Indian Mythology: ಯಮ ಸೂರ್ಯನ ಮಗ ಆದರೆ, ಧರ್ಮರಾಯ ಸೂರ್ಯನಿಗೆ ಮಗನೇ, ಮೊಮ್ಮಗನೇ?
ಕುಂತಿಯು ಸೂರ್ಯ ಮತ್ತು ಯಮ ಇಬ್ಬರಿಂದಲೂ ಮಕ್ಕಳನ್ನು ಪಡೆದಿದ್ದಾಳೆ. ಯಮ ಸೂರ್ಯನ ಮಗನಾದ್ದರಿಂದ, ಧರ್ಮರಾಯನಿಗೆ ಸೂರ್ಯ ತಾತನೇ ಅಥವಾ ತಂದೆಯೇ? ಹಾಗೆಯೇ ಕುಂತಿ ಅಪ್ಪ- ಮಗ ಇಬ್ಬರಿಂದಲೂ ನಿಯೋಗ ಹೊಂದಬಹುದೇ? ಈ ಪ್ರಶ್ನೆ ಕುತೂಹಲಕಾರಿ.

ಇದೊಂದು ವಿಚಿತ್ರ ಪ್ರಶ್ನೆ. ಆದರೆ ಈ ಪ್ರಶ್ನೆಯಲ್ಲಿ ತಿರುಳಿದೆ. ಮಹಾಭಾರತದಲ್ಲಿ (Mahabharatha) ನಡೆಯುವ ಈ ಕತೆ ನಿಮಗೆಲ್ಲ ತಿಳಿದದ್ದೇ. ಕುಂತಿಗೆ (Kunti) ಮುನಿ ದೂರ್ವಾಸರು (Sage Durvasa) ಐದು ಮಂತ್ರಗಳನ್ನು ಕೊಡುತ್ತಾರೆ. ಒಂದು ಮಂತ್ರವನ್ನು ಕುಂತಿ ಮದುವೆಯಾಗುವುದಕ್ಕೂ ಮುನ್ನವೇ ಕೌಮಾರ್ಯ ಸಹಜ ಕುತೂಹಲದಿಂದ ಪ್ರಯೋಗಿಸಿ ನೋಡುತ್ತಾಳೆ. ಆಕೆ ಮಂತ್ರವನ್ನು ಜಪಿಸಿದಾಗ ಸೂರ್ಯ ಪ್ರತ್ಯಕ್ಷನಾಗುತ್ತಾನೆ. ʼಬೇಡ, ಬೇಡʼ ಎಂದರೂ ತನ್ನಂತೆಯೇ ತೇಜಸ್ವಿಯಾದ ಮಗನೊಬ್ಬನನ್ನು ಕುಂತಿಗೆ ಕರುಣಿಸುತ್ತಾನೆ. ಜನರ ಅಪವಾದಕ್ಕೆ ಹೆದರಿದ ಕುಂತಿ ಆ ಮಗುವನ್ನು ಆಭರಣಗಳ ಸಮೇತ ಗಂಗೆಯಲ್ಲಿ ತೇಲಿಬಿಡುತ್ತಾಳೆ. ಅವನು ಧೃತರಾಷ್ಟ್ರನ ಸೂತ ಅಧಿರಥನಿಗೆ ಗಂಗಾ ತೀರದಲ್ಲಿ ಸಿಕ್ಕಿ, ಅವನ ಮನೆಯಲ್ಲಿ ಬೆಳೆಯುತ್ತಾನೆ. ಅವನೇ ಕರ್ಣ.
