ಮಹಾಭಾರತದ ಕುರುಕ್ಷೇತ್ರ ಯುದ್ಧ ಪಾಂಡವರು ಕೌರವರ ನಡುವೆ ನಡೆದದ್ದು ನಿಮಗೆ ಗೊತ್ತೇ ಇದೆ. ಈ ಯುದ್ಧದಲ್ಲಿ ಹೋರಾಡಿದ ಅತ್ಯಂತ ಹಿರಿಯ ವ್ಯಕ್ತಿ ಭೀಷ್ಮರು ಎಂದು ತುಂಬಾ ಮಂದಿ ತಿಳಿದುಕೊಂಡಿದ್ದಾರೆ. ಅವರಿಗೆ ಆಗ 800 ವರ್ಷ ವಯಸ್ಸಾಗಿತ್ತು ನಿಜ, ಆದರೆ ಅವರಿಗಿಂತಲೂ ಹಿರಿಯ ವ್ಯಕ್ತಿ ಇನ್ನೊಬ್ಬರಿದ್ದರು! 

ಭೀಷ್ಮನಿಗೆ ಇವನು ದೊಡ್ಡಪ್ಪನಾಗಬೇಕು. ಕುರುಕ್ಷೇತ್ರ ಯುದ್ಧದ 14 ದಿನದವರೆಗೂ ದಣಿವಿಲ್ಲದೆ ಕಾದಾಡಿ ಭೀಮನ ಕೈಯಲ್ಲಿ ಸತ್ತ ವೀರ ಇವನು. ಆಗ ಭೀಷ್ಮನಿಗೆ 800 ವರ್ಷವಾಗಿದ್ದರೆ ಇವನಿಗೆ 900 ವರ್ಷವಾದರೂ ಆಗಿರಬೇಕು! ಇವನು ಬಾಹ್ಲಿಕ ಸಾಮ್ರಾಜ್ಯದ ರಾಜನಾಗಿದ್ದ. ಇವನು ಹಸ್ತಿನಾಪುರದ ರಾಜನೂ ಭೀಷ್ಮನ ಚಿಕ್ಕಪ್ಪನೂ ಆಗಿದ್ದ ಶಂತನುವಿನ ಅಣ್ಣ. ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಿದ ಅತ್ಯಂತ ಹಿರಿಯ ಯೋಧ ಇವನು. 

ಇವನಿಗೆ ಸೋಮದತ್ತ ಎಂಬ ಮಗ ಮತ್ತು ಪೌರವಿ ಎಂಬ ಮಗಳಿದ್ದರು. ಭೂರಿಶ್ರವಸ್, ಭೂರಿ ಮತ್ತು ಶಾಲ ಎಂಬ ಮೊಮ್ಮಕ್ಕಳನ್ನು ಮಗನಿಂದ ಪಡೆದಿದ್ದನು. ಅವಗಾಹ ಮತ್ತು ನಂದಕ ಎಂಬ ಮೊಮ್ಮಕ್ಕಳನ್ನು ಮಗಳಿಂದ ಪಡೆದಿದ್ದ. ಸೋಮದತ್ತನ ಮಗಳು ಕಾಶಿ ರಾಜ ಅಭಿಭುವನ್ನು ಮದುವೆಯಾದಳು. ಇವನು ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಸೇನೆಯ ಕಡೆ ಇದ್ದು ಹೋರಾಡಿದ. ಸೂರ್ಯಾಸ್ತದ ನಂತರ ಯುದ್ಧದ 14ನೇ ದಿನದಂದು ಇವನು ಭೀಮನಿಂದ ಕೊಲ್ಲಲ್ಪಟ್ಟ. ಹಸ್ತಿನಾಪುರದಲ್ಲಿ ಶಾಂತಿ ನೆಲೆಸಬೇಕೆಂಬುದು ಬಾಹ್ಲೀಕನ ಏಕೈಕ ಆಸೆಯಾಗಿತ್ತು. 

ಹಸ್ತಿನಾಪುರದ ರಾಜ- ರಾಣಿಯರಾದ ಪ್ರತೀಪ ಮತ್ತು ಸುನಂದಾ ಅವರ ಮೂವರು ಪುತ್ರರಲ್ಲಿ ಬಾಹ್ಲಿಕ ಎರಡನೆಯವನು. ಇವನ ಅಣ್ಣ ದೇವಾಪಿಯು ರಾಜ್ಯದ ಉತ್ತರಾಧಿಕಾರಿಯಾದ. ಪ್ರತೀಪನು ಹೊಸದಾಗಿ ವಶಪಡಿಸಿಕೊಂಡ ಕೆಲವು ಭೂಮಿಯನ್ನು ತನ್ನ ಎರಡನೆಯ ಮಗನಾದ ಬಾಹ್ಲಿಕನಿಗೆ ಉಡುಗೊರೆಯಾಗಿ ನೀಡಿದ. ಇದರ ಪರಿಣಾಮವಾಗಿ ಭೂಮಿಗೆ ಬಾಹ್ಲಿಕ ಎಂಬ ಹೆಸರನ್ನು ನೀಡಲಾಯಿತು. ಆದರೆ ಕುಷ್ಠರೋಗದ ಕಾರಣ, ಪ್ರತೀಪನ ಹಿರಿಯ ಮಗ ದೇವಾಪಿ ಸಿಂಹಾಸನವನ್ನು ಏರಲು ನಿರಾಕರಿಸಿ ತಪಸ್ಸು ಮಾಡಲು ಕಾಡಿಗೆ ಹೋದ. ಸರದಿ ಪ್ರಕಾರ ಬಾಹ್ಲಿಕ ಸಿಂಹಾಸನವನ್ನು ಏರಬೇಕಾಗಿತ್ತು. ಆದರೆ ಅವನು ಒಪ್ಪಲಿಲ್ಲ. ನಂತರ ಸಣ್ಣವನಾದ ಶಂತನು ಪಟ್ಟದ ರಾಜಕುಮಾರನಾದ ಮತ್ತು ಪ್ರತೀಪನ ಮರಣದ ನಂತರ ಹಸ್ತಿನಾಪುರದ ರಾಜನಾದ.

