ಬೇಳೆ, ಕಾಳುಗಳು, ಧಾನ್ಯಗಳು, ಒಣ ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಬೇಯಿಸುವ ಅಥವಾ ಸೇವಿಸುವ ಮೊದಲು ನೆನೆಸಿಡುವುದರಿಂದ ಅವುಗಳ ಪೌಷ್ಟಿಕಾಂಶ ಹೆಚ್ಚುತ್ತದೆ.
ಏನೋ ಒಂದು ಅಡುಗೆ ಮಾಡಿದರಾಯಿತು ಎಂಬ ಕಾಲ ಇದಲ್ಲ. ಏಕೆಂದರೆ ನಾವುಗಳು ಅಡುಗೆ ಮಾಡುವುದು ಬಾಯಿ ರುಚಿಗಾಗಿ ಅಥವಾ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಅಲ್ಲ, ಅದು ಆರೋಗ್ಯಕ್ಕೂ ಸಂಬಂಧಿಸಿದೆ. ಆದ್ದರಿಂದ, ಅಡುಗೆ ಮನೆಯಲ್ಲಿನ ಕೆಲವು ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಅಡುಗೆ ಮಾಡುವುದಾದರೂ ಒಂದು ಸರಿಯಾದ ವಿಧಾನವಿದೆ. ನಾವೆಲ್ಲಾ ಈ ವಿಧಾನವನ್ನು ಅನುಸರಿಸುವುದರಿಂದ ಮಾತ್ರ ಆಹಾರವು ರುಚಿಕರ ಮತ್ತು ಪೌಷ್ಟಿಕವಾಗಿರುತ್ತದೆ. ಉದಾಹರಣೆಗೆ ಕೆಲವು ಪದಾರ್ಥಗಳನ್ನು ಅಡುಗೆ ಮಾಡುವ ಮೊದಲ ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿದರೆ ಅವುಗಳ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ. ಹೌದು, ಆಹಾರವನ್ನು ನೆನೆಸಿ ತಿನ್ನುವುದರಿಂದ ಅದು ಸುಲಭವಾಗಿ ಜೀರ್ಣವಾಗುವುದಲ್ಲದೆ, ಅದರ ಪೋಷಕಾಂಶಗಳನ್ನು ದೇಹವು ಉತ್ತಮ ರೀತಿಯಲ್ಲಿ ಹೀರಲ್ಪಡುತ್ತವೆ ಎಂದು ಆಯುರ್ವೇದವು ನಂಬುತ್ತದೆ. ಹಾಗಾದರೆ ಅಡುಗೆ ಮಾಡುವ ಮೊದಲು ನೆನೆಸಿಡಬೇಕಾದ ಆ ವಿಶೇಷ ಆಹಾರಗಳ ಬಗ್ಗೆ ತಿಳಿಯೋಣ ಬನ್ನಿ...
ಬೇಳೆ, ಕಾಳುಗಳನ್ನು ಬೇಯಿಸುವ ಮೊದಲು ನೆನಸಿಡಿ
ಹೆಸರುಕಾಳು, ಮಸೂರ್ ದಾಲ್, ಉದ್ದು, ಕಡಲೆ, ಬಟಾಣಿ ಮುಂತಾದ ಯಾವುದೇ ರೀತಿಯ ದ್ವಿದಳ ಧಾನ್ಯಗಳಲ್ಲಿ ಸಣ್ಣ ಪ್ರಮಾಣದ ಫೈಟಿಕ್ ಆಮ್ಲ ಮತ್ತು ಲೆಕ್ಟಿನ್‌ಗಳು ಕಂಡುಬರುತ್ತವೆ. ಆದ್ದರಿಂದ, ಯಾವುದೇ ಬೇಳೆಯನ್ನು ಬೇಯಿಸುವ ಮೊದಲು ಅದನ್ನು ಕನಿಷ್ಠ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನೀರಿನಲ್ಲಿ ನೆನೆಸುವುದರಿಂದ ಬೇಳೆಯಲ್ಲಿರುವ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ. ಇದು ಅವುಗಳ ಪೌಷ್ಟಿಕಾಂಶವನ್ನು ಹೆಚ್ಚಿಸುತ್ತದೆ. ಮಸೂರವು ಹೆವಿ ಫುಡ್ ವರ್ಗಕ್ಕೆ ಸೇರುತ್ತದೆ, ಆದ್ದರಿಂದ ನೀರಿನಲ್ಲಿ ನೆನೆಸಿದಾಗ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.