ಪಾಂಡುವನ್ನು ಮದುವೆಯಾಗಿ ಎಷ್ಟೋ ವರ್ಷಗಳಾದ ಬಳಿಕ, ಕುಂತಿ ಮತ್ತೆರಡು ಮಂತ್ರಗಳನ್ನು ಪ್ರಯೋಗಿಸುತ್ತಾಳೆ. ಮೊದಲನೆಯದರಲ್ಲಿ ಯಮಧರ್ಮನನ್ನು ನೆನೆದು ಅವನಿಂದ ಧರ್ಮರಾಯ ಅಥವಾ ಯುಧಿಷ್ಠಿರನನ್ನು ಪಡೆಯುತ್ತಾಳೆ. ಎರಡನೆಯದರಿಂದ ವಾಯುವನ್ನು ನೆನೆದು ಭೀಮನನ್ನು ಹೊಂದುತ್ತಾಳೆ. ಇನ್ನೊಂದು ಮಂತ್ರವನ್ನು ಮಾದ್ರಿಗೆ ನೀಡುತ್ತಾಳೆ. ಅದರಲ್ಲಿ ಅಶ್ವಿನಿ ದೇವತೆಗಳಿಂದ ಮಾದ್ರಿಗೆ ಅವಳಿ ಮಕ್ಕಳಾಗುತ್ತವೆ. ಅವರೇ ನಕುಲ ಸಹದೇವರು. ಈಗ ಪ್ರಶ್ನೆ ಏನೆಂದರೆ, ಪುರಾಣಗಳ ಪ್ರಕಾರ ಯಮಧರ್ಮನು ಸೂರ್ಯದೇವರ ಮಗ. ಸಂಜ್ಞಾದೇವಿ ಎಂಬಾಕೆಯಲ್ಲಿ ಸೂರ್ಯನಿಂದ ಜನಿಸಿದವನು ಯಮ. ಈಗ, ಕುಂತಿಯು ಸೂರ್ಯ ಹಾಗೂ ಯಮ ಇಬ್ಬರಿಂದಲೂ ಮಕ್ಕಳನ್ನು ಪಡೆದಿದ್ದಾಳೆ. ಹಾಗಾದರೆ ಧರ್ಮರಾಯನಿಗೆ ಯಮ ತಂದೆಯೇನೋ ಸರಿ, ಆದರೆ ಸೂರ್ಯ ಏನಾಗಬೇಕು? ತಂದೆಯ ಕಡೆಯಿಂದ ನೋಡಿದರೆ ತಾತ ಆಗಬೇಕಲ್ಲವೇ? ಆದರೆ ತಾಯಿಯ ಕಡೆಯಿಂದ ನೋಡಿದರೆ, ಕುಂತಿ ಸೂರ್ಯನಿಂದ ಮಗುವನ್ನು ಪಡೆದಿರುವುದರಿಂದ, ಸೂರ್ಯ ಯುಧಿಷ್ಠಿರನಿಗೆ ತಂದೆಯ ಸಮಾನವೇ ಆಗಬೇಕು. ಈ ಕಗ್ಗಂಟನ್ನು ಬಿಡಿಸುವುದು ಹೇಗೆ? ಇಲ್ಲಿ ಇನ್ನೊಂದು ಪ್ರಶ್ನೆಯನ್ನೂ ಕೇಳಬಹುದು- ಕುಂತಿಯು ತಂದೆ ಮತ್ತು ಮಗ ಇಬ್ಬರಿಂದಲೂ ಮಕ್ಕಳನ್ನು ಪಡೆದದ್ದು ಸರಿಯೇ?
