Meat Flavored Tomatoes: ಸಸ್ಯಾಹಾರಿಗಳಿಗೆ ಮಾಂಸದ ರುಚಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ವಿಜ್ಞಾನ ಜಗತ್ತಿನಲ್ಲಿ ಒಂದು ವಿನೂತನ ಪ್ರಯೋಗ ನಡೆದಿದೆ. ಅಮೆರಿಕದ 17 ವರ್ಷದ ಶಾಲಾ ವಿದ್ಯಾರ್ಥಿನಿ ಗ್ಯಾಬ್ರಿಯೆಲ್ಲಾ ರೋತ್ಬರ್ಗ್ ಅವರು ಹೊಸ ರೀತಿಯ ತಳೀಯವಾಗಿ ಮಾರ್ಪಡಿಸಿದ ಟೊಮೆಟೊವನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದಾರೆ.
ಮಾಂಸದ ರುಚಿ ನೀಡುವ ಟೊಮೆಟೋ
ಸಸ್ಯಾಹಾರಿಗಳಿಗೆ ಮಾಂಸದ ರುಚಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ವಿಜ್ಞಾನ ಜಗತ್ತಿನಲ್ಲಿ ಒಂದು ವಿನೂತನ ಪ್ರಯೋಗ ನಡೆದಿದೆ. ಅಮೆರಿಕದ 17 ವರ್ಷದ ಶಾಲಾ ವಿದ್ಯಾರ್ಥಿನಿ ಗ್ಯಾಬ್ರಿಯೆಲ್ಲಾ ರೋತ್ಬರ್ಗ್ ಅವರು ಹೊಸ ರೀತಿಯ ತಳೀಯವಾಗಿ ಮಾರ್ಪಡಿಸಿದ ಟೊಮೆಟೊವನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದಾರೆ. ಸಸ್ಯಾಹಾರಿಗಳಿಗೆ ಮಾಂಸದ ರುಚಿಯನ್ನು ನೀಡುವ ಪ್ರಯತ್ನದಲ್ಲಿ ಈ ಆವಿಷ್ಕಾರ ಮಹತ್ವ ಪಡೆದಿದೆ. ಮಿಯಾಮಿಯ ‘ರಾನ್ಸಮ್ ಎವರ್ಗ್ಲೇಡ್ಸ್’ ಶಾಲೆಯಲ್ಲಿ ಓದುತ್ತಿರುವ ಗ್ಯಾಬ್ರಿಯೆಲ್ಲಾ, ಮಾಂಸಕ್ಕೆ ವಿಶಿಷ್ಟ ರುಚಿ ನೀಡುವ ‘ಹೀಮ್’ (Heme) ಎಂಬ ಕಬ್ಬಿಣಾಂಶವನ್ನು ಒಳಗೊಂಡ ಅಣುವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಟೊಮೆಟೊಗಳನ್ನು ಅಭಿವೃದ್ಧಿಪಡಿಸುವ ಪ್ರಯೋಗದಲ್ಲಿ ತೊಡಗಿದ್ದಾರೆ.
ಸಸ್ಯಗಳ ಜೀನ್ಗಳಲ್ಲಿ ಬದಲಾವಣೆ ಮಾಡುವ ಮೂಲಕ ಮಾಂಸದ ರುಚಿಗೆ ಸಂಬಂಧಿಸಿದ ಅಂಶಗಳನ್ನು ಸಸ್ಯಗಳಲ್ಲಿಯೇ ಉತ್ಪಾದಿಸುವ ಸಾಧ್ಯತೆಯನ್ನು ಈ ಪ್ರಯೋಗದ ಮೂಲಕ ಮಾಡಲಾಗಿದೆ. ಸಸ್ಯಾಹಾರಿಗಳಿಗೆ ಮಾಂಸದಂತಹ ರುಚಿಯನ್ನು ನೀಡಬಹುದಾದ ಪರ್ಯಾಯ ಆಹಾರಗಳ ಅಭಿವೃದ್ಧಿಯಲ್ಲಿ ಗ್ಯಾಬ್ರಿಯೆಲ್ಲಾ ಪ್ರಮುಖ ಪಾತ್ರ ವಹಿಸಿದ್ದು, ಈ ಯೋಜನೆ ಗಮನ ಸೆಳೆದಿದೆ.
