ರಾಮಾಯಣದಲ್ಲಿ ಹನುಮಂತ ಹಿಮಾಲಯದಿಂದ ಹೊತ್ತು ತಂದ ಸಂಜೀವಿನಿ ಮೂಲಿಕೆ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಅದರ ಹುಡುಕಾಟಕ್ಕೆ ಉತ್ತರಾಖಂಡ ಸರಕಾರ ಸಾಕಷ್ಟು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ರಾಮಾಯಣದಲ್ಲಿ ಒಂದು ಘಟನೆ ಇದೆ. ಲಂಕೆಯಲ್ಲಿ ಯುದ್ಧ ನಡೆಯುವಾಗ ರಾವಣನ ಮಗ ಇಂದ್ರಜಿತುವಿನ ಮಹಾಸ್ತ್ರ ಪ್ರಯೋಗದಿಂದ ರಾಮ ಲಕ್ಷಮಣರೂ ಇಡೀ ಕಪಿಸೇನೆಯೂ ಅಸುನೀಗುತ್ತಾರೆ. ಆಗ ಅವರನ್ನು ಬದುಕಿಸಲು, ಕಪಿವೈದ್ಯ ಸುಷೇಣನು, ಹಿಮಾಲಯದಿಂದ ಮೃತಸಂಜೀವಿನಿ ಮೂಲಿಕೆಯನ್ನು ತರುವಂತೆ ಹನುಮಂತನಿಗೆ ಹೇಳುತ್ತಾನೆ. ಹನುಮಂತ ಹಿಮಾಲಯಕ್ಕೆ ಹಾರಿ ಹುಡುಕಿ ಅಲ್ಲೆಲ್ಲೂ ಮೂಲಿಕೆ ಸಿಕ್ಕದಿರಲು, ಇಡೀ ಚಂದ್ರದ್ರೋಣ ಪರ್ವತವನ್ನೇ ಹೊತ್ತು ತರುತ್ತಾನೆ. ಅಲ್ಲಿದ್ದ ಸಂಜೀವಿನಿ ಮೂಲಿಕೆ ಬಳಸಿ ಸುಷೇಣನು ರಾಮ ಲಕ್ಷ್ಮಣರನ್ನು ಬದುಕಿಸುತ್ತಾನೆ. ಹಾಗಾದರೆ ಈ ಮೂಲಿಕೆ ಈಗಲೂ ಇದೆಯೇ? ಇದ್ದರೆ ಯಾವುದಿರಬಹುದು? ಅದನ್ನು ಬಳಸಿ, ಮೃತಪಟ್ಟವರನ್ನು ಬದುಕಿಸಲು ನಮಗೆ ಸಾಧ್ಯವಿದೆಯೇ?
ಸಂಜೀವಿನಿ ಎಂಬ ಮೂಲಿಕೆ ಇರುವುದು ನಿಜ ಎಂದು ಹಿಂದೂ ಧರ್ಮದ ಅನೇಕ ಗ್ರಂಥಗಳಲ್ಲಿ ಬರುತ್ತದೆ. ಸಂಜೀವಿನಿ ಮಾಂತ್ರಿಕ ಮೂಲಿಕೆಯಾಗಿದ್ದು, ಇದು ನರಮಂಡಲದ ಗಂಭೀರ ಅಸ್ವಸ್ಥತೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈ ಮೂಲಿಕೆಯಿಂದ ತಯಾರಿಸಿದ ಔಷಧಿಗಳು ರೋಗಿಯನ್ನು ಸಾವು ಬಹುತೇಕ ಖಚಿತವಾಗಿರುವ ಯಾವುದೇ ಸಂದರ್ಭಗಳಲ್ಲಿ ಪುನರುಜ್ಜೀವನಗೊಳಿಸಬಹುದು ಎಂದು ನಂಬಲಾಗಿದೆ. ಹಿಮಾಲಯದ ಇಳಿಜಾರಿನಲ್ಲಿ ವಿಂಧ್ಯದ ಉತ್ತರಕ್ಕೆ ದ್ರೋಣಗಿರಿ ಅಥವಾ ಗಂಧಮಾಧನ ಬೆಟ್ಟಗಳಿಂದ ಈ ಮೂಲಿಕೆಯನ್ನು ಆಂಜನೇಯ ತಂದನು ಎಂದಿದೆ. ಹಾಗಿದ್ದರೆ ಈ ಪರ್ವತ ಯಾವುದು? ಗಿಡಮೂಲಿಕೆಗಳಿದ್ದ ಈ ಪರ್ವತ ಪ್ರದೇಶವನ್ನು ಹಿಮಾಲಯದ ಇಳಿಜಾರಿನ ಉತ್ತರಾಖಂಡದ ಬದರಿ ಬಳಿಯ ಹೂವಿನ ಕಣಿವೆ ಎಂದು ಗುರುತಿಸಲಾಗಿದೆ. ಇದನ್ನು ಕೆಲವೊಮ್ಮೆ ಗಂಧಮಾಧನ ಎಂದು ಕರೆಯಲಾಗುತ್ತದೆ. ಮತ್ತು ಕೆಲವೊಮ್ಮೆ ದ್ರೋಣಗಿರಿ ಎಂದು ಕರೆಯಲಾಗುತ್ತದೆ.
