ಈ ವರ್ಷ ಶುಭಕೃತ್ ನಾಮ ಸಂವತ್ಸರ ಹೆಸರಿನಂತೆ ಶುಭವನ್ನೇ ಉಂಟು ಮಾಡಲಿದೆಯೇ? ಗ್ರಹಗಳ ರಾಜಾದಯ ಫಲ ಏನಿರಲಿದೆ?

ಶ್ರೀಕಂಠ ಶಾಸ್ತ್ರಿಗಳು, ಸುವರ್ಣ ನ್ಯೂಸ್

ಪ್ರಭವಾದಿ ಷಷ್ಠಿ ಸಂವತ್ಸರಗಳಲ್ಲಿ ಈ ಶುಭಕೃತ್ ಸಂವತ್ಸರ (Shubhakruth Nama Samvatsara) ಮುವತ್ತಾರನೇ ಸಂವತ್ಸರ. ನಾರದ ಮಹರ್ಷಿ ನಾರದಿಯಾದಾಗ ಅವರಿಗೆ ಸಂತಾನವಾಗಿ ಹುಟ್ಟಿದ್ದು ಈ ಸಂವತ್ಸರಗಳು ಎಂಬ ನಂಬಿಕೆ ಇದೆ. ಈ ಸಂವತ್ಸರಗಳೇ ನಮ್ಮ ಅಗಾಧ-ಅಪರಿಮಿತವಾದ ಕಾಲವನ್ನು ಹಿಡಿದಿಟ್ಟುಕೊಳ್ಳಲಿಕ್ಕೆ, ಗಣನೆ ಮಾಡಿಕೊಳ್ಳಲಿಕ್ಕೆ ಸಂವತ್ಸರ ರೂಪದಲ್ಲಿ ಬಳಸುವುದನ್ನು ಋಷಿಗಳು ತೋರಿಸಿಕೊಟ್ಟಿದ್ದಾರೆ. ಅದರಂತೆ ಕಾಲವನ್ನು ಯೋಜಿಸಿಕೊಂಡು ನಮ್ಮ ನಿತ್ಯಕರ್ಮಗಳನ್ನು ಮಾಡಲು ಈ ಸಂವತ್ಸರಗಳ ಮೊರೆ ಹೋಗುತ್ತೇವೆ.

ಈ ಸಂವತ್ಸರಗಳ ಹೆಸರುಗಳೇ(names) ವಿಚಿತ್ರವಾಗಿದೆ. ಕೆಲವು ಸಂವತ್ಸರಗಳು ಶುಭದಾಯಕ ಅಂಶಗಳನ್ನು ಸೂಚಿಸಿದರೆ ಇನ್ನು ಕೆಲವು ವಿಕಾರ ಅಂಶವನ್ನು ಪ್ರತಿನಿಧಿಸುತ್ತವೆ. ಕಳೆದ ಮೂರು ಸಂವತ್ಸರಗಳಲ್ಲಿ ನಾವು ಕಂಡ ಹಾಗೆ ವಿಕಾರಿ, ಶಾರ್ವರೀ, ಪ್ಲವ ಸಂವತ್ಸರಗಳು ದೇಶ-ವಿದೇಶಗಳಿಗೆ ಮಹಾ ಆಪತ್ತನ್ನೇ ತಂದೊಡ್ಡಿದ್ದವು.

ವಿಕಾರಿ ಸಂವತ್ಸರ ಹೆಸರಿಗೆ ತಕ್ಕಂತೆ ಪ್ರಪಂಚಕ್ಕೇ ಕೋವಿಡ್ (Covid) ಎಂಬ ಮಹಾ ಸಾಂಕ್ರಾಮಿಕವನ್ನು ತಂದಿಟ್ಟು ವಿಕಾರವಿಪತ್ತನ್ನು ಸೃಷ್ಟಿಸಿತ್ತು. ಇನ್ನು ಶಾರ್ವರೀ - ಪ್ಲವಗಳೂ ಕೂಡ ಹೆಸರಿಗೆ ತಕ್ಕಂತೆ ನಮ್ಮನ್ನು ನೀರಿನಲ್ಲಿ ಮುಳುಗಿಸಿ ಎಬ್ಬಿಸಿವೆ. ಅಂತೂ ಒಂದು ಅಪಾಯ ಕಾಲಸುಳಿಯಿಂದ ಹೊರಬಂದಿದ್ದೇವೆ ಎಂಬ ಸಂದೇಶವನ್ನ ಈ ಸಂವತ್ಸರದ ಹೆಸರೇ ಹೇಳುತ್ತಿದೆ.

