ಹಿಂದೂ ಸಂಸ್ಕೃತಿಯಲ್ಲಿ ಮೃತ ವಯಸ್ಕರನ್ನು ದಹಿಸಿದರೆ, ಮಕ್ಕಳ ಶವಗಳನ್ನು ಸಮಾಧಿ ಮಾಡಲಾಗುತ್ತದೆ. ಹೀಗೇಕೆ? ಗರುಡ ಪುರಾಣ ಅನೇಕ ಸೂಕ್ಷ್ಮ ವಿಷಯಗಳನ್ನು ಈ ಕುರಿತು ವಿವರಿಸುತ್ತದೆ. ಅದು ಇಲ್ಲಿದೆ. 

ಹಿಂದೂ ಸಂಸ್ಕೃತಿಯಲ್ಲಿ ಮಾನವನ ಅಂತ್ಯಕ್ರಿಯೆಯ ವಿಧಿಗಳು ಸಾಂಕೇತಿಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವದವು. ಇದು ಮೃತನ ಆತ್ಮ ಪಂಚಭೂತಗಳ ಈ ನೆಲೆಯಿಂದ ಮೇಲಿನದಕ್ಕೆ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಯಸ್ಕರು ಮೃತಪಟ್ಟರೆ ಸಾಂಪ್ರದಾಯಿಕವಾಗಿ ದಹನ ಮಾಡಲಾಗುತ್ತದೆ. ಆದರೆ ಮಕ್ಕಳು ಮತ್ತು ಶಿಶುಗಳನ್ನು ಹೆಚ್ಚಾಗಿ ಸಮಾಧಿ ಮಾಡಲಾಗುತ್ತದೆ. ಇದೇಕೆ ಹೀಗೆ? ಇದಕ್ಕೆ ಗರುಡ ಪುರಾಣದಲ್ಲಿದೆ ಉತ್ತರ. 

ಗರುಡ ಪುರಾಣದ ಪ್ರಕಾರ ಮಾನವನ ಆತ್ಮ ಅದರ ಕರ್ಮ ಮತ್ತು ಆಧ್ಯಾತ್ಮಿಕ ಪರಿಪಕ್ವತೆಯನ್ನು ಅವಲಂಬಿಸಿ ವಿಭಿನ್ನ ನೆಲೆಗಳ ಮೂಲಕ ಪ್ರಯಾಣಿಸುತ್ತದೆ. ವಯಸ್ಕನೊಬ್ಬ ಮರಣ ಹೊಂದಿದಾಗ, ಜೀವನದ ಎಲ್ಲ ಸಂಸ್ಕಾರಗಳಿಗೆ ಒಳಗಾಗಿರುವ ಆ ದೇಹ, ಅಹಂಕಾರ ಮತ್ತು ಭೌತಿಕ ಪ್ರಪಂಚದ ಮೇಲಿನ ಬಾಂಧವ್ಯವನ್ನು ಕಡಿದುಕೊಳ್ಳುವ ಪ್ರಬಲ ಸಾಂಕೇತಿಕ ಮತ್ತು ಧಾರ್ಮಿಕ ವಿಧಾನವಾಗಿ ಸುಡುವ ಕ್ರಿಯೆ ಇದೆ. ಆದರೆ ಗರುಡ ಪುರಾಣದ ಪ್ರಕಾರ, ಈ ಎಲ್ಲ ಸಂಸ್ಕಾರಗಳಿಗೆ ಒಳಗಾಗದ ಮಕ್ಕಳು ಅದೇ ರೀತಿಯಲ್ಲಿ ಕರ್ಮದ ಪರಿಣಾಮಗಳಿಂದ ಬಂಧಿಸಲ್ಪಡುವುದಿಲ್ಲ ಎಂದು ಒತ್ತಿಹೇಳುತ್ತದೆ. 