ನಿಜ, ಈ ಪ್ರಶ್ನೆ ಕುತೂಹಲಕರವಾದದ್ದೇ. ಇದಕ್ಕೆ ಸರಿಯಾದ ಉತ್ತರವೆಂದರೆ ಇಷ್ಟು ಮಾತ್ರ- ದೇವತೆಗಳಿಗೆ ಭೂಮಿಯ ಸಂಬಂಧಗಳ ನಿಯಮ ಅನ್ವಯ ಆಗುವುದಿಲ್ಲ ಎಂಬುದು. ಇದನ್ನು ಊರ್ವಶಿ- ಅರ್ಜುನನ ಪ್ರಸಂಗದಲ್ಲಿ ಗಮನಿಸಬಹುದು. ಒಮ್ಮೆ ಇಂದ್ರಲೋಕಕ್ಕೆ ಅರ್ಜುನ ಭೇಟಿ ನೀಡುತ್ತಾನೆ. ಅಲ್ಲಿ ಅರ್ಜುನನನ್ನು ಖುಷಿಪಡಿಸಲೆಂದು ಊರ್ವಶಿಯನ್ನು ಇಂದ್ರ ರಾತ್ರಿ ಅವನ ಬಳಿಗೆ ಕಳಿಸುತ್ತಾನೆ. ಆದರೆ ತನ್ನ ತಂದೆ ಇಂದ್ರನ ಸಖಿಯಾಗಿರುವ ಅಪ್ಸರೆ ಊರ್ವಶಿ ತನಗೆ ತಾಯಿ ಸಮಾನ, ಆದ್ದರಿಂದ ಆಕೆಯನ್ನು ಕೂಡಲಾರೆ ಎಂದು ಅರ್ಜುನ ಭಾವಿಸುತ್ತಾನೆ. ಹಾಗೇ ಹೇಳುತ್ತಾನೆ. ಆದರೆ ಈ ಮಾತನ್ನು ಊರ್ವಶಿ ಒಪ್ಪುವುದಿಲ್ಲ. "ನಿಮ್ಮ ಭೂಮಿಯ ನಿಯಮಗಳು ಸ್ವರ್ಗದಲ್ಲಿರುವ ದೇವತೆಗಳಾದ ನಮಗೆ ಅನ್ವಯ ಆಗುವುದಿಲ್ಲ" ಎಂದು ಆಕೆ ಸ್ಪಷ್ಟವಾಗಿ ಹೇಳುತ್ತಾಳೆ. ಆದರೂ ಅರ್ಜುನ ಆಕೆಯನ್ನು ಸೇರುವುದಿಲ್ಲ, ಅದು ಬೇರೆ ಕತೆ.
ಭಕ್ತರೇ, ಎಂದೆಂದಿಗೂ ನೇರವಾಗಿ ದೇವರ ಕಣ್ಣಿಗೆ ಬೀಳಬೇಡಿ!
ಹೀಗಾಗಿ, ಕುಂತಿ ಅಪ್ಪ- ಮಗ ಇಬ್ಬರಲ್ಲೂ ನಿಯೋಗ ಮಾಡಿದಳು ಎಂದು ಆರೋಪಿಸುವುದು ಸಾಧುವಾಗದು. ಹಾಗೆಯೇ ಸೂರ್ಯನ ಮಗ ಯಮ ಎನ್ನುವುದು ಪುರಾಣ ಕತೆಯನ್ನು ನೆನಪಿಡುವ ಅನುಕೂಲಕ್ಕೆ ಅಷ್ಟೇ. ಒಂದು ರೀತಿಯಿಂದ ಸೃಷ್ಟಿ ದೇವತೆಯಾದ ಬ್ರಹ್ಮನೇ ತಾನು ಸರಸ್ವತಿಯನ್ನು ಸೃಷ್ಟಿಸಿ, ಆಕೆಯನ್ನೇ ಮದುವೆಯಾಗಿ ಈ ದೇವತೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾನೆ ಎನ್ನಬಹುದು. ಈ ಸಂಬಂಧಗಳನ್ನು ಹುಲುಮಾನವರಾದ ನಾವು ಪ್ರಶ್ನಿಸಲಾರೆವು. ದೇವತೆಗಳು ನಿಯಮಗಳೇ ಬೇರೆ; ಅವು ನಮಗೆ ಅನ್ವಯಿಸುವುದಿಲ್ಲ. ಹಾಗೆಯೇ ಭೂಲೋಕದ ಕಟ್ಟುಪಾಡುಗಳು ದೇವತೆಗಳಿಗೂ ಅನ್ವಯಿಸದು ಎಂಬುದೇ ಉತ್ತರ.
ಅಘೋರಿಗಳು ಚಿರಂಜೀವಿಗಳಾ? ಕೃತಯುಗದಿಂದ ಇಂದಿಗೂ ಬದುಕಿರುವ ಎಂಟನೇ ಚಿರಂಜೀವಿ ಯಾರವನು?