಕೋಕೋ ಸೇವಿಸಿದ ಬಳಿಕ ವ್ಯಾಯಾಮದ ಸಮಯದಲ್ಲಿ ವ್ಯಕ್ತಿಗಳ ಪ್ರತಿಕ್ರಿಯೆಯ ಸಮಯ ಮತ್ತು ಏಕಾಗ್ರತೆಗೆ ಸಂಬಂಧಿಸಿದ ಕೆಲವು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳು ಕಂಡುಬಂದಿದ್ದವು. ಆದರೆ ಈ ಸಂಶೋಧನೆಯಲ್ಲಿ ಬಳಸಿದ ಕೋಕೋ ಸಾಮಾನ್ಯ ಚಾಕೊಲೇಟ್ ಕಾಫಿಗಿಂತ ಭಿನ್ನವಾಗಿತ್ತು. ಒಟ್ಟಿನಲ್ಲಿ ಕಾಫಿ ಮತ್ತು ಡಾರ್ಕ್ ಚಾಕೊಲೇಟ್‌ನ ಈ ಕಾಂಬಿನೇಷನ್ ಖಂಡಿತವಾಗಿಯೂ ರುಚಿಯಲ್ಲಿ ಹೊಸ ಅನುಭವ ನೀಡಬಹುದು. ಇದರ ಹಿಂದಿರುವ ಕೆಲವು ವೈಜ್ಞಾನಿಕ ಸಾಧ್ಯತೆಗಳ ಬಗ್ಗೆಯೂ ಸಂಶೋಧನೆಗಳು ನಡೆದಿವೆ.