ಯುದ್ಧವಿದ್ಯೆಗಳನ್ನು ಕಲಿತ ಕೌರವ ಪಾಂಡವರು ಅದರ ಪ್ರದರ್ಶನ ನೀಡುವಾಗ ಬಾಹ್ಲಿಕ ಅಲ್ಲಿದ್ದ. ಯುಧಿಷ್ಠಿರನ ಯುವರಾಜ್ಯಾಭಿಷೇಕ ಆಗುವಾಗಲೂ ಹಾಜರಿದ್ದ. ಯುಧಿಷ್ಠಿರ ಚಕ್ರವರ್ತಿಯಾಗಲು ರಾಜಸೂಯ ಯಜ್ಞವನ್ನು ಮಾಡಿದಾಗಲೂ ಕಪ್ಪ ಕಾಣಿಕೆ ನೀಡಿ ಅದರಲ್ಲಿ ಪಾಲ್ಗೊಂಡ. ಅವನಿಗೆ ಶುದ್ಧ ಚಿನ್ನದಿಂದ ಮಾಡಿದ ರಥವನ್ನು ಉಡುಗೊರೆಯಾಗಿ ನೀಡಿದ. ದುರ್ಯೋಧನ ಮತ್ತು ಯುಧಿಷ್ಠಿರನ ನಡುವಿನ ಪಗಡೆಯಾಟದಲ್ಲಿಯೂ ಇದ್ದ. 

ಆಂಜನೇಯ ಹಿಮಾಲಯದಿಂದ ಹೊತ್ತು ತಂದ ಮೃತಸಂಜೀವಿನಿ ಮೂಲಿಕೆ ಈಗಲೂ ಇದೆ!

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಬಾಹ್ಲಿಕ ಮತ್ತು ಅವನ ರಾಜ್ಯದ ಸೈನ್ಯ ದುರ್ಯೋಧನನ ಪರವಾಗಿ ಹೋರಾಡಿತು. ಭೀಷ್ಮನು ಅವನನ್ನು ಅತಿರಥಿಯೆಂದು ಪರಿಗಣಿಸಿದ. ಮೊದಲ ದಿನ ಬಾಹ್ಲಿಕನು ಧೃಷ್ಟಕೇತುವಿನ ವಿರುದ್ಧ ಹೋರಾಡಿದನು. ಒಂಬತ್ತನೆಯ ದಿನ, ಭೀಮನು ಬಾಹ್ಲೀಕನ ರಥವನ್ನು ನಾಶಪಡಿಸಿದ. ಹದಿಮೂರನೇ ದಿನ ಬಾಹ್ಲಿಕನು ಅಭಿಮನ್ಯುವಿನ ಹತ್ಯೆಯಲ್ಲಿ ಭಾಗವಹಿಸಿದ. ಹದಿನಾಲ್ಕನೆಯ ದಿನ ಬಾಹ್ಲೀಕ ಮತ್ತು ಭೀಮನ ನಡುವೆ ಯುದ್ಧ ನಡೆಯಿತು. ಭೀಮನು ಬಾಹ್ಲಿಕನ ತಲೆಯ ಮೇಲೆ ಗದೆಯನ್ನು ಎಸೆದು ಅವನನ್ನು ಕೊಂದನು.

ಅವನ ಏಕೈಕ ಮಗ ಮತ್ತು ಉತ್ತರಾಧಿಕಾರಿ ಸೋಮದತ್ತ, ಹಾಗೆಯೇ ಸೋಮದತ್ತನ ಹಿರಿಯ ಮಗ ಭೂರಿಶ್ರವಸ್ ಕೂಡ ಸಾತ್ಯಕಿಯಿಂದ ಕೊಲ್ಲಲ್ಪಟ್ಟರು. ಭೂರಿಶ್ರವಸ್‌ನ ಇಬ್ಬರು ಮಕ್ಕಳಾದ ಪ್ರತಿಪ ಮತ್ತು ಪ್ರಜನ್ಯರು ಯುದ್ಧದ ಹದಿಮೂರನೇ ದಿನದಂದು ಅಭಿಮನ್ಯುವಿನಿಂದ ಕೊಲ್ಲಲ್ಪಟ್ಟರು. ಹೀಗೆ ಬಾಹ್ಲೀಕನ ವಂಶವೇ ನಂದಿಹೋಯಿತು. 

Chanakya Niti: ಗ್ಲಾಮರ್‌ ಬಗ್ಗೆ ಚಾಣಕ್ಯ ಹೇಳೋ ಮಾತು ನಿಮ್ಮ ಹುಬ್ಬೇರಿಸಬಹುದು!