ಸಂಜೀವನಿ ಮೂಲಿಕೆ ಯಾವುದಿರಬಹುದು ಎಂಬುದಕ್ಕೆ ಹಲವು ಸಂಭಾವ್ಯ ಸಸ್ಯಗಳನ್ನು ಪ್ರಸ್ತಾಪಿಸಲಾಗಿದೆ, ಅವುಗಳೆಂದರೆ: ಸೆಲಜಿನೆಲ್ಲಾ ಬ್ರಯೋಪ್ಟೆರಿಸ್, ಡೆಂಡ್ರೋಬಿಯಂ ಪ್ಲಿಕಾಟೈಲ್ (ಡೆಸ್ಮೊಟ್ರಿಚಮ್ ಫಿಂಬ್ರಿಯಾಟಮ್), ಕ್ರೆಸ್ಸಾ ಕ್ರೆಟಿಕಾ ಮತ್ತು ಇತರ. CSIR ಪ್ರಯೋಗಾಲಯಗಳಲ್ಲಿ ಪ್ರಾಚೀನ ಗ್ರಂಥಗಳ ಹುಡುಕಾಟ ನಡೆಯಿತು. ಆದರೆ ಸಂಜೀವಿನಿ ಇದೇ ಎಂದು ಖಚಿತವಾಗಿ ದೃಢೀಕರಿಸಬಹುದಾದ ಯಾವುದೇ ಸಸ್ಯವನ್ನು ಬಹಿರಂಗಪಡಿಸಲಾಗಲಿಲ್ಲ. ಕೆಲವು ಪುರಾತನ ಪಠ್ಯಗಳಲ್ಲಿ, ಸಂಜೀವಿನಿ ಕತ್ತಲೆಯಲ್ಲಿ ಹೊಳೆಯುತ್ತದೆ ಎಂದು ಬರೆಯಲಾಗಿದೆ.
Chanakya Niti: ಗ್ಲಾಮರ್ ಬಗ್ಗೆ ಚಾಣಕ್ಯ ಹೇಳೋ ಮಾತು ನಿಮ್ಮ ಹುಬ್ಬೇರಿಸಬಹುದು!
ಆಯುರ್ವೇದ ಔಷಧಗಳಲ್ಲಿ ಸಂಜೀವನಕಾರಿ ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾದ ಮೂಲಿಕೆಯ ಉಲ್ಲೇಖ ಶತಮಾನಗಳಿಂದಲೂ ಇದೆ. ಉತ್ತರ ಭಾರತದ ಉತ್ತರಾಖಂಡದ ಉತ್ತರಾಖಂಡ ರಾಜ್ಯವು ಆಗಸ್ಟ್ 2016 ರಿಂದ ಸಂಜೀವಿನಿ ಮೂಲಿಕೆಯನ್ನು ಹುಡುಕಲು 25 ಕೋಟಿ ರೂಪಾಯಿ ಹಣವನ್ನು ತೆಗೆದಿಟ್ಟಿದೆ. ಇಲ್ಲಿನ ಹುಡುಕಾಟ ಚೀನಾದ ಗಡಿಯ ಸಮೀಪವಿರುವ ಹಿಮಾಲಯದ ದ್ರೋಣಗಿರಿ ಶ್ರೇಣಿಯ ಮೇಲೆ ಕೇಂದ್ರೀಕೃತವಾಗಿತ್ತು. ರಾಮಾಯಣವು ದ್ರೋಣಗಿರಿ ಶ್ರೇಣಿಯನ್ನು ಉಲ್ಲೇಖಿಸುತ್ತದೆ. ಉತ್ತರಾಖಂಡದ ಆಯುಷ್ ಇಲಾಖೆ ಈ ಹುಡುಕಾಟದ ನೇತೃತ್ವ ವಹಿಸಿದೆ.
ನಮ್ಮಲ್ಲಿ ಅಮೃತಬಳ್ಳಿ ಎಂಬುದಿದೆ. ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಅದರ ಹೆಸರಿನಲ್ಲಿಯೇ ಅಮೃತ ಇರುವುದರಿಂದ ಇದನ್ನು ಹಲವರು ಅಮೃತತ್ವದ ಜೊತೆಗೆ ಕನ್‌ಫ್ಯೂಸ್ ಮಾಡಿಕೊಂಡಿದ್ದಾರೆ. ಆದರೆ ಸಂಜೀವಿನಿ ಇದಲ್ಲ. ಸಂಜೀವಿನಿ ನಮಗೆ ಸಿಕ್ಕರೂ ಅದನ್ನು ಗುರುತಿಸಲು ಸಾಧ್ಯವೆ? ದ್ರೋಣಗಿರಿ ಪರ್ವತ ಅಥವಾ ಗಂಧಮಾಧನವನ್ನು ತಲುಪಿದ ನಂತರ ಹನುಮಂತನೇ ಮೂಲಿಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇಡೀ ಪರ್ವತವನ್ನು ಎತ್ತಿ ಯುದ್ಧಭೂಮಿಗೆ ತಂದನು. ಹನುಮಂತನಿಗೇ ಸಾಧ್ಯವಾಗಲಿಲ್ಲ ಎಂದ ಮೇಲೆ, ಇನ್ನು ಸಾಮಾನ್ಯರಾದ ನಮಗೆ ಗುರುತಿಸಲು ಸಾಧ್ಯವುಂಟೆ? ನಮ್ಮ ಜ್ಞಾನ ಸೀಮಿತವಾಗಿದೆ ಎಂಬುದನ್ನು ಒಪ್ಪಬೇಕಿದೆ.
Vidur Niti: ಈ ಮೂರು ಮಾದರಿಯ ಜನರು ಸ್ವಂತ ಆಸ್ತಿಗೆ ಎಂದೂ ಮಾಲೀಕರಾಗಿರೋದಿಲ್ಲ!