ಶುಭಕೃತ್. ಮಂಗಳ (Good)ವಾದದ್ದು ಎಂಬ ಅರ್ಥದ ಈ ಸಂವತ್ಸರ ಈ ವರ್ಷ ಶುಭ (Good) ಫಲವನ್ನು ಕೊಡುತ್ತದೆ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ ಈ ಸಂವತ್ಸರದಲ್ಲಿ ನಾವು ಕೊಂಚ ನಿರಾಳರಾಗಿರಬಹುದು. ಅದಕ್ಕೆ ಪುಷ್ಟಿಯಾಗಿ ಗ್ರಹಗಳ ಸ್ಥಿತಿ-ಗತಿ ಈ ವರ್ಷ ಹೇಗಿರಲಿದೆ..? ಅವುಗಳ ಫಲವೇನು..? ನಾವು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಇತ್ಯಾದಿ ವಿಷಯಗಳನ್ನು ಕೂಲಂಕಷವಾಗಿ ತಿಳಿಯೋಣ.

ಶುಭಕೃನ್ನಾಮ ಸಂವತ್ಸರ ಪ್ರಾರಂಭವಾಗುತ್ತಿರುವುದು ಶನಿವಾರ(Saturday). ಯಾವ ವಾರದಂದು ಸಂವತ್ಸರ ಪ್ರಾರಂಭವಾಗುತ್ತದೆಯೋ ಅದೇ ವಾರದ ಅಧಿಪತಿ ಆ ವರ್ಷದ ರಾಜನಾಗಿರುತ್ತಾನೆ. ಹೀಗಾಗಿ ಈ ವರ್ಷದ ರಾಜ ಶನೈಶ್ಚರ. ಸೌರ ಸಂಕ್ರಮಣವು ಯಾವ ವಾರವಿರುವುದೋ ಆ ವಾರದ ಅಧಿಪತಿ ಮಂತ್ರಿಯಾಗಿರುತ್ತಾನೆ ಹೀಗಾಗಿ ಈ ವರ್ಷದಲ್ಲಿ ಗುರುವಾರ(Thursday)ದಂದು ಸೌರ ಸಂಕ್ರಮಣವಾಗುವುದರಿಂದ ಈ ವರ್ಷದ ಮಂತ್ರಿ ಗುರುವಾಗಿದ್ದಾನೆ. ರಾಜ-ಮಂತ್ರಿಗಳೇ ಸಾಮಾನ್ಯವಾಗಿ ಆ ವರ್ಷದ ಫಲಾಫಲ ನಿರ್ಣಯಿಸಿಬಿಡುತ್ತಾರೆ. ಇವರ ಜೊತೆ ಸಹಕಾರ ಕೊಡುವವರು ಉಳಿದ ಗ್ರಹಗಳು. ಹೀಗೆ ಎಲ್ಲರ ಸಹಕಾರ ಸೂಚನೆಯಿಂದ ವರ್ಷ ಫಲ ನಿರ್ಮಾಣವಾಗುತ್ತದೆ. ಆ ಫಲಾಫಲಗಳೇನು..?

Ugadi 2022 Wishes: ಹಬ್ಬದ ಶುಭಾಶಯಗಳನ್ನು ಹೀಗೆ ಹೇಳಿ..