ಮಕ್ಕಳ ಆತ್ಮಗಳು ಕರ್ಮದಿಂದ ಕಳಂಕಿತವಾಗಿಲ್ಲ. ಹೀಗಾಗಿ ದಹನ ಅನಗತ್ಯ. ಅಂತಹ ಆತ್ಮಗಳು ದೇವರಿಗೆ ಹತ್ತಿರ. ಶುದ್ಧತೆಯಿಂದ ಕೂಡಿರುತ್ತವೆ. ಬೆಂಕಿಯ ಮೂಲಕ ದಹನಕ್ರಿಯೆಯು ಶುದ್ಧೀಕರಣದ ಸಾಕೇತ. ಅದು ಕರ್ಮವನ್ನು ಸಂಗ್ರಹಿಸಿದವರಿಗೆ ಅವಶ್ಯಕ. ಮಕ್ಕಳಿಗೆ ಅಗತ್ಯವಿಲ್ಲ. ದಹನವು ಭವದ ಬಂಧನಗಳನ್ನು, ಕರ್ಮದ ಲೇಪನವನ್ನು, ದೇಹವನ್ನು ಅವರಿಸಿರುವ ಅಹಂಕಾರವನ್ನು, ಸಂಸಾರಕ್ಕೆ ಕಟ್ಟುಬಿದ್ದ ಜೀವವನ್ನು ಸುಟ್ಟುಹಾಕುತ್ತದೆ. ಆ ಆತ್ಮ ಪಿತೃಲೋಕಕ್ಕೆ ಪ್ರಯಾಣಿಸುವಂತೆ ಮಾಡುತ್ತದೆ. ಸುಡುವುದು ಎಂದರೆ ಯಜ್ಞಕ್ಕೆ ಸಮಾನ. ಆದರೆ ಮಕ್ಕಳಿಗೆ ಕರ್ಮದ ಚಕ್ರ ಅಂಟಿರುವುದಿಲ್ಲ. ಹೀಗಾಗಿ, ಪಂಚಭೂತಗಳಲ್ಲಿ ಒಂದಾದ ಭೂಮಿಗೆ ಆ ದೇಹವನ್ನು ಮರಳಿಸಲಾಗುತ್ತದೆ. ತಾಯಿ ಎನಿಸಿದ ಪೃಥ್ವಿ, ಆ ಮಕ್ಕಳನ್ನು ಸ್ವೀಕರಿಸುತ್ತಾಳೆ.

ಹಿಂದೂ ಧರ್ಮದಲ್ಲಿ ಮನುಷ್ಯನಿಗೆ 16 ಸಂಸ್ಕಾರಗಳಿವೆ ಜಾತಕರ್ಮದಿಂದ ಅಂತ್ಯಕ್ರಿಯೆಯವರೆಗೆ. ಈ 15 ಸಂಸ್ಕಾರಗಳಿಗೆ ಒಳಗಾದವರಿಗೆ ಮಾತ್ರ ಕೊನೆಯ ಸಂಸ್ಕಾರ. ಮಕ್ಕಳಿಗೆ ಈ ಸಂಸ್ಕಾರಗಳು ಆಗಿರುವುದಿಲ್ಲ. ಅವರು ಇನ್ನೂ ಸಂಪೂರ್ಣ ಲೌಕಿಕ ವ್ಯಕ್ತಿಗಳಾಗಿರುವುದಿಲ್ಲ. ಇಂಥ ಮಕ್ಕಳು ಯಮಧರ್ಮನ ನ್ಯಾಯಕ್ಕೆ ಒಳಗಾಗಬೇಕಿಲ್ಲ. ಹೀಗಾಗಿ ಅವರು ಅದೇ ಕುಟುಂಬದಲ್ಲಿ ಅಥವಾ ಬೇರೆ ಕಡೆ ತಮ್ಮ ಕರ್ಮದ ಪೂರಣಕ್ಕಾಗಿ ಮರಳಿ ಹುಟ್ಟುತ್ತಾರೆ ಎನ್ನಲಾಗುತ್ತದೆ. 

