ಎಲೆಕೋಸಿನಲ್ಲಿರುವ ಹುಳುವಿನಿಂದಾಗಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಸರಿಯಾಗಿ ತೊಳೆಯದ ಎಲೆಕೋಸನ್ನು ಸೇವಿಸಿದ್ದರಿಂದ, ಅದರಲ್ಲಿನ ಪರಾವಲಂಬಿ ಕೀಟವು ಆಕೆಯ ಮೆದುಳನ್ನು ಸೇರಿ ಮಾರಣಾಂತಿಕವಾಗಿ ಪರಿಣಮಿಸಿದೆ.  

ಕೋಸು, ಕ್ಯಾಬೀಜ್​ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಎಲೆಕೋಸಿನಲ್ಲಿ ಅಡಗಿದ್ದ ಹುಳುವೊಂದು ವಿದ್ಯಾರ್ಥಿನಿಯೊಬ್ಬಳ ಬಲಿ ಪಡೆದಿದೆ ಎಂದರೆ ಬಹುಶಃ ಯಾರಿಂದಲೂ ನಂಬಲು ಸಾಧ್ಯವಾಗದ ವಿಷಯವಾಗಿದೆ. ಎಲೆಕೋಸು ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ, ಅದನ್ನು ಬಳಸುವಾಗ ಎಚ್ಚರಿಕೆ ವಹಿಸದೇ ಹೋದರೆ ಎಂಥ ಅನಾಹುತ ಆಗುತ್ತದೆ ಎನ್ನುವ ಶಾಕಿಂಗ್​ ಘಟನೆ ಇದಾಗಿದೆ. ಸಾಮಾನ್ಯವಾಗಿ ಎಲೆಕೋಸನ್ನು ಮನೆಗೆ ತಂದಾಗ ಅದನ್ನು ಚೆನ್ನಾಗಿ ಉಪ್ಪು, ಅರಿಶಿಣ ಹಾಕಿ ನೆನೆಸಿಟ್ಟು ತೊಳೆದು ಆಮೇಲೆ ಬಳಕೆ ಮಾಡಬೇಕಾಗಿದೆ. ಕೆಲವೊಮ್ಮೆ ಮನೆಯಲ್ಲಿ ಎಷ್ಟೇ ಶುಚಿತ್ವ ಕಾಪಾಡಿಕೊಂಡರೂ, ಈಗ ಎಲೆಕೋಸನ್ನು ಪಿಜ್ಜಾ, ಬರ್ಗರ್​, ಬನ್​, ಸ್ಯಾಂಡ್​ವಿಚ್​, ಪಾನಿಪುರಿ, ಮಸಾಲಾಪುರಿ... ಸೇರಿದಂತೆ ಹಸಿಹಸಿಯಾಗಿಯೇ ಬಳಸಲಾಗುತ್ತದೆ. ಇದರಿಂದ ಟೇಸ್ಟ್​ ಹೆಚ್ಚಾಗುತ್ತದೆ ಎನ್ನುವುದು ನಿಜವಾದರೂ, ಗ್ರಹಚಾರ ಕೆಟ್ಟರೆ ಅದರಿಂದ ಸಾವೇ ಬರಬಹುದು ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ಆಗಿದ್ದೇನು?

ಉತ್ತರ ಪ್ರದೇಶದ ಅಮ್ರೋಹಾದ 19 ವರ್ಷದ ವಿದ್ಯಾರ್ಥಿನಿ ಇಲ್ಮಾ ಖುರೇಷಿಯ ಸಾವಿನ ಘಟನೆ ಕೇಳಿದರೆ ತಲ್ಲಣಗೊಳಿಸುವಂತಿದೆ. ವೈದ್ಯೆಯಾಗುವ ಕನಸು ಕಂಡಿದ್ದ ಈ ವಿದ್ಯಾರ್ಥಿನಿಯನ್ನು ಎಲೆಕೋಸಿನ ಹುಳು ಬಲಿ ಪಡೆದಿದೆ ಎಂದರೆ ನಂಬುವುದು ಸಾಧ್ಯವೇ ಇಲ್ಲ ಎನ್ನಿಸುವಂತಿದೆ. ನೀಟ್​ ಆಕಾಂಕ್ಷಿಯಾಗಿದ್ದ ಇಲ್ಮಾ, ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಇದ್ದಕ್ಕಿದ್ದಂತೆಯಾ ಆಕೆಗೆ ತೀವ್ರ ತಲೆನೋವು ಮತ್ತು ಸೆಳೆತ ಬರಲು ಪ್ರಾರಂಭಿಸಿತು. ಸ್ಥಿತಿ ತುಂಬಾ ಹದಗೆಟ್ಟಿತು, ಮೂರ್ಛೆ ತಪ್ಪಿ ಬಿದ್ದಳು.