ಮಸೂರ ಬೇಳೆಗಳಂತೆ ರಾಜ್ಮಾ (Kidney Beans), ಕಾಬೂಲ್ ಕಡಲೆ ಅಥವಾ ಅಲಸೆಯಂತಹ ಬೀನ್‌ಗಳು ಲೆಕ್ನಿನ್‌ಗಳು ಮತ್ತು ಫೈಟಿಕ್ ಆಮ್ಲವನ್ನು ಹೊಂದಿರುತ್ತವೆ. ಇದರಿಂದ ಇವುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಿಸುತ್ತದೆ. ಬೀನ್ಸ್ ಜೀರ್ಣವಾಗಲು ಮತ್ತು ಅವುಗಳ ಪೌಷ್ಟಿಕಾಂಶವನ್ನು ಹೆಚ್ಚಿಸಲು ಬೇಯಿಸುವ ಮೊದಲು ಕನಿಷ್ಠ 8 ರಿಂದ 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ರಾತ್ರಿಯಿಡೀ ನೆನೆಸುವುದರಿಂದ ಅದರಲ್ಲಿರುವ ವಿಷಕಾರಿ ಅಂಶಗಳು ನಿವಾರಣೆಯಾಗುತ್ತವೆ ಮತ್ತು ಅದು ಬೇಗನೆ ಬೇಯುತ್ತದೆ.
ಧಾನ್ಯಗಳನ್ನೂ ನೆನೆಸಿಡುವುದು ಒಳಿತು
ಫೈಟಿಕ್ ಆಮ್ಲವು ಅಕ್ಕಿ, ಗೋಧಿ, ರಾಗಿ ಮುಂತಾದ ಎಲ್ಲಾ ರೀತಿಯ ಧಾನ್ಯಗಳಲ್ಲಿಯೂ ಕಂಡುಬರುತ್ತದೆ. ಯಾವುದೇ ಧಾನ್ಯವನ್ನು ಹೊಲದಲ್ಲಿ ಬೆಳೆದಾಗ ಫಲೀಕರಣವನ್ನು ಹೆಚ್ಚಿಸಲು ಅದರ ಮೇಲೆ ಗೊಬ್ಬರವನ್ನು ಬಳಸಲಾಗುತ್ತದೆ. ಈ ರಸಗೊಬ್ಬರಗಳು ಬೇರುಗಳ ಮೂಲಕ ಧಾನ್ಯಗಳಲ್ಲಿ ಹೀರಲ್ಪಡುತ್ತವೆ. ಇದೇ ಕಾರಣಕ್ಕೆ ಯಾವುದೇ ಧಾನ್ಯವನ್ನು ಬೇಯಿಸುವ ಮೊದಲು ಅದನ್ನು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ನೆನೆಸಿಡಬೇಕು. ಇದು ವಿಷಕಾರಿ ಅಂಶಗಳನ್ನು ನಿವಾರಿಸುವುದಲ್ಲದೆ ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ.
ಡ್ರೈ ಫ್ರೂಟ್ಸ್ ಸವಿಯುವ ಮುನ್ನ
ಬಾದಾಮಿ, ವಾಲ್ನಟ್ಸ್ ಮತ್ತು ಗೋಡಂಬಿಯಂತಹ ಒಣ ಹಣ್ಣುಗಳಲ್ಲಿ ಕಿಣ್ಣ ಪ್ರತಿರೋಧಕಗಳು ಕಂಡುಬರುತ್ತವೆ. ಇದರಿಂದಾಗಿ ಅವುಗಳನ್ನು ಜೀರ್ಣಿಸಿಕೊಳ್ಳಲು ಬಹಳ ಕಷ್ಟ. ಆದ್ದರಿಂದ ಯಾವುದೇ ಒಣ ಹಣ್ಣುಗಳನ್ನು ತಿನ್ನುವ ಮೊದಲು ಅವುಗಳನ್ನು ಕನಿಷ್ಠ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಇದು ಅವುಗಳಲ್ಲಿರುವ ಕಿಣ್ವ ಪ್ರತಿರೋಧಕಗಳನ್ನು ನಿವಾರಿಸುತ್ತದೆ. ಅವುಗಳನ್ನು ಜೀರ್ಣಿಸಿಕೊಳ್ಳಲು ಸುಲಭವಾಗಿಸುತ್ತದೆ. ಜೊತೆಗೆ ನೆನೆಸಿದ ಒಣ ಹಣ್ಣುಗಳನ್ನು ಸೇವಿಸುವುದರಿಂದ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ.
ಹಸಿರು ಎಲೆ ತರಕಾರಿಗಳು
ಆಕ್ಸಾಲಿಕ್ ಆಸಿಡ್ ಪಾಲಕ್, ಕೇಲ್ ಮುಂತಾದ ಹಸಿರು ಎಲೆಗಳ ತರಕಾರಿಗಳಲ್ಲಿ ಕಂಡುಬರುತ್ತದೆ. ಇದರಿಂದಾಗಿ ದೇಹವು ಕ್ಯಾಲಿಯಂ ಖನಿಜಗಳು ಇತ್ಯಾದಿಗಳಂತಹ ತರಕಾರಿಗಳಲ್ಲಿರುವ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಈ ಹಸಿರು ಎಲೆಗಳ ತರಕಾರಿಗಳನ್ನು ಬೇಯಿಸುವ ಮೊದಲು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದರೆ ಅದರಲ್ಲಿರುವ ಆಕ್ಸಲಿಕ್ ಆಸಿಡ್ ಹರಳುಗಳು ನಾಶವಾಗುತ್ತವೆ. ಇದು ಅವುಗಳ ಪೋಷಣೆಯನ್ನು ಹೆಚ್ಚಿಸುತ್ತದೆ.