ಗ್ರಹಗಳ ರಾಜಾದಯಫಲ :

ರಾಜ - ಶನೈಶ್ಚರ(Lord Shani)
ಶನೈಶ್ಚರ ರಾಜನಾಗಿರುವುದರಿಂದ ರಾಜರಲ್ಲಿ ಕೋಪ-ದ್ವೇಷ ಭಾವ ಬೆಳೆಯಲಿದೆ. ಪ್ರಜೆಗಳಲ್ಲಿ ದುಃಖ ಭಾವ ಉಂಟಾಗಲಿದೆ. ಸಸ್ಯಗಳು ಮಧ್ಯಮ ಫಲಗಳನ್ನು ಕೊಡುತ್ತವೆ.

ಮಂತ್ರಿ - ಗುರು(Jupiter)
ಗುರುವನ್ನು ಜ್ಯೇಷ್ಠಮತಿ:. ಶ್ರೇಷ್ಠಮತಿ: ಎಂದೆಲ್ಲಾ ಕರೆಯುವುದರಿಂದ ಆಡಳಿತಾತ್ಮಕ ಅಂಶಗಳೆಲ್ಲಾ ಬುದ್ಧಿವಂತರ ಹಿಡಿತದಲ್ಲಿರುತ್ತದೆ. ಹೀಗಾಗಿ ಖಡಕ್ಕಾದ ರಾಜ-ಬುದ್ಧಿವಂತ ಮಂತ್ರಿಗಳಿಂದ ದೇಶ ಸುಭಿಕ್ಷವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಸಸ್ಯ-ಧಾನ್ಯ ಸಮೃದ್ಧಿಯ ಜೊತೆ ಯುದ್ಧ ಭಯವೂ ಉಂಟು.

ಸೇನಾಧಿಪತಿ - ಬುಧ(Mercury)
ಬುಧನನ್ನು ಜ್ಞಾನಿ, ವಿದ್ವಾಂಸ, ಪ.ಡಿತ ಎಂದೆಲ್ಲಾ ಕರೆಯುತ್ತಾರಾದ್ದರಿಂದ ಸೇನಾ ಬಲ ಶಕ್ತಿಗಿಂತ ಯುಕ್ತಿಯ ಮೇಲೆ ಕಾರ್ಯನಿರ್ವಹಿಸಲಿದೆ ಎಂಬುದು ಇದರ ತಾತ್ಪರ್ಯ. ಆತನ ಸೇನಾಧಿಪತಿತ್ವದಿಂದ ಸಸ್ಯ ಸಮೃದ್ಧಿಯೂ ಉಂಟಾಗಲಿದೆ.

ಸಸ್ಯಾಧಿಪತಿ - ರವಿ(Lord Sun)
ರವಿ ತೀಕ್ಷ್ಣ ಗ್ರಹವಾದ್ದರಿಂದ ಸಸ್ಯಗಳು ಒಣಗಿಯಾವು ಎಂಬುದನ್ನು ಸೂಚಿಸುತ್ತಿದೆ. ಈತಿ ಬಾಧೆ ಉಂಟಾಗಲಿದೆ. ಸಸ್ಯ ಸಮೃದ್ಧಿ ಸಾಧಾರಣವಾಗಿರುತ್ತದೆ.

ಧಾನ್ಯಾಧಿಪತಿ - ಶುಕ್ರ(Friday)
ಶುಕ್ರ ರಸ ಕಾರಕನಾದ್ದರಿಂದ ಸಸ್ಯಗಳು ಪುಷ್ಟವಾಗಿ ಬೆಳೆಯತ್ತವೆ. ಸರ್ವ ಸಸ್ಯ ಸಮೃದ್ಧಿಯಾಗಲಿದೆ, ಹಾಲು-ಹೈನು, ಗೋರಕ್ಷಣೆಯಂಥ ಕೆಲಸಗಳು ನಡೆಯಲಿವೆ. ಸುಭಿಕ್ಷೆ ನೆಲೆಸುತ್ತದೆ.

ಕಹಿಯನ್ನು ಉಂಡು ಸಿಹಿಯನ್ನು ನೀಡಲು ಕಲಿಯಿರಿ : ಯುಗಾದಿ ಹಿನ್ನೆಲೆ ಏನು? ಹೇಗೆ ಆಚರಿಸಬೇಕು?