15ನೇ ವಯಸ್ಸಿನಲ್ಲೇ ಕ್ರೇಜಿ ಆವಿಷ್ಕಾರ
ಗ್ಯಾಬ್ರಿಯೆಲ್ಲಾಗೆ 15 ವರ್ಷ ವಯಸ್ಸಿದ್ದಾಗ ಈ ಆಲೋಚನೆ ಮೂಡಿತು. ತಮ್ಮ ತಂದೆಗಾಗಿ ಸ್ಯಾಂಡ್ವಿಚ್ ತಯಾರಿಸುತ್ತಿದ್ದ ಸಂದರ್ಭದಲ್ಲಿ, ಸಸ್ಯ ಆಧಾರಿತ ಮಾಂಸದ ಪರ್ಯಾಯಗಳನ್ನು ಬಳಸುವ ಬದಲು ನೇರವಾಗಿ ಟೊಮೆಟೊದಲ್ಲೇ ಮಾಂಸದ ರುಚಿಯನ್ನು ಸೃಷ್ಟಿಸಿದರೆ ಹೇಗೆ ಎಂಬ ಯೋಚನೆ ಅವರಿಗೆ ಬಂದಿತು. ಈ ಆಲೋಚನೆಯೇ ‘ಇಂಪಾಸಿಬಲ್ ವೈನ್ಸ್’ (Impossible Vines) ಎಂಬ ಜೈವಿಕ ತಂತ್ರಜ್ಞಾನ ಯೋಜನೆಗೆ ನಾಂದಿಯಾಯಿತು. ಈ ಯೋಜನೆಯಲ್ಲಿ ಅವರು ತಮ್ಮ ತಂದೆ ಹಾಗೂ ಜೈವಿಕ ತಂತ್ರಜ್ಞಾನ ಉದ್ಯಮಿ ಜೊನಾಥನ್ ರೋತ್ಬರ್ಗ್ ಮತ್ತು ಮಿಯಾಮಿ ವಿಶ್ವವಿದ್ಯಾಲಯದ ಸಂಶೋಧಕಿ ಮ್ಯಾಡಿಸನ್ ಮಾರ್ಷಲ್ ಅವರೊಂದಿಗೆ ಕೆಲಸ ಮಾಡಿದ್ದಾರೆ.
ಟೊಮೆಟೊ ಕೋಶಗಳಲ್ಲಿ ಅಗತ್ಯವಾದ ಆನುವಂಶಿಕ ವಸ್ತುವನ್ನು ಸೇರಿಸಲು ‘ಅಗ್ರೋಬ್ಯಾಕ್ಟೀರಿಯಂ’ (Agrobacterium) ಎಂಬ ಬ್ಯಾಕ್ಟೀರಿಯಾವನ್ನು ಬಳಸಲಾಗಿದೆ. ಈ ಪ್ರಕ್ರಿಯೆಯ ಮೂಲಕ ಟೊಮೆಟೊ ಸಸ್ಯಗಳು ಹೀಮ್ ಉತ್ಪಾದಿಸುವಂತೆ ಮಾಡುವ ಪ್ರಯತ್ನ ನಡೆದಿದೆ. ಈ ತಂತ್ರಜ್ಞಾನಕ್ಕೆ ಜೂನ್ 2026ರಲ್ಲಿ ಅಮೆರಿಕದಲ್ಲಿ ಪೇಟೆಂಟ್ ಕೂಡ ದೊರೆತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆ ಪೇಟೆಂಟ್ ಸಂಖ್ಯೆ: 12668806 ಆಗಿದೆ.
ಸದ್ಯ ಯಾವ ಹಂತದಲ್ಲಿದೆ ಈ ಪ್ರಯೋಗ? ಎದುರಾಗಿರುವ ಸವಾಲುಗಳೇನು?