ಕುಟುಂಬ ಸದಸ್ಯರು ಆಕೆಯನ್ನು ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬಹಿರಂಗಪಡಿಸಿದ ವಿಷಯ ಮಾತ್ರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಆಕೆಯ ಮೆದುಳಿನಲ್ಲಿ 20 ಕ್ಕೂ ಹೆಚ್ಚು ಗಡ್ಡೆಗಳು ಕಂಡುಬಂದವು. ವೈದ್ಯರು ಯುವತಿಯ ಎಂಆರ್‌ಐ ಸ್ಕ್ಯಾನ್ ನಡೆಸಿದಾಗ, ವರದಿಯಲ್ಲಿ ಆಕೆಯ ಮೆದುಳಿನೊಳಗೆ 20 ಕ್ಕೂ ಹೆಚ್ಚು ಸಣ್ಣ ಚೀಲಗಳು ಕಂಡುಬಂದವು. ಈ ಗಡ್ಡೆಗಳು ಯಾವುದೇ ಸಾಮಾನ್ಯ ಕಾಯಿಲೆಯಿಂದ ಉಂಟಾಗಿಲ್ಲ, ಆದರೆ ಅಪಾಯಕಾರಿ ಪರಾವಲಂಬಿ ಕೀಟದಿಂದ ಉಂಟಾಗಿವೆ ಎನ್ನುವುದು ವೈದ್ಯರಿಗೆ ತಿಳಿಯಿತು. ವೈದ್ಯರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಲ್ಮಾಳ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ ಮತ್ತು ಚಿಕಿತ್ಸೆಯ ಸಮಯದಲ್ಲಿ ಆಕೆ ನಿಧನಳಾದಳು.

ವೈದ್ಯರು ಹೇಳಿದ್ದೇನು?

ವೈದ್ಯರ ಪ್ರಕಾರ, ಮೆದುಳಿನಲ್ಲಿ ಇಂತಹ ಗಡ್ಡೆಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ ವಿಶೇಷ ರೀತಿಯ ಹುಳು. ಇದು ಹೆಚ್ಚಾಗಿ ಕಲುಷಿತ ಆಹಾರದ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಸೋಂಕಿತ ಅಥವಾ ಸರಿಯಾಗಿ ತೊಳೆಯದ ಎಲೆಕೋಸು, ಗೋಬಿ ಸೇರಿದಂತೆ ಈ ಪರಾವಲಂಬಿಯು ಬೇಯಿಸದ ಮಾಂಸ ಅಥವಾ ಹೊರಗೆ ಲಭ್ಯವಿರುವ ಫಾಸ್ಟ್​ ಫುಡ್​ನಲ್ಲಿ ಹಾಕಿರುವ ಇಂಥ ತರಕಾಗಿ, ಮಾಂಸಗಳ ಮೂಲಕ ದೇಹವನ್ನು ತಲುಪುತ್ತದೆ. ಇದು ರಕ್ತದ ಹರಿವಿನೊಂದಿಗೆ ನಿಧಾನವಾಗಿ ಮೆದುಳನ್ನು ಸೇರುತ್ತವೆ. ಅಲ್ಲಿ ಸ್ಥಾನವನ್ನು ಪಡೆಯುತ್ತದೆ, ಇದು ನಂತರ ಮಾರಕವೆಂದು ಸಾಬೀತುಪಡಿಸುತ್ತದೆ. ಅದೇ ರೀತಿ ವಿದ್ಯಾರ್ಥಿನಿ ಹೆಚ್ಚಾಗಿ ಎಲೆಕೋಸನ್ನು ಬಳಸುತ್ತಿದ್ದುದರಿಂದ ಅದರಲ್ಲಿನ ಹುಳು ರಕ್ತದ ಮೂಲಕ ಮೆದುಳು ತಲುಪಿರುವ ಸಾಧ್ಯತೆ ಇದೆ ಎಂದಿದ್ದಾರೆ!