ಅರ್ಘಾಧಿಪತಿ - ಬುಧ(Mercury)
ಅರ್ಘಾಧಿಪತ್ಯವೆಂದರೆ ಪದಾರ್ಥಗಳಿಗೆ ಉಂಟಾಗುವ ಬೆಲೆ. ಬುಧನ ಸಾರಥ್ಯದಲ್ಲಿ ಈ ಬಾರಿ ಪದಾರ್ಥಗಳ ಬೆಲೆ ಕಡಿಮೆಯಾಗುತ್ತದೆ. ಹಸಿರು ವರ್ಣದ ಪದಾರ್ಥಗಳ ಬೆಲೆ ಕಡಿಮೆಯಾಗಲಿದೆ.

ಮೇಘಾಧಿಪತಿ - ಬುಧ
ಈ ವರ್ಷ ಬುಧನ ಅನುಗ್ರಹದಿಂದ ಸಮೃದ್ಧಿಯ ಮಳೆ ಉಂಟಾಗಲಿದೆ, ರೈತಾಪಿ ವರ್ಗ ಸಮೃದ್ಧತೆಯನ್ನು ಕಾಣುವ ವರ್ಷವಾಗಿರುತ್ತದೆ. ಮಧ್ಯ ದೇಶದಲ್ಲಿ ಅತಿವೃಷ್ಟಿ ಸಾಧ್ಯತೆ ಇದೆ.

ರಸಾಧಿಪತಿ - ಕುಜ(mars)
ಕುಜ ಗ್ರಹಗಳಲ್ಲೇ ಕ್ರೂರ ಗ್ರಹ ಅಂತ ಕರೆಸಿಕೊಳ್ಳುವಾತ. ಇಂಥವನು ರಸಾಧಿಪತಿಯಾದರೆ ಸಪ್ಪೆ ಪದಾರ್ಥಗಳು ಹೇರಳವಾಗಿ ಸಿಗುತ್ತವೆ. ಉಪ್ಪು-ತುಪ್ಪ-ಎಣ್ಣೆ ಪದಾರ್ಥಗಳು ಹೇರಳವಾಗಿ ಸಿಗಲಿವೆ. ಚಂದನ-ಕುಂಕುಮ-ಕರ್ಪೂರದಂತ ವಸ್ತುಗಳು ದುರ್ಲಭವಾಗುತ್ತವೆ.

ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದೇಕೆ?

ನಿರಸಾಧಿಪತಿ - ಶನಿ
ಶನೈಶ್ಚರ ಆತನ ಗುಣಕ್ಕೆ ತಕ್ಕಂತೆ ನಿರಸಾಧಿಪತಿತ್ವವನ್ನು ತಾನೇ ಇಟ್ಟುಕೊಂಡಿದ್ದಾನೆ. ಹಾಗಾಗಿ ಕಬ್ಬಿಣ, ಸೀನ, ಮಣ್ಣು, ಇಟ್ಟಿಗೆ, ಮರಳು ಇತ್ಯಾದಿಗಳು ಸಮೃದ್ಧವಾಗಿ ದೊರೆಯುತ್ತವೆ. ಮನೆ ಕಟ್ಟುವವರಿಗೆ ಶನಿಯು ಕಾಡದೆ ಸಂತೈಸುತ್ತಾನೆ.

ಪಶುನಾಯಕ - ಬಲರಾಮ
ಬಲರಾಮನ ಪಶುನಾಯಕತ್ವದಲ್ಲಿ ಸುವೃಷ್ಟಿ, ಪಶುಗಳ ಸಮೃದ್ಧಿ, ರೋಗರಹಿತ ಗೋವುಗಳು ಸುಭಿಕ್ಷವಾಗಿರುತ್ತವೆ. ಹಾಲು-ಹೈನುಗಾರರು ಸಂತೋಷದಿಂದಿರುತ್ತಾರೆ.