ಈ ಯೋಜನೆ ಇನ್ನೂ ಪ್ರಯೋಗಾತ್ಮಕ ಹಂತದಲ್ಲಿದೆ ಈ ವಿಶೇಷ ಟೊಮೆಟೊಗಳ ರುಚಿಯನ್ನು ಇನ್ನೂ ಪರೀಕ್ಷಿಸಿಲ್ಲ. ಅಲ್ಲದೆ, ಅವುಗಳ ವಾಣಿಜ್ಯ ಉತ್ಪಾದನೆಯೂ ಆರಂಭವಾಗಿಲ್ಲ. ಪ್ರಯೋಗದ ಆರಂಭದಲ್ಲಿ ಸಸ್ಯಗಳು ಸರಿಯಾಗಿ ಬೆಳೆಯದೆ ಸಂಶೋಧಕರಿಗೆ ತೊಂದರೆ ಎದುರಾಯಿತು. ಸಸ್ಯಗಳನ್ನು ಬೆಳೆಸಲು ಬಳಸುವ ಮಾಧ್ಯಮದಲ್ಲಿನ ವಿಟಮಿನ್ಗಳ ಸಾಂದ್ರತೆಯಲ್ಲಿ ಸಮಸ್ಯೆ ಇರುವುದನ್ನು ಗುರುತಿಸಿ ಅದನ್ನು ಸರಿಪಡಿಸಿದ ನಂತರ ಸಸ್ಯಗಳ ಬೆಳವಣಿಗೆ ಸುಧಾರಿಸಿತು. ಈ ಯೋಜನೆಯಲ್ಲಿ ಅಗತ್ಯವಾದ ಜೀನ್ ಮಾದರಿಯನ್ನು ರೂಪಿಸಲು ಮತ್ತು ಪೇಟೆಂಟ್ ದಾಖಲೆಗಳನ್ನು ಸಿದ್ಧಪಡಿಸಲು AI ಸಾಧನಗಳನ್ನೂ ಬಳಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಬ್ಬಿಣದ ಕೊರತೆ ನಿವಾರಣೆಗೂ ಸಹಾಯವಾಗಬಹುದೇ?
ಈ ಆವಿಷ್ಕಾರದ ಉದ್ದೇಶ ಕೇವಲ ಮಾಂಸದಂತಹ ರುಚಿಯನ್ನು ಸೃಷ್ಟಿಸುವುದಷ್ಟೇ ಅಲ್ಲ. ಇದರ ಹಿಂದೆ ಪೌಷ್ಟಿಕಾಂಶ ನೀಡುವುದೂ ಆಗಿದೆ. ಮಾಂಸ ದುಬಾರಿಯಾಗಿರುವ ಅಥವಾ ಸುಲಭವಾಗಿ ಲಭ್ಯವಿಲ್ಲದ ಪ್ರದೇಶಗಳಲ್ಲಿ ಈ ಟೊಮೆಟೋ ಉತ್ತಮ ಆಯ್ಕೆಯಾಗಬಹುದು. ವಿಶೇಷವಾಗಿ ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡಲು ಇವು ಭವಿಷ್ಯದಲ್ಲಿ ನೆರವಾಗಬಹುದು ಎಂಬ ನಿರೀಕ್ಷೆಯಿದೆ. ಆದರೆ ಈ ಟೊಮೆಟೊಗಳಲ್ಲಿ ಎಷ್ಟು ಕಬ್ಬಿಣಾಂಶ ಇರುತ್ತದೆ, ಅವುಗಳನ್ನು ಸೇವಿಸುವುದರಿಂದ ದೇಹಕ್ಕೆ ಎಷ್ಟು ಪೌಷ್ಟಿಕಾಂಶ ದೊರೆಯುತ್ತದೆ ಮತ್ತು ಕಬ್ಬಿಣದ ಕೊರತೆಯನ್ನು ತಡೆಯುವಲ್ಲಿ ಅವು ಎಷ್ಟು ಪರಿಣಾಮಕಾರಿ ಎಂಬುದನ್ನು ಇನ್ನೂ ಸಂಶೋಧನೆಯ ಮೂಲಕ ದೃಢಪಡಿಸಬೇಕಿದೆ.