ಗರುಡ ಪುರಾಣ ನಿರೂಪಿಸುವಂತೆ ಸಣ್ಣ ಮಕ್ಕಳು ಸತ್ತರೆ ಅವರ ದೇಹಕ್ಕೆ ಸ್ನಾನ ಮಾಡಿಸಿ, ಚಂದ ಅಥವಾ ಅರಿಶಿನ ಲೇಪಿಸಿ, ಹೂವಿನಿಂದ ಸಿಂಗರಿಸಿ, ಬಿಳಿಯ ಬಟ್ಟೆಯಿಂದ ಸುತ್ತಿ, ಆಲ ಅರಳಿ ಬೇವಿನಂಥ ಪವಿತ್ರ ಮರಗಳ ಅಡಿಯಲ್ಲಿ ಹೂಳಬೇಕು. ಶ್ರಾದ್ಧ ಅಥವಾ ಪಿಂಡದಾನ ಇಂಥವರಿಗಿಲ್ಲ. ಬೆಂಕಿ ಎಂದರೆ ಶುದ್ಧೀಕರಿಸುವುದು, ಭೂಮಿ ಕಾಪಾಡಿ ಬೆಳೆಸುವುದು. ಪೃಥ್ವಿಯೇ ಎಲ್ಲ ಜೀವಗಳ ತಾಯಿ. ಹೀಗಾಗಿ ಹೂಳುವುದು ತಾಯಿಯ ಗರ್ಭಕ್ಕೆ ಮರಳಿದಂತೆ. ಅಲ್ಲಿಂದ ಆ ಜೀವದ ಪಯಣ ಇನ್ನೊಂದು ರೂಪದಲ್ಲಿ ಮುಂದುವರಿಯುತ್ತದೆ. 

ಇದಕ್ಕೆ ವ್ಯತಿರಿಕ್ತವಾಗಿ ದಹನವು ಬೇರ್ಪಡುವಿಕೆಯ ಕ್ರಿಯೆಯಾಗಿದೆ. ಇದು ಹಿಂಸಾತ್ಮಕ ಮತ್ತು ಅಂತಿಮ. ಆಳವಾಗಿ ಬೇರೂರಿರುವ ಬಾಂಧವ್ಯಗಳಿಂದ ಆತ್ಮವು ಮುಕ್ತವಾಗಬೇಕಾದಾಗ ಇದು ಅಗತ್ಯ. ಹೀಗೆಯೇ ಶುದ್ಧ ಜೀವಿಗಳನ್ನು, ಅವಧೂತರನ್ನು, ಸ್ವಾಮೀಜಿಗಳನ್ನು ಹೂಳಲಾಗುತ್ತದೆ. ಅದಕ್ಕೆ ಕಾರಣ, ಅವರ ಆಧ್ಯಾತ್ಮಿಕ ಸಾರವನ್ನು ಭೂಮಿಯಲ್ಲಿ ಕಾಪಾಡಿಕೊಳ್ಳುವ ಮಾರ್ಗ ಎಂದು. ಅವರು ಮರಳಿ ವಿಶೇಷ ಜನ್ಮಗಳಲ್ಲಿ ಬರಲಿ ಎಂದೂ ಭಾವಿಸಲಾಗುತ್ತದೆ.

ಶೈವ ಮತ್ತು ಶಕ್ತಿ ಧರ್ಮದೊಳಗಿನ ಕೆಲವು ತತ್ತ್ವಚಿಂತನೆಗಳು ಶುದ್ಧ ಜೀವಿಗಳ ಸಮಾಧಿಯನ್ನು ಅವರ ಆಧ್ಯಾತ್ಮಿಕ ಸಾರವನ್ನು ಕಾಪಾಡಿಕೊಳ್ಳುವ ಒಂದು ಮಾರ್ಗವೆಂದು ಪರಿಗಣಿಸುತ್ತವೆ, ವಿಶೇಷವಾಗಿ ಅವರು ವಿಶೇಷ ಜನ್ಮಗಳು ಅಥವಾ ಸಿದ್ಧಿಗಳನ್ನು ಹೊಂದಿದ್ದಾರೆಂದು ನಂಬಲಾಗಿದೆ.

Chanakya Niti: ಪಾಕಿಸ್ತಾನ- ಭಾರತ ಯುದ್ಧ! ಚಾಣಕ್ಯ ನೀತಿ ಹೇಳುವ 7 ತಂತ್ರಗಳು!

ಕೆಲವು ತಾಂತ್ರಿಕ ಸಂಪ್ರದಾಯಗಳಲ್ಲಿ, ವಿಶೇಷವಾಗಿ ಪ್ರಾಣ, ಕುಂಡಲಿನಿ ಮುಂತಾದ ಸೂಕ್ಷ್ಮ ಶಕ್ತಿಗಳಲ್ಲಿ ಶಿಶುವಿನ ದೇಹ ಇನ್ನೂ ಕಾಸ್ಮಿಕ್ ಮುಗ್ಧತೆಯಿಂದ ಕಂಪಿಸುತ್ತಿರುತ್ತದೆ. ಅಂತಹ ದೇಹವನ್ನು ದಹನ ಮಾಡುವುದು ಅನಗತ್ಯ ಅಥವಾ ಆಧ್ಯಾತ್ಮಿಕವಾಗಿ ಸೂಕ್ಷ್ಮವಲ್ಲದ ಕ್ರಿಯೆ. ಬದಲಾಗಿ, ಸಮಾಧಿಯು ಕಾಸ್ಮಿಕ್ ಕಂಪನವನ್ನು ನಿಧಾನವಾಗಿ ಸಂರಕ್ಷಿಸುತ್ತದೆ ಮತ್ತು ಹಿಂದಿರುಗಿಸುತ್ತದೆ. 

ಶಾಸ್ತ್ರಗಳ ಆಚೆಗೆ ಈ ಆಚರಣೆಯಲ್ಲಿ ಮಾನಸಿಕ ಸಂವೇದನೆಯೂ ಒಂದು ಪಾತ್ರವನ್ನು ವಹಿಸುತ್ತದೆ. ದುಃಖಿತ ಪೋಷಕರಿಗೆ, ಸಮಾಧಿ ಮಾಡುವುದು ಶಾಂತಿ ಮತ್ತು ನಿರಂತರತೆಯ ಭಾವನೆಯನ್ನು ನೀಡುತ್ತದೆ. ಮೃತ ಶಿಶುವನ್ನು ದಹಿಸುವ ತೀವ್ರವಾದ ಬೆಂಕಿ ಮತ್ತು ವಿನಾಶದ ಚಿತ್ರಣ ಭಾವನಾತ್ಮಕವಾಗಿ ತುಂಬ ನೋವಿನದು. ಸಮಾಧಿ ಮಾಡುವುದರಿಂದ ಸ್ಮರಣಾರ್ಥದ ಒಂದು ರೂಪ ಸಿಗುತ್ತದೆ. ಸಮಾಧಿ ಸ್ಥಳದಲ್ಲಿ ನೆಟ್ಟ ಮರಗಳು ಅಥವಾ ಆ ಸ್ಥಳದಲ್ಲಿ ನಡೆಸುವ ಆಚರಣೆಗಳು ಆತ್ಮದೊಂದಿಗೆ ನಿರಂತರ ಸಂಬಂಧವನ್ನು ನೀಡುತ್ತವೆ. 

ರಸ್ತೆಯಲ್ಲಿ ಶವ ಯಾತ್ರೆ ನೋಡೋದು ಶುಭವೋ? ಅಶುಭವೋ?